More

  ಚರ್ಮದ ಆರೋಗ್ಯ ಕುರಿತು ಜಾಗೃತಿ

  ಬೆಂಗಳೂರು: ಜನರಲ್ಲಿ ಚರ್ಮ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ಚರ್ಮ ವೈದ್ಯರ ಸಂಘದ ವತಿಯಿಂದ ಹಮ್ಮಿಕೊಂಡಿರುವ ಜಾಗೃತಿ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಯೋಜನಾ ನಿರ್ದೇಶಕ ಡಾ. ನವೀನ್ ಭಟ್ ಮಂಗಳವಾರ ಚಾಲನೆ ನೀಡಿದರು.

  ನಗರದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಆರೋಗ್ಯಕರ ಚರ್ಮವೇ ಸುಂದರ ಚರ್ಮ: ನಿಮ್ಮ ಚರ್ಮವನ್ನು ಪ್ರೀತಿಸಿ’ ಎಂಬ ಸಂದೇಶದೊಂದಿಗೆ ಜಾಗೃತಿ ಲಕಗಳನ್ನು ಅಳವಡಿಸಿರುವ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಅಭಿಯಾನ ಆರಂಭಗೊಂಡಿದೆ. ಈ ಜಾಗೃತಿ ಲಕಗಳನ್ನು ಹೊಂದಿರುವ 50ಕ್ಕೂ ಅಧಿಕ ಬಸ್‌ಗಳು ಮೂರು ತಿಂಗಳ ಕಾಲ ನಗರದ ವಿವಿಧ ಭಾಗಗಳಲ್ಲಿ ಸಂಚರಿಸುವ ಮೂಲಕ ಜನರಲ್ಲಿ ಅರಿವು ಮೂಡಿಸಲಿವೆ.

  ಬೆಂಗಳೂರು ಚರ್ಮ ವೈದ್ಯರ ಸಂಘದ ಅಧ್ಯಕ್ಷೆ ಡಾ.ಎ.ಎಸ್. ನಂದಿನಿ ಮಾತನಾಡಿ, ಪ್ರತಿಯೊಬ್ಬರಿಗೂ ತಮ್ಮ ಸೌಂದರ್ಯದ ಬಗ್ಗೆ ಅಪಾರ ಕಾಳಜಿ ಇದೆ. ಆದರೆ ಚರ್ಮದ ಆರೈಕೆ ವಿಧಾನದ ಬಗ್ಗೆ ಅರಿವಿಲ್ಲ. ಜತೆಗೆ ಚರ್ಮದ ಸಮಸ್ಯೆಗಳಿಗೆ ಯಾರ ಬಳಿ ಚಿಕಿತ್ಸೆ ಪಡೆಯಬೇಕೆಂಬ ಮಾಹಿತಿಯೂ ಇಲ್ಲ. ಹೀಗಾಗಿ ಬಹಳಷ್ಟು ಜನರು ಸಾಮಾನ್ಯ ವೈದ್ಯರಲ್ಲಿ ಹಾಗೂ ಕೆಲವರು ನಕಲಿ ವೈದ್ಯರು ಇಲ್ಲವೆ ಪಾರ್ಲರ್‌ಗಳ ಸಲಹೆ ಪಡೆದು ಸಮಸ್ಯೆಯನ್ನು ಮತ್ತಷ್ಟು ಗಂಭೀರ ಮಾಡಿಕೊಳ್ಳುತ್ತಾರೆ. ತ್ವಚೆ ಬಗ್ಗೆ ಬಹಳಷ್ಟು ಜನರಿಗೆ ತಪ್ಪು ತಿಳಿವಳಿಕೆ ಇರುವುದರಿಂದಲೂ ಸಮಸ್ಯೆ ತಂದುಕೊಳ್ಳುತ್ತಾರೆ. ಹಾಗಾಗಿ ಈ ಅಭಿಯಾನದ ಮೂಲಕ ಸೋರಿಯಾಸಿಸ್, ಅಲರ್ಜಿ ಸೇರಿ ವಿವಿಧ ಚರ್ಮರೋಗಗಳ ಲಕ್ಷಣಗಳು, ಕಾರಣಗಳು, ಚಿಕಿತ್ಸೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ವಿವರಿಸಿದರು.

  ಹಿರಿಯ ಚರ್ಮರೋಗ ತಜ್ಞರಾದ ಡಾ. ವೆಂಕಟರಾಮ್ ಮೈಸೂರು ಹಾಗೂ ಡಾ. ಚಂದ್ರಶೇಖರ್ ಮಾತನಾಡಿ, ಸರಿಯಾದ ತ್ವಚೆಯ ಹಾರೈಕೆ ಮತ್ತು ಚಿಕಿತ್ಸೆಗಾಗಿ ಅಧಿಕೃತ ಚರ್ಮ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸಿದರು. ಪ್ರಾಮಾಣಿಕೃತ ಚರ್ಮ ವೈದ್ಯರ ಪೂರ್ಣ ಮಾಹಿತಿ ಭಾರತೀಯ ಚರ್ಮರೋಗ ತಜ್ಞರು, ಪಶುವೈದ್ಯಶಾಸ ತಜ್ಞರು ಮತ್ತು ಕುಷ್ಠರೋಗ ತಜ್ಞರು (ಐಎಡಿವಿಎಲ್) ಅಂತರ್ಜಾಲ ತಾಣದಲ್ಲಿ ಲಭ್ಯವಿದ್ದು, ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

  ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ವಿಶ್ರಾಂತ ಕುಲಪತಿ ಡಾ.ಸಚ್ಚಿದಾನಂದ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ. ರಮೇಶ್ ಕೃಷ್ಣ, ವಿಕ್ಟೋರಿಯಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್, ಚರ್ಮಶಾಸ ವಿಭಾಗದ ಮುಖ್ಯಸ್ಥರಾದ ಡಾ. ಶಿಲ್ಪಾ, ಡಾ. ಅಮೃತಾ, ಸಂಘದ ಕಾರ್ಯದರ್ಶಿ ಡಾ. ಅನೀಶ್, ಖಜಾಂಚಿ ಡಾ. ಸಂಜನಾ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts