More

    ಜಿಲ್ಲೆ ರಚನೆಗೆ ಒಗ್ಗಟ್ಟಿನ ಹೋರಾಟ ಅಗತ್ಯ; ಯುವ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಅಭಿಮತ

    ಪತ್ರಕರ್ತರು ಹಾಗೂ ಪ್ರಗತಿಪರ ಮುಖಂಡರೊಂದಿಗೆ ಸಂವಾದ

    ಸಿಂಧನೂರು: ಎಲ್ಲ ರೀತಿಯ ಅರ್ಹತೆ, ಮಾನವ ಸಂಪನ್ಮೂಲ ಹೊಂದಿರುವ ಸಿಂಧನೂರನ್ನು ಜಿಲ್ಲಾ ಕೇಂದ್ರ ಮಾಡಲು ರೂಪು-ರೇಷಗಳನ್ನು ಹಾಕಿಕೊಂಡು ಒಗ್ಗಟ್ಟಿನೊಂದಿಗೆ ಹೋರಾಡಲು ಸಿದ್ಧರಿದ್ದೇವೆ ಎಂದು ಯುವ ಕಾಂಗ್ರೆಸ್ ಮಾಜಿ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಹೇಳಿದರು.

    ನಗರದ ವಿನಯ ರೆಸಿಡೆನ್ಸಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಿಂಧನೂರು ಜಿಲ್ಲೆ ರಚನೆ ಕುರಿತು ಪತ್ರಕರ್ತರು ಹಾಗೂ ಪ್ರಗತಿಪರ ಮುಖಂಡರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಕೇಂದ್ರದ ಹೋರಾಟದ ವೇಳೆ ಎದುರಾಗುವ ಸವಾಲುಗಳನ್ನು ಎದುರಿಸುವುದು ಅನಿವಾರ್ಯವಿದೆ. ಭೌಗೋಳಿಕ ಪ್ರದೇಶ, ಒಳಪಡಿಸಬೇಕಾದ ತಾಲೂಕುಗಳು, ನೈಸರ್ಗಿಕ ಸಂಪನ್ಮೂಲಗಳ ಬಳಕೆ ಬಗ್ಗೆ ಚಿಂತನೆ ನಡೆಸಬೇಕಿದೆ. ಈಗ ಜಿಲ್ಲಾ ಕೇಂದ್ರವಾಗಿರುವ ಪ್ರದೇಶಗಳಿಗಿಂತ ನಮ್ಮ ತಾಲೂಕು ಭಿನ್ನವಾಗಿದ್ದು ಅತೀ ಹೆಚ್ಚು ವ್ಯಾಪಾರ-ವಹಿವಾಟಿನ ಜತೆಗೆ ಸರ್ಕಾರಕ್ಕೆ ಆದಾಯ ಕೊಡುವಲ್ಲಿ ಮುಂಚೂಣಿಯಲ್ಲಿದೆ. ಸಿಎಸ್‌ಎಫ್‌ನಲ್ಲಿ ಹೊಂದಿರುವ 7 ಸಾವಿರ ಎಕರೆ ಭೂಮಿಯಲ್ಲಿ ಕೃಷಿ ಕಾಲೇಜ್, ಮೆಡಿಕಲ್ ಕಾಲೇಜ್ ಸ್ಥಾಪನೆಗೂ ಅವಕಾಶ ಇದೆ ಎಂದರು.

    ಕೇವಲ ಒಂದೆರಡು ದಿನಕ್ಕೆ ಹೋರಾಟ ಸ್ತಬ್ಧಗೊಳ್ಳಬಾರದು. ಜಿಲ್ಲಾ ಕೇಂದ್ರ ಆಗುವವರೆಗೆ ಎಲ್ಲರೂ ಒಗ್ಗೂಡಿ ಪ್ರಯತ್ನ ಮಾಡಬೇಕಿದೆ. ಬೀದಿಗಿಳಿದು ಹೋರಾಟ ನಡೆಸುವ ಮೂಲಕ ಸರ್ಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡುವುದು, ಹೋರಾಟದ ಶಕ್ತಿಕೇಂದ್ರವಾಗಿ ತಾಲೂಕನ್ನು ರೂಪಿಸುವ ಅಗತ್ಯ ಇದೆ ಎಂದರು.

    ಹಿರಿಯ ಪತ್ರಕರ್ತ ಡಿ.ಎಚ್.ಕಂಬಳಿ ಮಾತನಾಡಿ, ದೇಶದ ಅತೀ ದೊಡ್ಡ ಭತ್ತ ಕಣಜ ನಮ್ಮ ತಾಲೂಕು ಆಗಿದೆ. ಕಲ್ಯಾಣ ಕರ್ನಾಟಕದಲ್ಲಿ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಜಿಲ್ಲಾ ಕೇಂದ್ರವಾಗುವುದರಿಂದ ವೃತ್ತಿಪರ ಕೋರ್ಸ್, ಮೆಡಿಕಲ್ ಕಾಲೇಜು, ಕೃಷಿ ಕಾಲೇಜು, ಕೈಗಾರಿಕೆಗಳಿಗೆ ಉತ್ತೇಜನ ಸಿಗಲಿದೆ ಎಂದರು. ಪ್ರಗತಿಪರ ಚಿಂತಕ ಟಿ.ಹುಸೇನ್‌ಸಾಬ್ ಮಾತನಾಡಿ, ಈಗಾಗಲೇ ಎರಡು ರಾಷ್ಟ್ರೀಯ ಹೆದ್ದಾರಿ, ಮೂರು ರಾಜ್ಯ ರಸ್ತೆ ಹೊಂದಿದ ತಾಲೂಕು ಇದಾಗಿದೆ. ಜಿಲ್ಲಾ ಕೇಂದ್ರ ಮಾಡಲು ರಾಜಕೀಯ ಇಚ್ಛಾಶಕ್ತಿ ಹೆಚ್ಚಬೇಕಿದೆ ಎಂದರು. ಹಿರಿಯರಾದ ಡಾ.ವೈಜನಾಥ ಸಗರಮಠ ಮಾತನಾಡಿ, ಸಿಂಧನೂರು ತಾಲೂಕನ್ನು ಯಾತಕ್ಕಾಗಿ ಜಿಲ್ಲೆ ಮಾಡಿಸಬೇಕು ಎಂಬುದಕ್ಕೆ ಉದಾಹರಣೆಗಳು ಸಾಕಷ್ಟಿವೆ. ಯಾದಗಿರಿ, ಹೊಸಪೇಟೆ ಜಿಲ್ಲೆಗಳಿಗಿಂತಲೂ ಹೆಚ್ಚಿನ ಅರ್ಹತೆ ಪಡೆದಿರುವುದು ಈ ತಾಲೂಕು ಎಂದರು.

    ಸಾಹಿತಿಗಳಾದ ಪಂಪಯ್ಯಸ್ವಾಮಿ ಸಾಲಿಮಠ, ವೆಂಕನಗೌಡ ವಟಗಲ್ ಮಾತನಾಡಿದರು. ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಖಾಜಾಸಾಬ್ ರೌಡಕುಂದ, ಶ್ರೀಶಕ್ತಿ ರಕ್ತ ಭಂಡಾರ ಸೋಮನಗೌಡ ಬಾದರ್ಲಿ, ಯುವ ಮುಖಂಡರಾದ ಶಿವಕುಮಾರ ಜವಳಿ, ವೆಂಕಟೇಶ ರಾಗಲಪರ್ವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts