More

    ಒಂದು ಜಿಲ್ಲೆ ಒಂದು ಉತ್ಪನ್ನ; ಸ್ವಾವಲಂಬಿ ಭಾರತ ಅಭಿಯಾನಕ್ಕೆ ಪೂರಕ

    ಆತ್ಮನಿರ್ಭರ ಭಾರತ ಅಥವಾ ಸ್ವಾವಲಂಬಿ ಭಾರತ ಅಭಿಯಾನದ ದೂರದೃಷ್ಟಿಯನ್ನು ಅರ್ಥ ಮಾಡಿಕೊಂಡು ಕಾರ್ಯತತ್ಪರರಾದರೆ ಸ್ಥಳೀಯ ಆರ್ಥಿಕತೆಯೊಂದಿಗೆ ದೇಶದ ಅರ್ಥವ್ಯವಸ್ಥೆಯೂ ಬಲಿಷ್ಠವಾಗಲಿದೆ. ಇದಕ್ಕೆ ಪೂರಕವಾಗಿ ದೇಶಾದ್ಯಂತ ವೋಕಲ್ ಫಾರ್ ಲೋಕಲ್ ಅಭಿಯಾನ, ಒಂದು ಜಿಲ್ಲೆ ಒಂದು ಉತ್ಪನ್ನದ ಗುರುತಿಸುವಿಕೆಯ ಕೆಲಸ ಶುರುವಾಗಿದೆ.

    | ಉಮೇಶ್​ಕುಮಾರ್ ಶಿಮ್ಲಡ್ಕ

    ಸ್ವಾವಲಂಬಿ ಭಾರತ ಅಭಿಯಾನಕ್ಕೆ ಪೂರಕವಾಗಿರುವ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಎಂಬ ನೀತಿಗೆ ಉತ್ತೇಜನ ನೀಡುವ ಕೆಲಸ ಬಹುತೇಕ ರಾಜ್ಯಗಳಲ್ಲಿ ಶುರುವಾಗಿದೆ. ಕೇಂದ್ರ ಸರ್ಕಾರ ಈಗಾಗಲೇ ಒಂದು ಜಿಲ್ಲೆ ಒಂದು ಉತ್ಪನ್ನವನ್ನು ಗುರುತಿಸಿ ಅಂತಿಮ ಪಟ್ಟಿಯನ್ನು ಇದಕ್ಕಾಗಿ ಮೀಸಲಿರುವ ವೆಬ್​ತಾಣ ( https://odop.mofpi.gov.in/odop/) ದಲ್ಲಿ ಪ್ರಕಟಿಸಿದೆ. ದೇಶದ 728 ಜಿಲ್ಲೆಗಳ ಉತ್ಪನ್ನಗಳ ಪಟ್ಟಿಯಲ್ಲಿ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ, ಕೋಳಿ ಸಾಕಣೆ ಮುಂತಾದ ಕ್ಷೇತ್ರಗಳ ಉತ್ಪನ್ನಗಳೇ ಹೆಚ್ಚಾಗಿವೆ. ಈ ಪೈಕಿ 226 ಜಿಲ್ಲೆಗಳಲ್ಲಿ ಹಣ್ಣು, 107 ಜಿಲ್ಲೆಗಳಲ್ಲಿ ತರಕಾರಿ, 105 ಜಿಲ್ಲೆಗಳಲ್ಲಿ ಸಾಂಬಾರ ಪದಾರ್ಥಗಳನ್ನು ಗುರುತಿಸಲಾಗಿದೆ. ಇವೇ ಆ ಪಟ್ಟಿಯಲ್ಲಿ ಟಾಪ್ ಮೂರು ಸ್ಥಾನಗಳಲ್ಲಿವೆ. ಮುಖ್ಯ ಬೆಳೆ ಭತ್ತವನ್ನು 40 ಜಿಲ್ಲೆಗಳ ಉತ್ಪನ್ನವಾಗಿ ಗುರುತಿಸಿದರೆ, ಐದು ಜಿಲ್ಲೆಗಳಲ್ಲಿ ಗೋಧಿಯೇ ಮುಖ್ಯ ಉತ್ಪನ್ನ.

    ಕೃಷಿ ಮತ್ತು ಕೃಷಿಕರ ಕಲ್ಯಾಣ ಸಚಿವಾಲಯವು ಆಹಾರ ಸಂಸ್ಕರಣಾ ಉದ್ಯಮ ಸಚಿವಾಲಯದ ಜತೆಗೆ ಸಮಾಲೋಚನೆ ನಡೆಸಿ ‘ಒಂದು ಜಿಲ್ಲೆ ಒಂದು ಉತ್ಪನ್ನ’ದ ಪಟ್ಟಿಯನ್ನು ಅಂತಿಮಗೊಳಿಸಿದೆ. ಇದಕ್ಕೂ ಮುನ್ನ ಆಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್​ನಿಂದ (ಐಸಿಎಆರ್) ಮಾಹಿತಿಯನ್ನು ಸಚಿವಾಲಯ ಪಡೆದಿದೆ.

    ಯೋಜನಾ ವೆಚ್ಚದ ಹಂಚಿಕೆ: ಕೇಂದ್ರ ಸರ್ಕಾರ 60% ಮತ್ತು ರಾಜ್ಯ ಸರ್ಕಾರ 40%. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಅಂದರೆ 2020-21 ರಿಂದ 2024-25ರ ಅವಧಿಯಲ್ಲಿ ರಾಜ್ಯಗಳು 500 ಕೋಟಿ ರೂ.ಗಳನ್ನು ಇದಕ್ಕಾಗಿ ಮೀಸಲಿಡಬೇಕು. ಕರ್ನಾಟಕದಲ್ಲಿ ಇದಕ್ಕಾಗಿ ಈ ವರ್ಷದ ಬಜೆಟ್​ನಲ್ಲಿ 100 ಕೋಟಿ ರೂ. ಮೀಸಲಿಡಲಾಗಿದೆ.

    ಕ್ಲಸ್ಟರ್ ವಿಧಾನದಲ್ಲಿ ಲಭ್ಯ ಯೋಜನೆಗಳು: ವಿವಿಧ ಯೋಜನೆಗಳನ್ನು ಕ್ಲಸ್ಟರ್ ವಿಧಾನದ ಮೂಲಕ ಉತ್ತೇಜಿಸುವುದು ಒಂದು ಜಿಲ್ಲೆ ಒಂದು ಉತ್ಪನ್ನ ಅಥವಾ ಒಂದು ಜಿಲ್ಲೆ ಒಂದು ಮುಖ್ಯ ಉತ್ಪನ್ನ ಯೋಜನೆಯ ಉದ್ದೇಶ. ಇದರಲ್ಲಿ ಲಭ್ಯ ಯೋಜನೆಗಳ ವಿವರ ಇಂತಿದೆ – ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್​ವೆುಂಟ್ ಆಫ್ ಹಾರ್ಟಿಕಲ್ಚರ್ (ಎಂಐಡಿಎಚ್), ರಾಷ್ಟ್ರೀಯ ಆಹಾರ ಸುರಕ್ಷತಾ ಯೋಜನೆ (ಎನ್​ಎಫ್​ಎಸ್​ಎಂ), ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ (ಆರ್​ಕೆವಿವೈ), ಪರಂಪರಾಗತ ಕೃಷಿ ವಿಕಾಸ ಯೋಜನೆ (ಪಿಕೆವಿವೈ).

    ಒಂದು ಜಿಲ್ಲೆ ಒಂದು ಉತ್ಪನ್ನ; ಸ್ವಾವಲಂಬಿ ಭಾರತ ಅಭಿಯಾನಕ್ಕೆ ಪೂರಕಸ್ವಾವಲಂಬಿ ಕರ್ನಾಟಕದ ಮೊದಲ ಹೆಜ್ಜೆ: ಕರ್ನಾಟಕದಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಪ್ರಕಾರ 20 ಜಿಲ್ಲೆಗಳಲ್ಲಿ ತೋಟಗಾರಿಕೆ ಉತ್ಪನ್ನಗಳು, ಆರು ಜಿಲ್ಲೆಗಳಲ್ಲಿ ಕೃಷಿ ಉತ್ಪನ್ನ, ಎರಡು ಜಿಲ್ಲೆಗಳಲ್ಲಿ ಸಮುದ್ರ ಉತ್ಪನ್ನ, ಒಂದು ಜಿಲ್ಲೆಯಲ್ಲಿ ಪೌಲ್ಟ್ರಿ ಉತ್ಪನ್ನ, ಒಂದು ಜಿಲ್ಲೆಯಲ್ಲಿ ಬೇಕರಿ ಉತ್ಪನ್ನವನ್ನು ಗುರುತಿಸಲಾಗಿದೆ. ಪ್ರತಿ ಜಿಲ್ಲೆಯ ಆಯಾ ಉತ್ಪನ್ನಗಳ ಲಭ್ಯತೆ, ಮಾರುಕಟ್ಟೆಯನ್ನು ಆಧರಿಸಿ ಆಯಾ ಜಿಲ್ಲೆಯ ಮುಖ್ಯ ಉತ್ಪನ್ನ ಎಂದು ಗುರುತಿಸಲಾಗಿದೆ. ಈ ನೀತಿಯ ಪ್ರಕಾರ, ಪ್ರತಿ ಜಿಲ್ಲೆಯಲ್ಲಿ ಒಂದು ಉತ್ಪನ್ನವನ್ನು ಗುರುತಿಸಲಾಗುತ್ತದೆ. ಈ ಉತ್ಪನ್ನಗಳ ಸಂಸ್ಕರಣೆ, ವ್ಯಾಪಾರೋದ್ಯಮದಲ್ಲಿ ತೊಡಗಿರುವ ಉದ್ಯಮಿಗಳ ಪೈಕಿ ಅರ್ಹರಾದವರನ್ನು ಗುರುತಿಸಿ ಅವರಿಗೆ ಉದ್ಯಮ ವಿಸ್ತರಣೆಗೆ ಪ್ರಾಜೆಕ್ಟ್ ವೆಚ್ಚದ ಶೇಕಡ 35 ನೆರವನ್ನು ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿಯಾಗಿ ನೀಡಲಾಗುತ್ತದೆ. ಇದಕ್ಕೆ ಪ್ರತಿ ಘಟಕಕ್ಕೆ 10 ಲಕ್ಷ ರೂ. ಮಿತಿ ಕೂಡ ಇದೆ. ಅಲ್ಲದೆ ಒಂದು ಪ್ರಾಜೆಕ್ಟ್​ಗೆ ಗರಿಷ್ಠ ಸಾಲ 30 ಲಕ್ಷ ರೂ. ಎಂದೂ ಉಲ್ಲೇಖಿಸಲಾಗಿದೆ.

    ಆಹಾರ ಸಂಸ್ಕರಣಾ ಉದ್ಯಮ: ದೇಶದಲ್ಲಿರುವ ಆಹಾರ ಸಂಸ್ಕರಣಾ ಉದ್ಯಮ ಕ್ಷೇತ್ರ ಅಸಂಘಟಿತ ಕ್ಷೇತ್ರವಾಗಿದ್ದು, ಇಲ್ಲಿ ಶೇಕಡ 74 (ಮೂರನೇ ಒಂದು ಭಾಗ ಮಹಿಳೆಯರಿಗೆ) ಉದ್ಯೋಗ ಸೃಜನೆಯಾಗುತ್ತದೆ. ಶೇಕಡ 66 ಉದ್ಯಮ ಗ್ರಾಮೀಣ ಭಾಗದಲ್ಲಿವೆ. ಶೇಕಡ 80 ಕುಟುಂಬ ಕೇಂದ್ರಿತವಾಗಿರುವ ಕಿರು ಉದ್ಯಮಗಳು ಎಂಬುದು ಸರ್ಕಾರದ ಡೇಟಾದಲ್ಲಿರುವ ಮಾಹಿತಿ.

    ಯಾರು ಅರ್ಹರು..?: ಆಹಾರ ಸಂಸ್ಕರಣಾ ಸಂಘಟನೆಗಳು ಮತ್ತು ಸ್ವಸಹಾಯ ಸಂಘಗಳು/ಉತ್ಪಾದಕ ಸಹಕಾರ ಸಂಸ್ಥೆಗಳು ಈ ಯೋಜನೆಗೆ ಅರ್ಹರು. ಫೆಬ್ರವರಿ ಅಂತ್ಯದ ತನಕ ಈ ಯೋಜನೆಗೆ ದೇಶದಲ್ಲಿ ಒಟ್ಟು ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ 130ಕ್ಕೂ ಅಧಿಕ ಎನ್ನುತ್ತಾರೆ ಪ್ರಧಾನಮಂತ್ರಿ ಫಾರ್ಮಲೈಸೇಷನ್ ಆಫ್ ಮೈಕ್ರೋ ಫುಡ್ ಪ್ರಾಸೆಸಿಂಗ್ ಎಂಟರ್​ಪ್ರೖೆಸಸ್ ಸ್ಕೀಮ್ ಉಸ್ತುವಾರಿ ಆಹಾರ ಸಂಸ್ಕರಣಾ ವಿಭಾಗದ ವಿಶೇಷ ಕಾರ್ಯದರ್ಶಿ ಮನೋಜ್ ರಾಜನ್.

    ಒಂದು ಜಿಲ್ಲೆ ಒಂದು ಉತ್ಪನ್ನ; ಸ್ವಾವಲಂಬಿ ಭಾರತ ಅಭಿಯಾನಕ್ಕೆ ಪೂರಕಸಿಎಫ್​ಟಿಆರ್​ಐನಲ್ಲಿ ಉದ್ಯಮ ತರಬೇತಿ: ಕರ್ನಾಟಕದಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಗೆ ಸಂಬಂಧಿಸಿದ ತರಬೇತಿ ಕಾರ್ಯಕ್ರಮ ಆರಂಭವಾಗಿದ್ದು, ಮೈಸೂರಿನ ಸೆಂಟ್ರಲ್ ಫುಡ್ ಟೆಕ್ನಾಲಾಜಿಕಲ್ ರೀಸರ್ಚ್ ಇನ್​ಸ್ಟಿಟ್ಯೂಟ್​ನಲ್ಲಿ ಉದ್ಯಮ ತರಬೇತಿ ಒದಗಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗು ರಫ್ತು ನಿಗಮ ಇದಕ್ಕೆ ನೋಡಲ್ ಏಜೆನ್ಸಿ. ಯೋಜನೆಗೆ ಸಂಬಂಧಿಸಿದ ಮಾರ್ಗಸೂಚಿಗೆ ಈ ಕೊಂಡಿ ಕ್ಲಿಕ್ಕಿಸಬಹುದು – https://kappec.karnataka.gov.in/storage/pdf-files/8_Scheme_Guidelines_Kannada.pdf

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts