More

    ಬಿಎಲ್‌ಒ ಕರ್ತವ್ಯದಿಂದ ಮುಕ್ತಗೊಳಿಸಿ; ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

    ಸಿಂಧನೂರು: ಎಲ್‌ಕೆಜಿ, ಯುಕೆಜಿಗಳಿಗೆ ಅಂಗನವಾಡಿ ಕಾರ್ಯಕರ್ತೆಯರನ್ನೇ ಶಿಕ್ಷಕಿಯರೆಂದು ನೇಮಕ ಮಾಡಿಕೊಳ್ಳಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್‌ಗೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಶನ್‌ನಿಂದ ಶನಿವಾರ ಮನವಿ ಸಲ್ಲಿಸಲಾಯಿತು.

    ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್‌ಒ ಕರ್ತವ್ಯದಿಂದ ಮುಕ್ತಗೊಳಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಸುತ್ತೋಲೆ ಹೊರಡಿಸಿದ್ದರೂ ಡಿಸಿಗಳು ಹಾಗೂ ತಹಸೀಲ್ದಾರರು ಕಡ್ಡಾಯವಾಗಿ ಬಿಎಲ್‌ಒ ಕರ್ತವ್ಯಕ್ಕೆ ನಿಯೋಜಿಸುತ್ತಿದ್ದಾರೆ ಎಂದು ದೂರಿದರು. ಎನ್‌ಪಿಎಸ್‌ನಲ್ಲಿನ ನ್ಯೂನತೆಗಳನ್ನು ಸರಿಪಡಿಸುವುದು, ಅಂಗನವಾಡಿ ಕೇಂದ್ರಗಳ ಬಾಡಿಗೆ, ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ನೀಡುವ ತರಕಾರಿ ಹಣ ಹೆಚ್ಚಳ, ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯುಯಿಟಿ ಸೌಲಭ್ಯ ಜಾರಿಗೊಳಿಸುವಂತೆ ಒತ್ತಾಯಿಸಿದರು.

    ಏಪ್ರಿಲ್, ಮೇನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ. ಆದರೆ, ಅಂಗನವಾಡಿ ಕೇಂದ್ರಗಳಿಗೆ ರಜೆ ಇರುವುದಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿಹೆಚ್ಚು ಬಿಸಿಲು ಇರುವುದರಿಂದ ಅಂಗನವಾಡಿ ಕೇಂದ್ರಗಳಿಗೆ ರಜೆ ನೀಡಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಅಂಗನವಾಡಿ ಕೇಂದ್ರಗಳೆಂದು ಪರಿಗಣಿಸಬೇಕು. ಪ್ರಭಾರ ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕೇವಲ 50 ರೂ. ನೀಡಲಾಗುತ್ತಿದ್ದು, ಇದನ್ನು ಹೆಚ್ಚಿಸಬೇಕೆಂದು ಆಗ್ರಹಿಸಿದರು.

    ಬೇಡಿಕೆಗಳ ಈಡೇರಿಕೆಗೆ ಸಿಎಂ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದೆಂದು ಸಚಿವ ಹಾಲಪ್ಪ ಆಚಾರ್ ಭರವಸೆ ನೀಡಿದರು. ಜಿಲ್ಲಾ ಗೌರವಾಧ್ಯಕ್ಷ ಡಿ.ಎಚ್.ಕಂಬಳಿ, ಅಧ್ಯಕ್ಷೆ ಸುಲೋಚನಾ, ತಾಲೂಕು ಅಧ್ಯಕ್ಷೆ ಗಿರಿಜಮ್ಮ, ರಾಜ್ಯ ಸಮಿತಿ ಸದಸ್ಯ ತಿಪ್ಪಯ್ಯ ಶೆಟ್ಟಿ, ಕಾರ್ಯದರ್ಶಿ ಆದಿಲಕ್ಷ್ಮೀ, ರತ್ನಮ್ಮ ದೇವರಗುಡಿ, ನಾಗರತ್ನಾ, ಪ್ರಮುಖರಾದ ಯಮನಮ್ಮ, ಅಮರಮ್ಮ, ದೀಪಾ, ದುರುಗಮ್ಮ, ತ್ರಿವೇಣಿ, ಲಕ್ಷ್ಮೀ ದಢೇಸುಗೂರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts