More

    ಕರೊನಾ ಮಾರ್ಗಸೂಚಿ ಪಾಲನೆಗೆ ಹರಸಾಹಸ

    ಕ್ಷ್ಮೇಶ್ವರ: ಕರೊನಾ ಮಾರ್ಗಸೂಚಿಗಳ ಪಾಲನೆಯಾಗುವಂತೆ ನಿಗಾ ವಹಿಸುವಲ್ಲಿ ಪೊಲೀಸ್, ಕಂದಾಯ, ಪುರಸಭೆ ಅಧಿಕಾರಿಗಳು ಹರಸಾಹಸ ಪಟ್ಟರು.

    ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಬುಧವಾರ ಬಹುತೇಕರು ಬೆಂಬಲ ವ್ಯಕ್ತಪಡಿಸಿದರು. ಮುಖ್ಯ ಬಜಾರ್ ರಸ್ತೆಯ ದಿನಸಿ ವ್ಯಾಪಾರ ಜನಸಂದಣಿ ಇಲ್ಲದೆ ನಡೆಯಿತು. ಕಿರಾಣಿ ಮಾಲೀಕರು ಅಂಗಡಿಗಳ ಮುಂದೆ ಬಾಕ್ಸ್ ಗುರುತು ಮಾಡಿ, ಮಾಸ್ಕ್ ಧರಿಸಿ ಸರದಿಯಲ್ಲಿ ಬಂದವರಿಗೆ ದಿನಸಿ ಕೊಟ್ಟರು. ತರಕಾರಿ, ಹೂ, ಹಣ್ಣು ಹಾಗೂ ಬೀದಿಬದಿ ವ್ಯಾಪಾರವನ್ನು ಪಟ್ಟಣ ಹೊರವಲಯದ ಹೈಸ್ಕೂಲ್ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಆದರೆ, ವ್ಯಾಪಾರಸ್ಥರು ಮೂರ್ನಾಲ್ಕು ತಾಸು ಮುಖ್ಯ ಮಾರುಕಟ್ಟೆ ಪ್ರದೇಶ ಬಿಟ್ಟು ಹೋಗಲಿಲ್ಲ. ಆಗ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರು ತರಕಾರಿ ಮಾರುಕಟ್ಟೆಯಲ್ಲಿ ಹರಾಜು ಮಾಡಲು ಅವಕಾಶ ಕೊಡಲಿಲ್ಲ. ಕೆಲವು ಹಳ್ಳಿ ವ್ಯಾಪಾಸ್ಥರು, ರೈತರು ಮಾತ್ರ ಮೈದಾನದಲ್ಲಿ ತರಕಾರಿ ಮಾರಾಟ ಮಾಡಿದರು. ಇಲ್ಲಿಯೂ ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ನೇತೃತ್ವದಲ್ಲಿ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವ ನಿಯಮ ಪಾಲನೆಯಾಗುವಂತೆ ನೋಡಿಕೊಂಡರು.

    ಬೆಳಗ್ಗೆ 10ರ ನಂತರ ಅಂಗಡಿಗಳನ್ನು ಮುಚ್ಚಲಾಗಿತ್ತು. ಪೊಲೀಸರು ಮುಖ್ಯ ಸ್ಥಳಗಳನ್ನು ಬ್ಯಾರಿಕೇಡ್ ಮೂಲಕ ಬಂದ್ ಮಾಡಿಸಿ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದವರನ್ನು ವಿಚಾರಣೆ ನಡೆಸುತ್ತಿದ್ದರು. ವಿನಾಕಾರಣ ಹೊರಬಂದವರಿಗೆ ಪೊಲೀಸರು ದಂಡ ವಿಧಿಸಿದರು. ಸಂಜೆ ದೇವಸ್ಥಾನ, ಸಾರ್ವಜನಿಕ ಸ್ಥಳ, ಮರದ ಕೆಳಗೆ ಗುಂಪಾಗಿ ಸೇರಿದ್ದ ಜನರಿಗೆ ಪೊಲೀಸರು ಬೆತ್ತದ ಬಿಸಿ ಮುಟ್ಟಿಸಿದರು.

    ಆತಂಕ: ಕಳೆದ ವರ್ಷದಂತೆ ಈ ಬಾರಿ ಚೆಕ್​ಪೋಸ್ಟ್, ಕರೊನಾ ಪರೀಕ್ಷೆ, ವಲಸಿಗರ ಮಾಹಿತಿ ಸಂಗ್ರಹಣೆಗೆ ವ್ಯವಸ್ಥೆ ಮಾಡದಿರುವುದು ಹಾಗೂ ಗ್ರಾಮ ಮಟ್ಟದಲ್ಲಿ ಈ ಬಗ್ಗೆ ಹಿಡಿತವಿಲ್ಲ. ಜಿಲ್ಲಾಡಳಿತ, ತಾಲೂಕಾಡಳಿತಕ್ಕೂ ಸರ್ಕಾರ ಸರಿಯಾದ ಮಾರ್ಗಸೂಚಿ ನೀಡದಿರುವುದು ಸೋಂಕು ಹರಡಲು ಮತ್ತಷ್ಟು ಅವಕಾಶ ಕಲ್ಪಿಸಿದಂತಾಗಿದೆ ಎಂಬುದು ಸಾರ್ವಜನಿಕರ ಆತಂಕವಾಗಿದೆ.
    ==================

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts