More

    ಕರಾವಳಿ ಜಿಲ್ಲೆಗಳಲ್ಲಿ ಸೈರನ್ ಟವರ್

    ಹರೀಶ್ ಮೋಟುಕಾನ ಮಂಗಳೂರು
    ಅರಬ್ಬೀ ಸಮುದ್ರದಲ್ಲಿ ವರ್ಷದಿಂದ ವರ್ಷಕ್ಕೆ ಚಂಡಮಾರುತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಭಾವ್ಯ ಅನಾಹುತ ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೈರನ್ ಟವರ್ ನಿರ್ಮಾಣ ಯೋಜನೆ ಹಮ್ಮಿಕೊಂಡಿದೆ.

    ಚಂಡಮಾರುತ, ಸುನಾಮಿ ಸಂದರ್ಭ ಮುನ್ನೆಚ್ಚರಿಕೆ ನೀಡಿ ಕ್ಷಿಪ್ರ ಗತಿಯಲ್ಲಿ ಪರಿಹಾರ ಕಾರ್ಯಾಚರಣೆಗೆ ಇದರಿಂದ ಅನುಕೂಲವಾಗಲಿದೆ. ರಾಷ್ಟ್ರೀಯ ಚಂಡಮಾರುತ ಅಪಾಯ ಮುನ್ಸೂಚನೆ, ಉಪಶಮನ ಯೋಜನೆ(ಎನ್‌ಸಿಆರ್‌ಎಂಪಿ)ಯಡಿ ಮೂರು ಜಿಲ್ಲೆಗಳಲ್ಲಿ ಒಟ್ಟು 22 ಸೈರನ್ ಟವರ್ ನಿರ್ಮಾಣ ಯೋಜನೆಗೆ 26.92 ಕೋಟಿ ರೂ. ವೆಚ್ಚವಾಗಲಿದೆ. ಕೇಂದ್ರ ಶೇ.75 ಹಾಗೂ ರಾಜ್ಯ ಸರ್ಕಾರ ಶೇ.25 ವೆಚ್ಚವನ್ನು ಭರಿಸಲಿವೆ. ಒರಿಸ್ಸಾ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲೂ ಈ ಯೋಜನೆ ಪ್ರಗತಿಯಲ್ಲಿದೆ.

    ಸೈರನ್ ಮೂಲಕ ಎಚ್ಚರಿಕೆ: ಚಂಡಮಾರುತ, ಸುನಾಮಿ ಮೊದಲಾದ ಪ್ರಾಕೃತಿಕ ವಿಕೋಪದ ಮುನ್ಸೂಚನೆಗಳು ಹವಾಮಾನ ಇಲಾಖೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಏಜೆನ್ಸಿಗಳಿಂದ ಲಭ್ಯವಾದ ಕೂಡಲೇ ಎಚ್ಚರಿಕೆ ಮತ್ತು ಸಂದೇಶವನ್ನು ಈ ಮೆಗಾ ಟವರ್‌ಗಳಿಗೆ ರವಾನಿಸಲಾಗುತ್ತದೆ. ಮೂರು ದಿನಗಳ ಮುಂಚಿತವಾಗಿ ಅಪಾಯದ ಮುನ್ನೆಚ್ಚರಿಕೆಯನ್ನು ಸೈರನ್ ಟವರ್ ಮೂಲಕ ಸುಮಾರು 4 ಕಿ.ಮೀ. ದೂರದ ತನಕ ನೀಡಲು ಸಾಧ್ಯ. ಇದು ಸ್ಥಳೀಯವಾಗಿ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯಲು ಸೇರಿದಂತೆ ತ್ವರಿತ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ. ಪರಿಹಾರ ತಂಡಗಳಿಗೆ ಸೂಕ್ತ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ರೂಪಿಸಲು ಸಹಕಾರಿಯಾಗಲಿದೆ. ಸಾರ್ವಜನಿಕರು ಸಮುದ್ರದ ಬದಿಯಿಂದ ಸಾಕಷ್ಟು ದೂರದಲ್ಲಿ ಇರುವಂತೆ ಎಚ್ಚರಿಕೆ ನೀಡುತ್ತದೆ.
    * ಆಶ್ರಯ ತಾಣ: ಪ್ರಾಕೃತಿಕ ವಿಕೋಪ ಉಂಟಾದ ಸಂದರ್ಭ ಜನರಿಗೆ ತುರ್ತು ಆಶ್ರಯ ಕಲ್ಪಿಸಲು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಮತ್ತು ಹೊಸಬೆಟ್ಟು, ಉಡುಪಿಯ ತೆಕ್ಕಟ್ಟೆ ಮತ್ತು ಕಾಪುವಿನಲ್ಲಿ 2 ಸಾವಿರ ಜನರ ಸಾಮರ್ಥ್ಯದ ಆಶ್ರಯ ತಾಣ ನಿರ್ಮಾಣವಾಗುತ್ತಿದೆ. ಇದರ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಇದರ ಜತೆಗೆ ತ್ವರಿತ ಕಾರ್ಯಾಚರಣೆಗೆ ನೆರವಾಗುವಂತೆ ಈ ಯೋಜನೆಯಡಿ ಸೇತುವೆ ಹಾಗೂ ರಸ್ತೆಗಳನ್ನೂ ನಿರ್ಮಿಸಲಾಗುತ್ತಿದೆ.

    ಎಲ್ಲೆಲ್ಲಿ ಸೈರನ್ ಟವರ್?: – ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸೋಮೇಶ್ವರ, ತಣ್ಣೀರುಬಾವಿ, ಪಣಂಬೂರು, ಸುರತ್ಕಲ್, ಸಸಿಹಿತ್ಲು ಬೀಚ್, ಹೊಸಬೆಟ್ಟು, ಜಿಲ್ಲಾಧಿಕಾರಿ ಕಚೇರಿ ಬಳಿ. ಉಡುಪಿ ಜಿಲ್ಲೆಯಲ್ಲಿ ಪಡುಬಿದ್ರಿ, ಕಾಪು, ಮಲ್ಪೆ, ಕೋಡಿ, ಮಟ್ಟು, ಮರವಂತೆ, ಶಿರೂರು ಬೀಚ್ ಬಳಿ ಮತ್ತು ತೆಕ್ಕಟ್ಟೆ ಪ್ರದೇಶ.
    – ಉತ್ತರ ಕನ್ನಡ ಜಿಲ್ಲೆಯಲ್ಲಿ ಮುರುಡೇಶ್ವರ ಬೀಚ್, ಎಕೋ ಬೀಚ್ ಪಾರ್ಕ್, ಓಂ ಮತ್ತು ಕುಡ್ಲೆ ಬೀಚ್ ನಡುವಿನ ಪ್ರದೇಶ, ಗೋಕರ್ಣ ಬೀಚ್, ಆರ್.ಟಿ.ಬೀಚ್ ಮತ್ತು ಕಾರವಾರ

    ಚಂಡಮಾರುತ, ಸುನಾಮಿ ಮೊದಲಾದ ಪ್ರಕೃತಿ ವಿಕೋಪ ಸಂದರ್ಭ ಮುನ್ನೆಚ್ಚರಿಕೆ ವಹಿಸಿ ಆಗಬಹುದಾದ ಸಾವು, ನೋವುಗಳನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಲ್ಲಿ ಸೈರನ್ ಟವರ್‌ಗಳನ್ನು ನಿರ್ಮಾಣ ಮಾಡುತ್ತಿದೆ. ಕರ್ನಾಟಕದಲ್ಲಿ ಕರಾವಳಿ ತೀರ ಇರುವ ಮೂರು ಜಿಲ್ಲೆಗಳಲ್ಲಿ ಇದು ಸ್ಥಾಪನೆಯಾಗಲಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ.
    – ಡಾ.ರಾಜೇಂದ್ರ ಕೆ.ವಿ, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts