More

    ಒಗ್ಗಟ್ಟಿನಲ್ಲಿ ಒಡಕಿಲ್ಲವಾದರೆ ಅಂಗೈ(ಕೈ)ಯಲ್ಲೇ ಅಧಿಕಾರ

    ಮಲ್ಲಿಕಾರ್ಜುನ ಕೆಂಭಾವಿ ಸಿಂದಗಿ
    ಪಟ್ಟಣದ ಪುರಸಭೆಗೆ ಚುನಾವಣೆ ನಡೆದು ಲಿತಾಂಶ ಘೋಷಿಸಿದ ದಿನವೇ ಇಬ್ಬರು (ಮೂಲ ಕಾಂಗ್ರೆಸ್ಸಿಗರು) ಪಕ್ಷೇತರರು ಬೆಂಬಲ ನೀಡಿದ್ದ ಹಿನ್ನ್ನೆಲೆ ಕಾಂಗ್ರೆಸ್ ಅಧಿಕಾರ ಗದ್ದುಗೆ ಏರುವುದು ಸ್ಪಷ್ಟವಾಗಿದೆ.
    ಪುರಸಭೆಯ 23 ಸದಸ್ಯರ ಬಲದಲ್ಲಿ ಜೆಡಿಎಸ್ ಪಕ್ಷದ 6 ಸದಸ್ಯರು, ಬಿಜೆಪಿಯ 3 ಹಾಗೂ ಪಕ್ಷೇತರರಾಗಿ 3 ಸದಸ್ಯರು ವಿಜಯ ಸಾಧಿಸಿದರೆ, ಕಾಂಗ್ರೆಸ್ ತನ್ನ 11 ಸದಸ್ಯರೊಂದಿಗೆ ಬಹುಮತಕ್ಕೆ ಬೇಕಿರುವ ಒಂದು ಸ್ಥಾನದಿಂದ ವಂಚಿತವಾಗಿತ್ತು. ಆದರೆ, ಚುನಾವಣೆಯಲ್ಲಿ ಕೈ ಟಿಕೆಟ್ ವಂಚಿತರಾಗಿ ಸ್ವತಂತ್ರ ಸ್ಪರ್ಧೆ ಮಾಡಿದ್ದ ಇಬ್ಬರು ಸದಸ್ಯರು ಬೇಷರತ್ತಾಗಿ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರಿಂದ ಅದರ ಬಲ ಬಹುಮತಕ್ಕೂ ಒಂದು ಸ್ಥಾನ ಅಧಿಕವಾಗಿದೆ.
    ಒಟ್ಟು 13 ಸದಸ್ಯರ ಪೂರ್ಣ ಬೆಂಬಲದೊಂದಿಗೆ ಅಧಿಕಾರಕ್ಕೇರಲು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಪ್ರಕಟಣೆಗಾಗಿ ಕಾದು ಕುಳಿತಿತ್ತು. ಇತ್ತೀಚೆಗೆ ಮೀಸಲಾತಿ ಪಟ್ಟಿ ಬಿಡುಗಡೆಯಾಗಿದ್ದು, ಸಿಂದಗಿ ಪುರಸಭೆ ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಸ್ಥಾನ ಎರಡೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. 23 ಸದಸ್ಯರಲ್ಲಿ ಹತ್ತಕ್ಕೂ ಹೆಚ್ಚು ಸದಸ್ಯರಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗುವ ಕನಸು ಗರಿಗೆದರಿದೆ.
    ಮೀಸಲಾತಿ ಪಟ್ಟಿ ಹೊರಬಿದ್ದ ನಂತರ ಸ್ಥಳೀಯ ಕಾಂಗ್ರೆಸ್ ಮುಖಂಡರು ಸದಸ್ಯರ ಸಭೆ ಕರೆದು ಸ್ಪರ್ಧೆಗಿಳಿಯುವವರ ಅಭಿಪ್ರಾಯಗಳನ್ನು ಪಡೆದಿದ್ದು, 1ನೇ ವಾರ್ಡಿನ ಸದಸ್ಯೆ ಪ್ರತಿಭಾ ಕಲ್ಲೂರ, 6ನೇ ವಾರ್ಡಿನ ಹಣಮಂತ ಸುಣಗಾರ, 14ನೇ ವಾರ್ಡಿನ ಶಾಂತವೀರ ಬಿರಾದಾರ, 21ನೇ ವಾರ್ಡಿನ ಗೊಲ್ಲಾಳಪ್ಪ ಬಂಕಲಗಿ ಮತ್ತಿತರರು ನಮಗೆ ಅಧ್ಯಕ್ಷಗಿರಿ ಕೊಡುವಂತೆ ಬೇಡಿಕೆ ಸಲ್ಲಿಸಿದ್ದಾರೆ.
    ಜೆಡಿಎಸ್ ತನ್ನ 6 ಸದಸ್ಯರ ಬಲದೊಂದಿಗೆ ಪೂರ್ಣ ಬಹುಮತಕ್ಕೆ ಬೇಕಿರುವ ಸಂಖ್ಯಾಬಲದತ್ತ ತಂತ್ರಗಳನ್ನು ಹೆಣೆಯುತ್ತಿದ್ದು, ಶಾಸಕ ಎಂ.ಸಿ. ಮನಗೂಳಿ ಅವರ ಪುತ್ರ 13ನೇ ವಾರ್ಡಿನ ಸದಸ್ಯ ಡಾ.ಶಾಂತವೀರ ಮನಗೂಳಿ ಅವರು ಪುರಸಭೆ ಕುರ್ಚಿ ಮೇಲೆ ಕಣ್ಣು ನೆಟ್ಟಿದ್ದಾರೆ. ಬಿಜೆಪಿಯ ಮೂರು, ಕಾಂಗ್ರೆಸ್‌ನ ನಾಲ್ವರು ಸದಸ್ಯರು ಮತ್ತು ಓರ್ವ ಪಕ್ಷೇತರ ಸದಸ್ಯನ ಬೆಂಬಲ ಪಡೆಯುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
    ಕಳೆದೆರಡು ಅವಧಿಯಿಂದಲೂ ಮೂರು ಸ್ಥಾನಗಳಿಂದ ಮುಂದೆ ಸಾಗದ ಬಿಜೆಪಿ, ಯಾರಾದರೂ ಬೆಂಬಲಕ್ಕಾಗಿ ಕೈಚಾಚಿದರೆ ನೋಡೋಣ ಎನ್ನುವ ಮೂಲಕ ಉಪಾಧ್ಯಕ್ಷ ಸ್ಥಾನವನ್ನಾದರೂ ಪಡೆಯುವ ತಂತ್ರ ರೂಪಿಸಿದೆ.
    ಕಾಂಗ್ರೆಸ್ ಗದ್ದುಗೆ ಏರಲು ಮನಸ್ಸು ಮಾಡಿದರೆ ಎಂದಿಗೂ ಬಿಟ್ಟಿಲ್ಲ. ಈ ಬಾರಿ ಲಿಂಗಾಯತರ ಕೈಗೆ ಅಧಿಕಾರ ಸಿಗಲಿ ಎಂಬ ಆಶಯವೂ ಚಿಗುರೊಡೆದಿದೆ. ಈ ದಿಸೆಯಲ್ಲಿ ಮಂಗಳವಾರ ನಡೆದ ಬೆಳವಣಿಗೆಯಲ್ಲಿ ಜಿಲ್ಲೆಯ ನಾಯಕರ ಬಳಿ ನಿಯೋಗವೊಂದು ತೆರಳಿದೆ ಎನ್ನಲಾಗಿದೆ.
    ಅ.22ಕ್ಕೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಡೆಯಲಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಗದ್ದುಗೆ ಹಿಡಿಯಲು ಎಲ್ಲ ರೀತಿಯ ದಾಳಗಳನ್ನು ಉರುಳಿಸುತ್ತಿವೆ. ಬಲವಿಲ್ಲದವರ ಬಲಕ್ಕೆ ನಿಲ್ಲಲು, ಅವಕಾಶ ಸಿಕ್ಕಾಗಲೆಲ್ಲ ಅಧಿಕಾರ ಬಾಚಿಕೊಳ್ಳಲು ಕೆಲವರು ಲಕ್ಷ ಲಕ್ಷ ಮೊತ್ತದ ಹಣ ಸುರುವಿ ನಿಂತಿದ್ದಾರೆ. ಆದರೆ ಕೈನಾಯಕರ ಸ್ವಜಾತಿ, ಸ್ವಹಿತಾಸಕ್ತಿಯ ಜತೆಗೆ ಈಗಿರುವ ಒಗ್ಗಟ್ಟಿನಲ್ಲಿ ಒಡಕಿಲ್ಲವಾದರೆ ಅಧಿಕಾರದ ಅದೃಷ್ಟ ಅಂಗೈ(ಕೈ)ಯಲ್ಲಿಯೇ ಅರಳಲಿದೆ.

    ಗೆದ್ದವರೆಲ್ಲರೂ ಕುರ್ಚಿಗಾಗಿ ಓಡಾಡುತ್ತಲೇ ಇದ್ದಾರೆ. ಯಾವ ಸದಸ್ಯರೂ ಯಾರ ಹಿಡಿತದಲ್ಲಿಯೂ ಇಲ್ಲ. ಸದಸ್ಯರು ಅಧ್ಯಕ್ಷಗಿರಿಗೆ ಯಾರನ್ನು ಬೆಂಬಲಿಸುತ್ತಾರೋ ಅವರು ಅಧ್ಯಕ್ಷರಾಗುತ್ತಾರೆ. ನಮ್ಮಿಂದ ಯಾವ ತಂತ್ರವೂ ಇಲ್ಲ. ಏನಾಗುತ್ತೋ ಕಾದು ನೋಡೋಣ.
    ಎಂ.ಸಿ. ಮನಗೂಳಿ, ಶಾಸಕ, ಸಿಂದಗಿ.

    ನಮ್ಮತ್ತ ಮುಖ ಮಾಡಿ ಕೈ ಚಾಚಿದವರ ಕೈ ಕುಲುಕುತ್ತೇವೆ. ನಮ್ಮ ಬೇಡಿಕೆಯಾದ 12ನೇ ವಾರ್ಡಿನ ಹಿರಿಯ ಸದಸ್ಯ ಮಹಾಂತಗೌಡ ಬಿರಾದಾರ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಬೇಕು. ಯಾರು ಮುಂದೆ ಬರುತ್ತಾರೋ ಅವರಿಗೆ ನಮ್ಮ ಪಕ್ಷದ ಮೂವರು ಸದಸ್ಯರ ಬೆಂಬಲ ನೀಡುತ್ತೇವೆ.
    ರಮೇಶ ಭೂಸನೂರ, ಮಾಜಿ ಶಾಸಕ

    ನಮ್ಮಲ್ಲಿ ಒಗ್ಗಟ್ಟಿದೆ. ನಮಗೆ 11 ಜನ ಸದಸ್ಯರ ಸಂಪೂರ್ಣ ಬಲವಿದ್ದು, ಇನ್ನಿಬ್ಬರು ಪಕ್ಷೇತರರು ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ಸಿಗೆ ಒಟ್ಟು 13 ಸದಸ್ಯರ ಬಲವಿದೆ. ಅಧಿಕಾರ ಬಿಟ್ಟು ಕೊಡುವುದು ಸಾಧ್ಯವಿಲ್ಲ. ನಮ್ಮ ಸದಸ್ಯರಲ್ಲಿ ಗುಂಪುಗಾರಿಕೆ ಇದೆ ಎನ್ನುವುದು ಶುದ್ಧ ಸುಳ್ಳು. ಪುರಸಭೆ ಅಧಿಕಾರದ ಚುಕ್ಕಾಣಿ ಎಂದಿಗೂ ಕಾಂಗ್ರೆಸ್ ಕೈಯಲ್ಲೇ ಇರುತ್ತದೆ.
    ಎಸ್.ಟಿ. ಸುಣಗಾರ, ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts