More

    ಬಿತ್ತನೆ ಬರೀ ಪಾಸ್ ಕ್ಲಾಸ್

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
    ಮಳೆಗಾಲ ಆರಂಭಗೊಂಡು ಎರಡು ತಿಂಗಳು ಕಳೆಯುತ್ತ ಬಂದರೂ ತಾಲೂಕಿನಲ್ಲಿ ಮಾತ್ರ ವರುಣ ದೇವ ಕೃಪೆ ತೋರಿಲ್ಲ. ಬಿತ್ತನೆಗಾಗಿ ಜಮೀನು ಹಸನು ಮಾಡಿಕೊಂಡು ಕುಳಿತಿರುವ ರೈತರು ಕಂಗಾಲಾಗಿದ್ದು, ಮಳೆಗಾಗಿ ಆಕಾಶದತ್ತ ಮುಖಮಾಡಿ ಕುಳಿತಿದ್ದಾರೆ.

    ಪ್ರಸಕ್ತ ವರ್ಷ ತಾಲೂಕಿನಲ್ಲಿ ಜು. 4ರವರೆಗೆ 217 ಮಿ.ಮೀ. ವಾಡಿಕೆ ಮಳೆಯಿದ್ದರೆ ಈವರೆಗೆ ಕೇವಲ 154.06ರಷ್ಟು ಮಳೆ ಬಿದ್ದಿದೆ. 69.94 ಮಿ.ಮೀ. ಮಳೆ ಕೊರತೆಯಾಗಿದೆ. ಸುರಿದಷ್ಟು ಮಳೆಯೂ ಸರಿಯಾಗಿ ಹಂಚಿಕೆಯಾಗಿಲ್ಲ. ಇದರ ಪರಿಣಾಮವಾಗಿ ತಾಲೂಕಿನಲ್ಲಿ ಜು. 4ರವರೆಗೆ ಕೇವಲ ಶೇ. 31.26ರಷ್ಟು ಬಿತ್ತನೆಯಾಗಿದೆ. ಅಂದರೆ, ವರ್ಗವಾರು ಲೆಕ್ಕಾಚಾರದಲ್ಲಿ ಪ್ರಥಮ ದರ್ಜೆಯಲ್ಲ, ದ್ವಿತಿಯವೂ ಅಲ್ಲ; ಕೇವಲ ಪಾಸ್ ಕ್ಲಾಸ್ ಎಂಬುದು ಅತ್ಯಂತ ಖೇದಕರವಾಗಿದೆ.

    ತಾಲೂಕಿನಲ್ಲಿ ಕಳೆದ ವರ್ಷ ಮೇ ತಿಂಗಳ ಆರಂಭದಲ್ಲಿಯೇ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದವು. ಆದರೆ, ಈ ಬಾರಿ ಜುಲೈ ತಿಂಗಳ ಮೊದಲ ವಾರ ಆರಂಭವಾದರೂ ಸಮರ್ಪಕವಾಗಿ ಮಳೆ ಬಾರದ ಕಾರಣ ರೈತರು ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ.

    17,162 ಹೆಕ್ಟೇರ್ ಬಿತ್ತನೆ: ತಾಲೂಕಿನಲ್ಲಿ ಪ್ರಸಕ್ತ ವರ್ಷ 38,258 ಮಳೆಯಾಶ್ರಿತ ಹಾಗೂ 16,665 ನೀರಾವರಿ ಸೇರಿ ಒಟ್ಟು 54,923 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಹತ್ತಿ 1014 ಹೆಕ್ಟೇರ್, 39,866 ಹೆಕ್ಟೇರ್ ಮೆಕ್ಕೆಜೋಳ, 7800 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ.

    ಈಗಾಗಲೇ ರೈತರು ಮೆಕ್ಕೆಜೋಳ, ಹತ್ತಿ, ಶೇಂಗಾ ಬಿತ್ತನೆ ಮಾಡಬೇಕಾಗಿತ್ತು. ಆದರೆ, ಮಳೆ ಕೊರತೆಯಿಂದಾಗಿ 15,160 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, 553 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, 131 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಹಾಗೂ ಇತರ ಬೆಳೆಗಳು ಸೇರಿ ಕೇವಲ 17,162 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಕಳೆದ ವರ್ಷ ಈ ವೇಳೆಗೆ ತಾಲೂಕಿನಲ್ಲಿ ಶೇ. 85ರಷ್ಟು ಬಿತ್ತನೆ ಕಾರ್ಯ ಮುಕ್ತಾಯವಾಗಿತ್ತು ಎನ್ನುತ್ತಾರೆ ಕೃಷಿ ಅಧಿಕಾರಿಗಳು.

    ಶೇಂಗಾ ಇತರ ಬದಲು ಮೆಕ್ಕೆಜೋಳ: ತಾಲೂಕಿನಲ್ಲಿ ಈಗಾಗಲೇ ಶೇಂಗಾ, ಹೆಸರು, ಸೂರ್ಯಕಾಂತಿ, ತೊಗರಿ ಸೇರಿ ಇತರ ಬೆಳೆಗಳನ್ನು ಬಿತ್ತನೆ ಮಾಡಿದ್ದರೆ ಹಿಂಗಾರು ಮಳೆ ಆರಂಭವಾಗುವ ಮುನ್ನವೇ ಅವು ಕೈಗೆ ಬರುತ್ತಿದ್ದವು. ಆದರೀಗ ಮಳೆ ಕೊರತೆಯಿಂದ ಬಹಳ ತಡವಾಗಿದೆ. ಆದ್ದರಿಂದ ಈಗ ಅವುಗಳನ್ನು ಬಿತ್ತನೆ ಮಾಡಿದರೆ ರೈತರು ಮತ್ತೆ ನಷ್ಟ ಅನುಭವಿಸುವ ಸಾಧ್ಯತೆ ಎದುರಾಗಲಿದೆ. ಆದ್ದರಿಂದ ಮುಂದಿನ ದಿನದಲ್ಲಿ ಉತ್ತಮ ಮಳೆಯಾದರೆ ಜುಲೈ ಕೊನೆಯವರೆಗೂ ರೈತರು ಮೆಕ್ಕೆಜೋಳ ಬಿತ್ತನೆ ಮಾಡಬಹುದು ಎಂಬುದು ಕೃಷಿ ಅಧಿಕಾರಿಗಳ ಅಭಿಪ್ರಾಯವಾಗಿದೆ.

    ಮೇ ತಿಂಗಳ ಆರಂಭದಲ್ಲಿ ಉತ್ತಮ ಮಳೆಯಾದ ಕಾರಣ ಜಮೀನು ಹಸನು ಮಾಡಿಕೊಂಡು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಈಗಾಗಲೇ ಮೆಕ್ಕೆಜೋಳ, ಶೇಂಗಾ, ಹತ್ತಿ ಬಿತ್ತನೆ ಮಾಡಬೇಕಿತ್ತು. ಆದರೆ, ಹದವಾದ ಮಳೆ ಆಗುತ್ತಿಲ್ಲ. ಬರೀ ಮೋಡ ಕವಿದ ವಾತಾವರಣವಿದೆ. ಇದೇ ರೀತಿ ಮುಂದುವರಿದರೆ ರೈತರ ಜೀವನ ಬಹಳ ಕಷ್ಟಕ್ಕೆ ಸಿಲುಕಲಿದೆ.
    I ದಿಳ್ಳೆಪ್ಪ ಕಂಬಳಿ, ರಾಹುತನಕಟ್ಟಿ ರೈತ

    ತಾಲೂಕಿನಲ್ಲಿ ಮಳೆಯ ಕೊರತೆಯಿಂದಾಗಿ ಮುಂಗಾರು ಬಿತ್ತನೆಗೆ ಹಿನ್ನಡೆಯಾಗಿದೆ. ಮೆಕ್ಕೆಜೋಳ ಬೆಳೆಯುವ ರೈತರು ಜುಲೈ ಕೊನೆಯವರೆಗೂ ಬಿತ್ತನೆ ಮಾಡಬಹುದು. ಹವಾಮಾನ ಇಲಾಖೆ ಪ್ರಕಾರ ಜುಲೈ ತಿಂಗಳಲ್ಲಿ ಮಳೆ ಸರಿಯಾಗಿ ಬರುವ ಸೂಚನೆ ಇದೆ. ಆದ್ದರಿಂದ ಕಾಯ್ದು ನೋಡಬೇಕಿದೆ.
    I ಎಚ್.ಬಿ. ಗೌಡಪ್ಪಳ್ಳವರ, ಸಹಾಯಕ ಕೃಷಿ ನಿರ್ದೇಶಕ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts