More

    ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನ ಸ್ಫೋಟಿಸಲು ಸ್ಕೆಚ್; ಶಂಕಿತರ ವಿರುದ್ಧ ಚಾರ್ಜ್‌ಶೀಟ್

    ಬೆಂಗಳೂರು: ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನ ಸ್ಫೋಟಿಸಲು ಸಂಚು ರೂಪಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಇಬ್ಬರು ಶಂಕಿತ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ನಗರದ ಎನ್‌ಐಎ ವಿಶೇಷ ಕೋರ್ಟ್‌ಗೆ ಬುಧವಾರ ಆರೋಪಪಟ್ಟಿ ಸಲ್ಲಿಸಿದೆ.

    ಶಿವಮೊಗ್ಗದ ಮೊಹಮ್ಮದ್ ಶಾರೀಕ್ ಮತ್ತು ಸೈಯದ್ ಶಾರೀಕ್ ಬಂಧಿತರು. ಉಗ್ರ ಸಂಘಟನೆ ಮುಖಂಡರ ಜತೆ ಆನ್‌ಲೈನ್‌ನಲ್ಲಿ ಸಂಪರ್ಕ ಹೊಂದಿದ್ದ ಇವರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

    ಮಂಜುನಾಥ ದೇವಸ್ಥಾನದಲ್ಲಿ ಐಇಡಿ ಬಾಂಬ್ ಸ್ಫೋಟಿಸಿ ಜನರಲ್ಲಿ ಭಯ ಹುಟ್ಟಿಸಲು ಸಂಚುರೂಪಿಸಿದ್ದರು. 2022ರ ನವೆಂಬರ್ 19ರಂದು ಶಾರೀಕ್, ಕುಕ್ಕರ್‌ನಲ್ಲಿ ಸುಧಾರಿತ ಸ್ಫೋಟಕವನ್ನು (ಐಇಡಿ) ಆಟೋದಲ್ಲಿ ಸಾಗಿಸುತ್ತಿದ್ದಾಗ ಅದು ಮಾರ್ಗಮಧ್ಯೆಯೇ ಆಕಸ್ಮಿಕವಾಗಿ ಸ್ಫೋಟಗೊಂಡಿತ್ತು. ಕಡಿಮೆ ತೀವ್ರತೆಯ ಬಾಂಬ್ ಆಗಿದ್ದರಿಂದ ಶಾರೀಕ್ ಮತ್ತು ಆಟೋ ಚಾಲಕ ಗಾಯಗೊಂಡಿದ್ದರು. ಸ್ಥಳೀಯ ಪೊಲೀಸರು ಶಾರೀಕ್‌ನನ್ನು ಬಂಧಿಸಿದ್ದರು.

    2022ರ ನವೆಂಬರ್ 23ರಂದು ಭಾರತೀಯ ದಂಡ ಸಂಹಿತೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆ 1908ರ ವಿವಿಧ ಸೆಕ್ಷನ್‌ಗಳ ಅನ್ವಯ ಪ್ರಕರಣ ದಾಖಲಾಗಿತ್ತು. ಹೆಚ್ಚಿನ ತನಿಖೆ ಸಲುವಾಗಿ ಎನ್‌ಐಎ ಅಧಿಕಾರಿಗಳು ಪ್ರಕರಣದ ತನಿಖೆ ವಹಿಸಿಕೊಂಡು ಜುಲೈನಲ್ಲಿ ಇಬ್ಬರನ್ನೂ ಬಂಧಿಸಿದ್ದರು. ಭಾರತದಲ್ಲಿ ಶರಿಯಾ ಕಾನೂನು ಸ್ಥಾಪಿಸುವ ಪಿತೂರಿ ಮಾಡಿ ದೇವಸ್ಥಾನ ಸ್ಫೋಟಕ್ಕೆ ಸಂಚು ರೂಪಿಸಿದ್ದರು. ಮುಂದುವರಿದ ಭಾಗವಾಗಿಯೇ ಮೊಹಮ್ಮದ್ ಶಾರೀಕ್, ಪ್ರೆಶರ್ ಕುಕ್ಕರ್‌ನಲ್ಲಿ ಐಇಡಿ ಸಿದ್ಧಪಡಿಸಿದ್ದ. ಸ್ಫೋಟಕಕ್ಕೆ ಬೇಕಾದ ಬಿಡಿ ಭಾಗಗಳನ್ನು ಸೈಯದ್ ಶಾರೀಕ್ ತಂದು ಕೊಟ್ಟಿದ್ದ ಎಂದು ಆರೋಪಪಟ್ಟಿಯಲ್ಲಿ ಎನ್‌ಐಎ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

    ಐಸಿಸ್ ಪರ ಗೋಡೆ ಬರಹ

    2020ರ ನವೆಂಬರ್‌ನಲ್ಲಿ ಮಂಗಳೂರು ನಗರದಲ್ಲಿ ಉಗ್ರರ ಪರ ಗೋಡೆ ಬರಹ ಆರೋಪ ಪ್ರಕರಣದಲ್ಲಿ ಮೊಹಮ್ಮದ್ ಶಾರೀಕ್‌ನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದರು. ಈ ಇಬ್ಬರು ಜಾಗತಿಕ ಭಯೋತ್ಫಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಬೆಂಬಲಿಸಿ ಬರಹಗಳನ್ನು ಬರೆದಿದ್ದರು.

    ಉಗ್ರ ಸಂಘಟನೆಗೆ ಯುವಕರ ನೇಮಕ

    2022ರ ಶಿವಮೊಗ್ಗ ಐಎಸ್ ಸಂಘಟನೆ ಬಲಗೊಳಿಸುವುದು, ಉಗ್ರ ಸಂಘಟನೆಗೆ ಮುಸ್ಲಿ ಯುವಕರ ನೇಮಕ, ಹಣ ಸಂಗ್ರಹಿಸುವುದು ಹಾಗೂ ಭಾರತದ ವಿರುದ್ಧ ಪಿತೂರಿ ಮಾಡಿದ ಪ್ರಕರಣದಲ್ಲೂ ಮೊಹಮ್ಮದ್ ಶಾರೀಕ್ ಕೈವಾಡ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಇದರಲ್ಲಿ 10 ಶಂಕಿತರನ್ನು ಬಂಧಿಸಲಾಗಿದೆ. ಶಾರೀಕ್ ಮತ್ತು ಸೈಯದ್ ಯಾಸಿನ್ ಸೇರಿ 9 ಮಂದಿ ವಿರುದ್ಧ ಜೂನ್ 30ರಂದು ಚಾರ್ಜ್‌ಶೀಟ್ ದಾಖಲಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts