More

    ಸ್ಮಾರ್ಟ್ ಕಲಿಕೆಗೆ ತೆರೆದುಕೊಂಡ ದಾವಣಗೆರೆಯ 12 ಅಂಗನವಾಡಿಗಳು

    ರಮೇಶ ಜಹಗೀರದಾರ್ ದಾವಣಗೆರೆ
    ಜಿಲ್ಲೆಯ 12 ಅಂಗನವಾಡಿ ಕೇಂದ್ರಗಳಲ್ಲಿ ಈ ವರ್ಷ ಸ್ಮಾರ್ಟ್ ಇಂಟೆರ‌್ಯಾಕ್ಟಿವ್ ಬೋರ್ಡ್‌ಗಳನ್ನು ಅಳವಡಿಸುವ ಮೂಲಕ 3ರಿಂದ 6 ವರ್ಷದೊಳಗಿನ ಚಿಣ್ಣರಿಗೆ ಸ್ಮಾರ್ಟ್ ಕಲಿಕಾ ವಾತಾವರಣವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಲ್ಪಿಸಲಿದೆ.

    ಈ ಉದ್ದೇಶಕ್ಕಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ‘ಡಿಸ್ಟ್ರಿಕ್ಟ್ ಮಿನರಲ್ ಫಂಡ್’ನಿಂದ 1.10 ಕೋಟಿ ರೂ. ಬಿಡುಗಡೆ ಮಾಡುತ್ತಿದೆ.

    ಟಚ್ ಸ್ಕ್ರೀನ್ ತಂತ್ರಜ್ಞಾನದ ಈ ಬೋರ್ಡ್‌ನಲ್ಲಿ ಅಂಗನವಾಡಿ ಮಕ್ಕಳಿಗೆ ರೂಪಿಸಲಾದ ‘ಚಿಲಿಪಿಲಿ’ ಪಠ್ಯಕ್ರಮಕ್ಕೆ ಸಂಬಂಧಿಸಿದ ಅನಿಮೇಟೆಡ್ ಚಿತ್ರಗಳು, ವಿಡಿಯೋಗಳನ್ನು ನೋಡಬಹುದಾಗಿದೆ.

    ತಂತ್ರಜ್ಞಾನದ ಸ್ಪರ್ಶ
    ಸಾಂಪ್ರದಾಯಿಕ ಕಲಿಕೆಯ ಜತೆಗೆ ತಂತ್ರಜ್ಞಾನದ ಸ್ಪರ್ಶ ನೀಡಲಾಗಿದೆ. ಈ ಬೋರ್ಡ್‌ನಲ್ಲಿ ಮಕ್ಕಳ ಕಲಿಕೆಗೆ ಬೇಕಾದ ಸಾಫ್ಟ್‌ವೇರ್ ಅಳವಡಿಸಲಾಗಿದೆ.

    ಇದರಿಂದಾಗಿ ಚಿಣ್ಣರು ತರಗತಿಯಲ್ಲಿ ಹೆಚ್ಚು ಆಸಕ್ತಿಯಿಂದ ತೊಡಗಿಸಿಕೊಳ್ಳಲು ಸಾಧ್ಯವಾಗಲಿದೆ. ಅವರಿಗೆ ಕೆಲವು ಚಟುವಟಿಕೆಗಳನ್ನೂ ಮಾಡಿಸಲಾಗುತ್ತದೆ.

    ಜಿಲ್ಲೆಯಲ್ಲಿ 1771 ಅಂಗನವಾಡಿ ಕೇಂದ್ರಗಳು ಮಂಜೂರಾಗಿದ್ದು 1160 ಸ್ವಂತ ಕಟ್ಟಡಗಳಿವೆ. 78 ನಿರ್ಮಾಣ ಹಂತದಲ್ಲಿವೆ. ಡಿಸ್ಟ್ರಿಕ್ಟ್ ಮಿನರಲ್ ಫಂಡ್ ಅಡಿ ಹೊಸದಾಗಿ 2 ಕಟ್ಟಡ ಕಟ್ಟಲಾಗುತ್ತಿದ್ದು 10 ಕೇಂದ್ರಗಳನ್ನು ದುರಸ್ತಿ ಮಾಡಲಾಗುತ್ತಿದೆ.

    ಇಲ್ಲಿನ ಎಸ್‌ಪಿಎಸ್ ನಗರದ 1ನೇ ಬಿ ಕೇಂದ್ರದಲ್ಲಿ ಸಿಎಸ್‌ಆರ್ ನಿಧಿ ಅಡಿ ಕಳೆದ ಕೆಲವು ತಿಂಗಳಿಂದ ಸ್ಮಾರ್ಟ್ ಇಂಟೆರ‌್ಯಾಕ್ಟಿವ್ ಬೋರ್ಡ್ ಅಳವಡಿಸಲಾಗಿದ್ದು ಮಕ್ಕಳ ಕಲಿಕೆಗೆ ಅನುಕೂಲವಾಗಿದೆ.

    ಪ್ರಗತಿಯ ಪಥ
    ಮಕ್ಕಳ ಕಲಿಕೆಯ ಪ್ರಗತಿ ಹೇಗಿದೆ ಎಂಬುದನ್ನು ದಾಖಲಿಸಲು ‘ಪ್ರಗತಿಯ ಪಥ’ ಎನ್ನುವ ಕಾರ್ಡ್‌ಅನ್ನು ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪರಿಚಯಿಸಿದೆ.

    ‘ಚಿಲಿಪಿಲಿ’ ಪಠ್ಯಕ್ರಮದ ವಿಷಯಗಳನ್ನು ಮಕ್ಕಳು ಹೇಗೆ ಕಲಿಯುತ್ತಿದ್ದಾರೆ ಎಂಬುದನ್ನು ಪ್ರತಿ ತಿಂಗಳು ಈ ಕಾರ್ಡಿನಲ್ಲಿ ದಾಖಲಿಸಲಾಗುತ್ತದೆ. ಚಿತ್ರಕಲೆ, ಮೌಖಿಕ ಪರೀಕ್ಷೆ, ಕನ್ನಡ ಬರವಣಿಗೆ, ಇಂಗ್ಲಿಷ್ ಬರವಣಿಗೆ ಎಲ್ಲದಕ್ಕೂ ಅಂಕಗಳನ್ನು ಈ ಕಾರ್ಡಿನಲ್ಲಿ ನಮೂದಿಸಲಾಗುತ್ತದೆ.

    ಜತೆಗೆ ಮಗುವಿನ ತೂಕ, ಎತ್ತರವನ್ನೂ ದಾಖಲಿಸಲಾಗುತ್ತದೆ. ಕಾರ್ಡಿನಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಪಾಲಕರ ಸಹಿ ಇರಲಿದೆ. ಮಕ್ಕಳು ಶಾಲಾಪೂರ್ವ ಶಿಕ್ಷಣವನ್ನು ಪೂರೈಸಿ ಶಾಲೆಗೆ ದಾಖಲಾಗುವಾಗ ಈ ಕಾರ್ಡನ್ನು ನೀಡಲಾಗುತ್ತದೆ.

    ಅಂಗನವಾಡಿ ಕೇಂದ್ರಗಳನ್ನು ಮೇ 30ರಂದು ತೆರೆಯಲಾಗುವುದು. ಹೊಸ ಶೈಕ್ಷಣಿಕ ವರ್ಷಕ್ಕೆ ಮಕ್ಕಳನ್ನು ಸ್ವಾಗತಿಸಲು ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅಂಗನವಾಡಿಗಳ ಪರಿಸರವನ್ನು ತಳಿರು, ತೋರಣಗಳಿಂದ ಅಲಂಕರಿಸಲಾಗುವುದು. 3 ವರ್ಷ ತುಂಬಿದ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಸೇರಿಸುವಂತೆ ಪಾಲಕರ ಮನವೊಲಿಸಲು ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು.
    -ವಾಸಂತಿ ಉಪ್ಪಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts