More

    ಕಾಣದ ಕಣ್ಣಿಗೂ ‘ದೃಷ್ಟಿ’ ಸೃಷ್ಟಿ!

    ಬೆಳಗಾವಿ: ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಸೇವಾವಧಿ 33 ವರ್ಷಕ್ಕೆ ಸೀಮಿತಗೊಳಿಸಿದ್ದರಿಂದ ಉದ್ಯೋಗ ಪರ್ವ ಆರಂಭವಾದಂತಿದೆ. ಆದರೆ, ನೇಮಕಾತಿ ಪ್ರಕ್ರಿಯೆಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳ ಲಂಚದಾಸೆಯಿಂದ ಸರ್ಕಾರದ ಕಣ್ಣಿಗೆ ಮಣ್ಣೆರಚಿ ಅನರ್ಹರೂ ಅರ್ಹತೆ ಗಿಟ್ಟಿಸಿಕೊಳ್ಳುತ್ತಿದ್ದಾರೆ.

    ಲಾಕ್‌ಡೌನ್ ತೆರವಿನ ನಂತರ ರಾಜ್ಯದಲ್ಲಿ ಕರೆಯಲಾಗಿದ್ದ ಪೊಲೀಸ್ ಇಲಾಖೆಯ ಡಿಎಆರ್‌ನ ಎಪಿಸಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಅಭ್ಯರ್ಥಿಗೆ ಕಣ್ಣಿನ ವರ್ಣಾಂಧತೆ ಸಮಸ್ಯೆ ಇದ್ದರೂ, ವೈದ್ಯಕೀಯ ತಪಾಸಣೆಯಲ್ಲಿ ‘ಕ್ವಾಲಿಫೈ’ ಮಾಡಲಾಗಿದೆ. ಈ ಪ್ರಕರಣ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ವಂಚನೆಗೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಅಧಿಕಾರಿ ಹಾಗೂ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪೊಲೀಸ್ ಅಧಿಕಾರಿಗಳೂ ಭಾಗಿ!: ಜ.13ರಂದು ವೈದ್ಯಕೀಯ ತಪಾಸಣೆ ನಡೆದಿತ್ತು. 2020ರಲ್ಲಿ ಕರೆಯಲಾಗಿದ್ದ ಎಪಿಸಿ ಹುದ್ದೆಗೆ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿದ್ದ ಅಭ್ಯರ್ಥಿ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಸಂತೋಷ ಶ್ರೀಪತಿ ದ್ರಾಕ್ಷಿ ಎಂಬಾತನಿಗೆ ಕಣ್ಣಿನ ವರ್ಣಾಂಧತೆ ಸಮಸ್ಯೆ ಇದ್ದರೂ ವೈದ್ಯಾಧಿಕಾರಿಗಳನ್ನು ವಂಚಿಸಿ, ಅಭ್ಯರ್ಥಿಯನ್ನು ಕ್ವಾಲಿಫೈ ಮಾಡಿಸಲಾಗಿದೆ. ಈ ಸಂಬಂಧ ಬೆಳಗಾವಿ ಡಿಎಆರ್ ಮತ್ತು ಸಿಎಆರ್‌ನ ಪೊಲೀಸ್ ಅಧಿಕಾರಿಗಳಾದ ದಾನೇಶ್ವರ ಶಿರಗುಪ್ಪಿ ಹಾಗೂ ಸಯ್ಯದ್ ಇಮಾಮಸಾಬ್ ಚಿಮ್ಮಾಡಿ ವಿರುದ್ಧ ದೂರು ದಾಖಲಾಗಿದೆ.

    ಖಾಕಿಗೆ ಸಿಗದ ಕಿಂಗ್‌ಪಿನ್‌ಗಳೆಲ್ಲಿ?: 2020ರ ನವೆಂಬರ್‌ನಲ್ಲಿ ಕೆಎಸ್‌ಆರ್‌ಪಿ ಹಾಗೂ ಐಆರ್‌ಬಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗಾಗಿ ಬೆಂಗಳೂರಿನ ಪರೀಕ್ಷಾ ಕೇಂದ್ರದಲ್ಲಿ ಐವರು ಮೂಲ ಅಭ್ಯರ್ಥಿಗಳ ಬದಲಿಗೆ ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾಗ ಸಿಕ್ಕಿಬಿದ್ದಿರುವ ಪ್ರಕರಣ ಇನ್ನೂ ತನಿಖೆ ಹಂತದಲ್ಲೇ ಇದೆ. ಅಭ್ಯರ್ಥಿಪರ ಪರೀಕ್ಷೆ ಬರೆದವರನ್ನು ಈಗಾಗಲೇ ಬಂಧಿಸಲಾಗಿದ್ದು, ಪ್ರಕರಣದ ಕಿಂಗ್‌ಪಿನ್‌ಗಳು ಬೆಳಗಾವಿ ಹಾಗೂ ಬಾಗಲಕೋಟೆಯವರು ಎನ್ನಲಾಗುತ್ತಿದೆ. ಆದರೆ, ಈವರೆಗೂ ಅವರನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಈ ಮಧ್ಯೆ ರಾಜ್ಯದಲ್ಲಿ ಖಾಲಿ ಇರುವ ಪೊಲೀಸ್ ಇಲಾಖೆಯ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಶುರುವಾಗಿದ್ದು, ಗುರುವಾರದಿಂದಲೇ 545 ಪಿಎಸ್‌ಐ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನಕಲಿ ಅಭ್ಯರ್ಥಿಗಳ ಹಾವಳಿ ತಪ್ಪಿಸುವಲ್ಲಿ
    ಇಲಾಖೆ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

    ಮೂವರನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಮತ್ತೋರ್ವ ಅಭ್ಯರ್ಥಿಯನ್ನು ಪರೀಕ್ಷೆಗೊಳಪಡಿಸಿ ಅರ್ಹತೆಯ ಪ್ರಮಾಣ ಪತ್ರ ಪಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇಂತಹದ್ದೆ ನಾಲ್ಕು ಪ್ರಕರಣಗಳು ನಡೆದಿದ್ದು, ತನಿಖೆ ಮುಂದುವರಿದಿದೆ.
    | ಡಾ. ಕೆ.ತ್ಯಾಗರಾಜನ್, ನಗರ ಪೊಲೀಸ್ ಆಯುಕ್ತ

    | ರವಿ ಗೋಸಾವಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts