More

    ಅಧಿಕಾರ ಅಸ್ತಿತ್ವಕ್ಕೆ ಸರ್ವಾಧಿಕಾರಿ ಧೋರಣೆ ಸಲ್ಲ

    ಸಿಂದಗಿ: ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ತಮ್ಮ ಅಧಿಕಾರದ ದುರಾಸೆಗೆ ಹಾಗೂ ವಿರೋಧ ಪಕ್ಷದವರ ಮೇಲೆ ಹಿಡಿತ ಸಾಧಿಸಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿ ಇತರ ನಾಯಕರ ಮೇಲೆ ಇಡಿ ಹಾಗೂ ಐಟಿ, ಸಿಬಿಐನಂತಹ ಕೇಂದ್ರಗಳನ್ನು ದುರ್ಬಳಕೆ ಮಾಡಿಕೊಂಡು ಛೂ ಬಿಡುತ್ತಿದೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ಕೊಳ್ಳೂರ ಆರೋಪಿಸಿದರು.ಪಟ್ಟಣದ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಮ್ಮ ಹಿರಿಯ ನಾಯಕರ ಮೇಲೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹೆಸರಲ್ಲಿ ರಾಜಕೀಯ ಕಿರುಕುಳ ನೀಡಿದ ಬಿಜೆಪಿ ಸರ್ಕಾರದ ಹುನ್ನಾರ ಖಂಡನೀಯ ಎಂದರು.

    ತನ್ನ ಅಧಿಕಾರದ ಅಸ್ತಿತ್ವಕ್ಕಾಗಿ ಇಂತಹ ಅಸ್ತ್ರಗಳನ್ನು ಬಳಸುತ್ತ ಬ್ರಿಟಿಷರಂತೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಕಾಂಗ್ರೆಸ್ ನಾಯಕರ ಮೇಲೆ ಮಾಡಲಾದ ಆರೋಪ ಹಾಗೂ ನಾಯಕರ ಬೆಂಬಲಾರ್ಥವಾಗಿ ಜು.22ರಂದು ವಿಜಯಪುರದಲ್ಲಿ ಕಾರ್ಯಕರ್ತರ ಹಾಗೂ ಮುಖಂಡರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

    ಜಿಲ್ಲೆಯ ರೈತರಿಗೆ ನೀರಾವರಿಗಾಗಿ ಕಾಂಗ್ರೆಸ್ ಸರ್ಕಾರಗಳು 50 ಸಾವಿರ ಕೋಟಿಗೂ ಹೆಚ್ಚು ಅನುದಾನ ಒದಗಿಸಿದ್ದವು. ಕ್ಷೇತ್ರದ ನೀರಾವರಿಗೆ ಆದ್ಯತೆ ನೀಡಲು ಕೆಂಭಾವಿಯಲ್ಲಿನ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಪಂಪ್‌ಸೆಟ್‌ಗಳನ್ನು ಒದಗಿಸಲು 65 ಕೋಟಿ ರೂ.ನೀಡಲಾಗಿತ್ತು. ಆದರೆ, ಅಲ್ಲಿನ 8 ಮೋಟರ್ ಪಂಪ್‌ಗಳ ಬದಲಾವಣೆಗೆ ಮುಂದಾಗದಿರುವ ಸರ್ಕಾರ, ಜಿಲ್ಲಾ ಉಸ್ತುವಾರಿ ಮತ್ತು ಕ್ಷೇತ್ರದ ಶಾಸಕರುಗಳು ಅವುಗಳ ದುರಸ್ತಿಗೂ ಮುಂದಾಗಿಲ್ಲ. ಜು.31ರೊಳಗಾಗಿ ಜಾಕ್‌ವೆಲ್‌ನಿಂದ ನೀರು ಹರಿಸದಿದ್ದಲ್ಲಿ ಸಿಎಂ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿ ಮನೆ ಮುತ್ತಿಗೆ ಹಾಕುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಮಾಜಿ ಸಿಎಂ ಸಿದ್ರಾಮಯ್ಯ ಅವರ 75ನೇ ವರ್ಷದ ಅಮೃತ ಮಹೋತ್ಸವ ನಿಮಿತ್ತ ಇಲ್ಲಿನ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಜು.25 ರಂದು ಪೂರ್ವಭಾವಿ ಸಭೆ ಕರೆಯಲಾಗಿದ್ದು, ಎಲ್ಲರೂ ಭಾಗವಹಿಸಬೇಕೆಂದು ಮನವಿ ಮಾಡಿದರು.

    ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿದರು. ಮುಖಂಡರಾದ ಮಲ್ಲಣ್ಣ ಸಾಲಿ, ಮುಸ್ತಾಕ್ ಮುಲ್ಲಾ, ಎಂ.ಎ. ಖತೀಬ, ಆಲಮೇಲ ಬ್ಲಾಕ್ ಅಧ್ಯಕ್ಷ ಅಯ್ಯುಬ್ ದೇವರಮನಿ, ಶಾರದಾ ಬಟಗೇರಿ, ಸಿದ್ದಣ್ಣ ಹಿರೇಕುರುಬರ, ಮಹಿಬೂಬ ತಾಂಬೋಳಿ, ಹಣಮಂತ ಸುಣಗಾರ, ಬಸವರಾಜ ಯರನಾಳ, ಗೊಲ್ಲಾಳ ಬಂಕಲಗಿ, ಇರ್ಫಾನ್ ಆಳಂದ, ಮುದಕಪ್ಪ, ಲಕ್ಷ್ಮಣ, ಯಲ್ಲಪ್ಪ ಕೆರಕಿ, ಅಮಿತ್ ಚವಾಣ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts