More

  ದೇಶ ಉಳಿಸಿ ಸಂಕಲ್ಪ ಯಾತ್ರೆ

  ಸಿಂಧನೂರು: ನ್ಯಾಯಕ್ಕಾಗಿ ಹೋರಾಡುವ ರೈತರನ್ನು ದೇಶದ್ರೋಹಿಗಳಂತೆ ಬಿಂಬಿಸುತ್ತಿರುವ ಪ್ರಭುತ್ವ, ಕಾರ್ಪೋರೇಟ್ ಬಂಡವಾಳ ಶಾಹಿಗಳಿಗೆ ಅನುಕೂಲ ಕಲ್ಪಿಸುತ್ತಿದೆ. ರೈತರ ಶ್ರಮದ ಅನ್ನತಿನ್ನುವ ಪ್ರತಿಯೊಬ್ಬರೂ ರೈತ ವಿರೋಧಿ ಕೇಂದ್ರ ಸರ್ಕಾರಕ್ಕೆ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು. ಏ.1 ರಿಂದ 8ರ ವರೆಗೆ 175ಕ್ಕೂ ಅಧಿಕ ಸಂಘಟನೆಗಳನ್ನು ಒಳಗೊಂಡ ಒಕ್ಕೂಟದ ಮೂಲಕ ದೇಶ ಉಳಿಸಿ ಸಂಕಲ್ಪ ಯಾತ್ರೆ ನಡೆಸುತ್ತಿದ್ದೇವೆ. ಏ.8ರಂದು ಬೆಳಗಾವಿಯಲ್ಲಿ ದೇಶ ಉಳಿಸಿ ಸಂಕಲ್ಪ ಸಮಾವೇಶ ಆಯೋಜಿಸಲಾಗಿದೆ ಎಂದು ಚಿಂತಕ ರಹಮತ್ ತರೀಕೆರೆ ತಿಳಿಸಿದರು.

  ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸದ್ಯದ ದೇಶದಲ್ಲಿ ತುರ್ತು ಪರಿಸ್ಥಿತಿ ವಾತಾವರಣವಿದೆ. ಜನರಿಗೆ ನೆಮ್ಮದಿಯಿಲ್ಲ. ಸಂವಿಧಾನ, ರೈತರು, ಸಾಮರಸ್ಯ, ಕರ್ನಾಟಕದ ಅಸ್ಮಿತೆ ಕಾಪಾಡುವುದು ಮತ್ತು ಬಂಡವಾಳ ಶಾಹಿಗಳ ಪರ ಸರ್ಕಾರವನ್ನು ಕಿತ್ತೊಗೆಯುವತ್ತ ಜಾಗೃತಿ ಮೂಡಿಸಬೇಕಾಗಿದೆ. ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳುತ್ತಿರುವವರು ಬಹುಸಂಖ್ಯಾತರನ್ನು ಒಡೆದಾಳುತ್ತಿದ್ದಾರೆ. ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡುವುದು, ಧರ್ಮದ ಹೆಸರಿನಲ್ಲಿ ಕಲಹ ಉಂಟು ಮಾಡುವಂತಹ ವಾತಾವರಣವು ಆತಂಕಕಾರಿ. ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಪಾವತಿಯಾಗುವ 100 ರೂಪಾಯಿ ಜಿಎಸ್‌ಟಿಗೆ ಕೇವಲ 12 ಪೈಸೆ ಹಿಂದಿರುಗಿ ನೀಡಲಾಗುತ್ತಿದೆ. ಕರ್ನಾಟಕ ಜನತೆಯನ್ನು ಈ ಮಟ್ಟಿಗೆ ನಿರ್ಲಕ್ಷ್ಯಸುತ್ತಿರುವ ಕೇಂದ್ರ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ ಎಂದು ತಿಳಿಸಿದರು.

  ಹೋರಾಟಗಾರ ರಮೇಶ ಸಂಕ್ರಾಂತಿ ಮಾತನಾಡಿ, ಎಲ್ಲ ವರ್ಗದವರನ್ನು ಒಳಗೊಂಡಿರುವ ನಮ್ಮ ಹೋರಾಟ ಸಮಿತಿಯು ರಾಜ್ಯಾದ್ಯಂತ ಜನಜಾಗೃತಿಗೆ ಮುಂದಾಗಿದೆ. ಕೃಷಿಯನ್ನು ಕಾರ್ಪೋರೇಟ್ ಉದ್ಯಮಿಗಳ ಕೈಗೆ ನೀಡುತ್ತಿರುವ ಕೇಂದ್ರದ ವಿರುದ್ಧ ಎಲ್ಲರೂ ಒಗ್ಗೂಡಬೇಕು. ಸಿಎಎ ಜಾರಿ ಮಾಡಿ ಜನರನ್ನು ಸಮಸ್ಯೆಗೆ ಸಿಲುಕಿಸಲಾಗುತ್ತಿದೆ. ಇಂಥವರಿಗೆ ಉತ್ತರ ನೀಡುವ ಸಮಯ ಬಂದಿದೆ ಎಂದರು. ಪ್ರಮುಖರಾದ ಬಸವರಾಜ ಹಂಚಿನಾಳ, ದುರುಗೇಶ ಬರಗೂರು, ಹುಸೇನಸಾಬ, ಖಾದರ ಸುಬಾನಿ, ಬಸವರಾಜ ಬಾದರ್ಲಿ, ಅಬ್ದುಲ್ ಸಮದ್ ಚೌದರಿ, ಡಾ.ಶರೀಫ ಹಸಮಕಲ್ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts