More

    ಸಣ್ಣ ಹುಳಿತೇಗು ದೊಡ್ಡ ಸಮಸ್ಯೆಯಾದೀತು ಹುಷಾರು!

    ಸಣ್ಣ ಹುಳಿತೇಗು ದೊಡ್ಡ ಸಮಸ್ಯೆಯಾದೀತು ಹುಷಾರು!ಹುಳಿತೇಗಿನ ಸಮಸ್ಯೆ ಯಾರಿಗಿದೆ ಎಂದು ಕೇಳುವ ಬದಲು ಯಾರಿಗಿಲ್ಲ ಎಂದು ಕೇಳುವುದು ಸುಲಭ. ಆಷ್ಟರಮಟ್ಟಿಗೆ ಇದು ಸಾರ್ವತ್ರಿಕ. ಇದು ಹೀಗೆ ಎಲ್ಲರನ್ನೂ ಕಾಡುವುದಕ್ಕೆ ಎರಡು ಕಾರಣಗಳು; ಮೊದಲನೆಯದು ತಪ್ಪಾದ ಜೀವನಶೈಲಿ. ಎರಡನೆಯದು ಈ ಸಮಸ್ಯೆ ಕಾಡಿದಾಗ ತಾತ್ಕಾಲಿಕವಾಗಿ ಮಾತ್ರೆಗಳನ್ನು ನುಂಗಿ ಶಮನ ಮಾಡಿಕೊಂಡು ಶಾಶ್ವತ ಪರಿಹಾರದ ಬಗ್ಗೆ ಯೋಚಿಸದೇ ಇರುವುದು. ಇದಕ್ಕೆ ಕಾರಣಗಳನ್ನು ತಿಳಿದುಕೊಂಡು ಆ ಕಾರಣಗಳನ್ನು ತ್ಯಜಿಸುವುದು ಅತ್ಯಂತ ಅವಶ್ಯಕ. ಇಲ್ಲದೇ ಹೋದರೆ ಸಣ್ಣ ಹುಳಿತೇಗು ಮುಂದೆ ಜಠರಕ್ಕೆ ಸಂಬಂಧಿಸಿದ ದೊಡ್ಡ ಸಮಸ್ಯೆಯಾಗಿ ಕಾಡಬಹುದು.

    ಬಹಳಷ್ಟು ಜನರಲ್ಲಿ ಹುಳಿತೇಗು ಬರಲು ಸಾಮಾನ್ಯ ಕಾರಣವೆಂದರೆ ಹಸಿವಾದಾಗ ಊಟ ಮಾಡದೇ ಇರುವುದು. ಆಯುರ್ವೆದದಲ್ಲಿ ವೇಗ ಧಾರಣ ಅಂದರೆ ಪ್ರಕೃತಿಯ ಕರೆಗಳನ್ನು ತಡೆಯಲೇಬಾರದು ಎಂದಿದ್ದಾರೆ. ಇದರಿಂದ ಮುಂದೆ ಗಂಭೀರ ಖಾಯಿಲೆಗಳು ಬರುತ್ತವೆ ಎಂದು ಎಚ್ಚರಿಸಿದ್ದಾರೆ. ಇನ್ನೊಂದು ಸಾಮಾನ್ಯವಾದ ಕಾರಣವೆಂದರೆ ಎಚ್-ಪೈಲೋರಿ ಬ್ಯಾಕ್ಟೀರಿಯಾ. ನಮ್ಮ ಜಠರದಲ್ಲಿ ಇವು ಬೆಳೆಯುವುದರಿಂದ ಹೊಟ್ಟೆ ಉರಿ, ಹುಳಿ ತೇಗು ಮುಂತಾದ ಸಮಸ್ಯೆಗಳಾಗುತ್ತವೆ. ಪ್ರಾರಂಭಿಕ ಹಂತದಲ್ಲೇ ಅದಕ್ಕೆ ಸೂಕ್ತವಾದ ಪರಿಹಾರವನ್ನು ಮಾಡಿಕೊಳ್ಳಬೇಕು. ಅತಿಯಾಗಿ ಹುಳಿ ಮತ್ತು ಖಾರದ ಆಹಾರ ಸೇವನೆ ಹಾಗೂ ಟೀ, ಕಾಫಿ, ತಂಬಾಕುಗಳ ಸೇವನೆ ಕೂಡಾ ಹಲವರಿಗೆ ಹುಳಿತೇಗಿನ ಸಮಸ್ಯೆ ಕಾಡಲು ಕಾರಣ. ಪ್ರಾರಂಭಿಕ ಹಂತದಲ್ಲೇ ಇಂಥ ಕಾರಣಗಳನ್ನು ತ್ಯಜಿಸಿ, ಸರಿಯಾಗಿ ಮನೆಮದ್ಧುಗಳನ್ನು ಮಾಡಿಕೊಂಡರೆ ಶಾಶ್ವತ ಪರಿಹಾರ ಮಾಡಿಕೊಳ್ಳಬಹುದು.

    ಬೂದುಗುಂಬಳ ಕಾಯಿ ಹುಳಿತೇಗಿನಲ್ಲಿ ಅತ್ಯುತ್ತಮ ಆಹಾರೌಷಧ. ಬೂದುಗುಂಬಳದ ಹೋಳುಗಳ ಜೊತೆ ಸಣ್ಣ ಚೂರು ಶುಂಠಿ ಹಾಕಿ ಜ್ಯೂಸ್ ತಯಾರಿಸಿಕೊಂಡು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದರೆ ಬಹಳಷ್ಟು ರೀತಿಯಲ್ಲಿ ಹೊಟ್ಟೆಗೆ ಮತ್ತು ಇಡೀ ದೇಹಕ್ಕೆ ಅನುಕೂಲ ಮಾಡಿಕೊಡುತ್ತದೆ. ಹೊಟ್ಟೆಯಲ್ಲಿ ಅತಿಯಾಗಿ ಉಂಟಾಗುವ ಅಮ್ಲೀಯತೆಯನ್ನು ಕಡಿಮೆ ಮಾಡಿ ಹುಳಿತೇಗು ಬರುವುದನ್ನು ತಪ್ಪಿಸುತ್ತದೆ. ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಹೊಟ್ಟೆ ಉರಿ, ಹುಳಿತೇಗು, ಗಂಟಲು ಉರಿಯ ಸಮಸ್ಯೆಗಳಿದ್ದರೆ ಗರಿಕೆ ಹುಲ್ಲಿನ ಜ್ಯೂಸ್ ಸೇವನೆ ಮಾಡಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಮಧ್ಯಾಹ್ನ 12 ಘಂಟೆಯ ಹೊತ್ತಿನಲ್ಲಿ ಗರಿಕೆ ಹುಲ್ಲಿಗೆ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿ ಸೋಸಿ ಅದಕ್ಕೆ ಸ್ವಲ್ಪ ಹಾಲು ಹಾಕಿ ಕುಡಿಯಬಹುದು. ಸಂಜೆಯ ಸಮಯದಲ್ಲಿ ಇದರ ಸೇವನೆ ಅಷ್ಟು ಸರಿಯಲ್ಲ. ಎಚ್ ಪೈಲೋರಿ ಬ್ಯಾಕ್ಟೀರಿಯಾದ ಕಾರಣದಿಂದ ಹುಳಿತೇಗು ಬರುತ್ತಿದ್ದರೆ ಜೇಷ್ಠಮಧುವಿನ ಸೇವನೆ ರೋಗದ ಮೂಲಕ್ಕೇ ಚಿಕಿತ್ಸೆ ಕೊಟ್ಟಂತಾಗುತ್ತದೆ. ಐದರಿಂದ ಏಳು ಗ್ರಾಂನಷ್ಟು ಜೇಷ್ಠಮಧುವಿನ ಚಿಕ್ಕ ಚಿಕ್ಕ ತುಂಡುಗಳ ಜೊತೆಗೆ ಒಂದು ಲೋಟ ಹಾಲು ಮತ್ತು ಮೂರು ಲೋಟ ನೀರು ಹಾಕಿ ಸಣ್ಣ ಬೆಂಕಿಯಲ್ಲಿ ಒಂದು ಲೋಟಕ್ಕೆ ಇಳಿಸಿ ಸೋಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದು ಗ್ರಂಧಿಗೆ ಅಂಗಡಿಗಳಲ್ಲಿ ಸಿಗುತ್ತದೆ. ಊಟ ಸರಿಯಾಗಿ ಜೀರ್ಣವಾಗದೇ ಇರುವುದು, ಊಟ ರುಚಿಸದೇ ಇರುವುದು ಅಥವಾ ಸೇವಿಸಿದ ಆಹಾರ ಅದೇ ರೂಪದಲ್ಲಿ ಮಲದಲ್ಲಿ ಹೋಗುವುದು ಮುಂತಾದ ಲಕ್ಷಣಗಳೊಂದಿಗೆ ಹುಳಿತೇಗು ಬರುತ್ತಿದ್ದರೆ ಕಾಲು ಚಮಚ ಹಿಪ್ಪಲಿ ಪುಡಿ ಮತ್ತು ಅರ್ಧ ಚಮಚ ಲಾವಂಚದ ಪುಡಿಗಳ ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ತುಪ್ಪ ಸೇರಿಸಿ ದಿನಕ್ಕೆರಡು ಬಾರಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಲಾವಂಚ ತಂಪನ್ನುಂಟು ಮಾಡಿದರೆ, ಹಿಪ್ಪಲಿ ಅತ್ಯುತ್ತಮ ಜೀರ್ಣಕಾರಿ. ಹಾಗಾಗಿ ಜೀರ್ಣಕ್ರಿಯೆಯ ಬಹುತೇಕ ಸಮಸ್ಯೆಗಳು ನಿವಾರಣೆಯಾಗಿ ಆರೋಗ್ಯವೃದ್ಧಿಯಾಗುತ್ತದೆ.

    ಬೊಜ್ಜು, ಹೊಟ್ಟೆಭಾರ, ಅತಿತೂಕ, ಮಲಬದ್ಧತೆ ಸಮಸ್ಯೆಗಳೊಂದಿಗೆ ಹುಳಿತೇಗು ಕಾಡುತ್ತಿದ್ದರೆ ಅರ್ಧದಿಂದ ಒಂದು ಚಮಚದಷ್ಟು ತ್ರಿಫಲಾ ಚೂರ್ಣವನ್ನು ರಾತ್ರಿ ಮಲಗುವಾಗ ಬಿಸಿನೀರಿನ ಜೊತೆ ಸೇವಿಸಬೇಕು. ಇದರಿಂದ ಸರಾಗವಾಗಿ ಮಲವಿಸರ್ಜನೆಯಾಗಿ, ಇಡೀ ಜೀರ್ಣಾಂಗವ್ಯೂಹದ ಆರೋಗ್ಯವೃದ್ಧಿಯಾಗಿ ಹುಳಿತೇಗಿನ ಸಮಸ್ಯೆ ಹತೋಟಿಗೆ ಬರುತ್ತದೆ. ವಾರಕ್ಕೊಮ್ಮೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಕುಡಿದು ವಾಂತಿ ಮಾಡಿದರೆ ಪಿತ್ತ ಹೊರಹೋಗಿ ಸಾಕಷ್ಟು ಅನುಕೂಲವಾಗುತ್ತದೆ. ತುಂಬಾ ವರ್ಷಗಳಿಂದ ಕಾಡುತ್ತಿರುವ ಮತ್ತು ತೀವ್ರ ಪ್ರಮಾಣದ ಸಮಸ್ಯೆಗಳಿದ್ದರೆ ಪ್ರಕೃತಿ ಚಿಕಿತ್ಸೆ, ವಮನ-ವಿರೇಚನದಂತಹ ಪಂಚಕರ್ಮ ಚಿಕಿತ್ಸೆಗಳು ಬೇಕಾಗುತ್ತವೆ. ಒಟ್ಟಿನಲ್ಲಿ ತಾತ್ಕಾಲಿಕ ಶಮನಕ್ಕಾಗಿ ಮಾತ್ರೆಗಳನ್ನು ನುಂಗಿ ಅಡ್ಡ ಪರಿಣಾಮಗಳನ್ನು ಅನುಭವಿಸುವುದಕ್ಕಿಂತ ಸಮಸ್ಯೆಯ ಕಾರಣಕ್ಕೇ ಚಿಕಿತ್ಸೆ ಮಾಡಿಕೊಳ್ಳುವುದು ಸೂಕ್ತವಾದುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts