More

    ಗ್ರಾಮಲೆಕ್ಕಾಧಿಕಾರಿಗಳಿಂದ ಮೌನ ಪ್ರತಿಭಟನೆ

    ರೋಣ: ರೋಣ ಪೊಲೀಸ್ ಸಿಬ್ಬಂದಿ ದೌರ್ಜನ್ಯ ಖಂಡಿಸಿ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳು ತಹಸೀಲ್ದಾರ್ ಕಚೇರಿ ಎದುರಿನ ಗಾಂಧಿ ಪ್ರತಿಮೆ ಮುಂದೆ ಮಂಗಳವಾರ ಮೌನ ಪ್ರತಿಭಟನೆ ನಡೆಸಿದರು.

    ಗ್ರಾಮ ಲೆಕ್ಕಾಧಿಕಾರಿ ಸುದೀಪ ರಾಮಣ್ಣವರ ಮಾತನಾಡಿ, ‘ತಹಸೀಲ್ದಾರ್ ಕಚೇರಿಯಲ್ಲಿ ಜಮಾಬಂದಿ ಕೆಲಸ ನಡೆಯುತ್ತಿದೆ. ಅಹೋರಾತ್ರಿ ಕೆಲಸ ನಿರ್ವಹಿಸುತ್ತಿದ್ದೇವೆ. ಹೀಗಾಗಿ, ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಗ್ರಾಮ ಲೆಕ್ಕಾಧಿಕಾರಿಗಳಾದ ಬಸವರಾಜ ಮಾದರ ಹಾಗೂ ನಾನು ಊಟ ಪಾರ್ಸೆಲ್ ತರಲು ರೋಣ ಮಾರುಕಟ್ಟೆಯ ಹೋಟೆಲ್​ವೊಂದಕ್ಕೆ ಹೋಗಿದ್ದೆವು. ಕೊರಳಲ್ಲಿ ಕಂದಾಯ ಇಲಾಖೆ ಗುರುತಿನ ಚೀಟಿ ಹಾಕಿಕೊಂಡಿದ್ದೆವು. ಈ ಸಂದರ್ಭದಲ್ಲಿ ಪಿಎಸ್​ಐ ವಿನೋದ ಪೂಜಾರ, ಅವರ ವಾಹನ ಚಾಲಕ ನಮ್ಮನ್ನು ಹಿಗ್ಗಾ-ಮುಗ್ಗಾ ಥಳಿಸಿದರು. ನಾವು ಗ್ರಾಮ ಲೆಕ್ಕಾಧಿಕಾರಿಗಳು, ಕರ್ತವ್ಯ ನಿರತದಲ್ಲಿದ್ದೇವೆ. ಬೇಕಿದ್ದರೆ ನಮ್ಮ ಗುರುತಿನ ಚೀಟಿ ನೋಡಿ ಎಂದು ಕೈ ಮುಗಿದು ಬೇಡಿಕೊಂಡೆವು. ನಿಮ್ಮ ಗುರುತಿನ ಚೀಟಿ ತೆಗೆದುಕೊಂಡು ನಾವೇನು ಮಾಡೋಣ ಎಂದು ಬಾಯಿಗೆ ಬಂದಂತೆ ನಿಂದಿಸಿ, ಬಾಸುಂಡೆ ಬರುವಂತೆ ಹೊಡೆದಿದ್ದಾರೆ’ ಎಂದು ಆರೋಪಿಸಿದರು.

    ಗ್ರಾಮಲೆಕ್ಕಾಧಿಕಾರಿಗಳು, ಪಿಎಸ್​ಐ ವಿನೋದ ಪೂಜಾರ ಹಾಗೂ ಸಿಪಿಐ ಸುನೀಲ ಸೌದಿ ಅವರೊಂದಿಗೆ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಅವರು ಮಾಧ್ಯಮದವರನ್ನು ಹೊರಗಿಟ್ಟು ಗುಪ್ತ ಸಭೆ ನಡೆಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ತಹಸೀಲ್ದಾರ್, ‘ಗ್ರಾಮ ಲೆಕ್ಕಾಧಿಕಾರಿಗೆ ಪೊಲೀಸರು ಹೊಡೆದಿರುವ ಫೋಟೋ ನೋಡಿದ್ದೇನೆ. ರೋಣ ಪಿಎಸ್​ಐ ವಿನೋದ ಪೂಜಾರ ಅವರು ತಪ್ಪೊಪ್ಪಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿಸುತ್ತೇನೆ’ ಎಂದರು.

    ಎ.ಕೆ. ಚೂರಿ, ಕೆ.ವೈ. ಕುಷ್ಟಗಿ, ಎಸ್.ಎಸ್. ಪೂಜಾರ, ಎಂ.ಎಲ್. ಬಂಡಿವಡ್ಡರ, ಟಿ.ಕೆ. ಪಾಟೀಲ, ಡಿ.ಕೆ. ಮುಜಾವರ, ವೈ.ಡಿ. ಬಡಿಗೇರ, ಕುಮಾರಸ್ವಾಮಿ ಗೌಂಡಿ ಇತರರಿದ್ದರು.

    ಕರೊನಾ ಸಂಕಷ್ಟದ ಸಮಯದಲ್ಲಿ ಗ್ರಾಮಲೆಕ್ಕಾಧಿಕಾರಿಗಳು ಹಗಲು-ರಾತ್ರಿ ಸೇನಾನಿಯಾಗಿ ಕೆಲಸ ಮಾಡುತ್ತಾರೆ. ವಿಶೇಷವಾಗಿ ಕಂದಾಯ ಇಲಾಖೆಯಿಂದ ನಮಗೆ ಗುರುತಿನ ಚೀಟಿ ನೀಡಿದ್ದಾರೆ. ಅವುಗಳನ್ನು ಕೊರಳಲ್ಲಿ ಹಾಕಿಕೊಂಡು ಕೆಲಸ ಮಾಡುವವರಿಗೆ ಈ ರೀತಿ ಹಲ್ಲೆ ಮಾಡಿದರೆ ಗುರುತಿನ ಚೀಟಿಗಳಿಗೆ, ನಮಗೆ ಯಾವ ಬೆಲೆ ಇದೆ? ತಪ್ಪಿತಸ್ಥ ಪೊಲೀಸ್ ಅಧಿಕಾರಿ ಮೇಲೆ ಕಾನೂನು ಕ್ರಮ ಜರುಗಿಸದಿದ್ದರೆ ಗ್ರಾಮ ಲೆಕ್ಕಾಧಿಕಾರಿಗಳ ಸಂಘದಿಂದ ಹೋರಾಟ ತೀವ್ರಗೊಳಿಸುತ್ತೇವೆ.

    | ಎಸ್.ಬಿ. ಕಡಗದ, ಗ್ರಾಮ ಲೆಕ್ಕಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts