More

    ಉಪವಾಸ ಮಹತ್ವ ತಿಳಿಸುವ ರಂಜಾನ್ ಮಾಸ: ರಂಜಾನ್ ತಿಂಗಳ ವಿಶೇಷ

    ಉಪವಾಸ ಮಹತ್ವ ತಿಳಿಸುವ ರಂಜಾನ್ ಮಾಸ: ರಂಜಾನ್ ತಿಂಗಳ ವಿಶೇಷ| ನಜೀರ ಆಹಮದ ಕಾಜಿ ಉಪನ್ಯಾಸಕರು, ಸಿಕ್ಯಾಬ, ವಿಜಯಪುರ

    ಈ ವರ್ಷದ ರಂಜಾನ್ ತಿಂಗಳು ಏಪ್ರಿಲ್ ಮಾಸದ ಹೊಸ ಚಂದ್ರನ ದರ್ಶನದೊಂದಿಗೆ ಆರಂಭವಾಗುತ್ತದೆ. ಪ್ರವಾದಿ ಮುಹಮ್ಮದ(ಸ) ಶಾಬಾನ ತಿಂಗಳಿಂದ ಇದರ ತಯಾರಿ ಪ್ರಾರಂಭಿಸುತ್ತಿದ್ದರು. ರಂಜಾನ್ ತಿಂಗಳ ಉಪವಾಸ ವ್ರತದಿಂದ ನಿಜಾರ್ಥದಲ್ಲಿ ದೇವದಾಸ್ಯದ ತರಬೇತಿ ಸಿಗುತ್ತದೆ. ದೇಹೆಚ್ಛೆಯನ್ನು ತೊರೆದು ದೇವೆಚ್ಛೆಯನ್ನು ಮೈಗೂಡಿಸಿಕೊಳ್ಳಬೇಕಾದರೆ ಮನುಷ್ಯನ ಪ್ರತಿಯೊಂದು ಅಂಗಾಂಗಗಳಿಗೆ ತರಬೇತಿಯ ಅವಶ್ಯಕತೆ ಇದೆ. ಈ ತರಬೇತಿಯನ್ನು ನೀಡಲು ಉಪವಾಸದ ತಿಂಗಳ ಆಗಮನವಾಗಿದೆ.

    ಜಗತ್ತಿನ ಎಲ್ಲ ಧರ್ಮಗಳಲ್ಲೂ ಉಪವಾಸ ಕುರಿತು ಹೇಳಲಾಗಿದೆ. ಈ ಉಪವಾಸ ವ್ರತ ಯಾವುದೇ ಧರ್ಮದವರು ಆಚರಿಸಲಿ, ಅದು ಕೋಮು ಸೌಹಾರ್ದ, ಶಾಂತಿ ಸ್ಥಾಪಿಸಲು ನಾಂದಿಯಾಗಲಿ. ದೇವರ ಸಾಮೀಪ್ಯಗಳಿಸುವ ಅತ್ಯಂತ ಉತ್ತಮ ಮಾರ್ಗ ಉಪವಾಸ ಆಚರಿಸುವುದಾಗಿದೆ ಎಂದು ಸನಾತನ ಹಿಂದು ಧರ್ಮದಲ್ಲಿ ಹೇಳಲಾಗಿದೆ. ಪವಿತ್ರ ಕುರಾನ್ ಗತ ಪ್ರವಾದಿಗಳ ಅನುಯಾಯಿಗಳಿಗೆ ಕಡ್ಡಾಯಗೊಳಿಸಿದಂತೆಯೇ ನಿಮ್ಮ ಮೇಲೆಯೂ ಉಪವಾಸ ವ್ರತವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ನಿಮ್ಮಲ್ಲಿ ಧರ್ಮನಿಷ್ಠೆಯ ಗುಣ ವಿಶೇಷತೆ ಉಂಟಾಗಲೆಂದು ಆಶಿಸಲಾಗಿದೆ. ಉಪವಾಸ ವ್ರತವು ಮಾನವನಲ್ಲಿ ಸಹನಶೀಲತೆಯ ಸ್ತರವನ್ನು ಹೆಚ್ಚಿಸುತ್ತದೆ ಮತ್ತು ತ್ಯಾಗದ ಸ್ತರವನ್ನು ಬೆಳೆಸುತ್ತದೆ. ಆಗಾಗ ಉಪವಾಸ ಇರುವುದರಿಂದ ದೇಹದಲ್ಲಿರುವ ವಿಷಕಾರಕಗಳಿಂದ ಮುಕ್ತಿ ಪಡೆಯಬಹುದು ಎಂದು ಬೌದ್ಧ ಗುರು ದಲಾಯ್ ಲಾಮಾ ಹೇಳಿದ್ದಾರೆ. ಯಹೂದಿ ಧರ್ಮ ಪಾಲಿಸುವವರಲ್ಲಿ ಉಪವಾಸ ಮಹತ್ವದ ಪಾತ್ರ ವಹಿಸುತ್ತದೆ. ಉಪವಾಸದ ಮೂಲ ಉದ್ದೇಶ ಆಧ್ಯಾತ್ಮಿಕ ಸಾಧನೆ ಎಂದು ಯೇಸು ಹೇಳಿದ್ದಾರೆ. ನಮ್ಮಲ್ಲಿ ಅಂಹಕಾರ ಭಾವನೆ ಇದ್ದರೆ ನಾವು ಮಾಡುವ ಉಪವಾಸಕ್ಕೆ ಯಾವದೇ ಅರ್ಥವಿಲ್ಲ. ಉಪವಾಸವಿದ್ದು ಸುಳ್ಳು ಹೇಳಿದರೆ ಅದರ ಅಗತ್ಯ ಆ ಭಗವಂತನಿಗೆ ಇಲ್ಲ ಎಂದು ಪ್ರವಾದಿ ಮುಹಮ್ಮದ(ಸ) ಹೇಳಿದ್ದಾರೆ. ಕ್ರಾಂತಿಕಾರಿ ಬಸವಣ್ಣನವರು ಹೇಳಿದ ಅಂತರಂಗ, ಬಹಿರಂಗ ಪರಿಶುದ್ಧತೆಯ ಪ್ರತೀಕವೇ ಈ ರಂಜಾನ್ ತಿಂಗಳ ಉಪವಾಸ ಅಚರಣೆ. ಉಪವಾಸ ವ್ರತವು ಮನುಷ್ಯನಲ್ಲಿ ಆತ್ಮನಿಯಂತ್ರಣ ಸಾಧಿಸಬಹುದಾದ ಆರಾಧನೆಯಾಗಿದೆ. ಉಪವಾಸದಿಂದಾಗಿ ಮನುಷ್ಯನ ಪಚನೇಂದ್ರಿಯ ಕ್ರಿಯೆಗೆ ಸಂಬಂಧಿಸಿದ ಹಲವು ಅಂಗಗಳಿಗೆ ವಿಶ್ರಾಂತಿ ದೊರೆಯುತ್ತದೆ. ರಕ್ತವು ಶುದ್ಧೀಕರಣ ಗೊಳ್ಳುವುದು, ಮಧುಮೇಹ, ರಕ್ತದ ಒತ್ತಡ, ಹೃದಯ ರೋಗಗಳನ್ನು ಆಹಾರ ಪಥ್ಯದಿಂದ ನಿಯಂತ್ರಿಸಬಹುದು.

    ಇಸ್ಲಾಮಿನ ಐದು ಆಧಾರ ಸ್ತಂಭಗಳ ಪೈಕಿ ಎರಡು ಆಧಾರ ಸ್ತಂಭಗಳಾದ ಉಪವಾಸ ವ್ರತ ಹಾಗೂ ದಾನ ರಂಜಾನ್ ತಿಂಗಳ ಪ್ರಮುಖ ಅಂಶಗಳಾಗಿವೆ. ಭೂಮಿಯಲ್ಲಿರುವವರೊಡನೆ ಕರುಣೆ ತೋರಿಸಿರಿ ಆಕಾಶದಲ್ಲಿರುವಾತನು ನಿಮ್ಮ ಮೇಲೆ ಕರುಣೆ ತೋರಿಸುವನು ಎಂದು ಪ್ರವಾದಿ ಮುಹಮ್ಮದ(ಸ) ಹೇಳಿದ್ದಾರೆ. ಇಂದು ನಮ್ಮ ದೇಶದಲ್ಲಿ ಬಡತನವನ್ನು ದೂರ ಮಾಡಲು ಸಂಪತ್ತಿನ ಅಗತ್ಯಕಿಂತ ಮಾನವನ ಚಿಂತನೆಯನ್ನು ಸರಿಪಡಿಸಬೇಕಾದ ಅಗತ್ಯವಿದೆ. ಅದಿಲ್ಲದಿದ್ದರೆ ನಮ್ಮ ದೇಶದಲ್ಲಿ ಕೋಟ್ಯಧಿಪತಿಗಳಿದ್ದು ಬಡತನ ರೇಖೆಗಿಂತ ಕೆಳಗಿರುವ ಸಂಖ್ಯೆ ಕೋಟ್ಯಂತರವಿರುವುದೇಕೆ ಎಂಬ ಪ್ರಶ್ನೆ ನಮಗೆ ಕಾಡುತ್ತಿದೆ. ಕಾರಣ ಇಂದು ಆ ದೇವನು ದಯಪಾಲಿಸಿದ ಅನುಗ್ರಹಗಳ ದುರ್ಬಳಕೆ ಅಗುತ್ತಿದೆ. ನಾಳೆ ಪರಲೋಕದಲ್ಲಿ ಕಡ್ಡಾಯಧನ (ಜಕಾತ) ಬೇರ್ಪಡಿಸಿದ ಸಂಪತ್ತನ್ನು ಬೆಂಕಿಯಲ್ಲಿ ಉರಿಸಿ ಅವನ ಬೆನ್ನು, ಪಾರ್ಶ್ವ ಮತ್ತು ಹಣೆಗೆ ಬರೆ ಎಳೆಯಲಾಗುವುದು. (ಮುಸ್ಲಿಂ ಶರೀಫ) ಜಕಾತ ಕೊಡದವನ ಸಂಪತ್ತು ಹೆಬ್ಬಾವಿನ ರೂಪದಲ್ಲಿ ಅವನ ಕೊರಳಿಗೆ ಸುತ್ತಲ್ಪಡುವುದು (ಬುಖಾರಿಹದೀಸ) ಕಡ್ಡಾಯಧನ ಐಚ್ಛಿಕವೇನಲ್ಲ, ಅದು ನೈತಿಕವಾಗಿಯೂ ಕಾನೂನಾತ್ಮಕವಾಗಿಯೂ ಕಡ್ಡಾಯವಾಗಿದೆ. ಅದು ಸಿರಿವಂತರ ಸಂಪತ್ತಿನಲ್ಲಿ ಬಡವರ ಪಾಲಾಗಿದೆ. ದಾನಂ ಹಸ್ತಸ್ಯ ಭೂಷಣಂ. ಪ್ರತಿಯೊಬ್ಬರೂ ತಮ್ಮ ಗಳಿಕೆಯ ಒಂದಂಶವನ್ನು ಕಡ್ಡಾಯವಾಗಿ ಬಡಬಗ್ಗರಿಗೆ ದಾನ ಮಾಡಬೇಕೆಂದು ಎಲ್ಲ ಧರ್ಮ ಶಾಸ್ತ್ರಗಳು ಸಾರಿ ಹೇಳುತ್ತವೆ. ದಾನ ಮಾಡಲು ಹೃದಯ ಶ್ರೀಮಂತಿಕೆಯೂ ಬೇಕು. ರಂಜಾನ್ ಪಶ್ಚಾತ್ತಾಪದ ತಿಂಗಳು. ಇಂದು ಮಾನವ ದೌರ್ಬಲ್ಯಗಳ ಸಂಗಾತಿಯಾಗಿದ್ದಾನೆ. ಅರಿತೋ, ಅರಿಯದೆಯೋ ಹಲವಾರು ಸಣ್ಣ ಪಾಪಗಳನ್ನು ಮಾಡುತ್ತಾನೆ. ಅದಕ್ಕಾಗಿ ಪಶ್ಚಾತ್ತಾಪ ಪಡಲು ರಂಜಾನ್ ಮತ್ತೊಮ್ಮೆ ಸದಾವಕಾಶ ನೀಡುತ್ತದೆ. ದೇವ ಭಯ ಮೂಡಿಸುವುದು ರಂಜಾನಿನ ಮುಖ್ಯ ಉದ್ದೇಶ. ಬನ್ನಿ ನಾವೆಲ್ಲರೂ ದೇಶದ ಹಿತಾಸಕ್ತಿಗಾಗಿ ಪ್ರಯತ್ನಿಸೋಣ, ಸಮಾಜವನ್ನು ಕೆಡಕುಗಳಿಂದ ಮುಕ್ತ ಮಾಡೋಣ, ಇದು ಕೇವಲ ದೇವ ಭಯದಿಂದ ಮಾತ್ರ ಸಾಧ್ಯ. ಎಲ್ಲ ಕೆಡಕುಗಳಿಂದ ಮನುಷ್ಯ ಮುಕ್ತನಾಗಲಿ. ಇದೇ ದೇಶ ಬಾಂಧವರಿಗೆ ರಂಜಾನಿನ ಸಂದೇಶ.

    ಮಣ್ಣು ರಕ್ಷಿಸಿ ಅಭಿಯಾನ; ಮಳೆಯಲ್ಲೂ ತಡೆ ಇಲ್ಲದೆ ಸಾಗಿದೆ ಸದ್ಗುರು ಬೈಕ್ ಯಾನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts