More

    ಸ್ಮಾರ್ಟ್ ಸಿಟಿ ಯುಜಿ ಕೇಬಲ್‌ನಿಂದ ಜನರಿಗೆ ಶಾಕ್ !

    ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಶಿವಮೊಗ್ಗ ಸ್ಮಾರ್ಟ್‌ಸಿಟಿ ಯೋಜನೆಯಡಿ ನಡೆದ ಯುಜಿ(ಅಂಡರ್‌ಗ್ರೌಂಡ್) ಕೇಬಲ್ ಅಳವಡಿಕೆಯಲ್ಲಿನ ಲೋಪದ ಬಗ್ಗೆ ಪಾಲಿಕೆ ಸಭೆಯಲ್ಲಿ ಆಡಳಿತ ಪಕ್ಷವೂ ಒಳಗೊಂಡಂತೆ ಪಕ್ಷಾತೀತವಾಗಿ ಸದಸ್ಯರು ಅಸಮಾಧಾನ ಹೊರಹಾಕಿದರು.

    ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷದ ನಾಯಕಿ ರೇಖಾ ರಂಗನಾಥ, ಕಂಬದ ಬಳಿ ಸುಳಿದರೆ ಶಾಕ್ ಹೊಡೆಯುವ ಭಯ ಜನರನ್ನು ಕಾಡುತ್ತಿದೆ. ಹಲವೆಡೆ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ ಅಷ್ಟೇ ಎಂದರು.
    ಬೀದಿದೀಪಗಳ ಕಂಬಗಳಲ್ಲೂ ವೈಯರ್‌ಗಳನ್ನು ಹಾಗೆಯೇ ಬಿಡಲಾಗಿದೆ. ಮಕ್ಕಳು ಸೇರಿ ಕೆಲವರು ಕಂಬಗಳನ್ನು ಮುಟ್ಟಿ ಈಗಾಗಲೇ ಶಾಕ್ ಹೊಡೆಸಿಕೊಂಡಿದ್ದಾರೆ. ಮೆಸ್ಕಾಂ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳ ನಡುವೆ ಸಮನ್ವಯ ಕೊರತೆಯಿಂದ ಯುಜಿ ಕೇಬಲ್ ಅಳವಡಿಕೆ ಅಸಮರ್ಪಕವಾಗಿದೆ ಎಂದು ದೂರಿದರು.
    ಇದಕ್ಕೆ ಧ್ವನಿಗೂಡಿಸಿದ ಜೆಡಿಎಸ್‌ನ ನಾಗರಾಜ ಕಂಕಾರಿ ಮತ್ತು ಕಾಂಗ್ರೆಸ್‌ನ ಬಿ.ಎ.ರಮೇಶ್ ಹೆಗ್ಡೆ, ಗಾಂಧಿನಗರ, ಟ್ಯಾಂಕ್ ಮೊಹಲ್ಲಾ, ಬಾಪೂಜಿನಗರ ಸೇರಿ ಯುಜಿ ಕೇಬಲ್ ಅಥವಾ ಫೀಡರ್ ಬಾಕ್ಸ್‌ಗಳ ಬಳಿ ಬೆಂಕಿ ಕಾಣಿಸಿದ್ದು ಜನರ ಜೀವಕ್ಕೆ ಇದರಿಂದ ಅಪಾಯ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಗಾಂಧಿನಗರದ ಪಾದಚಾರಿ ಮಾರ್ಗದಲ್ಲೇ ಶಾರ್ಟ್ ಸರ್ಕ್ಯೂಟ್ ಆಗಿದ್ದು 10 ಮನೆಗಳಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಭಸ್ಮವಾಗಿವೆ. ಮೆಸ್ಕಾಂಗೆ ಕೇಳಿದರೂ ಪ್ರಯೋಜನ ಆಗುತ್ತಿಲ್ಲ. ಯುಜಿ ಕೇಬಲ್ ಗುಣಮಟ್ಟದ ಬಗ್ಗೆಯೇ ಸಂಶಯ ಇದ್ದು, ಯಾರನ್ನು ಕೇಳಬೇಕು ಎಂದು ಪ್ರಶ್ನಿಸಿದರು.
    ಆಡಳಿತ ಪಕ್ಷದಿಂದಲೂ ಕಿಡಿ:
    ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಾವಂದುಕೊಂಡಂತೆ ಕೆಲಸ ಆಗಲೇ ಇಲ್ಲ. 29ನೇ ವಾರ್ಡ್‌ನಲ್ಲಿ ಇದುವರೆಗೂ ಒಂದೇ ಒಂದು ಕಾಮಗಾರಿ ಪೂರ್ಣ ಆಗಿಲ್ಲ. ಮೊದಲಿಗಿಂತಲೂ ಹೀನಾಯ ಸ್ಥಿತಿ ಉಂಟಾಗಿದೆ ಎಂದು ಬಿಜೆಪಿಯ ಸುರೇಖಾ ಮುರುಳೀಧರ್ ಆಕ್ರೋಶ ವ್ಯಕ್ತಪಡಿಸಿದರು.
    ಸುನೀತಾ ಅಣ್ಣಪ್ಪ ಮಾತನಾಡಿ, ಯುಜಿ ಕೇಬಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬೆಂಕಿ ಬಗ್ಗೆ ಸ್ಮಾರ್ಟ್ ಸಿಟಿ ಅಥವಾ ಮೆಸ್ಕಾಂನ ಯಾವ ಅಧಿಕಾರಿಗಳೂ ಗಮನ ಹರಿಸುತ್ತಿಲ್ಲ. ಯಾವುದಾದರೂ ಅಧಿಕಾರಿ ಮೇಲೆ ಕ್ರಿಮಿನಲ್ ಕೇಸ್ ಬುಕ್ ಮಾಡಿಸಿ ಎಂದು ಸಲಹೆ ನೀಡಿದರು. ಮೇಯರ್ ಎಸ್.ಶಿವಕುಮಾರ್, ಆಯುಕ್ತ ಮಾಯಣ್ಣ ಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts