More

    ಶೀಘ್ರದಲ್ಲಿ ಆಕಾಂಕ್ಷಿಯೊಬ್ಬರಿಗೆ ಟಿಕೆಟ್ ಫೈನಲ್

    ಸಿಂದಗಿ: ಇಲ್ಲಿನ ಉಪಚುನಾವಣೆಯ ಅಭ್ಯರ್ಥಿ ಆಯ್ಕೆಯನ್ನು ಶೀಘ್ರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಾಡಲಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

    ಕಾಂಗ್ರೆಸ್ ಸಮಾವೇಶದ ಪೂರ್ವ ಸಿದ್ಧತೆಗಳ ವೀಕ್ಷಣೆಗೆ ಆಗಮಿಸಿದ ವೇಳೆ ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಆರು ಜನರಿದ್ದಾರೆ. ಗೆಲುವು ಸಾಧಿಸುವ ಆಕಾಂಕ್ಷಿ ಕುರಿತು ಈಗಾಗಲೇ ಎಲ್ಲ ಹಂತದಲ್ಲಿ ಚರ್ಚೆ ಮಾಡಲಾಗಿದೆ. ಹೈಕಮಾಂಡ್ ಅಭ್ಯರ್ಥಿ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದರು.

    ಮಾಜಿ ಮಂತ್ರಿ ಎಂ.ಸಿ.ಮನಗೂಳಿ ಪುತ್ರ ಬೇಷರತ್ತಾಗಿ ಕಾಂಗ್ರೆಸ್ ಸೇರಿರುವುದು ಕ್ಷೇತ್ರದಲ್ಲಿ ಆನೆಬಲ ಬಂದಂತಾಗಿದ್ದು, ಎಲ್ಲರೂ ಪಕ್ಷಾಭಿಮಾನ ಮೆರೆದು ಕಾಂಗ್ರೆಸ್ ಪಕ್ಷದ ಗೆಲುವಿಗೆ ನೆರವಾಗೋಣ. ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಿಜೆಪಿಯೇ ಪ್ರತಿಸ್ಪರ್ಧಿ ಎಂಬುದನ್ನು ಗಮನದಲ್ಲಿಟ್ಟುಕೊಂಡು ಒಗ್ಗಟ್ಟಾಗಿ ಉಪಚುನಾವಣೆ ಎದುರಿಸಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪಣತೊಡುತ್ತೇವೆ ಎಂದರು.

    ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ ಭ್ರಷ್ಟ ಬಿಜೆಪಿಗೆ ಯಾವುದೇ ಗೊತ್ತು ಗುರಿ ಇಲ್ಲ. ರಾಜ್ಯದಲ್ಲಿರುವ ದುರಾಡಳಿತ ಸರ್ಕಾರವನ್ನು ಉರುಳಿಸಲು ಸಿಂದಗಿ ಮತಕ್ಷೇತ್ರದ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರುವ ಸಂದೇಶವನ್ನು ರವಾನಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದರು.

    ಮಾ.19ರಂದು ಪಟ್ಟಣದ ಬಸ್ ನಿಲ್ದಾಣ ಎದುರಿನ ಕನ್ನಡ ಶಾಲೆ ಆವರಣದಲ್ಲಿ ಸಂಜೆ 4 ಗಂಟೆಗೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೆ ಅಂದಾಜು 50 ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು, ಅಭಿಮಾನಿಗಳು ಸೇರುವ ನಿರೀಕ್ಷೆಯಿದ್ದು, ಕ್ಷೇತ್ರದ ಎಲ್ಲರೂ ಒಗ್ಗಟ್ಟಾಗಿ ಸಮಾವೇಶವನ್ನು ಯಶಸ್ವಿಗೊಳಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.

    ಜಿಲ್ಲಾಧ್ಯಕ್ಷ ರಾಜು ಆಲಗೂರ, ಅಪ್ಪಾಜಿ ನಾಡಗೌಡ, ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ, ಸುಭಾಷ ಛಾಯಾಗೋಳ, ಮಹಿಬೂಬ ತಾಂಬೋಳಿ, ಶರಣಪ್ಪ ಸುಣಗಾರ, ಶರಣಪ್ಪ ವಾರದ, ಅಶೋಕ ಮನಗೂಳಿ, ತಾಲೂಕು ಬ್ಲಾಕ್ ಅಧ್ಯಕ್ಷ ವಿಠ್ಠಲ ಕೊಳ್ಳೂರ, ಮತಕ್ಷೇತ್ರದ ಕಾಂಗ್ರೆಸ್ ಮುಖಂಡರು ಇದ್ದರು.

    ಜಿಲ್ಲೆಯಲ್ಲಿ ದಳದಿಂದ ಬೇಸತ್ತು ಅನೇಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ವಿಶೇಷ ತೀರ್ಮಾನವನ್ನು ಜನತೆ ತೆಗೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ.
    ಶಿವಾನಂದ ಪಾಟೀಲ, ಬಸವನಬಾಗೇವಾಡಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts