More

    ಸ್ವಯಂಪ್ರೇರಿತ ಕ್ವಾರಂಟೈನ್​ಗೊಳಗಾದ ಸೈನಿಕ

    ಮುಂಡರಗಿ: ವರ್ಗಾವಣೆ ಹಿನ್ನೆಲೆಯಲ್ಲಿ 25 ದಿನ ರಜೆ ಮೇಲೆ ಹುಟ್ಟೂರಿಗೆ ಬಂದಿರುವ ಸೈನಿಕರೊಬ್ಬರು ಕರೊನಾ ಭೀತಿಯಿಂದಾಗಿ ಗ್ರಾಮದೊಳಗೆ ಪ್ರವೇಶಿಸದೇ ಗ್ರಾಮದ ಹೊರಗಿರುವ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಸ್ವಯಂಪ್ರೇರಿತವಾಗಿ ಕ್ವಾರಂಟೈನ್ ಆಗಿದ್ದಾರೆ.

    ತಾಲೂಕಿನ ಜಂತ್ಲಿಶಿರೂರ ಗ್ರಾಮದ ಮಹಾಂತೇಶ ಅಳವುಂಡಿ ಎನ್ನುವ ಸೈನಿಕ ಕ್ವಾರಂಟೈನ್ ಆಗಿದ್ದಾರೆ. ಮಹಾರಾಷ್ಟ್ರದ ನಾಸಿಕ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಾಂತೇಶ ಅವರು ಕೇರಳದ ಕೊಚ್ಚಿನ್ ಏರ್​ಪೋರ್ಟ್​ಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಬ್ರೇಕ್ ಜರ್ನಿಗೆಂದು ನೀಡಿದ್ದ 15ದಿನ ಹಾಗೂ 10 ದಿನ ತಾವೇ ರಜೆ ಹಾಕಿ ಜು. 10ರಂದು ನಾಸಿಕ್​ನಿಂದ ರೈಲು ಮೂಲಕ ಜು. 11ರಂದು ಗದಗಿಗೆ ಬಂದಿದ್ದಾರೆ.

    ಗದಗ ರೈಲು ನಿಲ್ದಾಣದಿಂದ ಜಿಲ್ಲಾಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಸೈನಿಕನಿಗೆ ಯಾವುದೇ ಲಕ್ಷಣಗಳು ಇಲ್ಲದ ಹಿನ್ನೆಲೆ 14 ದಿನ ಹೋಂ ಕ್ವಾರಂಟೈನ್​ನಲ್ಲಿರುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಆದರೆ, ತನ್ನಿಂದ ಕುಟುಂಬ ಮತ್ತು ಗ್ರಾಮಕ್ಕೆ ತೊಂದರೆಯಾಗದಿರಲಿ ಎನ್ನುವ ಉದ್ದೇಶದಿಂದ ಕುಟುಂಬ ಮತ್ತು ಸ್ನೇಹಿತರಿಗೆ ಗ್ರಾಮದ ಹೊರಗೆ ಇರುವುದಾಗಿ ತಿಳಿಸಿದ್ದಾರೆ. ಬಳಿಕ ಅವರು ಸಮುದಾಯ ಭವನದಲ್ಲಿ ಇರಲು ವ್ಯವಸ್ಥೆ ಮಾಡಲಾಗಿದೆ. ಮಹಾಂತೇಶ ಈಗಾಗಲೇ 7 ದಿನ ಕ್ವಾರಂಟೈನ್ ಪೂರೈಸಿದ್ದು 14 ದಿನಗಳ ಬಳಿಕ ಕರೊನಾ ಟೆಸ್ಟ್ ಮಾಡಿಸಿ ವರದಿ ನೆಗಟಿವ್ ಬಂದ ಮೇಲೆ ಗ್ರಾಮ ಪ್ರವೇಶಿಸಲು ನಿರ್ಧರಿಸಿದ್ದಾರೆ. ಸೈನಿಕನ ಸಹೋದರ ಪ್ರತಿದಿನ ಮನೆಯಿಂದ ಊಟ ತಂದು ಕೊಡುತ್ತಾರೆ. ಅಂಬೇಡ್ಕರ್ ಭವನದ ಹತ್ತಿರ ತಾಯಮ್ಮದೇವಿ ದೇವಸ್ಥಾನವಿದ್ದು, ಅಲ್ಲಿ ನೀರಿನ ವ್ಯವಸ್ಥೆಯಿದೆ. ಯಾರೂ ಇಲ್ಲದ ಸಮಯದಲ್ಲಿ ಅಲ್ಲಿಗೆ ಹೋಗಿ ನೀರು ತರುತ್ತಾರೆ. ಆ. 2ರಂದು ಕೊಚ್ಚಿನ್ ಏರಪೋರ್ಟ್​ನಲ್ಲಿ ಸೇವೆಗೆ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ.

    ನನ್ನಿಂದ ನನ್ನ ಕುಟುಂಬ ಮತ್ತು ಗ್ರಾಮಕ್ಕೆ ತೊಂದರೆಯಾಗದಿರಲೆಂದು ಸ್ವಯಂಪ್ರೇರಿತವಾಗಿ ಕ್ವಾರಂಟೈನ್ ಇದ್ದೇನೆ. 14 ದಿನಗಳ ನಂತರ ಕರೊನಾ ಟೆಸ್ಟ್ ಮಾಡಿಸಿ ವರದಿ ನೆಗೆಟಿವ್ ಬಂದ ಮೇಲೆಯೇ ಗ್ರಾಮ ಪ್ರವೇಶಿಸುತ್ತೇನೆ. ಸಹೋದರ ಮನೆಯಿಂದ ಊಟ ತಂದು ಕೊಡುತ್ತಾನೆ. ಪರಸ್ಪರ ಅಂತರ ಕಾಯ್ದು ಊಟ ತೆಗೆದುಕೊಳ್ಳುತ್ತೇನೆ.

    | ಮಹಾಂತೇಶ ಅಳವುಂಡಿ ಸೈನಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts