More

    ವಾರಾಂತ್ಯದಲ್ಲಿ ಬಿತ್ತನೆ ಬೀಜ ಲಭ್ಯ

    ಲಕ್ಷ್ಮೇಶ್ವರ: ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಬಹುತೇಕ ರೈತರು ಜಮೀನುಗಳನ್ನು ಹದಗೊಳಿಸುತ್ತಿದ್ದಾರೆ. ಮುಂಗಾರು ಬಿತ್ತನೆಗೆ ಖಾಸಗಿ ಅಂಗಡಿಗಳಲ್ಲಿ ಸಾಕಷ್ಟು ಬೀಜ, ಗೊಬ್ಬರ ದಾಸ್ತಾನಿದೆ. ಈ ವಾರಾಂತ್ಯದಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಧನದಲ್ಲಿ ಬೀಜಗಳು ಲಭ್ಯವಾಗಲಿವೆ ಎಂದು ಜಿಲ್ಲಾ ಉಪ ಕೃಷಿ ನಿರ್ದೇಶಕ ವೀರೇಶ ಹುನಗುಂದ ಹೇಳಿದರು.
    ಪಟ್ಟಣದ ಗೊಬ್ಬರ ಅಂಗಡಿಗಳಲ್ಲಿ ಗೊಬ್ಬರ, ಬೀಜ, ರಾಸಾಯನಿಕ ಉತ್ಪನ್ನಗಳನ್ನು ಬುಧವಾರ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಸಕಾಲಕ್ಕೆ ಬಿತ್ತನೆ ಮಾಡಲು ಎಲ್ಲ ಅಂಗಡಿಗಳಿಗೆ ಬೀಜ, ಗೊಬ್ಬರ ಪೂರೈಸಲಾಗಿದೆ. ಬೇಗ ಮಳೆಯಾಗಿದೆ ಎಂದು ಹಂಗಾಮು ಪೂರ್ವದಲ್ಲಿ ಬಿತ್ತಿದರೆ ಮಳೆ, ಹವಾಮಾನ ವೈಪರೀತ್ಯ, ಕೀಟ ಬಾಧೆಯಿಂದ ಬೆಳೆಗಳು ಹಾನಿಯಾಗುವ ಸಂಭವವಿದೆ. ಅದಕ್ಕಾಗಿ ಸಕಾಲಕ್ಕೆ ಬಿತ್ತನೆ ಮಾಡುವುದು ಸೂಕ್ತ. ಕೃಷಿ ಇಲಾಖೆಯಲ್ಲಿ ರೈತರಿಗೆ ಕೃಷಿ ಸಲಕರಣೆಗಳು, ಬೀಜ, ಸಾವಯವ ಗೊಬ್ಬರ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ರೈತರು ಸಾವಯುವ ಗೊಬ್ಬರ ಬಳಸಬೇಕು. ಗುಣಮಟ್ಟದ ಬೀಜ ಸಂಗ್ರಹಿಸಿಟ್ಟುಕೊಂಡು ಬಿತ್ತನೆ ಮಾಡಬೇಕು. ಎಲ್ಲರೂ ಒಂದೇ ತರಹದ ಬೆಳೆ ಬೆಳೆಯದೆ ಮಿಶ್ರ ಬೆಳೆಗೆ ಒತ್ತು ಕೊಡಬೇಕು. ಗೊಬ್ಬರ ಅಂಗಡಿ ವ್ಯಾಪಾರಸ್ಥರು ಹೆಚ್ಚಿನ ದರಕ್ಕೆ ಮಾರಾಟ ಮಾಡದಂತೆ ಮತ್ತು ದರಪಟ್ಟಿ ಪ್ರಕಟಿಸುವಂತೆ’ ಸೂಚಿಸಿದರು.
    ರಾಸಾಯನಿಕ ಗೊಬ್ಬರಗಳ ದರಗಳು ಮಾರುಕಟ್ಟೆಯಲ್ಲಿ ವ್ಯತ್ಯಾಸವಾಗಲಿವೆ. ರೈತರು ಸಹಕರಿಸಬೇಕು. ಗೊಬ್ಬರ, ಬೀಜ ಖರೀದಿ ವೇಳೆ ಆಧಾರ್ ಕಾರ್ಡ್, ಉತಾರ ತರಬೇಕು ಎಂದು ಹೇಳಿದರು.
    ಗೊಬ್ಬರ ಪೂರೈಕೆಯಲ್ಲಿ ಸಾರಿಗೆ ಸಮಸ್ಯೆ, ರೈತರು ಕೇವಲ ಡಿಎಪಿ ಹಾಗೂ ಒಂದೇ ಕಂಪನಿ ಬೀಜ, ಗೊಬ್ಬರ ಕೇಳುವುದು, ದಾಖಲೆಗಳನ್ನು ತರದೇ ಇರುವುದು, ಪಕ್ಕದ ಜಿಲ್ಲೆಗಳ ರೈತರು ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಮತ್ತಿತರ ಸಮಸ್ಯೆಗಳ ಕುರಿತು ಅಂಗಡಿಗಳ ಮಾಲೀಕರಾದ ಸುಭಾಸ ಬಟಗುರ್ಕಿ, ಮಂಜುನಾಥ ಸವಣೂರ, ಶಕ್ತಿ ಕತ್ತಿ, ನಾಗರಾಜ ಬಟಗುರ್ಕಿ, ಅಶೋಕ ಬಟಗುರ್ಕಿ, ಬಸವರಾಜ ಕುಂಬಿ, ನಿರಂಜನ ಲಿಂಬಯ್ಯಸ್ವಾಮಿಮಠ, ಶಿವಾನಂದ ಮೆಕ್ಕಿ ಅವರು ಅಧಿಕಾರಿಯ ಗಮನಕ್ಕೆ ತಂದರು.
    ಕೃಷಿ ಸಹಾಯಕ ನಿರ್ದೇಶಕ ಮಹೇಶ ಬಾಬು, ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಕೃಷಿ ಸಹಾಯಕ ಅಧಿಕಾರಿ ಹಣಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts