More

    ಅಭ್ಯರ್ಥಿಗಳಿಗೆ ಅರ್ಧ ಯುುದ್ಧ ಗೆದ್ದ ಸಮಾಧಾನ ; ಮತ ಲೆಕ್ಕಚಾರದಲ್ಲಿ ಜಯಚಂದ್ರ

    ಶಿರಾ : ಉಪಸಮರ ಮುಗಿದ ಬಳಿಕ ಸೇನಾನಿಗಳು ಗೂಡು ಸೇರಿಕೊಳ್ಳುವ ಬದಲು ಎಂದಿನ ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದರು. ಕಳೆದೊಂದು ತಿಂಗಳಿನಿಂದ ಪ್ರಚಾರ ಒತ್ತಡದಲ್ಲಿ ಮುಳುಗಿದ್ದ ಅಭ್ಯರ್ಥಿಗಳ ಮೊಗದಲ್ಲಿ ಅರ್ಧಯುದ್ಧ ಗೆದ್ದ ಸಮಾಧಾನ ಕಾಣುತ್ತಿತ್ತು.

    ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ, ಬಿಜೆಪಿಯ ಡಾ.ಸಿ.ಎಂ.ರಾಜೇಶ್‌ಗೌಡ ಬುಧವಾರ ತಮ್ಮ ತಮ್ಮ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಂಡರು. ಬಿಜೆಪಿ ಆರ್ಭಟಕ್ಕೆ ಸ್ವಲ್ಪ ಬಸವಳಿದಂತೆ ಕಂಡ ಜಯಚಂದ್ರ ಬುಧವಾರ ತಡವಾಗಿ ಎದ್ದು ಬೆಳಗಿನ ಉಪಹಾರ ಮುಗಿಸುತ್ತಿದ್ದಂತೆ ನಗರ ನಿವಾಸಕ್ಕೆ ಬಂದ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಭೇಟಿ ಮಾಡಿದರು.

    ಮತ ಲೆಕ್ಕಾಚಾರ: ಬೆಳಗ್ಗಿನಿಂದ ಸಂಜೆವರೆಗೂ ಜಯಚಂದ್ರ ನಿವಾಸ ಗಿಜಿಗುಡುತ್ತಿತ್ತು. ಪ್ರತಿ ಮತಗಟ್ಟೆಯಲ್ಲಿ ಶೇಕಡಾವಾರು ಮತ ಚಲಾವಣೆ ಆಗಿರುವ ಲೆಕ್ಕಾಚಾರದಲ್ಲಿ ಜಯಚಂದ್ರ ಸ್ಥಳೀಯರ ಜತೆ ಮುಳುಗಿದ್ದರು. ಮತ ಲೆಕ್ಕಾಚಾರದ ನಂತರ ಜಯಚಂದ್ರರಲ್ಲಿ ಸ್ವಲ್ಪ ಸಮಾಧಾನ ತಂದಂತೆ ಕಾಣುತ್ತಿತ್ತು.

    ಶೇಕಡವಾರು ಮತದಾನ, ಕಾರ್ಯಕರ್ತರ ಮಾಹಿತಿ ಆಧರಿಸಿ ನನಗೇನು ತೊಂದರೆ ಇಲ್ಲ. ಗೆಲ್ಲುವ ಪೂರ್ಣ ವಿಶ್ವಾಸ ಇದೆ ಎಂದು ಜಯಚಂದ್ರ ‘ವಿಜಯವಾಣಿ’ ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು. ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎಸ್.ರವಿ, ಜಿ.ಎನ್.ಮೂರ್ತಿ, ರಾಮಕೃಷ್ಣಪ್ಪ, ಹಲುಗುಂಡೇಗೌಡ, ವಿನಯ್ ತ್ಯಾಗರಾಜ್, ರಾಕೇಶ್ ಬಾಬು, ಡಿ.ವೈ.ಗೋಪಾಲ್, ಗೋಣಿಹಳ್ಳಿ ಸದಾಶಿವ, ಹಾಲೇನಹಳ್ಳಿ ಶಶಿಧರ್, ಶಶಿಹುಲಿಕುಂಟೆ ಮಠ, ಯಂಜಲಗೆರೆ ಜಯಪ್ರಕಾಶ್, ಮಾನಂಗಿ ರಾಮು ಮತ್ತಿತರರ ಜತೆ ಚುನಾವಣೆ ವಿಷಯಗಳ ವಿನಿಮಯ ಮಾಡಿಕೊಂಡರು. ಕುಟುಂಬದೊಂದಿಗೆ ಮಧ್ಯಾಹ್ನ ಭೋಜನ ಸವಿದು ಸಂಜೆ ಹೇಮೆ ನೀರು ಹಂಚಿಕೆ ಕುರಿತು ಡಿಸಿ ಡಾ.ಕೆ.ರಾಕೇಶ್‌ಗೌಡ ಜತೆ ಚರ್ಚಿಸಿದರು.

    ಜನರ, ಕಾರ್ಯಕರ್ತರ ಭೇಟಿ: ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‌ಗೌಡ ಮೊಗದಲ್ಲಿ ಹೊಸ ಹುರುಪು ಕಾಣುತ್ತಿತ್ತು. ಕ್ಷೇತ್ರದಲ್ಲಿ ಎದ್ದಿರುವ ಪಕ್ಷದ ಪರವಾದ ಅಲೆ ಅವರಲ್ಲಿನ ಎಲ್ಲ ಆಯಾಸವನ್ನು ಕಣ್ಮರೆ ಮಾಡಿತ್ತು. ಬೆಳಗ್ಗೆ ಎದ್ದು ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿ ನಂತರ ಕಾರ್ಯಕರ್ತರ ಭೇಟಿಗೆ ಹೊರಡಲು ಸಿದ್ಧರಾದರು. ಸೀಗಳಹಳ್ಳಿ, ಗಂಡಿಹಳ್ಳಿ ಗೇಟ್ ಬಳಿ ಕಾರ್ಯಕರ್ತರೊಂದಿಗೆ ಚರ್ಚಿಸಿ, ತಮ್ಮ ಪರವಾಗಿ ಕೆಲಸ ಮಾಡಿದ ಕಾರ್ಯಕರ್ತರಿಗೆ ಕೃತಜ್ಞತೆ ಹೇಳಿದರು.

    ಮರುದಿನವೇ ಚಾಲನೆ: ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವುದಾಗಿ ಸಿಎಂ ಯಡಿಯೂರಪ್ಪ ನೀಡಿದ್ದ ಭರವಸೆಗೆ ಚುನಾವಣೆ ಮುಗಿದ ಮರುದಿನವೇ ಚಾಲನೆ ದೊರೆತಿದೆ. ರಾಜ್ಯ ಸರ್ಕಾರದ ಸಣ್ಣ ನೀರಾವರಿ ಮುಖ್ಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ನೇತೃತ್ವದ ಅಧಿಕಾರಿಗಳ ತಂಡ ಮದಲೂರು ಕೆರೆಗೆ ಭೇಟಿ ನೀಡಿದ್ದು, ಈ ವೇಳೆ ಸಂಸದ ಎ.ನಾರಾಯಣಸ್ವಾಮಿ ಜತೆ ಬಿಜೆಪಿ ಅಭ್ಯರ್ಥಿ ರಾಜೇಶ್‌ಗೌಡ, ಮುಖಂಡ ಎಸ್.ಆರ್.ಗೌಡ, ಬಿ.ಕೆ.ಮಂಜುನಾಥ್ ಮತ್ತಿತರರು ಹಾಜರಿದ್ದರು. ದಿನ ಪೂರ್ತಿ ರಾಜೇಶ್‌ಗೌಡ ಬ್ಯುಸಿಯಾಗಿದ್ದರು.

    ವಿಶ್ರಾಂತಿಗೆ ಮೊರೆಹೋದ ಅಮ್ಮಾಜಮ್ಮ: ಕರೊನಾ ನಂತರ ಗುಣಮುಖರಾಗಿ ಚುನಾವಣಾ ಅಖಾಡಕ್ಕೆ ಧುಮುಕಿದ್ದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಗೆ ರಾಜಕೀಯ ಗದ್ದಲ, ಚುನಾವಣಾ ಪ್ರಚಾರ ಎಲ್ಲವೂ ಹೊಸದು. ಪತಿ ಶಾಸಕರಾಗಿ, ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರೂ ಒಮ್ಮೆಯೂ ವಿಧಾನಸೌಧದ ಮೆಟ್ಟಿಲು ತುಳಿಯದ ಅಮ್ಮಾಜಮ್ಮ ಈ ಬಾರಿ ಹಳ್ಳಿ, ಹಳ್ಳಿಯಲ್ಲಿ ಸುತ್ತಿ ಮತಯಾಚಿಸಿದರು. ಧೂಳು, ಬಿಸಿಲಿನಿಂದ ಬಸವಳಿದಿದ್ದ ಅಮ್ಮಾಜಮ್ಮ ಬುಧವಾರ ತುಮಕೂರಿನ ನಿವಾಸದಲ್ಲಿ ವಿಶ್ರಾಂತಿಗೆ ಮೊರೆ ಹೋಗಿದ್ದರು. ಮನೆಗೆ ಬಂದಿದ್ದ ಪತಿಯ ಸ್ನೇಹಿತರೊಂದಿಬ್ಬರ ಜತೆ ಕುಶಲೋಪರಿ ಮಾತುಕತೆ ನಂತರ ಪೂಜೆ-ಪುನಸ್ಕಾರ, ಮನೆಯ ದೈನಂದಿನ ಕೆಲಸದಲ್ಲಿ ತೊಡಗಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts