More

    ಜೈಲಿಗೆ ಕಳುಹಿಸಿದ್ದೇ ಹತ್ಯೆಗೆ ಕಾರಣ; ಎಸ್ಪಿ ಡಿ.ದೇವರಾಜ ಮಾಹಿತಿ, ಜಗನ್​ಮೋಹನ್​ರೆಡ್ಡಿ ಕೊಲೆ ಪ್ರಕರಣದಲ್ಲಿ 14 ಮಂದಿ ಬಂಧನ

    ಕೋಲಾರ/ಮುಳಬಾಗಿಲು: ಮುಳಬಾಗಿಲಿನಲ್ಲಿ ಜೂ 7ರಂದು ಗಂಗಮ್ಮ ದೇಗುಲದ ಬಳಿ ಹತ್ಯೆಯಾಗಿದ್ದ ಜಗನ್​ ಮೋಹನ್​ ರೆಡ್ಡಿ ಕೊಲೆ ಪ್ರಕರಣದಲ್ಲಿ ಇಲ್ಲಿವರೆಗೆ 14 ಆರೋಪಿಗಳನ್ನು ಬಂಧಿಸಿದ್ದು, ಉಳಿದವರ ಪತ್ತೆ ಕಾರ್ಯ ಮುಂದುವರಿದಿದೆ. ವೈಯಕ್ತಿಕ ದ್ವೇಷ ಕೊಲೆಗೆ ಕಾರಣವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಿ.ದೇವರಾಜ ತಿಳಿಸಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಪಿಗಳ ಪತ್ತೆಗಾಗಿ ಅಪರ ಪೊಲೀಸ್​ ಅಧೀಕ್ಷಕ ಸಚಿನ್​ ಪಿ.ಘೋರ್ಪಡೆ ಮಾರ್ಗದರ್ಶನದಲ್ಲಿ ಮುಳಬಾಗಿಲು ಪೊಲೀಸ್​ ಉಪಾಧೀಕ್ಷಕ ಟಿ.ಆರ್​.ಜೈಶಂಕರ್​ ನೇತೃತ್ವದಲ್ಲಿ ವೃತ್ತನಿರೀಕ್ಷಕರಾದ ಲಕ್ಷ್ಮೀಕಾಂತಯ್ಯ, ಐಯಣ್ಣ ರೆಡ್ಡಿ, ಮಾಕೊಂರ್ಡಯ್ಯ, ಆಂಜಪ್ಪ, ಶಿವರಾಜ್​, ಶ್ರೀಭೈರ, ನವೀನ್​, ಪ್ರದಿಪ್​, ಅಣ್ಣಯ್ಯ, ವರಲಕ್ಷ್ಮಮ್ಮ, ಪಿಎಸ್​ಐ ಮಂಜುನಾಥ ನೇತೃತ್ವದಲ್ಲಿ ತಂಡಗಳನ್ನು ರಚಿಸಿದ್ದು, ಆರೋಪಿಗಳು 2 ತಂಡಗಳಾಗಿ ಮೊಬೈಲ್​ ಸಹ ಬಳಸದೆ ಗೋವಾ, ಸತಾರ, ಶಿರಡಿ, ಮುಂಬೈ, ವಿಜಯವಾಡ, ಹೈದರಾಬಾದ್​, ಚೆನೈ, ಮೈಸೂರು, ಬೆಂಗಳೂರು ಮತ್ತಿತರ ಕಡೆ ಸುತ್ತಾಡುತ್ತಿದ್ದರು. ಆದರೆ ತಂಡಗಳು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿವೆ ಎಂದರು.

    ವಿವಿಧೆಡೆ ತಲೆಮರೆಸಿಕೊಂಡಿದ್ದ ಆರೋಪಿಗಳಾದ ಮುಳಬಾಗಿಲು ಗಣೇಶಪಾಳ್ಯದ ವಿ.ಮಧುಸೂಧನ್​, ಅಶ್ವಿನಿ, ಬೆಂಗಳೂರು ಮಂಜುನಾಥ ನಗರದ ನಾಗೇಶ, ಮುತ್ಯಾಲಪೇಟೆಯ ಮನೋಜ್​ ಕುಮಾರ್​, ಧನಂಜಯ ಅಲಿಯಾಸ್​ ಧನು, ಮಹೇಶ ಅಲಿಯಾಸ್​ ಮುಕ್ಕಾ, ಬಂಗಾರಪೇಟೆಯ ಅಭಿನಂದ್​, ನವೀನ್​ಕುಮಾರ್​, ಜಗನ್​ ಅಲಿಯಾಸ್​ ಜಗನ್ನಾಥ, ಸಾವಿತ್ರಮ್ಮನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

    ಇನ್ನು ಸುಪಾರಿ ಹಂತಕ ಬಾಲಾಜಿ ಸಿಂಗ್​ ಅಲಿಯಾಸ್​ ಗಬ್ಬರ್​ನನ್ನು ಜೂ 23ರಂದು ಮೈಸೂರಿನಲ್ಲಿ ಬಂಧಿಸಿ ಜೂ 24ರಂದು ಕೋಲಾರಕ್ಕೆ ಕರೆತರುವಾಗ ಚೆಲುವನಹಳ್ಳಿ ಗೇಟ್​ ಬಳಿ ಪರಾರಿಯಾಗಲು ಯತ್ನಿಸಿದ್ದು, ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿತ್ತು. ಪ್ರಕರಣದಲ್ಲಿ ಇನ್ನೂ ಹಲವರು ತಲೆಮರೆಸಿಕೊಂಡಿದ್ದು, ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಆರೋಪಿಗಳು ತಲೆಮರೆಸಿಕೊಳ್ಳಲು ಸಹಕರಿಸಿದ್ದಕ್ಕಾಗಿ ರೋಹಿತ್​ ಕುಮಾರ್​ ಪ್ರಕಾಶ್​, ಸಂಗೀತಾಬಾಯಿ, ಜಯಲಕ್ಷಿ$್ಮಬಾಯಿ ಎಂಬುವವರನ್ನೂ ಬಂಧಿಸಲಾಗಿದೆ ಎಂದು ವಿವರಿಸಿದರು.

    ಅಪರ ಪೊಲೀಸ್​ ಅಧೀಕ್ಷಕ ಸಚಿನ್​ ಪಿ.ಘೋರ್ಪಡೆ, ಮುಳಬಾಗಿಲು ಪೊಲೀಸ್​ ಉಪಾಧೀಕ್ಷಕ ಟಿ.ಆರ್​. ಜೈಶಂಕರ್​ ಇದ್ದರು.

    ಹಳೆಯ ವೈಷಮ್ಯ: ಮುಳಬಾಗಿಲು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷನಾಗಿದ್ದ ಜಗನ್​ ಮೋಹನ್​ರೆಡ್ಡಿ ಮುತ್ಯಾಲಪೇಟೆ ವಾಸಿಯಾಗಿದ್ದು, ಅದೇ ಪ್ರದೇಶದಲ್ಲಿದ್ದ ಸಾವಿತ್ರಮ್ಮ ಮತ್ತು ಆಕೆಯ ಪುತ್ರರಾದ ಜಗನ್​ ಮತ್ತು ತನುಷ್​ನನ್ನು ಹಲವು ವರ್ಷಗಳ ಹಿಂದೆ ಅವಾಚ್ಯ ಪದಗಳಿಂದ ನಿಂದಿಸಿದ್ದೇ ಹತ್ಯೆಗೆ ಕಾರಣವಾಗಿದೆ ಎಂದು ಎಸ್ಪಿ ಡಿ.ದೇವರಾಜ ತಿಳಿಸಿದರು.
    ತನುಷ್​ ಮತ್ತು ಜಗನ್​ ಇದರಿಂದ ಅಸಮಾಧಾನಗೊಂಡಿದ್ದು, ಒಮ್ಮೆ ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದಾಗ ಅವರಿಬ್ಬರೂ ಸಿಕ್ಕಿಬಿದ್ದಿದ್ದರು. ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಜಗನ್ಮೋಹನರೆಡ್ಡಿಯನ್ನು ಹತ್ಯೆ ಮಾಡುವುದಾಗಿ ಹೇಳಿಕೊಂಡಿದ್ದ ವಿಡಿಯೋವೊಂದು ಪೊಲೀಸರಿಗೆ ಸಿಕ್ಕಿತ್ತು.

    ಆಗ ಜಗನ್ಮೋಹನ ರೆಡ್ಡಿಯಿಂದ ದೂರು ಪಡೆದ ಪೊಲೀಸರು ಅವರಿಬ್ಬರನ್ನೂ ಜೈಲುಪಾಲಾಗುವಂತೆ ಮಾಡಿದ್ದರು. ಕೆಲವು ದಿನಗಳ ನಂತರ ಬಿಡುಗಡೆಯಾಗಿ ಬಂದ ಅವರು ವೈಷಮ್ಯ ಮರೆತಂತೆ ಇದ್ದರು. ಆದರೆ ತಮ್ಮ ಭವಿಷ್ಯ ಹಾಳು ಮಾಡಿದವನ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದು ಸಂಚು ರೂಪಿಸಿ ಜೂ 4ರಂದು ಜಗನ್ಮೋಹನರೆಡ್ಡಿ ಹುಟ್ಟುಹಬ್ಬದಂದು ಹತ್ಯೆಗೆ ಯತ್ನಿಸಿ ವಿಲರಾಗುತ್ತಾರೆ. ಜೂ 7ರಂದು ಮುಂಜಾನೆ ಗಂಗಮ್ಮ ದೇಗುಲದ ಬಳಿ ಹತ್ಯೆ ಮಾಡುತ್ತಾರೆ. ಹತ್ಯೆ ಸಂದರ್ಭದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು ಪೊಲೀಸರಿಗೆ ಸಿಕ್ಕಿವೆ ಎಂದು ವಿವರಿಸಿದರು.

    278 ಕೆಜಿ ಗಾಂಜಾ ನಾಶ: ವಿಶ್ವ ಮಾದಕ ವಸ್ತುಗಳ ವಿರೋಧಿ ದಿನ ಜೂ. 26ರಂದು ಆಚರಿಸಿದ್ದು, ಜಿಲ್ಲೆಯಲ್ಲಿ ಕಳೆದ ವರ್ಷ 31 ಪ್ರಕರಣಗಳಲ್ಲಿ 46 ಆರೋಪಿಗಳನ್ನು ಬಂಧಿಸಿ ವಶಪಡಿಸಿಕೊಂಡಿದ್ದ 278 ಕೆ.ಜಿ ಗಾಂಜಾವನ್ನು ನ್ಯಾಯಾಲಯದ ಅನುಮತಿ ಪಡೆದು ನಾಶಪಡಿಸಲಾಯಿತು ಎಂದು ಎಸ್ಪಿ ದೇವರಾಜ್​ ತಿಳಿಸಿದರು.
    ಜಿಲ್ಲೆಯಲ್ಲಿ ಐಪಿಎಲ್​ ಬೆಟ್ಟಿಂಗ್​ ದಂಧೆ, ಮಾದಕ ವಸ್ತು ಸರಬರಾಜು, ಮೀಟರ್​ಬಡ್ಡಿ ದಂಧೆಗೆ ಕಡಿವಾಣ ಹಾಕಲಾಗಿದೆ. ಐಪಿಎಲ್​ ದಂಧೆಕೋರರು ಊರು ಬಿಟ್ಟಿದ್ದಾರೆ. ಗಡಿ ಜಿಲ್ಲೆಯಾಗಿರುವುದರಿಂದ ಬೆಂಗಳೂರು ಮತ್ತಿತರ ಕಡೆ ಮಾದಕ ವಸ್ತು ಕಳ್ಳಸಾಗಣೆ ದಂಧೆ ಜೋರಾಗಿತ್ತಾದರೂ ಪೊಲೀಸ್​ ಜಿಲ್ಲೆ ವ್ಯಾಪ್ತಿ ಮೀರಿ ನಮ್ಮ ಸಿಬ್ಬಂದಿ ಹೋಗಿ ಆರೋಪಿಗಳನ್ನು ಸೆರೆಹಿಡಿದು ದಂಧೆಗೆ ಕಡಿವಾಣ ಹಾಕಿದ್ದಾರೆ ಎಂದು ಹೇಳಿದರು.

    ಇನ್ನು ನಗರದಲ್ಲಿ ಮಹಾಲಕ್ಷ್ಮೀ ಫೈನಾನ್ಸ್​ ಹೆಸರಲ್ಲಿ ವಾರಕ್ಕೆ 10 ತಿಂಗಳಿಗೆ ಶೇ.40 ಬಡ್ಡಿ ವಸೂಲಿ ಮಾಡುತ್ತಿದ್ದ ಕೆ.ಎಂ.ಶಿವಕುಮಾರ್​, ಆತನ ಅಕ್ಕ ಗಿರಿಜಮ್ಮ ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದು, ಇವರ ಮೇಲೆ 4 ಪ್ರಕರಣ ದಾಖಲಿಸಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆತನ ವಿರುದ್ಧ ರೌಡಿಶೀಟರ್​ ತೆರೆಯಲಾಗಿದೆ ಎಂದು ಎಸ್ಪಿ ಡಿ.ದೇವರಾಜ ತಿಳಿಸಿದರು. ಪೊಲೀಸ್​ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಗಳ ಅಗತ್ಯವಿಲ್ಲ. ಬೀಟ್​, ತಪಾಸಣೆ ಬಿಗಿಗೊಳಿಸಿದರೆ ಅಕ್ರಮಗಳು ಕಡಿಮೆಯಾಗಲಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts