More

    ಸ್ವಚ್ಛತೆ ಕಾಯ್ದುಕೊಳ್ಳಲು ದಿಟ್ಟ ಹೆಜ್ಜೆ, ಸೋಮೇಶ್ವರ ಪುರಸಭೆ ಕಟ್ಟೆಚ್ಚರ

    ಅನ್ಸಾರ್ ಇನೋಳಿ ಉಳ್ಳಾಲ

    ಮನೆ, ಹೋಟೆಲ್‌ಗಳಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಕದ್ದು ಮುಚ್ಚಿ ರಸ್ತೆ ಬದಿ ಎಸೆಯುವ ಕಿಡಿಗೇಡಿಗಳ ಕೃತ್ಯಕ್ಕೆ ಸೋಮೇಶ್ವರದಲ್ಲಿ ತಡೆಬೀಳುವ ಸಾಧ್ಯತೆಯಿದೆ. ಸ್ವಚ್ಛತೆ ಕಾಪಾಡಲು ದಿಟ್ಟ ಹೆಜ್ಜೆಯಿಟ್ಟಿರುವ ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ತ್ಯಾಜ್ಯ ಎಸೆಯುವವರ ವಾಹನ ನೋಂದಣಿ ಸಂಖ್ಯೆ ಆಧಾರದ ಮೇಲೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.

    ತ್ಯಾಜ್ಯ ನಿರ್ವಹಣೆಗೆ ತೆರಿಗೆಯಿಂದ ಬರುವ ಲಕ್ಷಗಟ್ಟಲೆ ಹಣ ಖರ್ಚು ಮಾಡಲಾಗುತ್ತಿದೆ. ಕಸ ನಿರ್ವಹಣೆ ಜಾಗೃತಿ ಕಾರ್ಯಕ್ರಮ, ಕಾರ್ಯಾಗಾರ ನಡೆಯುತ್ತಲೇ ಇದೆ. ಮನೆ ಬಾಗಿಲಿಗೆ ಕಸ ಸಾಗಿಸುವ ವಾಹನವೂ ಬರುತ್ತದೆ. ಆದರೂ ರಸ್ತೆ ಬದಿ ಬೀಳುವ ತ್ಯಾಜ್ಯಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಇದರಿಂದ ಉಳ್ಳಾಲದ ಬಹುತೇಕ ಕಡೆ ರಸ್ತೆ ಬದಿ ತ್ಯಾಜ್ಯ ತುಂಬಿ ದುರ್ನಾತ ಬರುತ್ತಿದೆ. ಈ ಮಧ್ಯೆ ರಸ್ತೆ ಬದಿ ತ್ಯಾಜ್ಯ ತಡೆಗೆ ಕಟ್ಟೆಚ್ಚರ ವಹಿಸಿರುವ ಸೋಮೇಶ್ವರ ಗ್ರಾಮ ಪಂಚಾಯಿತಿ, ತಲಪಾಡಿಯಿಂದ ಅಂಬಿಕಾ ರಸ್ತೆವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯ ಸ್ವಚ್ಛಗೊಳಿಸಿ ಹಿಂದಿನ ಸ್ಥಿತಿ ಮರುಕಳಿಸದಂತೆ ಕ್ರಮ ಕೈಗೊಂಡಿದೆ.

    ಸಿಸಿ ಕ್ಯಾಮರಾ ಸಮರ್ಪಕ ಬಳಕೆ: ರಸ್ತೆ ಬದಿ ತ್ಯಾಜ್ಯ ರಾಶಿ ತಡೆ ನಿಟ್ಟಿನಲ್ಲಿ ಹಲವು ಪಂಚಾಯಿತಿಗಳು ಸಿಸಿ ಕ್ಯಾಮರಾಕ್ಕೆ ಮೊರೆಹೋದರೂ ನಾಮ್‌ಕೇ ವಾಸ್ತೇ ಎನ್ನುವಂತಾಗಿದೆ. ಈ ವಿಷಯದಲ್ಲಿ ಸೋಮೇಶ್ವರ ಪುರಸಭೆ ಒಂದು ಹೆಜ್ಜೆ ಮುಂದೆ ಹೋಗಿ ರಸ್ತೆ ಬದಿ ಅಳವಡಿಸಿರುವ ಸಿಸಿ ಕ್ಯಾಮರಾ ಸಮರ್ಪಕ ಬಳಸಲು ಮುಂದಾಗಿರುವ ಪಂಚಾಯಿತಿ, ಮೊದಲ ಹಂತವಾಗಿ ತ್ಯಾಜ್ಯ ತಂದು ಎಸೆದು ಹೋಗಿರುವ ವಾಹನಗಳನ್ನು ಗುರುತಿಸಿ ಪತ್ತೆಗಾಗಿ ವಿವರಗಳನ್ನು ನೀಡಿದ್ದು, ಪೊಲೀಸರಿಗೂ ದೂರು ನೀಡಲಾಗಿದೆ.

    ಸೋಮೇಶ್ವರದಲ್ಲಿ ಪ್ರತಿ ಮನೆಯಿಂದಲೂ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ರಸ್ತೆ ಬದಿ ಸ್ವಚ್ಛವಾಗಿಡಲು ಪಟ್ಟಣ ಪಂಚಾಯಿತಿ ಸಾಕಷ್ಟು ಕ್ರಮ ಕೈಗೊಂಡರೂ ಎಲ್ಲೆಲ್ಲೆಂದಲೋ ವಾಹನಗಳಲ್ಲಿ ತ್ಯಾಜ್ಯ ತಂದು ಎಸೆಯುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಒಂದೇ ವಾರದಲ್ಲಿ ಕಿಡಿಗೇಡಿಗಳ ವಾಹನ ಪತ್ತೆ ಹಚ್ಚಿ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ.
    – ವಾಣಿ ವಿ.ಆಳ್ವ, ಮುಖ್ಯಾಧಿಕಾರಿ, ಸೋಮೇಶ್ವರ ಪುರಸಭೆ 

    ಮನೆಯಂತೆಯೇ ಪರಿಸರ, ಸಾರ್ವಜನಿಕ ಸ್ಥಳದ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಪ್ರಸ್ತುತ ಸ್ವಚ್ಛತೆ ವಿಚಾರದಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮ ನಡೆದರೂ ರಸ್ತೆ ಬದಿ ತ್ಯಾಜ್ಯ ತಂದು ಹಾಕುವುದು ನಿಜಕ್ಕೂ ಖೇದಕರ. ಈ ವಿಚಾರದಲ್ಲಿ ಸೋಮೇಶ್ವರ ಪಟ್ಟಣ ಪಂಚಾಯಿತಿ ಉತ್ತಮ ಹೆಜ್ಜೆ ಇಟ್ಟಿದೆ.
    – ಅಬ್ದುಲ್ ಲತೀಫ್, ದೇರಳಕಟ್ಟೆ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts