More

    ಶಿರಾ ಭಾಗದ ಕೆರೆಗಳಿಗೆ ನೀರು ಹರಿಸಿ ; ವಿವಿಧ ಸಂಘಟನೆಗಳಿಂದ ಪ್ರತಿಭಟನೆ

    ಶಿರಾ : ತಾಲೂಕಿಗೆ ಹೇಮಾವತಿ ನಾಲೆಯಿಂದ ಹಂಚಿಕೆಯಾಗಿರುವ 0.90 ಟಿ.ಎಂ.ಸಿ. ನೀರನ್ನು ಕಳ್ಳಂಬೆಳ್ಳ, ಮದಲೂರು ಹಾಗೂ ಇನ್ನಿತರ ಕೆರೆಗಳಿಗೆ ತುರ್ತಾಗಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

    ನಗರದ ಐ.ಬಿ. ವೃತ್ತದಲ್ಲಿ ಮಂಗಳವಾರ ರೈತ ಸಂಘ, ಹಸಿರು ಸೇವೆ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟಿಸಿ, ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಜೆ.ಸಿ.ಮಾಧುಸ್ವಾಮಿ ಅವರು ಹೇಮಾವತಿ ನೀರು ಬಿಡಿಸದೆ ಶಿರಾ ತಾಲೂಕಿಗೆ ವಂಚನೆ ಮಾಡುತ್ತಿದ್ದಾರೆ. ಮದಲೂರು ಕೆರೆಗೆ ಹೇಮೆ ಹರಿಸಿದರೆ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿತ್ತೀನೆಂಬ ಹೇಳಿಕೆ ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.

    ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಧನಂಜಯಾರಾಧ್ಯ, 2019ರಿಂದ ಈವರೆವಿಗೂ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಜೆ.ಸಿ.ಮಾಧುಸ್ವಾಮಿ ಅವರು ಅಂತರ್ಜೋಡಣಾ ನಾಲೆಯಿಂದ ಮದಲೂರು ಹಾಗೂ ಸಂಬಂಧಿಸಿದ 11 ಕೆರೆಗಳಿಗೂ ಹೇಮಾವತಿ ನಾಲೆಯ ನೀರನ್ನು ಬಿಡಿಸದೆ ತಾರತಮ್ಯ ಮಾಡಿದ್ದು. ಈ ಭಾಗದ ಜನರಿಗೆ ಅನ್ಯಾಯವೆಸಗಿದ್ದಾರೆ. ಶಿರಾ ಉಪಸಮರ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು 6 ತಿಂಗಳೊಳಗೆ ಮದಲೂರು ಕೆರೆಯನ್ನು ಹೇಮೆ ನೀರು ತುಂಬಿಸಿ ತಾವೇ ಬಾಗಿನಿ ಅರ್ಪಿಸುವುದಾಗಿ ಭರವಸೆ ನೀಡಿದ್ದರು. ಮಾಧುಸ್ವಾಮಿ ನಾಲೆಗೆ ನೀರು ಬಿಡಿಸದೆ ಶಿರಾ ತಾಲೂಕಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

    ಇತ್ತೀಚೆಗೆ ಜಿಪಂ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮಾಧುಸ್ವಾಮಿ ಶಿರಾ ತಾಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರನ್ನು ಹರಿಸಿದರು ಸಂಬಂಧಪಟ್ಟ ಅಧಿಕಾರಿಗಳಿಗೆ ಜೈಲಿಗೆ ಗುರಿಪಡಿಸಲಾಗುವುದೆಂದು ಹೇಳಿಕೆ ನೀಡಿರುವುದನ್ನು ತಾಲೂಕಿನ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ರೈತರು, ನಾಗರಿಕರು ಖಂಡಿಸುತ್ತೇವೆ. ಮದಲೂರು ಕೆರೆಗೆ ಹೇಮೆ ನೀರು ಹರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಮದಲೂರು ಕೆರೆಗೆ ಹೇಮೆ ನೀರು ಹರಿಸುವಂತೆ ಶಿರಾ ತಹಸೀಲ್ದಾರ್ ಮೂಲಕ ಹಂಗಾಮಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

    ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ, ರೈತ ಮುಖಂಡರಾದ ದ್ಯಾಮೇಗೌಡ, ಲಕ್ಷ್ಮಣ್ ಗೌಡ, ಈರಗ್ಯಾತಪ್ಪ, ಗುರುಮೂರ್ತಿ, ಜಗದೀಶ್ ಮತ್ತಿತರರು ಪ್ರತಿಭಟನೆ ನೇತೃತ್ವವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts