More

    ಮಧ್ಯ ಕರ್ನಾಟಕ ಬೆಟ್ಟದಷ್ಟು ಕನಸು; ಕರ್ನಾಟಕ ಬಜೆಟ್​ 2021-22

    ಮಧ್ಯ ಕರ್ನಾಟಕದ ಬೆಣ್ಣೆನಗರಿ ದಾವಣಗೆರೆ ಮತ್ತು ಕೋಟೆನಾಡು ಚಿತ್ರದುರ್ಗ ಜಿಲ್ಲೆಗಳ ಜನರ ಬೇಡಿಕೆಗಳಲ್ಲಿ ಬಹಳಷ್ಟು ಸಾಮ್ಯತೆಯಿದೆ. ದಾವಣಗೆರೆ-ತುಮಕೂರು ನೇರ ರೈಲು ಮಾರ್ಗ, ಭದ್ರಾ ಮೇಲ್ದಂಡೆ ಯೋಜನೆ, ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ, ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಸಂಬಂಧಿಸಿದಂತೆ ಹಲವು ನಿರೀಕ್ಷೆಗಳಿವೆ. ವಾಣಿಜ್ಯಕ್ಕೆ ಹೆಸರಾದ ದಾವಣಗೆರೆ ಭಾಗದ ಮಂದಿ ವಿಮಾನ ನಿಲ್ದಾಣದ ಕನಸು ಕಾಣುತ್ತಿದ್ದಾರೆ. ಜತೆಗೆ ಕೃಷಿ ಕಾಲೇಜು, ಟ್ರಕ್ ಟರ್ವಿುನಲ್, ಫುಡ್ ಪಾರ್ಕ್​ನಂಥ ಯೋಜನೆಗಳ ಕೊಡುಗೆ ಸಿಗಬಹುದು ಎಂದು ಕಾಯುತ್ತಿದ್ದಾರೆ. ಹೊಸ ತಾಲೂಕು ರಚನೆ, ಧರ್ಮಪುರ ಕೆರೆಗೆ ನೀರು ಸೇರಿ ಜಿಲ್ಲೆಯ ಕೃಷಿ, ತೋಟಗಾರಿಕೆ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳ ಹಲವು ಬೇಡಿಕೆಗಳಿಗೆ ಸಿಎಂ ಸ್ಪಂದಿಸಬೇಕು ಎನ್ನುತ್ತಾರೆ ದುರ್ಗದ ಜನ.

    1. ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಬೇಡಿಕೆ: ಶಿಕ್ಷಣ ಸಂಸ್ಥೆಗಳಿಗೆ ಹೆಸರಾದ ದಾವಣಗೆರೆಯಲ್ಲಿ ಖಾಸಗಿ ಸಂಸ್ಥೆಗಳೇ ಹೆಚ್ಚಾಗಿವೆ. ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳೂ ಇವೆ. ಆದರೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು; ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅದರಿಂದ ಅನುಕೂಲವಾಗುತ್ತದೆ ಎಂಬ ಬೇಡಿಕೆ ಹಳೆಯದು. ಚಿತ್ರದುರ್ಗದಲ್ಲೂ ಕಳೆದ ದೀಪಾವಳಿ ವೇಳೆ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮೂಡಿದ್ದ ಭರವಸೆ ನಂತರದಲ್ಲಿ ಕುಗ್ಗಿತ್ತು. ಈ ಬಾರಿಯಾದರೂ ಅದು ಈಡೇರಬಹುದು ಎಂಬ ನಿರೀಕ್ಷೆಯಿದೆ.

    2. ನೇರ ರೈಲು ಮಾರ್ಗ: ಹಿಂದಿನ ಅಧಿಕಾರಾವಧಿಯಲ್ಲಿ (2011-12) ತಾವೇ ಮಂಜೂರು ಮಾಡಿಸಿದ್ದ 1801 ಕೋಟಿ ರೂ.ಗೂ ಅಧಿಕ ವೆಚ್ಚದ ದಾವಣಗೆರೆ -ಚಿತ್ರದುರ್ಗ- ತುಮಕೂರು ನೇರ ರೈಲು ಮಾರ್ಗ (198 ಕಿ.ಮೀ.) ಯೋಜನೆಯ ಅನುಷ್ಠಾನಕ್ಕೆ ಸಿಎಂ ಗ್ರೀನ್ ಸಿಗ್ನಲ್ ಕೊಡಬೇಕಿದೆ. ಈ ಯೋಜನೆಗೆ 3 ಜಿಲ್ಲೆಗಳಿಂದ 2165 ಎಕರೆಗಿಂತ ಹೆಚ್ಚು ಭೂಮಿಯ ಅಗತ್ಯವಿದೆ. ಚಿತ್ರದುರ್ಗ ಜಿಲ್ಲೆಯೊಂದರಲ್ಲೇ ಭೂಸ್ವಾಧೀನಕ್ಕೆ 1,000 ಕೋಟಿ ರೂ. ಬೇಕು. ತುಮಕೂರು ಜಿಲ್ಲೆಯಲ್ಲಿ 796, ದಾವಣಗೆರೆ ಜಿಲ್ಲೆಯಲ್ಲಿ 237 ಎಕರೆ ಜಮೀನು ಅಗತ್ಯವಿದೆ.

    3. ಪ್ರತ್ಯೇಕ ಹಾಲು ಒಕ್ಕೂಟ: ದಾವಣಗೆರೆ-ಚಿತ್ರದುರ್ಗಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಯಾಗಬೇಕು ಎಂಬುದು ಪ್ರಮುಖ ಬೇಡಿಕೆ. ಪ್ರಸ್ತುತ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮೂರೂ ಜಿಲ್ಲೆಗಳ ನಡುವೆ ಒಕ್ಕೂಟವಿದೆ (ಶಿಮುಲ್). ಪ್ರತ್ಯೇಕ ಹಾಲು ಒಕ್ಕೂಟ ರಚನೆಯಾದರೆ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಮೆಗಾ ಡೇರಿ ಆಗುವುದರಿಂದ ಹೆಚ್ಚು ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಾಗಲಿದೆ.

    4. ಭದ್ರಾ ಮೇಲ್ದಂಡೆ ಯೋಜನೆ: ಭದ್ರಾ ಮೇಲ್ದಂಡೆ ಯೋಜನೆ ಆರಂಭವಾಗಿದ್ದರೂ ಅನುಷ್ಠಾನದಲ್ಲಿ ವಿಳಂಬವಾಗುತ್ತಿದ್ದು, ಬರದ ನಾಡೆಂಬ ಹಣೆಪಟ್ಟಿ ಹೊತ್ತ ಚಿತ್ರದುರ್ಗ ಜಿಲ್ಲೆಗೆ ಬಜೆಟ್ ಶಕ್ತಿ ತುಂಬಬಹುದೇ ಎಂದು ಜನರು ಕಾತರದಿಂದ ಕಾಯುತ್ತಿದ್ದಾರೆ. ಯೋಜನೆ ಕಾಮಗಾರಿ ಚುರುಕುಗೊಳಿಸಲು ಬಜೆಟ್​ನಲ್ಲಿ ಏನಾದರೂ ಪ್ರಸ್ತಾಪವಾಗಬಹುದೇ ಎಂಬುದು ರೈತರ ನಿರೀಕ್ಷೆಯಾಗಿದೆ.

    5. ವಿಮಾನ ನಿಲ್ದಾಣದ ಬೇಡಿಕೆ: ದಾವಣಗೆರೆಯು ವಾಣಿಜ್ಯ ನಗರಿಯಾಗಿದ್ದು ವ್ಯಾಪಾರ, ವಹಿವಾಟು ದೃಷ್ಟಿಯಿಂದ ಮಹತ್ವದ್ದಾಗಿದೆ. ಇಲ್ಲಿ ಉದ್ಯಮಿಗಳು, ವರ್ತಕರ ಸಮೂಹವೇ ಇದೆ. ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಇನ್ನಿತರ ಕೋರ್ಸ್​ಗಳಲ್ಲಿ ವ್ಯಾಸಂಗ ಮಾಡಲು ವಿವಿಧ ರಾಜ್ಯಗಳಿಂದ, ವಿದೇಶಗಳಿಂದಲೂ ವಿದ್ಯಾರ್ಥಿಗಳು ಬರುತ್ತಾರೆ. ವಿಶ್ವವಿದ್ಯಾಲಯವಿದೆ. ವಿವಿಧ ಕ್ಷೇತ್ರಗಳ ಜನರು ವಿಮಾನಯಾನವನ್ನು ಇಷ್ಟಪಡುತ್ತಾರೆ. ಇದರಿಂದ ಈ ಭಾಗದ ಜನಪ್ರತಿನಿಧಿಗಳಿಗೂ ಅನುಕೂಲವಾಗಲಿದೆ.

    ನಿರೀಕ್ಷೆಗಳೇನು?

    • ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸ ತಾಲೂಕು ರಚನೆ
    • ಹಿರಿಯೂರು ತಾಲೂಕು ಧರ್ಮಪುರ ಕೆರೆಗೆ ನೀರು
    • ಚಿತ್ರದುರ್ಗದಲ್ಲಿ ಅತ್ಯಾಧುನಿಕ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ
    • ಕೋಟೆ ಅಭಿವೃದ್ಧಿ ಪ್ರಾಧಿಕಾರ
    • ಇಂಗಳದಾಳ್ ಗಣಿಗಾರಿಕೆಗೆ ಪುನಶ್ಚೇತನ
    • ವಿವಿ ಸಾಗರ ಹಿನ್ನೀರು ಜಲಾಶಯ ಸಹಿತ ಚಿತ್ರದುರ್ಗ ಜಿಲ್ಲೆಯ ಪ್ರವಾಸಿ, ಧಾರ್ವಿುಕ, ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ಕ್ರಮ
    • ದಾವಣಗೆರೆ ಜಿಲ್ಲೆಯ ಕತ್ತಲಗೆರೆಯಲ್ಲಿ ಕೃಷಿ ಕಾಲೇಜು ಸ್ಥಾಪನೆ
    • ದಾವಣಗೆರೆಯಲ್ಲಿ ಟ್ರಕ್ ಟರ್ವಿುನಲ್
    • ಫುಡ್ ಪಾರ್ಕ್​ಗೆ ಪ್ರಸ್ತಾವ
    • ಸಿರಿಧಾನ್ಯಗಳ ಸಂಸ್ಕರಣಾ ಘಟಕಗಳಿಗೆ ಪ್ರೋತ್ಸಾಹ
    ಮಧ್ಯ ಕರ್ನಾಟಕ ಬೆಟ್ಟದಷ್ಟು ಕನಸು; ಕರ್ನಾಟಕ ಬಜೆಟ್​ 2021-22
    ಚಿತ್ರದುರ್ಗ ಜಿಲ್ಲಾಸ್ಪತ್ರೆ ಆವರಣದಲ್ಲಿ ಕಳೆದ ನವೆಂಬರ್ 13ರಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಸ್ಥಳ ಪರಿಶೀಲಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts