More

    ಕಿವಿ ಕಾಳಜಿ; ಇಂದು ವಿಶ್ವ ಶ್ರವಣ ದಿನ

    | ಪಂಕಜ ಕೆ.ಎಂ. ಬೆಂಗಳೂರು

    ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿಯಾಗಿದೆ, ರೋಗ ಪತ್ತೆ ಹಚ್ಚಲು ಹಾಗೂ ಗುಣಪಡಿಸಲು ತಂತ್ರಜ್ಞಾನ ಆಧಾರಿತ ಚಿಕಿತ್ಸಾ ವ್ಯವಸ್ಥೆ ಲಭ್ಯವಿದೆ. ಆದಾಗ್ಯೂ ಜನರಲ್ಲಿ ಅರಿವಿನ ಕೊರತೆ ಹಾಗೂ ನಿರ್ಲಕ್ಷ್ಯದಿಂದಾಗಿ ವರ್ಷದಿಂದ ವರ್ಷಕ್ಕೆ ಶ್ರವಣದೋಷ ಸಮಸ್ಯೆ ಹೊಂದುವವರ ಸಂಖ್ಯೆ ಹೆಚ್ಚುತ್ತಿದೆ. ದೇಶದಲ್ಲಿ 2008ರಲ್ಲಿ 7.65 ಕೋಟಿ ಮಂದಿ ಈ ಸಮಸ್ಯೆ ಹೊಂದಿದ್ದರು. 2018ರಲ್ಲಿ 10 ಕೋಟಿಗೆ ಏರಿಕೆಯಾಯಿತು. 2030ರ ವೇಳೆಗೆ 12.50 ಕೋಟಿಗೆ ತಲುಪಲಿದೆ ಎಂದು ಅಧ್ಯಯನವೊಂದು ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ವರದಿ ಅನ್ವಯ 1981ರಲ್ಲಿ ಜಗತ್ತಿನಲ್ಲಿ ಶ್ರವಣದೋಷ ಸಮಸ್ಯೆ ಉಳ್ಳವರ ಸಂಖ್ಯೆ ಶೇಕಡ 1ಕ್ಕಿಂತ ಕಡಿಮೆ ಇತ್ತು. 1995ರ ವೇಳೆಗೆ ಶೇ.2ಕ್ಕೆ ತಲುಪಿತು. 2021ರಲ್ಲಿ ಶೇ.6.1ಕ್ಕೆ ಏರಿಕೆಯಾಗಿದೆ.

    ಶಬ್ದಮಾಲಿನ್ಯದ ಸಮಸ್ಯೆ: ಶಬ್ದಮಾಲಿನ್ಯದಿಂದ ಉಂಟಾಗುವ ಶ್ರವಣದೋಷ ಹೆಚ್ಚಿದೆ. ಇತ್ತೀಚಿನ ವರ್ಷಗಳಲ್ಲಿ ಮನೆಯ ಹೊರಗಿನ ಪರಿಸರದಲ್ಲಿ ವಾಹನಗಳು ಮತ್ತು ಕೈಗಾರಿಕೆಗಳಿಂದ ಉಂಟಾಗುವ ಶಬ್ದಮಾಲಿನ್ಯ ಜನರ ಶ್ರವಣದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತಿವೆ. ಇದಲ್ಲದೆ ರೇಡಿಯೋ, ಟಿವಿಗೆ ಹೆಚ್ಚು ದನಿ ನೀಡುವುದು, ಅತಿಯಾದ ಮೊಬೈಲ್ ಬಳಕೆ, ಹೆಚ್ಚು ಸಮಯ ಜೋರು ಶಬ್ದ (ಶೇ.60ಕ್ಕಿಂತ ಹೆಚ್ಚು)ದಲ್ಲಿ ಹೆಡ್​ಸೆಟ್ ಬಳಕೆಯಿಂದ ಕಿರಿಯ ವಯಸ್ಸಿನಲ್ಲೇ ಶ್ರವಣದೋಷಕ್ಕೆ ಒಳಗಾಗುತ್ತಿದ್ದಾರೆ.

    ನರಕೋಶಕ್ಕೆ ಹಾನಿ: ಅತಿಯಾದ ಶಬ್ದ ಕಿವಿಗೆ ಬೀಳುವುದ ರಿಂದ ಕಿವಿಯ ಒಳಭಾಗದ ನರಕೋಶಗಳ ಮೇಲೆ ಒತ್ತಡ ಬೀಳುತ್ತದೆ. ಇದರಿಂದ ಕ್ರಮೇಣ ನರಕೋಶ ದುರ್ಬಲ ಗೊಳ್ಳುತ್ತದೆ. ಇದೇ ರೀತಿಯ ಶಬ್ದವನ್ನು ಪ್ರತಿ ದಿನ ಅರ್ಧ ತಾಸಿಗಿಂತ ಹೆಚ್ಚು ಸಮಯ ಕೇಳಿದರೆ ವಯಸ್ಸಿಗೂ ಮುನ್ನವೇ ಶ್ರವಣದೋಷ ಸಮಸ್ಯೆಗೆ ಒಳಗಾಗಬೇಕಾಗುತ್ತದೆ. ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಅದು ಮಿದುಳಿನ ನರ ವ್ಯವಸ್ಥೆಯ ಮೇಲೂ ಪರಿಣಾಮ ಬೀರಬಹುದು.

    ಲಕ್ಷಣಗಳು

    • ಕಾಲಿಂಗ್ ಬೆಲ್, ಟಿವಿ ಹಾಗೂ ರೇಡಿಯೋ ವಾಲ್ಯೂಮ್ ಮೊಬೈಲ್ ಇವುಗಳ ಶಬ್ದ ದಿನೇದಿನೆ ಕಡಿಮೆ ಕೇಳಿಸುವುದು.
    • ಇತರರ ಮಾತು ಸ್ಪಷ್ಟವಾಗಿ ಕೇಳಿಸದಿರುವುದು.
    • ಇಂತಹ ಲಕ್ಷಣಗಳು ಗೋಚರಿಸಿದ ಕೂಡಲೇ ಶ್ರವಣತಜ್ಞರಲ್ಲಿ ಪರೀಕ್ಷೆ ಮಾಡಿಸಿಕೊಂಡರೆ ಶೇಕಡ 50ರಷ್ಟು ಸಮಸ್ಯೆ ತಡೆಗಟ್ಟಬಹುದು.

    ಕಿವಿ ಸ್ವಚ್ಛಗೊಳಿಸುವ ಅಗತ್ಯವಿಲ್ಲ: ಕಿವಿಯನ್ನು ಸ್ವಚ್ಛಗೊಳಿಸುವ ಅಗತ್ಯವಿಲ್ಲ. ಕಿವಿಯ ರಚನೆ ಹಾಗೂ ವ್ಯವಸ್ಥೆ ಹೇಗಿದೆ ಎಂದರೆ ಅದು ಕಿವಿಯಲ್ಲಿನ ಕೊಳೆಯನ್ನು ಸ್ವತಃ ಸ್ವಚ್ಛಗೊಳಿಸಿಕೊಳ್ಳುತ್ತದೆ. ಗಟ್ಟಿಯಾದ ಆಹಾರ ಪದಾರ್ಥ ಜಗಿಯುವಾಗ ಸ್ವಾಭಾವಿಕವಾಗಿ ಉಂಟಾಗುವ ದವಡೆಯ ಚಲನದಿಂದಾಗಿ ಕಿವಿಯಲ್ಲಿನ ಸೂಕ್ಷ್ಮ ಹಾಗೂ ಸಣ್ಣ ಕಣಗಳು ತಾನಾಗಿಯೆ ಹೊರ ಬರುತ್ತವೆ. ಹಾಗಾಗಿ ಒದ್ದೆಬಟ್ಟೆಯಲ್ಲಿ ಕಿವಿಯ ಮೇಲ್ಭಾಗವಷ್ಟೇ ಸ್ವಚ್ಛ ಮಾಡಿಕೊಂಡರೆ ಸಾಕು. ಕಿವಿಗೆ ಎಣ್ಣೆ ಹಾಕುವುದು, ಅನಗತ್ಯವಾಗಿ ಕಡ್ಡಿ, ಪಿನ್ನುಗಳಂಥ ಚೂಪಾದ ಹಾಗೂ ಬಡ್ಸ್​ನಂಥ ಸಾಧನಗಳನ್ನು ಬಳಸಿದರೆ ಹೊರ ಬರುತ್ತಿರುವ ಧೂಳಿನ ಕಣ ಹಿಂದೆ ಸರಿದು ಕಿವಿಯ ಒಳಗೆ ಸೋಂಕು ಉಂಟಾಗಬಹುದು.

    ದೇಹದ ಇತರ ಭಾಗಗಳಿಗೆ ನೀಡುವಷ್ಟು ಪ್ರಾಮುಖ್ಯ ಹಾಗೂ ಕಾಳಜಿಯನ್ನು ಜನರು ಕಿವಿಯ ಬಗ್ಗೆ ತೋರಿಸುವುದಿಲ್ಲ. ಹಾಗಾಗಿ ಸಮಸ್ಯೆ ಗಂಭೀರ ಹಂತಕ್ಕೆ ತಲುಪಿದಾಗ ಚಿಕಿತ್ಸೆಗೆ ಬರುತ್ತಾರೆ. ಆಗ ಚಿಕಿತ್ಸೆ ನೀಡಿದರೂ ಪ್ರಯೋಜನವಾಗದು. ಹಾಗಾಗಿ ಕಾಲಕಾಲಕ್ಕೆ ಕಿವಿಯ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.

    | ಡಾ. ಎಂ.ಎಸ್.ಜೆ. ನಾಯಕ್ ಸಂಸ್ಥಾಪಕ ನಿರ್ದೇಶಕ, ನಾಯಕ್ಸ್ ವಾಕ್ ಮಮತ್ತು ಶ್ರವಣ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts