More

    ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ

    ಬೇಲೂರು: ಮಲೆನಾಡು ಭಾಗದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ತ್ವರಿತಗತಿಯಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

    ತಾಲೂಕಿನ ಕುಶಾವರ ಗ್ರಾಮ ಪಂಚಾಯಿತಿ ಆವರಣ ಶುಕ್ರವಾರ ಆಯೋಜಿಸಿದ್ದ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದರು.

    ಈ ಮಲೆನಾಡಿನಲ್ಲಿ ನಿರಂತರ ಕಾಡಾನೆ ಸಮಸ್ಯೆ ಜತೆಗೆ ಇತರ ವನ್ಯಜೀವಿಗಳ ಹಾವಳಿಗಳಿಂದ ಜನರು ಕಂಗಾಲಾಗಿದ್ದು, ಅವರಿಗೆ ಧೈರ್ಯ ತುಂಬುವ ಕೆಲಸ ಆಗಬೇಕು. ಕಾಡು ಪ್ರಾಣಿಗಳ ಬಗ್ಗೆ ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ ಸಿಬ್ಬಂದಿ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.

    ಕಳೆದ ವಾರ ಬೆಳಗಾವಿಯ ಅಧಿವೇಶನದಲ್ಲಿ ಅರಣ್ಯ ಸಚಿವರನ್ನು ಭೇಟಿ ಮಾಡಿ ಇಲಾಖೆಗೆ ವಾಹನ, ಸಿಬ್ಬಂದಿ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಗಿದೆ. ಕಾಡಾನೆ ದಾಳಿಯಿಂದ ನಷ್ಟ ಹೊಂದಿದ ರೈತರ ಬೆಳೆಗಳಿಗೆ ಪರಿಹಾರ, ಮೃತರ ಕುಟುಂಬದವರಿಗೆ ಪ್ರಸ್ತುತ ಕೊಡುತ್ತಿರುವ ಪರಿಹಾರ ಹೆಚ್ಚಿಸಿ 25 ಲಕ್ಷ ರೂ. ಪರಿಹಾರ ನೀಡುವಂತೆ ಕೋರಲಾಗಿದೆ. ಆನೆ ಕಾರಿಡಾರ್ ನಿರ್ಮಿಸಿ ಕಾಡಾನೆಗಳನ್ನು ಸ್ಥಳಾಂತರಿಸುವಂತೆ ಮನವಿ ಮಾಡಲಾಗಿದೆ ಎಂದರು.

    ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ. ಅಲ್ಲದೇ, ಕೋವಿಡ್ ರೂಪಾಂತರ ತಳಿ ಮತ್ತೊಮ್ಮೆ ಕಾಣಿಸಿಕೊಂಡಿದ್ದು, ಜನರು ಮಾಸ್ಕ್ ಧರಿಸಿ ಎಚ್ಚರ ವಹಿಸಬೇಕು. ಗ್ರಾಮಸಭೆಗಳಿಗೆ ಅಪಾರವಾದ ನಿರೀಕ್ಷೆಗಳನ್ನಿಟ್ಟುಕೊಂಡು ಬರುವ ಸಾರ್ವಜನಿಕರಿಗೆ ಅಧಿಕಾರಿಗಳು ಸ್ಪಂದಿಸಬೇಕಿದೆ. ಗ್ರಾಮ ಪಂಚಾಯಿತಿ ಸಿಬ್ಬಂದಿ ಸ್ಥಳೀಯವಾಗಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು, ಚರಂಡಿ, ವಿದ್ಯುತ್ ವ್ಯವಸ್ಥೆಯಂತಹ ಮೂಲಸೌಲಭ್ಯ ಕಲ್ಪಿಸಬೇಕು. ಜತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ನಾನು ನಿಮ್ಮೊಂದಿಗಿರುತ್ತೇನೆ ಎಂದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್.ಎಂ.ಗುಣ ಸದಾನಂದ್, ಉಪಾಧ್ಯಕ್ಷ ಮಂಜುನಾಥ್, ತಾಪಂ ಇಒ ಸತೀಶ್, ಉಸ್ತುವಾರಿ ಅಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣ್, ಪಿಡಿಒ ನಾಗಭೂಷಣ್ ಹಾಗೂ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts