More

    ಕೇಸರಿ ಪಕ್ಷದಲ್ಲಿ ಆಕಾಂಕ್ಷಿಗಳ ದಂಡು!

    ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆಯನ್ನು ‘21ನೇ ಅವಧಿಗೆ’ ಸಂಬಂಧಿಸಿದ ಮೀಸಲಾತಿಯನ್ವಯ ನಡೆಸುವಂತೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ. ಮೇಯರ್ ಸ್ಥಾನದ ಮೀಸಲಾತಿಯು ಸಾಮಾನ್ಯ ಹಾಗೂ ಉಪ ಮೇಯರ್ ಸ್ಥಾನದ ಮೀಸಲಾತಿಯು ಸಾಮಾನ್ಯ ಮಹಿಳೆಗೆ ನಿಗದಿಗೊಂಡಿದೆ.

    ಮೇಯರ್, ಉಪ ಮೇಯರ್ ಚುನಾವಣೆಯನ್ನು 21ನೇ ಅವಧಿಯ ಮೀಸಲಾತಿಯಂತೆ ನಡೆಸಬೇಕೊ ಅಥವಾ 23ನೇ ಅವಧಿಯ ಮೀಸಲಾತಿಗೆ ಸಂಬಂಧಿಸಿದಂತೆ ನಡೆಸಬೇಕೊ ಎಂಬ ಗೊಂದಲ ತಲೆದೋರಿತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರು ಸ್ಪಷ್ಟೀಕರಣ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ರಾಜ್ಯ ಸರ್ಕಾರ ಮಂಗಳವಾರ ಈ ಗೊಂದಲಕ್ಕೆ ತೆರೆ ಎಳೆದಿದೆ.

    ಮೀಸಲಾತಿ ನಿಗದಿಗೊಳ್ಳುತ್ತಿದ್ದಂತೆಯೇ ಬಿಜೆಪಿಯ ಆಕಾಂಕ್ಷಿಗಳು ಮೇಯರ್, ಉಪ ಮೇಯರ್ ಗೌನ್ ಧರಿಸಲು ತೆರೆಮರೆಯ ರಾಜಕೀಯ ಚುರುಕುಗೊಳಿಸಿದ್ದಾರೆ. ಮೂಲಗಳ ಪ್ರಕಾರ ಫೆಬ್ರುವರಿ ತಿಂಗಳಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚುನಾವಣೆ ನಡೆಯಲಿದೆ.

    ಸತತ 4ನೇ ಬಾರಿ ಪಾಲಿಕೆ ಸದಸ್ಯರಾಗಿರುವ ಮಾಜಿ ಮೇಯರ್ ವೀರಣ್ಣ ಸವಡಿ (46ನೇ ವಾರ್ಡ್) ಅವರು ಮೇಯರ್ ಸ್ಥಾನದ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ. 12ನೇ ವಾರ್ಡ್​ನ ವಿಜಯಾನಂದ ಶೆಟ್ಟಿ, ಮಾಜಿ ಮೇಯರ್ 18ನೇ ವಾರ್ಡ್​ನ ಶಿವು ಹಿರೇಮಠ, ಮಾಜಿ ಉಪ ಮೇಯರ್ 28ನೇ ವಾರ್ಡ್​ನ ಚಂದ್ರಶೇಖರ ಮನಗುಂಡಿ, ಜೆಡಿಎಸ್​ನಿಂದ ಬಿಜೆಪಿಗೆ ವಲಸೆ ಬಂದಿರುವ 36ನೇ ವಾರ್ಡ್​ನ ರಾಜಣ್ಣ ಕೊರವಿ, 67ನೇ ವಾರ್ಡ್​ನ ಶಿವು ಮೆಣಸಿನಕಾಯಿ ಹೆಸರು ಮೇಯರ್ ಸ್ಥಾನದ ಸ್ಪರ್ಧೆಯಲ್ಲಿ ಕೇಳಿಬರುತ್ತಿದೆ.

    ಉಪ ಮೇಯರ್ ಸ್ಥಾನಕ್ಕೆ 44ನೇ ವಾರ್ಡ್​ನ ಉಮಾ ಮುಕುಂದ, 47ನೇ ವಾರ್ಡ್​ನ ರೂಪಾ ಶೆಟ್ಟಿ, 57ನೇ ವಾರ್ಡ್​ನ ಮೀನಾಕ್ಷಿ ಒಂಟಮೂರಿ ಸೇರಿ ಹಲವರ ಹೆಸರು ಕೇಳಿಬರುತ್ತಿದೆ.

    ಪಕ್ಷಗಳ ಬಲಾಬಲ: ಪಾಲಿಕೆಯ ಒಟ್ಟು 82 ವಾರ್ಡ್​ಗಳಲ್ಲಿ ಬಿಜೆಪಿ 39 ಸ್ಥಾನ ಗಳಿಸುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ 33, ಎಐಎಂಐಎಂ 3, ಜೆಡಿಎಸ್ 1 ಹಾಗೂ ಪಕ್ಷೇತರರರು 6 ವಾರ್ಡ್​ಗಳಲ್ಲಿ ಜಯ ಗಳಿಸಿದ್ದಾರೆ.

    21ನೇ ಅವಧಿಗೆ ಸಂಬಂಧಿಸಿದಂತೆ ಮೇಯರ್, ಉಪ ಮೇಯರ್ ಚುನಾವಣೆ ನಡೆಸುವಂತೆ ಮಂಗಳವಾರ ಸಂಜೆ ರಾಜ್ಯ ಸರ್ಕಾರದಿಂದ ನಿರ್ದೇಶನ ಬಂದಿದೆ. ಚುನಾವಣೆ ದಿನಾಂಕವನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತರು ನಿಗದಿಪಡಿಸಲಿದ್ದಾರೆ.

    | ಡಾ. ಗೋಪಾಲಕೃಷ್ಣ, ಮಹಾನಗರ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts