

ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ತವರಿನಲ್ಲೇ ಎದುರಾದ 0-3 ಸೋಲಿನಿಂದ ಗರಂ ಆಗಿರುವ ಬಿಸಿಸಿಐ, ಮುಂಬರುವ ಆಸ್ಟ್ರೆಲಿಯಾ ಪ್ರವಾಸದ ಬಳಿಕ ಭಾರತ ತಂಡದ ಹಿರಿಯ ಆಟಗಾರರ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೇರದಿದ್ದರೆ, ಮುಂದಿನ 2025-27ರ ಆವೃತ್ತಿಗೆ ಹೊಸ ತಂಡವನ್ನು ಕಟ್ಟಲು ರಚನಾತ್ಮಕವಾಗಿ ಒಬ್ಬೊಬ್ಬರೇ ಹಿರಿಯ ಆಟಗಾರರನ್ನು ತಂಡದಿಂದ ಹೊರಹಾಕಲಾಗುವುದು ಎನ್ನಲಾಗಿದೆ.
ನಾಯಕ ರೋಹಿತ್ ಶರ್ಮ (37 ವರ್ಷ), ವಿರಾಟ್ ಕೊಹ್ಲಿ (36 ವರ್ಷ), ರವೀಂದ್ರ ಜಡೇಜಾ (36 ವರ್ಷ) ಮತ್ತು ಆರ್. ಅಶ್ವಿನ್ (38 ವರ್ಷ) ತಂಡದ ನಾಲ್ವರು ಪ್ರಮುಖ ಹಿರಿಯ ಆಟಗಾರರಾಗಿದ್ದು, ಇವರೆಲ್ಲರೂ ವೃತ್ತೀಜಿವನದ ಸಂಧ್ಯಾಕಾಲದಲ್ಲಿದ್ದಾರೆ. ಆಸೀಸ್ ಪ್ರವಾಸದ ಸರಣಿ ಈ ನಾಲ್ವರು ಜತೆಯಾಗಿ ಆಡುವ ಕೊನೇ ಸರಣಿ ಆಗಿರಲಿದೆ ಎನ್ನಲಾಗಿದೆ.
"ಸದ್ಯಕ್ಕೆ ನಮ್ಮ ಗಮನ ಆಸೀಸ್ ಪ್ರವಾಸದ ಸರಣಿ ಮೇಲೆ ಮಾತ್ರ ಇರಲಿದೆ. ಅನಂತರದ ಬಗ್ಗೆ ಇನ್ನೂ ಯೋಚಿಸಿಲ್ಲ' ಎಂದು ರೋಹಿತ್ ಶರ್ಮ, ಟೆಸ್ಟ್ ಭವಿಷ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಆಸೀಸ್ ಪ್ರವಾಸದ ನಂತರ ಭಾರತ ತಂಡ 2025ರ ಜೂನ್&ಜುಲೈನಲ್ಲಿ ಇಂಗ್ಲೆಂಡ್ನಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಅದಕ್ಕೆ ಮುನ್ನ ಡಬ್ಲ್ಯುಟಿಸಿ ಫೈನಲ್ನಲ್ಲಿ ಆಡುವ ಅರ್ಹತೆ ಒಲಿಯದಿದ್ದರೆ, ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ಗೆ ತಂಡದ ಸ್ಥಿತ್ಯಂತರವನ್ನು ನಿಭಾಯಿಸುವ ಹೊಣೆಯನ್ನು ಬಿಸಿಸಿಐ ನೀಡಲಿದೆ ಎನ್ನಲಾಗಿದೆ.
ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್ರಂಥ ಯುವ ಬ್ಯಾಟರ್ಗಳು ಆಸೀಸ್ನಲ್ಲಿ ಈಗಾಗಲೆ ಮಿಂಚಿ ಗಮನಸೆಳೆದಿದ್ದಾರೆ. ಆರ್. ಅಶ್ವಿನ್ ಉತ್ತರಾಧಿಕಾರಿಯಾಗಿ ವಾಷಿಂಗ್ಟನ್ ಸುಂದರ್ ಈಗಾಗಲೆ ಭರವಸೆ ಮೂಡಿಸಿದ್ದಾರೆ. ಜಡೇಜಾ ಸ್ಥಾನವನ್ನೂ ತುಂಬಲು ಅಕ್ಷರ್ ಪಟೇಲ್ ತುದಿಗಾಲಲ್ಲಿದ್ದಾರೆ.