More

  ಕಲ್ಯಾಣವೆಂಬ ಹಣತೆಯಲ್ಲಿ ಸಾಕಾರಗೊಂಡ ಕನಸುಗಳು..

  ಕಲ್ಯಾಣವೆಂಬ ಹಣತೆಯಲ್ಲಿ ಸಾಕಾರಗೊಂಡ ಕನಸುಗಳು..| ಬಸವರಾಜ ಪಾಟೀಲ ಸೇಡಂ
  ಆಗಸ್ಟ್ 15, 1947 ದೇಶ ಸ್ವಾತಂತ್ರ್ಯ ಪಡೆದುಕೊಂಡರೂ, ಆ ಸ್ವಾತಂತ್ರ್ಯ ಕನ್ನಡ ನಾಡಿನ ಪಾಲಿಗೆ ಪೂರ್ಣವಾಗಿ ದಕ್ಕಲಿಲ್ಲ. ಏಕೆಂದರೆ ಇಂದಿನ ಕರ್ನಾಟಕದ ಉತ್ತರದ ಪ್ರಮುಖ ಭಾಗ ಹೈದರಾಬಾದ್ ನಿಜಾಮನ ಕಪಿಮುಷ್ಠಿಯಲ್ಲಿತ್ತು. ಅಕಸ್ಮಾತ್ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇನಾದರೂ ಉಕ್ಕಿನಂಥ ಗಟ್ಟಿತನ ಪ್ರದರ್ಶಿಸದಿದ್ದಿದ್ದರೆ ಇಂದಿನ ಕರ್ನಾಟಕದ ಭಾಗವೂ ಸೇರಿ ಹೈದರಾಬಾದ್ ಸಂಸ್ಥಾನ ಪಾಕಿಸ್ತಾನಕ್ಕೆ ಸೇರಿದ್ದರೂ ಅಚ್ಚರಿಯಿರುತ್ತಿರಲಿಲ್ಲ. ಏಕೆಂದರೆ ನಿಜಾಮನಿಗೆ ಸಿಗುತ್ತಿದ್ದ ಕಾಣದ ಕೈಗಳ ಬೆಂಬಲ ಆ ಪರಿಯಿತ್ತು.

  ಆ ಧೈರ್ಯದಲ್ಲಿಯೇ ನಿಜಾಮ ಛೂ ಬಿಟ್ಟದ್ದು ರಜಾಕ್ಕಾರರು ಎಂಬ ತನ್ನ ಪುಂಡರ ಸೇನೆಯನ್ನು. ರಜಾಕ್ಕಾರರ ಸೇನಾನಿ ಖಾಸಿಂ ರಜ್ವಿಯ ಅಮಾನುಷ ಕೃತ್ಯಗಳಿಗೆ ಎಲ್ಲೆಯೇ ಇರಲಿಲ್ಲ. ಇಷ್ಟರ ಮಧ್ಯೆ ಇದಕ್ಕೆಲ್ಲ ಹಿಂದೂ-ಮುಸ್ಲಿಂ ಕೋಮುಸಂಘರ್ಷದ ಬಣ್ಣವನ್ನೂ ಬಳಿಯಲಾಯಿತು. ಅಂತಹ ಸಂದರ್ಭದಲ್ಲಿ ಗೋರಟಾದ ಹಿಂದೂಗಳು ಇದನ್ನೆಲ್ಲ ಲೆಕ್ಕಿಸದೆ, ತ್ರಿವರ್ಣ ಧ್ವಜವನ್ನು ಹಾರಿಸಿ, ತಮ್ಮ ರಾಷ್ಟ್ರ ಧರ್ಮವನ್ನು ಮೆರೆದರು! ಆಗ ನಿಜಾಮನು ಹೊಂದಿದ್ದ ಖಾಸಗಿ ಸೇನೆಯಲ್ಲಿದ್ದ ರಜಾಕರು, ಗೋರಟಾದ ಮೇಲೆ ಎರಗಿದರು; ಗ್ರಾಮದ 400 ಮನೆಗಳಿಗೂ ನುಗ್ಗಿದ ಆ ದುರುಳರು ಒಳಗಿದ್ದ ಮಹಿಳೆಯರ ಮೇಲೆ ಮೃಗಗಳಂತೆ ಮುಗಿಬಿದ್ದರು; ಮಕ್ಕಳನ್ನು ದರದರನೆ ಎಳೆದುಕೊಂಡು ಹೋಗಿ, ಊರಿನ ಲಕ್ಷ್ಮಿ ದೇವಸ್ಥಾನದ ಮುಂದೆ ತರಿದು ಹಾಕಿದರು; ತಮ್ಮ ಪಾಶವೀಕೃತ್ಯದ ವಿರುದ್ಧ ಸೊಲ್ಲೆತ್ತಿದವರನ್ನು ಗುಂಡಿಕ್ಕಿ ಉಡಾಯಿಸಿದರು. 1948ರ ಮೇ 8-9ರಂದು ನಡೆದ ರಜಾಕರ ಈ ಅಟ್ಟಹಾಸಕ್ಕೆ ಏನಿಲ್ಲವೆಂದರೂ 200ಕ್ಕಿಂತ ಹೆಚ್ಚು ಹಿಂದೂಗಳು ಹುತಾತ್ಮರಾದರು. ಅಂದಿನ ಗೋರಟಾದ ಬೀದಿಗಳಲ್ಲಿ ಸತ್ತ ಪ್ರಾಣಿಗಳು, ದಿಕ್ಕಿಲ್ಲದಂತೆ ಬಿದ್ದಿದ್ದ ಹುತಾತ್ಮರ ಪಾರ್ಥಿವ ಶರೀರಗಳು ಕಂಡುಬಂದಿದ್ದನ್ನು ಕೆ.ಎಂ.ಮುನ್ಶಿಯವರು ತಮ್ಮ ಜ್ಞಾಪಕ ಚಿತ್ರಶಾಲೆಯ ಕೃತಿಯಾದ ದಿ ಎಂಡ್ ಆಫ್ ಆನ್ ಎರಾ: ಹೈದರಾಬಾದ್ ಮೆಮೊರೀಸ್​ನಲ್ಲಿ ದಾಖಲಿಸಿದ್ದಾರೆ. ಇಂತಹ ಬೀಭತ್ಸ ಘಟನೆಗಳಿಗೆ ಅಂದು ಹೈದರಾಬಾದ್ ಪ್ರಾಂತ್ಯಕ್ಕೆ ಸೇರಿದ್ದ ಇಂದಿನ ಕರ್ನಾಟಕದ ಆ ಭಾಗ ಮೂಕ ಸಾಕ್ಷಿಯಾಗಿತ್ತು.

  ಕೊನೆಗೆ 1948 ಸೆಪ್ಟೆಂಬರ್ 17 ರಂದು ನಿಜಾಮರ ಆಡಳಿತದಲ್ಲಿದ್ದ ಹೈದರಾಬಾದ್ ಪ್ರದೇಶ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್​ರವರ ಪ್ರಯತ್ನದಿಂದ ಭಾರತಕ್ಕೆ ಸೇರ್ಪಡೆಯಾಯಿತು. ಹೈದರಾಬಾದ್ ಕರ್ನಾಟಕದ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. 1956ರಲ್ಲಿ ಕರ್ನಾಟಕ ಏಕೀಕರಣ ಸಮಯದಲ್ಲಿ ಕನ್ನಡ ಮಾತನಾಡುವ ಪ್ರದೇಶಗಳಾದ ಕಲ್ಬುರ್ಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳಗಳು ಅಧಿಕೃತವಾಗಿ ಕರ್ನಾಟಕಕ್ಕೆ ಸೇರ್ಪಡೆಯಾದವು.

  ನಿಜಾಮರ ಕೆಟ್ಟ ಆಡಳಿತದಿಂದ ಹೈದರಾಬಾದ್ ಕರ್ನಾಟಕ ಎಲ್ಲಾ ವಲಯಗಳಲ್ಲಿ ಸಹ ಹಿಂದುಳಿದಿತ್ತು. ಹಲವಾರು ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಯಿತು. ಈ ಎಲ್ಲಾ ಸಮಸ್ಯೆಗಳಿಂದ ಹೈದರಾಬಾದ್ ಕರ್ನಾಟಕದ ಜನತೆಯನ್ನು ಪಾರು ಮಾಡಬೇಕು, ಎಲ್ಲಾ ಕನ್ನಡಿಗರಂತೆ, ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರು ಸಹ ಸ್ವಾವಲಂಬನೆಯ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಅಂದಿನ ಸರ್ಕಾರ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿತು.

  ಏಕೀಕರಣದ ನಂತರ ಹೈದರಾಬಾದ್ ಕರ್ನಾಟಕ ಪ್ರದೇಶ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದರೂ, ಭಾಷೆ, ಭಾವನೆ, ವ್ಯವಹಾರ ಪಕ್ವವಾಗಲಿಲ್ಲ. ಹೈದರಾಬಾದ್ ಎಂಬ ದಾಸ್ಯದ ಹೆಸರೇ ನಮ್ಮ ಭಾಗದ ಜನರ ಗುರುತಾಗಿತ್ತು. ಈ ದಾಸ್ಯದ ಹೆಸರಿಗೆ ಅಂತಿಮ ಮೊಳೆ ಹೊಡೆಯಬೇಕು ಎಂಬ ಕಾರಣಕ್ಕೆ ಹೈದರಾಬಾದ್ ಹೆಸರನ್ನು ಕಲ್ಯಾಣ ಎಂದು ಬದಲಿಸಬೇಕೆಂಬ ಕೂಗು ದಶಕಗಳ ಕಾಲದಿಂದ ಕೇಳಿ ಬರುತ್ತಿತ್ತು. ಆದರೆ ಆ ಕೂಗಿಗೆ ಯಾರೂ ದನಿಯಾಗಿರಲಿಲ್ಲ. ಹಲವಾರು ವರ್ಷಗಳ ನಂತರ 2019 ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹೈದರಾಬಾದ್ ಕರ್ನಾಟಕ ಎಂಬ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣಗೊಳಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಂಡರು. ಈ ಮೂಲಕ ಹಲವಾರು ವರ್ಷಗಳ ಕಲ್ಯಾಣ ಕರ್ನಾಟಕದ ಜನತೆಯ ಕನಸನ್ನು ನನಸಾಗಿಸಿದರು.

  ಕಲ್ಯಾಣ ಎಂಬ ಶಬ್ದವೇ ಮಾನವೀಯತೆಯ ಅಂತಃಕರಣದ ಮೌಲ್ಯಮಾಪನ. ಕಲ್ಯಾಣ ಕರ್ನಾಟಕ ಎಂಬ ಪದಬಳಕೆಯು ನಮ್ಮ ಭಾಗದ ಜನರಿಗೆ ಭಾವನಾತ್ಮಕ ಶಕ್ತಿಯನ್ನು ತುಂಬಿತು. ಹೈದರಾಬಾದ್ ಕರ್ನಾಟಕ ಎಂಬ ಪದ ಬಳಕೆಯಿಂದ ನಾವಿನ್ನೂ ಕರ್ನಾಟಕಕ್ಕೆ ಅಂಟಿಕೊಂಡಿಲ್ಲವೆನೋ ಎಂಬ ದುಗುಡವನ್ನು ಕಲ್ಯಾಣ ಕರ್ನಾಟಕ ಎಂಬ ಹೆಸರು ಅಳಿಸಿತು.

  ಕಲ್ಯಾಣ ಕರ್ನಾಟಕದ ಕೃಷ್ಣಾ, ತುಂಗಭದ್ರಾ, ಭೀಮಾ ನದಿಗಳಲ್ಲಿ ಈಗ ಸಾಕಷ್ಟು ಹೊಸನೀರು ಹರಿದಿದೆ. ಹಿಂದುಳಿದ ಪ್ರದೇಶವಾಗಿದ್ದ ಕಲ್ಯಾಣ ಕರ್ನಾಟಕದ ಕಲಬುರಗಿಯ ತೊಗರಿ ಇಂದು ಜಿಐ ಟ್ಯಾಗ್ ಪಡೆದಿದೆ. ರಾಯಚೂರಿನ ಸಿಂಧನೂರು ಹಾಗೂ ಕೊಪ್ಪಳದ ಗಂಗಾವತಿ ಭತ್ತದ ಕಣಜವಾಗಿದೆ. ಕಲಬುರಗಿಯಲ್ಲಿ ವಿಮಾನ ನಿಲ್ದಾಣ ನಿರ್ವಣವಾಗಿದೆ. ಉತ್ತಮ ದರ್ಜೆಯ ಆಸ್ಪತ್ರೆಗಳು, ಉತ್ತಮ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳು ಸೇರಿದಂತೆ, ಶಿಕ್ಷಣಕ್ಕೆ ಬೇಕಾದ ಎಲ್ಲಾ ಅಗತ್ಯತೆಗಳನ್ನು ಈಗ ಕಲ್ಯಾಣ ಕರ್ನಾಟಕ ಭಾಗ ತನ್ನದಾಗಿಸಿಕೊಂಡಿದೆ.

  ಉದ್ಯೋಗಗಳಿಗಾಗಿ ಮೊದಲು ನಮ್ಮ ಭಾಗದ ಜನತೆ ಬೆಂಗಳೂರು ಇಲ್ಲವೇ ಹೈದರಾಬಾದ್ ಅನ್ನು ನೆಚ್ಚಿಕೊಳ್ಳಬೇಕಾಗಿತ್ತು. ಆದರೆ ಈಗ ಕಲ್ಯಾಣ ಕರ್ನಾಟಕ ಸಹ ಉದ್ಯಮಿಗಳ ನೆಚ್ಚಿನ ತಾಣವಾಗಿದೆ. ಆ ಭಾಗದಲ್ಲಿ ಸಹ ದೊಡ್ಡ ದೊಡ್ಡ ಉದ್ಯಮಗಳು ಸ್ಥಾಪನೆಯಾಗಿವೆ. ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್ ನಿರ್ವಣವಾಗಲಿದೆ. ಕಲಬುರಗಿಯಲ್ಲಿ ಸಹ ಅತಿ ದೊಡ್ಡ ಟೆಕ್ಸ್ ಟೈಲ್ಸ್ ಪಾರ್ಕ್ ನಿರ್ವಣವಾಗಲಿದೆ. ಐಟಿ-ಬಿಟಿ ಉದ್ಯಮದ ಅನುಕೂಲಕ್ಕೆಂದು ಕಲಬುರಗಿಯಲ್ಲಿ ಐಟಿ-ಬಿಟಿ ಪಾರ್ಕ್ ಸಹ ನಿರ್ವಣವಾಗಲಿದೆ. ಬೀದರ್ ಹಾಗೂ ಬಳ್ಳಾರಿ ನಡುವಿನ ರಾಷ್ಟಿ›ೕಯ ಹೆದ್ದಾರಿ, ಕಲ್ಯಾಣ ಕರ್ನಾಟಕದ ಎರಡು ಪ್ರಮುಖ ಸಂಪರ್ಕ ವ್ಯವಸ್ಥೆಯಾಗಲಿದೆ. ಜಿ.ಐ ಟ್ಯಾಗ್ ಪಡೆದಿರುವ ಕಾರಣ ಕಲಬುರಗಿ ತೂರ್ ದಾಲ್ ಪಾರ್ಕ್ ವಿಶ್ವದ ಗಮನ ಸೆಳೆಯಲಿದೆ.

  ಐತಿಹಾಸಿಕ ಪ್ರದೇಶಗಳು ಹಾಗೂ ರಮಣೀಯ ಪ್ರವಾಸಿ ಸ್ಥಳಗಳನ್ನು ಒಳಗೊಂಡಿರುವ ಕಲ್ಯಾಣ ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಗೂ ಸಹ ಬಿಜೆಪಿ ಸರ್ಕಾರ ಹೆಚ್ಚಿನ ಆದ್ಯತೆ ನೀಡಿತ್ತು. ಹಂಪಿ, ಆನೆಗೊಂದಿ, ಹನುಮ ಜನ್ಮಸ್ಥಳ ಕಿಷ್ಕಿಂಧಾಗಳನ್ನು ಒಳಗೊಂಡು ಒಂದು ಪ್ರವಾಸೋದ್ಯಮ ಸರ್ಕ್ಯೂಟ್ ಅನ್ನು ಯಶಸ್ವಿಯಾಗಿ ರೂಪಿಸಲು ಎಲ್ಲಾ ಅವಕಾಶಗಳು ಇವೆ.

  ಈ ಎಲ್ಲಾ ಉದ್ಯಮಗಳು ಹಾಗೂ ಮೂಲಭೂತ ಸೌಕರ್ಯ ವ್ಯವಸ್ಥೆಯು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಹೆಚ್ಚೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಜೊತೆಗೆ ರಾಜ್ಯದ ಜಿ.ಡಿ.ಪಿಗೆ ತನ್ನದೇ ಆದ ಕೊಡುಗೆ ನೀಡಲಿದೆ. ಇದರ ಜತೆಜತೆಗೆ ಕಲ್ಯಾಣ ಕರ್ನಾಟಕದ ಜನತೆಯ ಜೀವನ ಮಟ್ಟವನ್ನು ಖಂಡಿತವಾಗಿ ಸುಧಾರಿಸಲಿದೆ.

  ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಮೊದಲಿನ ಹೈದರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿ) ಪ್ರಾರಂಭವಾದದ್ದು ದಿ. ವೀರೇಂದ್ರ ಪಾಟೀಲರ ಕಾಲದಲ್ಲಿ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಲ್ಲಿ ಪ್ರದೇಶದ ಎಲ್ಲ ಮುಖಂಡರು ಶ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ಪೂರ್ವ ಮುಖ್ಯಮಂತ್ರಿ ದಿ. ಧರ್ಮಸಿಂಗ ವರದಿ ಸ್ಮರಣೀಯ. 371 (ಜೆ) ಸ್ಥಾನಮಾನ ದೊರಕಿಸಿಕೊಡಲು ದಿ. ವೈಜನಾಥ ಪಾಟೀಲರು ಮಾಡಿದ ಪಾದಯಾತ್ರೆ ಪ್ರದೇಶದಲ್ಲಿ ಜಾಗೃತಿ ಮೂಡಿಸಲು ಕಾರಣವಾಯಿತು. ಮುಂದೆ ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರದಲ್ಲಿ ಸಚಿವರಾಗಿದ್ದಾಗ ಪ್ರದೇಶಕ್ಕೆ ವಿಶೇಷ ಸ್ಥಾನ (371 ಜೆ ಅಡಿಯಲ್ಲಿ ) ದೊರೆಯಿತು.

  ಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾಲದಲ್ಲಿ ಪ್ರಾರಂಭವಾದ ಕನ್ನಡ ನಾಡಿನ ಕೋಟಿ-ಕೋಟಿ ಜನರ ಭಾವನಾತ್ಮಕ ಸಂಬಂಧ ಹೊಂದಿದ ಬಸವಕಲ್ಯಾಣದ ವಿಶ್ವ ಮಾನ್ಯತೆಯ ಅನುಭವ ಮಂಟಪ, ಪರುಷ ಕಟ್ಟೆಯ ಉಳಿದ ಕಾರ್ಯವನ್ನು ಪ್ರಸ್ತುತ ಸರಕಾರವು ಸರ್ವ ರೀತಿಯ ಸಹಯೋಗ ನೀಡಿ ತಮ್ಮ ಕಾಲಖಂಡದಲ್ಲಿ ಪೂರ್ಣಗೊಳಿಸಿ ಉದ್ಘಾಟಿಸಲಿದೆ ಎಂಬುದು ನಮ್ಮ ನಂಬಿಕೆ ಮತ್ತು ಆಶಯ.

  ಈ ಶುಭ ಸಂದರ್ಭದಲ್ಲಿ ಸರ್ವರಿಗೂ ನನ್ನ ಹಾರ್ದಿಕ ಶುಭಾಶಯಗಳು.

  (ಲೇಖಕರು ಮಾಜಿ ಸಂಸದರು)

  ಕುಂದಾಪುರದಲ್ಲಿ ನಾಯಿಗೆ ಹೆದರಿ ಓಡಿ ಹೋಗಿ ಬಾವಿಗೆ ಬಿದ್ದ ಚಿರತೆ!

  ಗೋವಿಂದಬಾಬು ಪೂಜಾರಿ ಮೇಲೇ ಆರೋಪ ಇರುವುದರಿಂದ ಅವರ ದೂರಿನ ಮೇಲೆ ಅನುಮಾನ ಇದೆ: ವಕೀಲ ಅರುಣ್​ ಶ್ಯಾಂ

  ರಾಜ್ಯೋತ್ಸವ ರಸಪ್ರಶ್ನೆ - 23

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts