More

    ಗೌಪ್ಯತೆಗೀಗ ಆಪತ್ತು: ರಾಜ್ಯದಲ್ಲಿ ಹೆಚ್ಚುತ್ತಿದೆ ಸ್ಮಾರ್ಟ್​ಫೋನ್​ಗಳ ದತ್ತಾಂಶ ಕಳವು

    | ರಮೇಶ ದೊಡ್ಡಪುರ ಬೆಂಗಳೂರು

    ‘ಸ್ಮಾರ್ಟ್​ಫೋನ್ ಖರೀದಿಸಿ ಐದಾರು ತಿಂಗಳೂ ಆಗಿಲ್ಲ, ಆಗಲೇ ಹ್ಯಾಂಗ್ ಆಗುತ್ತಿದೆ, ನಿಧಾನವಾಗಿದೆ. ಅರ್ಧ ದಿನಕ್ಕೇ ಬ್ಯಾಟರಿ ಮುಗಿಯುತ್ತದೆ. ಹೆಚ್ಚು ಇಂಟರ್ನೆಟ್ ಬಳಸದಿದ್ದರೂ ಡೇಟಾ ಪೂರ್ತಿ ಖಾಲಿ ಆಗುತ್ತಿದೆ…’

    ಈ ದೂರು ನಿಮ್ಮದೂ ಆಗಿದ್ದರೆ ಕೂಡಲೇ ಎಚ್ಚರವಹಿಸಿ. ಏಕೆಂದರೆ ನಿಮ್ಮ ಸ್ಮಾರ್ಟ್​ಫೋನ್ ಹ್ಯಾಕ್ ಆಗಿರಬಹುದು ಹಾಗೂ ಹ್ಯಾಕರ್​ಗಳು ಆಪ್​ಗಳ ಮೂಲಕ ದತ್ತಾಂಶವನ್ನು ಗುಪ್ತವಾಗಿ ಕದಿಯುತ್ತಿದ್ದರೆ ಇಂಥ ಸಮಸ್ಯೆ ಮಾಮೂಲಿ. ಇದಕ್ಕೆಲ್ಲ ಪ್ರಮುಖ ಕಾರಣವೆಂದರೆ ಮೊಬೈಲ್ ಆಪ್​ಗಳು. ಆಪ್​ಗಳ ಬಳಕೆ, ಭದ್ರತೆ ಕುರಿತ ಮಾಹಿತಿ ಇಲ್ಲದ ಲಕ್ಷಾಂತರ ಜನರು ಅಮೂಲ್ಯವಾದ ತಮ್ಮ ಗೌಪ್ಯ ಮಾಹಿತಿಯನ್ನು ಕಳೆದು ಕೊಳ್ಳುತ್ತಿದ್ದಾರೆ.

    ಇಡೀ ಜಾತಕ ಕಳವು: ಇತ್ತೀಚೆಗೆ ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ವೇಳೆ ಹಣ ಕಳೆದುಕೊಳ್ಳುವ ವಿಚಾರ ಹೆಚ್ಚು ಚರ್ಚೆ ಆಗುತ್ತಿದೆ. ಆದರೆ ಹಣಕ್ಕಿಂತಲೂ ಹೆಚ್ಚಿನ ಮೌಲ್ಯದ ಗೌಪ್ಯ ದತ್ತಾಂಶಗಳನ್ನು ಆಪ್ ಮೂಲಕ ರಾಜಾರೋಷವಾಗಿ, ಅದರಲ್ಲೂ ಬಳಕೆದಾರರ ಅನುಮತಿ ಪಡೆದೇ ಕದಿಯಲಾಗುತ್ತಿದೆ. ಗ್ರಾಹಕ ಯಾವ ಸ್ಥಳಗಳಿಗೆ ಭೇಟಿ ನೀಡುತ್ತಾನೆ, ಯಾರ ಜತೆಗೆ ಹೆಚ್ಚು ಸಂಪರ್ಕದಲ್ಲಿರುತ್ತಾನೆ, ಬ್ರೌಸರ್​ನಲ್ಲಿ ಯಾವ ವಸ್ತುವಿಗೆ ಹುಡುಕಾಡುತ್ತಿದ್ದಾನೆ, ಯಾವ ತಿಂಡಿ ಇಷ್ಟಪಡುತ್ತಾನೆ… ಇತ್ಯಾದಿ ದತ್ತಾಂಶ ಪಡೆದು ಆನ್​ಲೈನ್ ಮಾರ್ಕೆಟಿಂಗ್ ಕಂಪನಿಗಳಿಗೆ ಕೋಟ್ಯಂತರ ರೂ.ಗೆ ಮಾರಾಟ ಮಾಡಲಾಗುತ್ತದೆ. ಅದನ್ನು ಬಳಸಿಕೊಂಡು ಕಂಪನಿಗಳು ಉತ್ಪನ್ನ ಮಾರಾಟ ಮಾಡುತ್ತವೆ. ಇದರ ಮುಂದಿನ ಭಾಗವಾಗಿ, ಮೊಬೈಲ್ ಕ್ಯಾಮರಾ, ಮೈಕ್ರೊಫೋನ್​ಗಳನ್ನು ತಾವೇ ಆನ್ ಮಾಡಿಕೊಂಡು ಮನೆಯ ವಿಡಿಯೋ, ಸಂಭಾಷಣೆಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಟ್ರೂ ಕಾಲರ್​ನಂತಹ ಆಪ್​ಗಳು ಮೊಬೈಲ್​ನ ಎಲ್ಲ ಸಂಪರ್ಕ ಮಾಹಿತಿಗಳನ್ನೂ ಮತ್ತೊಬ್ಬರ ಜತೆಗೆ ಹಂಚಿಕೊಂಡು ಮಾರಾಟ ಮಾಡುತ್ತವೆ ಎಂಬ ಬಲವಾದ ಆರೋಪಗಳಿವೆ.

    25 ಆಪ್ ತೆಗೆದ ಗೂಗಲ್

    ಗೂಗಲ್ ಪ್ಲೇಸ್ಟೋರ್​ನಲ್ಲಿ ಅಪ್​ಲೋಡ್ ಮಾಡಲಾಗುವ ಆಪ್​ಗಳ ಭದ್ರತೆ ಮೇಲೆ ಗೂಗಲ್ ಸಂಸ್ಥೆ ಕಣ್ಣಿಟ್ಟಿರುತ್ತದೆ. ಆದರೂ ದತ್ತಾಂಶ ಕದಿಯುತ್ತಿದ್ದ 25 ಆಪ್​ಗಳನ್ನು ಕಳೆದ ತಿಂಗಳಷ್ಟೇ ಗೂಗಲ್ ಕಿತ್ತೆಸೆಯಿತು. ಈ ವೇಳೆಗೆ ವಿಶ್ವಾದ್ಯಂತ 23 ಲಕ್ಷ ಜನರು ಈ ಆಪ್​ಗಳನ್ನು ಡೌನ್​ಲೋಡ್ ಮಾಡಿಕೊಂಡು ತಮ್ಮ ಗೌಪ್ಯ ದತ್ತಾಂಶ ಕಳೆದುಕೊಂಡಿದ್ದರು. ವಾಲ್​ಪೇಪರ್, ಬ್ಯಾಟರಿ, ವಿಡಿಯೋ ಮೇಕರ್, ಸಾಲಿಟೇರ್ ಗೇಮ್ ಫೈಲ್ ಮ್ಯಾನೇಜರ್​ನಂತಹ ಉಪಯುಕ್ತ ಆಪ್​ಗಳ ಸೋಗಿನಲ್ಲಿ ದತ್ತಾಂಶ ಕದಿಯಲಾಗುತ್ತಿತ್ತು. ಗೂಗಲ್ ಪ್ಲೇಸ್ಟೋರ್​ನಿಂದಲೂ ಕಣ್ಮುಚ್ಚಿ ಡೌನ್​ಲೋಡ್ ಮಾಡಬಾರದು. ಆಪ್ ಕುರಿತು ತುಸು ಮಾಹಿತಿ ಕಲೆ ಹಾಕಬೇಕು. ಉತ್ತಮ ಹಿನ್ನೆಲೆ ಹೊಂದಿರುವ, ಪ್ರತಿಷ್ಠಿತ ಸಂಸ್ಥೆಗಳ ಆಪ್ ಮಾತ್ರ ಅಳವಡಿಸಿಕೊಳ್ಳುವುದು ಉತ್ತಮ. ಗೌಪ್ಯತೆಯ ಕುರಿತು ಸರ್ಕಾರಗಳು ಯಾವುದೇ ಕಾನೂನು ರೂಪಿಸಿದರೂ ಜಾಗ್ರತೆಯೊಂದೇ ಪರಿಹಾರ ಎಂದು ಬಾಲಾಜಿ ಶ್ರೀನಿವಾಸ್ ಸಲಹೆ ನೀಡುತ್ತಾರೆ.

    ಗೌಪ್ಯ ವಿಡಿಯೋ ರೆಕಾರ್ಡ್

    ನವದಂಪತಿಗಳು ಹಾಗೂ ಕಾಲೇಜು ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಮ್ಮ ಗೌಪ್ಯ ವಿಡಿಯೋಗಳನ್ನು ಮೊಬೈಲ್ ಮೂಲಕ ರೆಕಾರ್ಡ್ ಮಾಡಿಕೊಳ್ಳುವ ಅಭ್ಯಾಸವೇ ಹ್ಯಾಕರ್​ಗಳಿಗೆ ವರದಾನವಾಗಿದೆ. ಬಳಕೆದಾರರಿಗೆ ಅರಿವಿಲ್ಲದಂತೆ ವಿಡಿಯೋಗಳನ್ನು ಕದ್ದು ಅಶ್ಲೀಲ ವೆಬ್​ಸೈಟ್​ಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಸಾಮಾನ್ಯವಾಗಿದೆ. ದೂರದಲ್ಲಿರುವ ಸಂಗಾತಿಯೊಂದಿಗೆ ವಿಡಿಯೋ ಕಾಲಿಂಗ್ ನಡೆಸುವಾಗಿನ ಗೌಪ್ಯ ದೃಶ್ಯಗಳನ್ನು ಸ್ಕ್ರೀನ್ ಕ್ಯಾಪ್ಚರ್ ಆಪ್​ಗಳ ಮೂಲಕ ಕದಿಯಲಾಗುತ್ತದೆ. ಈ ವಿಡಿಯೋಗಳನ್ನು ಬಳಸಿಕೊಂಡು ಹಣಕ್ಕಾಗಿ, ಲೈಂಗಿಕ ಸಂಪರ್ಕಕ್ಕಾಗಿ ಬ್ಲಾ್ಯಕ್​ವೆುೕಲ್ ಮಾಡಲಾಗುತ್ತದೆ. ಮೊಬೈಲ್​ನಲ್ಲಿ ಗೌಪ್ಯ ವಿಡಿಯೋ ರೆಕಾರ್ಡ್ ಮಾಡುವುದು ಹಾಗೂ ವಿಡಿಯೋ ಕಾಲ್​ಗಳಲ್ಲಿ ಗೌಪ್ಯತೆಗೆ ಧಕ್ಕೆಯಾಗುವಂತೆ ವರ್ತಿಸುವುದು ಅಪಾಯಕಾರಿ. ಮುಖ್ಯವಾಗಿ ಕಾಲೇಜು ಯುವಕರಿಗೆ ಈ ಕುರಿತು ಪಾಲಕರು ಅರಿವು ಮೂಡಿಸಬೇಕು ಎಂದು ಸೈಬರ್ ತಜ್ಞರ ಅಭಿಪ್ರಾಯ.

    ರಾತ್ರಿ ಡೇಟಾ ಆಫ್ ಮಾಡಿ

    ಬಳಕೆದಾರರು ನಿದ್ರಿಸುವ ವೇಳೆ ದತ್ತಾಂಶ ಆಫ್ ಮಾಡಿಡುವುದು ಉತ್ತಮ ಎಂದು ಎಥಿಕಲ್ ಹ್ಯಾಕರ್ ಎಂ. ರಘೋತ್ತಮ್ ಸಲಹೆ ನೀಡುತ್ತಾರೆ. ದತ್ತಾಂಶ ಕದಿಯುವ ದುರುದ್ದೇಶದಿಂದ ಆಪ್ ರೂಪಿಸುವುದು ಐದು ನಿಮಿಷದ ಕೆಲಸ. ಪಾಕಿಸ್ತಾನದಂತಹ ಶತ್ರುರಾಷ್ಟ್ರಗಳು ಭಾರತದ ಧ್ವಜ, ದೇಶಭಕ್ತಿಗೀತೆಗಳನ್ನು ಬಳಸಿ ಆಪ್ ರೂಪಿಸಿ ದತ್ತಾಂಶ ಕದಿಯುತ್ತಿವೆ. ಇದರಿಂದ ವೈಯಕ್ತಿಕ ಮಾಹಿತಿಗಷ್ಟೇ ಅಲ್ಲದೆ ದೇಶದ ಭದ್ರತೆಗೂ ಸಂಕಷ್ಟ ಎದುರಾಗುತ್ತದೆ. ಡೇಟಾ ಆಫ್ ಮಾಡಿದರೆ ಅಷ್ಟರ ಮಟ್ಟಿಗೆ ಮೊಬೈಲ್​ನಿಂದ ದತ್ತಾಂಶ ಕದಿಯುವ ಸಾಧ್ಯತೆ ಇರುವುದಿಲ್ಲ ಎಂದು ಅವರು ಹೇಳುತ್ತಾರೆ.

    ಅನುಮತಿ ಮುನ್ನ ಇರಲಿ ಎಚ್ಚರ

    ಆಪ್ ಅಳವಡಿಸಿಕೊಳ್ಳುವಾಗ ಅನೇಕ ಅನುಮತಿಗಳನ್ನು ನಮ್ಮಿಂದಲೇ ಕೇಳಿ ಪಡೆದುಕೊಂಡಿರುತ್ತಾರೆಂಬುದು ಅಚ್ಚರಿಯಾದರೂ ಸತ್ಯ. ಕ್ಯಾಮೆರಾ, ಕ್ಯಾಲೆಂಡರ್, ಲೊಕೇಷನ್, ಮೈಕ್ರೊಫೋನ್, ಫೋನ್ ಸ್ಟೋರೇಜ್, ಮೆಮೊರಿ ಕಾರ್ಡ್ ಸ್ಟೋರೇಜ್, ಎಸ್​ಎಂಎಸ್ ವೀಕ್ಷಿಸುವ ಅನುಮತಿಯನ್ನು ಆಪ್​ಗಳು ಕೇಳುತ್ತವೆ. ಸಾಫ್ಟ್​ವೇರ್ ತಜ್ಞ ಹರ್ಷ ಪೆರ್ಲ ಹೇಳುವಂತೆ, ‘ಅನುಮತಿ ನೀಡುವ ಮುನ್ನ ಎಚ್ಚರಿಕೆ ಅಗತ್ಯ.

    ಎಲ್ಲ ಆಪ್​ಗಳಿಗೂ ಎಲ್ಲ ಅನುಮತಿ ಅಗತ್ಯವಿರುವುದಿಲ್ಲ. ಉದಾಹರಣೆಗೆ, ಕ್ಯಾಮರಾ ಆಪ್​ಗೆ ಸ್ಟೋರೇಜ್ ಅನುಮತಿ ಮಾತ್ರ ಸಾಕು. ಅದೇ ಕಾಂಟಾಕ್ಟ್, ಲೊಕೇಷನ್ ಅನುಮತಿ ಕೇಳಿದರೆ ಅಂತಹ ಆಪ್ ಅಳವಡಿಸಿಕೊಳ್ಳಬಾರದು. ಆಪ್ ಕೆಲಸ ಮಾಡಲು ಅತ್ಯಗತ್ಯವಾದ ಯಾವ ಅನುಮತಿ ಬೇಕೋ ಅವನ್ನು ಮಾತ್ರ ನೀಡಬೇಕು.’ ಟೆಕ್ಕಿ ಬಾಲಾಜಿ ಶ್ರೀನಿವಾಸ ಪ್ರಕಾರ, ಗೂಗಲ್ ಪ್ಲೇಸ್ಟೋರ್ ಅಥವಾ ಆಪ್ ಸ್ಟೋರ್​ಗಳಿಂದಷ್ಟೇ ಆಪ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳಬೇಕು. ಆಗ ಅಪಾಯದ ಸಂಭವ ಕಡಿಮೆ. ಡೇಟಾ ಉಳಿಸಲು ಷೇರ್​ಇಟ್ ಮೂಲಕ ಆಪ್ ಹಂಚಿಕೊಳ್ಳುವ ಅಥವಾ ವೆಬ್​ಸೈಟ್​ನಿಂದ ನೇರವಾಗಿ ಆಪ್ ಡೌನ್​ಲೋಡ್ ಮಾಡಿಕೊಳ್ಳುವುದು ಅಪಾಯಕಾರಿ.

    ಗೌಪ್ಯತೆ ರಕ್ಷಣೆಗೆ ಹೀಗೆ ಮಾಡಿ

    • ನಂಬಿಕಾರ್ಹ ಕಂಪನಿಗಳ ಆಪ್ ಮಾತ್ರ ಬಳಕೆ
    • ಪ್ಲೇಸ್ಟೋರ್/ಆಪ್ ಸ್ಟೋರ್ ನಿಂದಷ್ಟೇ ಇನ್​ಸ್ಟಾಲ್
    • ಷೇರ್ ಇಟ್ ಮೂಲಕ ಪಡೆದ ಆಪ್ ಬಳಸಬಾರದು
    • ಆಗಿಂದಾಗ್ಗೆ ಫೋನ್ ಮತ್ತು ಆಪ್​ನ ಹೊಸ ಅಪ್​ಡೇಟ್ ಮಾಡಿಕೊಳ್ಳುವುದು
    • ರಾತ್ರಿ ವೇಳೆಯಲ್ಲಿ ದತ್ತಾಂಶ ಆಫ್ ಮಾಡುವುದು
    • ಆಪ್ ಕೆಲಸ ಮಾಡಲು ಅತ್ಯವಶ್ಯಕ ಅನುಮತಿ ಮಾತ್ರ ನೀಡುವುದು
    • ಸಾರ್ವಜನಿಕ, ಉಚಿತ ವೈಫೈಗಳಿಂದ ದೂರವಿರುವುದು
    • ಆಪ್ ಕುರಿತು ಹೆಚ್ಚಿನ ಮಾಹಿತಿ ಪಡೆಯುವುದು
    • ಆಗಿಂದಾಗ್ಗೆ ಪಾಸ್​ವರ್ಡ್ ಬದಲಾಯಿಸಿರಿ
    • ಗೌಪ್ಯ ವಿಡಿಯೋ ರೆಕಾರ್ಡ್ ಮಾಡದೆ ಇರುವುದು
    • ವಿಡಿಯೋ ಕಾಲ್ ವೇಳೆ ಎಚ್ಚರಿಕೆ ವಹಿಸಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts