More

    ರಾಷ್ಟ್ರಪ್ರೇಮದ ಪ್ರೇರಕಶಕ್ತಿ ಸಾವರ್ಕರ್

    | ಡಾ.ಎಸ್.ಆರ್.ಲೀಲಾ

    1857ರ ಮಹಾಸ್ಪೋಟವನ್ನು ‘ಸಿಪಾಯಿದಂಗೆ’ ಎಂದು ಹೇಳುತ್ತ ಅದರ ಅರ್ಥವಂತಿಕೆಯನ್ನು ಕಳೆಗುಂದಿಸುವ ಪ್ರಯತ್ನದಲ್ಲಿದ್ದವರು ಆಂಗ್ಲರು ಮತ್ತು ಅವರನ್ನು ಅನುಸರಿಸುತ್ತಿದ್ದ ಕೆಲ ಭಾರತೀಯ ಲೇಖಕರು. ಆದರೆ ಅದು ದಂಗೆಯಲ್ಲ, ಪ್ರಥಮ ಸ್ವಾತಂತ್ರ್ಯಸಂಗ್ರಾಮ ಎಂದು ಸಾರ್ಥಕವಾದ ಹೆಸರಿಟ್ಟರು ವಿನಾಯಕ ದಾಮೋದರ ಸಾವರ್ಕರ್. ಕ್ರಾಂತಿಕಾರಿ ವೀರ ಸಾವರ್ಕರ್ ತಮ್ಮ ಈ ಅಭಿಪ್ರಾಯವನ್ನು ‘ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, 1857’ ಎಂಬ ಪುಸ್ತಕದಲ್ಲಿ ಸಾಧಾರವಾಗಿ ನಿರೂಪಿಸಿದರು.

    ಸಾವರ್ಕರರ ಪಥದಲ್ಲೇ ನಡೆದ ನೇತಾಜಿ ಸುಭಾಷ್​ಚಂದ್ರ ಬೋಸರು ಇಂಡಿಯನ್ ನ್ಯಾಷನಲ್ ಲೀಗ್ (ಐಎನ್​ಎ) ಕಟ್ಟಿ ಬ್ರಿಟಿಷರು ಭಾರತದ ಮೇಲೆ ಹೇರಿದ್ದ ಗುಲಾಮಿಪೆಟ್ಟಿಗೆಗೆ ಕೊನೆ ಮೊಳೆ ಹೊಡೆದದ್ದು ಈಗ ಇತಿಹಾಸ. ಸ್ವಾತಂತ್ರ್ಯದ ಗಾಳಿ ಬೀಸಲಾರಂಭಿಸಿದ್ದು, ಭಾರತೀಯಸೇನೆಯಲ್ಲಿ ದಂಗೆಯ ವಾತಾವರಣ ಮೂಡಿದಾಗಲೆ!

    ಐತಿಹಾಸಿಕ ಪ್ರಜ್ಞೆ, ಭಾರತೀಯ ಅಸ್ಮಿತೆ, ಬೆಂಕಿಯಂತೆ ಜ್ವಲಿಸುವ ದೇಶಪ್ರೇಮ ಇವು ಮೂರು ಮುಪ್ಪರಿಗೊಂಡ ಒಬ್ಬ ಮೇಧಾವಿ ಲೇಖಕ ಸಾವರ್ಕರ್ ಇತಿಹಾಸಕಾರ, ಕವಿ, ನಾಟಕಕಾರ. ಸಾವರ್ಕರ್ ಬರೆದ ‘ಭಾರತೀಯ ಇತಿಹಾಸದ ಆರು ಚಿನ್ನದ ಯುಗಗಳು’ ಇತಿಹಾಸ ಕೃತಿ ಹೌದು. ಆದರೆ ಆಳಿದವರ ಹೆಸರುಗಳನ್ನು, ಕಾಲಘಟ್ಟಗಳನ್ನು ಪಟ್ಟಿಮಾಡುವ ಶುಷ್ಕ ಇತಿಹಾಸ ಇಲ್ಲಿಲ್ಲ. ಇತಿಹಾಸವನ್ನು ಕುರಿತ ವಿಮರ್ಶಾತ್ಮಕ ಸೂಕ್ತ ವ್ಯಾಖ್ಯಾನವಿದು. ಸಾವಿರಾರು ಸಂವತ್ಸರಗಳ ಕಾಲ ನಿರಂತರವಾಗಿ ಸಾಗಿಬಂದ ಅದಮ್ಯವಾದ, ಮೃತ್ಯುಂಜಯ ಸತ್ತ್ವವುಳ್ಳ ಭಾರತೀಯ ರಾಷ್ಟ್ರಜೀವನಗತಿಯ ಒಂದು ಸಿಂಹಾವಲೋಕನ, ಅದರ ಪಯಣದ ಪ್ರಮುಖ ಘಟ್ಟಗಳ, ಘಟನೆಗಳ ಏಳುಬೀಳುಗಳ ಅರ್ಥೈಸುವಿಕೆ. ಮಾರಣಾಂತಿಕ ಆಘಾತಗಳಿಗೆ ಎದೆಯೊಡ್ಡುತ್ತ ಮೂಲ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಕಲವನ್ನು ಸಮರ್ಪಿಸಿದ, ಹಿಂದೂಗಳ ದೃಷ್ಟಿಕೋನದಿಂದ ಮಾಡಿದ ಅದ್ಭುತ, ಅಪೂರ್ವ ವ್ಯಾಖ್ಯಾನ.

    ಭಾರತೀಯರದು Suppressed History-ಅದುಮಿಟ್ಟ ಇತಿಹಾಸ. ಭಾರತದ ಮೇಲೆ, ಭಾರತೀಯರ ಮೇಲೆ ಪರಮಕ್ರೌರ್ಯ ಮೆರೆದ ಮುಸಲ್ಮಾನ ಆಕ್ರಮಣದ ಸ್ವರೂಪವನ್ನು ಇದುವರೆಗೂ ಭಾರತೀಯರಿಗೆ ಯಾರೂ ಸರಿಯಾಗಿ ತಿಳಿಸಿಲ್ಲವಾದರೂ ಸತ್ಯಾಪೇಕ್ಷಿಗಳಾದ ಕೆಲವರು ಚರಿತ್ರೆಯ ಪುಟಗಳಿಂದ ವಾಸ್ತವಾಂಶಗಳನ್ನು ಹೊರತೆಗೆದು ಲೋಕದ ಕಣ್ಣುತೆರೆಸಲು ಪ್ರಯತ್ನಿಸಿ ದ್ದಾರೆ. ಅಮೆರಿಕದ, ವಿಖ್ಯಾತ ಲೇಖಕರಾದ ವಿಲ್ ಡ್ಯುರಾಂಟ್ ಅವರು- ‘The Mohammedan Conquest of India is probably the bloodiest story in history’ ಭಾರತದ ಮೇಲೆ ನಡೆದ ಮಹಮದೀಯ ಆಕ್ರಮಣ ಜಗತ್ತಿನ ಇತಿಹಾಸದಲ್ಲೇ ರಕ್ತಸಿಕ್ತವಾದ ಅಧ್ಯಾಯ. ಸೂಕ್ಷ್ಮವೂ, ಸುಂದರವೂ ಆದ ಸಂಸ್ಕೃತಿ, ಸ್ವಾತಂತ್ರ್ಯ, ಶಾಂತಿ-ಸಮಾಧಾನದ ಸ್ಥಿತಿಯನ್ನು ಬಾಹ್ಯವಾದ ಪಾಶವೀಶಕ್ತಿಗಳು ಮತ್ತು ಆಂತರಿಕವಾದ ದುಷ್ಟರು ಸುಲಭದಲ್ಲಿ ನಾಶಮಾಡಬಲ್ಲರು’ ಎಂದಿದ್ದಾರೆ-‘Story of Civilisation’ ಎಂಬ ತಮ್ಮ ಗ್ರಂಥದಲ್ಲಿ.

    2500 ವರ್ಷಗಳಿಂದ ಭಾರತದ ಮೇಲೆ ಆಕ್ರಮಣಗಳಾಗುತ್ತಿವೆ. ಭಾರತವರ್ಷವನ್ನು ಅಗೆದು, ಬಗೆದು ನುಂಗಲು ಬಂದ ವಿದೇಶಿಗಳು ಅನೇಕರು. ದೇಶ ವಿಶಾಲವಾದುದು. ವಿವಿಧ ಕಾಲಘಟ್ಟಗಳಲ್ಲಿ ದೇಶದ ವಿವಿಧ ಭಾಗಗಳ ಮೇಲೆ ಹೊಡೆತಗಳು ಬಿದ್ದವು. ಅವು ಅಂತಿಂಥ ಹೊಡೆತಗಳಲ್ಲ. ಮಾರಣಾಂತಿಕವಾದುವು. ಆದರೂ ಈ ಭರತಭೂಮಿ ತನ್ನತನವನ್ನು ಬಿಡದೆ ಉಳಿದುಕೊಂಡಿತು. ಅದು ಹೇಗೆ? ಭಾರತೀಯರ ಮೇಲೆ ಬಿದ್ದ ಆಕ್ರಮಣದ ಬರೆಗಳು ಎಷ್ಟು ಭೀಕರ? ಯಾವ ಯಾವ ವೀರರು ಈ ರಕ್ಕಸ ಆಕ್ರಮಣಗಳನ್ನು ಎದುರಿಸಿದರು? ದೇಶಧರ್ಮಗಳಿಗಾಗಿ ಪ್ರಾಣಗಳನ್ನೇ ಪಣವಾಗಿಟ್ಟರು? ಈ ಬರ್ಬರ ಆಕ್ರಮಣಗಳ ಸಾಮಾಜಿಕ, ರಾಜಕೀಯ, ಐತಿಹಾಸಿಕ ಪರಿಣಾಮಗಳೇನು? ಇಂತಹ ಪ್ರಮುಖ ಪ್ರಶ್ನೆಗಳನ್ನು ಎತ್ತಿಕೊಂಡು ಸಾವರ್ಕರ್ ಈ ಗ್ರಂಥದಲ್ಲಿ ಉತ್ತರ ನೀಡಿದ್ದಾರೆ.

    ಉದಾರಹರಣೆ-ಭಾರತದೇಶ ಸಾವಿರ ವರುಷ ಗುಲಾಮಗಿರಿಯಲ್ಲಿ ನರಳಿತು ಎಂದು ಸಾಮಾನ್ಯವಾಗಿ ಹೇಳುವುದುಂಟು. ಒಬ್ಬಿಬ್ಬರನ್ನು ಬಿಟ್ಟರೆ ಚರಿತ್ರ್ರಾರರೆಲ್ಲ ಇದೇ ತಿದಿಯನ್ನೆ ಒತ್ತುತ್ತಿದ್ದರು. ಇದು ಸತ್ಯವೇ? ಆಧಾರಗಳಿವೆಯೆ? ಸಾವರ್ಕರ್ ದಕ್ಷಿಣಭಾರತದ ಸ್ವತಂತ್ರ, ಸಮಗ್ರ, ಸಮರ್ಥ ಚರಿತ್ರೆಯನ್ನು ಬಿಚ್ಚಿಟ್ಟಿದ್ದಾರೆ. 14ನೇ ಶತಮಾನದ ಆದಿಯವರೆಗೆ ಕರ್ನಾಟಕ, ಆಂಧ್ರ, ತಮಿಳುನಾಡುಗಳಲ್ಲಿ ಚಾಲುಕ್ಯ, ಗಂಗ, ರಾಷ್ಟ್ರಕೂಟ, ಪಲ್ಲವ, ಹೊಯ್ಸಳ, ಚೋಳ, ಪಾಂಡ್ಯ, ಚೇರರು ವೈಭವೋಪೇತವಾಗಿ ಸ್ವತಂತ್ರವಾಗಿ ರಾಜ್ಯವಾಳುತ್ತಿದ್ದುದನ್ನು ಒಟ್ಟಾರೆ ಭಾರತೀಯ ಇತಿಹಾಸದ ಸಂದರ್ಭದಲ್ಲಿ ನೆನೆಯುವುದೆ ಇಲ್ಲ ಎಂಬುದನ್ನು ಎತ್ತಿ ತೋರಿಸಿದ್ದಾರೆ.

    ಚೋಳರು ತ್ರಿಸಮುದ್ರಾಧೀಶ್ವರರೆಂದು ಹೆಸರಾಗಿದ್ದರು. ವ್ಯಾಪಾರ, ಕಲೆ, ವಾಣಿಜ್ಯ, ಸಂಸ್ಕೃತಿ, ಸಾಹಿತ್ಯಗಳ ವಾಹಕರಾಗಿ ಭಾರತೀಯ ಸಮಗ್ರಸಂಪತ್ತಿನ ಒಡೆಯರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಕೀರ್ತಿ ಜಗತ್ತಿನಲ್ಲೆಲ್ಲ ವ್ಯಾಪಿಸಿದ್ದರೂ, ಕರ್ನಾಟಕ ಚರಿತ್ರೆಯ ಭಾಗವಾಗಿ ಮಾತ್ರ ಕಾಣುತ್ತದೆ. ಅಖಿಲ ಭಾರತೀಯ ಮಟ್ಟದಲ್ಲಿಲ್ಲ! ಇಂಥ ನೂರಾರು ಅಪಸವ್ಯಗಳನ್ನು, ಭಾರತೀಯ ಧೀಶಕ್ತಿಗೆ, ಕ್ಷಾತ್ರಶಕ್ತಿಗೆ, ಕಲಾಕೌಶಲಕ್ಕೆ ಮಾಡಿರುವ ಅಪಚಾರಗಳನ್ನು ಸಾವರ್ಕರ್ ಅವರು ವಿಮಶಿಸಿ, ಸರಿಯಾಗಿ ವ್ಯಾಖ್ಯಾನಿಸಿ ಇತಿಹಾಸಕ್ಕೆ ನ್ಯಾಯ ಒದಗಿಸಿದ್ದಾರೆ. ಈ ದೃಷ್ಟಿಯಿಂದ ಭಾರತೀಯರೆಲ್ಲರೂ ಓದಲೇಬೇಕಾದ, ಓದಿ ತಮ್ಮ ಸರಿಯಾದ ಚರಿತ್ರೆಯನ್ನು ಅರಿಯಬೇಕಾದ ಕೃತಿ, ‘ಭಾರತೀಯ ಇತಿಹಾಸದ ಆರು ಚಿನ್ನದ ಯುಗಗಳು’.

    ಫೆ.28ಕ್ಕೆ ಕೃತಿ ಲೋಕಾರ್ಪಣೆ

    ಸಾವರ್ಕರ್ ಲೇಖನಿಯಿಂದ 20 ಸಾವಿರ ಪುಟಗಳಷ್ಟು ಸಾಹಿತ್ಯ ಉಕ್ಕಿ ಹರಿದಿದೆ. ಇದೇ 28ಕ್ಕೆ ಅವರ ಅಂತಿಮ ಕೃತಿ ಲೋಕಾರ್ಪಣೆಯಾಗುತ್ತಿದೆ. ‘ಭಾರತೀಯ ಇತಿಹಾಸದ ಆರು ಚಿನ್ನದ ಯುಗಗಳು’ ಈ ಕೃತಿಯ ಕನ್ನಡ ಅವತರಣಿಕೆ. ತಮ್ಮ ಇಳಿವಯಸ್ಸಿನಲ್ಲಿ 1963ರಲ್ಲಿ ಮರಾಠಿಯಲ್ಲಿ ರಚಿಸಿದ ಈ ಕೃತಿ ಈಗಾಗಲೇ ಹಿಂದಿ, ಆಂಗ್ಲ ಮತ್ತಿತರ ಭಾಷೆಗಳಲ್ಲಿ ಬಂದಿದೆ.

    ಜೀವನಯಾನ

    · 1883 ಮೇ 28: ನಾಸಿಕ್ ಜಿಲ್ಲೆಯ ಭಗುರ್ ಗ್ರಾಮದಲ್ಲಿ ಜನನ.

    · 1901 ಮಾರ್ಚ್: ಯಮುನಾಬಾಯಿ ಅವರೊಂದಿಗೆ ವಿವಾಹ

    · 1905: ಪುಣೆಯಲ್ಲಿ ವಿದೇಶಿ ಬಟ್ಟೆಗಳ ದಹನ

    · 1906: ಉನ್ನತ ಶಿಕ್ಷಣಕ್ಕಾಗಿ ಲಂಡನ್​ಗೆ ಪಯಣ.

    · 1910: ಸಮುದ್ರಕ್ಕೆ ಜಿಗಿದು ಬ್ರಿಟಿಷರ ಸೆರೆಯಿಂದ ತಪ್ಪಿಸಿಕೊಂಡರು.

    · 1911 ಜುಲೈ 4: ಅಂಡಮಾನ್ ಕಾರಾಗೃಹ ದಲ್ಲಿ 50 ವರ್ಷಗಳ ಜೀವಾವಧಿ ಶಿಕ್ಷೆ ಆರಂಭ.

    · 1924 ಜನವರಿ 6: ಜೈಲಿನಿಂದ ಬಿಡುಗಡೆ

    · 1966 ಫೆಬ್ರವರಿ 26: ದೇಹತ್ಯಾಗ

    (ಲೇಖಕರು ವಿಧಾನ ಪರಿಷತ್ ಮಾಜಿ ಸದಸ್ಯರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts