More

    ಸಿಮ್ ಕಾರ್ಡ್ ತಂದಿಟ್ಟ ಪೀಕಲಾಟ!

    ಐನಾಪುರ: ದೇಶದಲ್ಲಿ ಕೋಲಾಹಲ ಎಬ್ಬಿಸಿರುವ ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಜಮಾತ್‌ನಲ್ಲಿ ಸಾವಿರಾರು ಜನರು ಭಾಗಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐನಾಪುರ ಪಟ್ಟಣದ ಯುವಕನೊಬ್ಬನ ಸಿಮ್ ಕಾರ್ಡ್ ದೆಹಲಿಯಲ್ಲಿ ಪತ್ತೆಯಾಗಿ ಅವಾಂತರಕ್ಕೆ ಕಾರಣವಾಗಿದೆ.

    ಪಟ್ಟಣದ ನಿವಾಸಿಯಾದ ಯುವಕನ ಸಿಮ್ ಕಾರ್ಡ್ ದೆಹಲಿಯಲ್ಲಿರುವ ಓರ್ವನ ಬಳಿ ಪತ್ತೆಯಾಗಿದೆ. ಐನಾಪುರ ಪಟ್ಟಣದ ಯುವಕ ಕೂಡ ಜಮಾತ್‌ನಲ್ಲಿ ಭಾಗಿಯಾಗಿದ್ದ ಎಂಬ ಶಂಕೆಯಿಂದ ಸಿಪಿಐ ಎಂ.ಆರ್. ಪವಾರ ನೇತೃತ್ವದ ತಂಡ ವಿಚಾರಣೆ ನಡೆಸಿದೆ.

    ಘಟನೆಯ ವಿವರ: ಐನಾಪುರದ ಇಬ್ಬರು ಯುವಕರು ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಮದರಸಾದಲ್ಲಿ ಅಭ್ಯಾಸ ಮಾಡುತ್ತಿದ್ದರು. ಆ ಪೈಕಿ ಓರ್ವ ಯುವಕ ತನ್ನ ಸಂಬಂಧಿಯೇ ಆದ ಮತ್ತೊಬ್ಬನಿಗೆ ತನ್ನ ಸಿಮ್ ಕಾರ್ಡ್ ನೀಡಿದ್ದ. ಸಿಮ್ ಪಡೆದ ಯುವಕ ನಿಪ್ಪಾಣಿಯ ಮದರಸಾ ಕೇಂದ್ರಕ್ಕೆ ಹೆಚ್ಚಿನ ಅಭ್ಯಾಸಕ್ಕೆ ತೆರಳಿದ್ದ. ಅತ್ತ ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದ ಯುವಕನೊಂದಿಗೆ ಗೆಳತನವಾಗಿದೆ.

    ಆಗ ತನ್ನ ಸಂಬಂಧಿ ಕೊಟ್ಟಿದ್ದ ಸಿಮ್ ಕಾರ್ಡ್ ಅನ್ನು ಆತ ರಬಕವಿಯ ಯುವಕನಿಗೆ ನೀಡಿದ್ದಾನೆ. ಸಿಮ್ ಕಾರ್ಡ್ ಪಡೆದಿದ್ದ ರಬಕವಿ ಯುವಕ ದೆಹಲಿಯಲ್ಲಿ ನಡೆದಿದ್ದ ಜಮಾತ್‌ನಲ್ಲಿ ಭಾಗಿಯಾಗಿದ್ದಾನೆ. ಆ ಯುವಕನನ್ನು ವಿಚಾರಿಸಿದ ಪೊಲೀಸರು ಈಗ ಸಿಮ್ ಕಾರ್ಡ್‌ನ ನಿಜವಾದ ವಾರಸುದಾರನಾದ ಯುವಕನ ವಿಚಾರಣೆ ನಡೆಸಿದ್ದಾರೆ.

    ಐನಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಎಸ್.ಎಸ್. ಕೋಳಿ, ಸಿಪಿಐ ಡಿ.ಜಿ.ಪವಾರ, ಪಪಂ ಮುಖ್ಯಾಧಿಕಾರಿ ಎ.ಆರ್. ಕುಲಕರ್ಣಿ, ಪಿಎಸ್‌ಐ ಡಿ.ಎಸ್. ಉಳ್ಳಾಗಡ್ಡಿ, ಗ್ರಾಮಲೆಕ್ಕಾಧಿಕಾರಿ ಪ್ರಕಾಶ ಪುಟಾಣಿ ಅವರು, ಯುವಕನ ವಿಚಾರಣೆ ನಡೆಸಿದರು. ಸಿಮ್ ಪಡೆದಿದ್ದ ತನ್ನ ಸಂಬಂಧಿ ಬಳ್ಳಾರಿಯಲ್ಲಿ ಧರ್ಮ ಪ್ರಚಾರ ಮಾಡುತ್ತಿದ್ದಾನೆ.

    ಸಿಮ್ ಪಡೆದುಕೊಂಡು ಹೋಗಿದ್ದ ರಬಕವಿಯ ಯುವಕ ದಹೆಲಿಯ ನರೇಗಾ ಅಪಾರ್ಟ್ ಮೆಂಟ್‌ನಲ್ಲಿದ್ದಾನೆ ಎಂದು ಮಾಹಿತಿ ನೀಡಿದ್ದಾನೆ. ಐನಾಪುರ ಪಟ್ಟಣದ ಆ ಇಬ್ಬರೂ ಯುವಕರ ಮನೆಯ ಎಲ್ಲ ಸದಸ್ಯರ ಆರೋಗ್ಯ ತಪಾಸಣೆ ನಡೆಸಿ, ಹೋಂ ಕ್ವಾರಂಟೈನ್‌ನಲ್ಲಿರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

    ದೆಹಲಿಯ ಮರ್ಕಜ್ ಧಾರ್ಮಿಕ ಸಭೆಗೆ ಬೆಳಗಾವಿ ಜಿಲ್ಲೆಯ 62 ಜನರು ಹೋಗಿ ಬಂದಿರುವ ಮಾಹಿತಿ ಲಭಿಸಿದೆ. ಯಾರಿಗೂ ಸೋಂಕಿನ ಲಕ್ಷಣಗಳಿಲ್ಲ. 62 ಜನರ ಪೈಕಿ ಡಯಾಬಿಟಿಸ್, ಅಸ್ತಮಾ, ಹೈಪರ್ ಟೆನ್ಷನ್ ಹೊಂದಿರುವ ಐವತ್ತಕ್ಕೂ ಅಧಿಕ ವಯಸ್ಸಿನ 27 ಜನರನ್ನು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಆಸ್ಪತ್ರೆಗೆ ಕರೆತಂದು ಗಂಟಲು ದ್ರವ ಮಾದರಿ ಸಂಗ್ರಹಿಸಲಾಗುತ್ತಿದೆ. ಇದುವರೆಗೆ ನಡೆಸಲಾದ ವೈದ್ಯಕೀಯ ತಪಾಸಣೆಯ ಪ್ರಕಾರ ಯಾರಿಗೂ ಸೋಂಕಿನ ಲಕ್ಷಣಗಳಿಲ್ಲ.
    | ಡಾ. ಎಸ್.ಬಿ. ಬೊಮ್ಮನಹಳ್ಳಿ ಜಿಲ್ಲಾಧಿಕಾರಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts