More

    ಬಿಜೆಪಿ ಸುನಾಮಿ ಅಲೆಗೆ ಕಾಂಗ್ರೆಸ್ ತತ್ತರ; ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಬಣ್ಣನೆ

    ವಿರುಪಾಪುರದಲ್ಲಿ ಭರ್ಜರಿ ಪ್ರಚಾರ ಸಭೆ


    ಸಿಂಧನೂರು: ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಪರವಾದ ಸುನಾಮಿ ಅಲೆಗೆ ಕಾಂಗ್ರೆಸ್ ತತ್ತರಗೊಂಡಿದ್ದು ಪ್ರಚಂಡ ಬಹುಮತದಿಂದ ಪ್ರತಾಪಗೌಡ ಪಾಟೀಲ್ ಗೆಲುವು ಸಾಧಿಸುತ್ತಾರೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.

    ತಾಲೂಕಿನ ವಿರುಪಾಪುರ, ಅರಳಹಳ್ಳಿ ಹಾಗೂ ಗುಂಜಳ್ಳಿ ಗ್ರಾಮದಲ್ಲಿ ಬುಧವಾರ ಪ್ರತಾಪಗೌಡ ಪಾಟೀಲ್ ಪರ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ವಿವಿಧ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿರುವೆ. ಮಸ್ಕಿಯಲ್ಲಿ ಐತಿಹಾಸಿಕ ಗೆಲವು ನೀಡಬೇಕೆಂದು ಬೇಡಿಕೊಂಡಿರುವೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಪ್ರತಾಪಗೌಡ ಪಾಟೀಲರೇ ಕಾರಣ. ಅದಕ್ಕಾಗಿಯೇ ಮೊದಲ ಹೆಜ್ಜೆ ಮುಂದಿಟ್ಟು ರಾಜೀನಾಮೆ ನೀಡಿದ್ದರು. ಪ್ರತಾಪಗೌಡರು ಹಣಕ್ಕಾಗಿ ಮಾರಾಟವಾಗಿಲ್ಲ. ಸುಳ್ಳು ಹೇಳಿ ಮತದಾರರನ್ನು ದಾರಿ ತಪ್ಪಿಸುವ ತಂತ್ರ ಮಾಡಲಾಗುತ್ತಿದೆ ಎಂದರು.

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ ಬಂದಿದ್ದರೂ ಸಹ ಕಾಂಗ್ರೆಸ್ ಜೆಡಿಎಸ್ ಅಪಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದರು. ಆಡಳಿತ ಪಕ್ಷದಲ್ಲಿದ್ದ 17 ಜನ ಶಾಸಕರು ರಾಜೀನಾಮೆ ನೀಡುವ ಮೂಲಕ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಆದ್ದರಿಂದ ಪ್ರತಾಪಗೌಡ ಪಾಟೀಲ್ ಅವರನ್ನು ಐತಿಹಾಸಿಕವಾಗಿ ಗೆಲ್ಲಿಸಬೇಕು. ರೈತರು, ಪರಿಶಿಷ್ಟ ಜಾತಿ ಮತ್ತು ಪಂಗಡ ಸೇರಿ ಎಲ್ಲ ವರ್ಗದ ಅಭಿವೃದ್ಧಿಗೆ ಶ್ರಮಿಸುವ ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಬೆಂಬಲಿಸಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

    ಸಚಿವ ಭೈರತಿ ಬಸವರಾಜ ಮಾತನಾಡಿ, ತ್ಯಾಗ ಮಾಡಿದವರಿಗೆ ಮತಗಳ ಮೂಲಕ ಬೆಲೆ ಕೊಡಬೇಕು. ಸರಳ, ಸಜ್ಜನಿಕೆಯ ಪ್ರತಾಪಗೌಡ ಪಾಟೀಲರು ದುಡ್ಡಿಗೆ ಮತದಾರರನ್ನು ಮಾರಿಕೊಂಡಿದ್ದಾರೆಂದು ಹೇಳುತ್ತಿರುವ ನಾಯಕರಿಗೆ ನೈತಿಕ ಹಕ್ಕಿಲ್ಲ. ಸ್ವಾಭಿಮಾನ, ಅಭಿವೃದ್ಧಿಗೆ ಹಿನ್ನಡೆಯಾದಾಗ ಪಕ್ಷ ಬದಲಾಯಿಸುವುದು ಸಹಜ. ರಾಜ್ಯದ ಮತ್ತು ಮಸ್ಕಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲಿಸಬೇಕು. ಪ್ರತಾಪಗೌಡ ಪಾಟೀಲ್‌ರಿಗೆ ಮತ ಹಾಕಿ ಗೆಲ್ಲಿಸಬೇಕು ಎಂದರು.

    ಸುರಪುರ ಶಾಸಕ ರಾಜುಗೌಡ ಮಾತನಾಡಿ, ಮಾಜಿ ಸಿಎಂ ಸಿದ್ರಾಮಯ್ಯ, ಡಿ.ಕೆ.ಶಿವಕುಮಾರ ಅವರಿಗೆ ವಿಜಯೇಂದ್ರ ಅವರ ಮೇಲೆ ಲವ್ ಆಗಿದ್ದಂತೆ ಕಾಣುತ್ತಿದೆ. ಆದ್ದರಿಂದ ಪ್ರಚಾರಕ್ಕೆ ಹೋದಲೆಲ್ಲ ವಿಜಯೇಂದ್ರ ಅವರನ್ನು ನೆನಸಿಕೊಳ್ಳುತ್ತಿದ್ದಾರೆ. ವಿಜಯೇಂದ್ರ ಅವರು ಕನಸಿನಲ್ಲಿ ಬರಬಾರದು ಎಂದರೆ ಕಾಂಗ್ರೆಸ್‌ನವರು ಮಂತ್ರಿಸಿದ ಯಂತ್ರ ಕಟ್ಟಿಸಿಕೊಳ್ಳಬೇಕು ಎಂದರು.

    ಜಿಪಂ ಸದಸ್ಯ ಹಾಗೂ ನಯೋಪ್ರಾ ಅಧ್ಯಕ್ಷ ಅಮರೇಗೌಡ ವಿರುಪಾಪುರ ಪ್ರಾಸ್ತಾವಿಕವಾಗಿ ಮಾತನಾಡಿ, ತುಂಗಭದ್ರಾ ಜಲಾಶಯ ಈ ಭಾಗದ ಜೀವನಾಡಿಯಾಗಿದ್ದು ಎರಡು ಬೆಳೆ ಸಂಪೂರ್ಣ ಬೆಳೆಯಲು ನವಲಿ ಸಮಾನಾಂತರ ಜಲಾಶಯ ಅನುಷ್ಠಾನಕ್ಕೆ ಸಚಿವರು, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರವರು ಮನಸ್ಸು ಮಾಡಬೇಕೆಂದರು. ಕೊಪ್ಪಳ ಸಂಸದ ಸಂಗಣ್ಣ ಕರಡಿ, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿಕುಮಾರ, ಮುಖಂಡರಾದ ಪ್ರಸನ್ನ ಪಾಟೀಲ್, ವಿಶ್ವನಾಥ ತೋರಣದಿನ್ನಿ, ಶಿವುಪುತ್ರಪ್ಪ ಅರಳಹಳ್ಳಿ ಇದ್ದರು.

    ಕುಂಭ-ಕಳಸ ಮೆರವಣಿಗೆ: ವಿರುಪಾಪುರ ಗ್ರಾಮಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಆಮಿಸುತ್ತಿದ್ದಂತೆ ಗ್ರಾಮದ ಹಳ್ಳದಿಂದ ವೇದಿಕೆಯವರೆಗೆ ಮಹಿಳೆಯರು ಕುಂಭ-ಕಳಸದೊಂದಿಗೆ ಅದ್ದೂರಿ ಸ್ವಾಗತ ಕೋರಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಭಾಗವಹಿಸಿದ್ದನ್ನು ಕಂಡ ವಿಜಯೇಂದ್ರ ಮಸ್ಕಿ ಉಪಚುನಾವಣೆಯ ಗೆಲುವಿನ ಮೂನ್ಸೂಚನೆ ಎಂದು ಬಣ್ಣಿಸಿದರು.

    ಬಿಜೆಪಿ ಸುನಾಮಿ ಅಲೆಗೆ ಕಾಂಗ್ರೆಸ್ ತತ್ತರ; ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಬಣ್ಣನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts