More

    ಸೀಜ್ ವಾಹನ ಠಾಣೆಯಲ್ಲಿಡುವಂತಿಲ್ಲ: ಹೈಕೋರ್ಟ್ ಆದೇಶ ಪಾಲನೆಗೆ ಮುಂದಾದ ಪೊಲೀಸ್ ಇಲಾಖೆ

    ಉಳ್ಳಾಲ: ಕಾರ್ಯಾಚರಣೆ ವೇಳೆ ವಶಕ್ಕೆ ಪಡೆಯಲಾದ ವಾಹನಗಳನ್ನು ವರ್ಷಗಟ್ಟಲೆ ವಶದಲ್ಲಿಟ್ಟುಕೊಂಡು ನಿರುಪಯುಕ್ತಗೊಳಿಸಬಾರದು ಎಂದು ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ.

    ಮರಳು ಅಕ್ರಮ ಸಾಗಾಟ, ಅಪಘಾತ, ಕೊಲೆ ಪ್ರಕರಣ ಸಹಿತ ಇತರ ಅಪರಾಧ ಕೃತ್ಯಗಳ ಸಂದರ್ಭ ಬಳಸಲಾಗುವ ವಾಹನಗಳನ್ನು ತನಿಖೆ ಸಂದರ್ಭ ಪೊಲೀಸರು ವಶಕ್ಕೆ ಪಡೆದುಕೊಳ್ಳುವುದು ಸಾಮಾನ್ಯ. ಆದರೆ ಹೆಚ್ಚಿನ ಠಾಣೆಗಳಲ್ಲಿ ಈ ವಾಹನಗಳನ್ನು ಇಡಲು ಜಮೀನಿನ ಕೊರತೆಯಿದೆ. ಇದರಿಂದಾಗಿ ರಸ್ತೆ ಬದಿಯೋ, ಠಾಣಾ ಪಕ್ಕದಲ್ಲಿ ಖಾಲಿ ಇರುವ ಜಾಗದಲ್ಲೇ ವಾಹನಗಳನ್ನು ಡಂಪ್ ಮಾಡಲಾಗುತ್ತಿದೆ. ಪ್ರಕರಣ ಮುಗಿಯಲು ಅದೆಷ್ಟೋ ವರ್ಷ ಬೇಕಿರುವುದರಿಂದ ವಶಕ್ಕೆ ಪಡೆಯಲಾದ ವಾಹನಗಳು ತುಕ್ಕು ಹಿಡಿದು ಗುಜರಿಗೂ ನಾಲಾಯಕ್ ಆಗಿ ಪರಿವರ್ತನೆಗೊಳ್ಳುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಸಣ್ಣಪುಟ್ಟ ಕೇಸಿನಲ್ಲೂ ಪೊಲೀಸರು ವಶಕ್ಕೆ ಪಡೆಯಲಾದ ಅದೆಷ್ಟೋ ವಾಹನಗಳು ನಿರುಪಯುಕ್ತವಾದ ಉದಾಹರಣೆಗಳೂ ಇವೆ.
    ಹೀಗೆ ಇಡುವುದರಿಂದ ವಾಹನಗಳು ನಿರುಪಯುಕ್ತವಾಗುತ್ತವೆ, ಅದರ ಬದಲು ಯಾವುದೇ ಕೇಸಿನಲ್ಲೂ ವಶಕ್ಕೆ ಪಡೆಯಲಾಗುವ ವಾಹನಗಳನ್ನು ತನಿಖೆಯ ದೃಷ್ಟಿಯಿಂದ ಅದರ ಫೋಟೊ ತೆಗೆದು, ಷರತ್ತುಗಳ ಮೇರೆಗೆ ಬಿಡುಗಡೆ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

    ಇದೇ ವಿಚಾರವಾಗಿ ಆಗಸ್ಟ್ 22ರ ವಿಜಯವಾಣಿಯಲ್ಲಿ ಉಳ್ಳಾಲ ಠಾಣಾ ಪೊಲೀಸರು ವಶಕ್ಕೆ ಪಡೆದ ವಾಹನಗಳು ರಸ್ತೆಯಲ್ಲಿ ತುಕ್ಕು ಹಿಡಿಯುತ್ತಿರುವ ಬಗ್ಗೆ ವಿಶೇಷ ವರದಿ ಪ್ರಕಟಿಸಲಾಗಿತ್ತು. ಈ ಬಗ್ಗೆ ಕೈಗೊಳ್ಳಲಾಗಿರುವ ಕ್ರಮದ ಬಗ್ಗೆ ಮುಖ್ಯಮಂತ್ರಿ ಸಚಿವಾಲಯ ಪೊಲೀಸ್ ಇಲಾಖೆಯಲ್ಲಿ ಪ್ರಶ್ನಿಸಿತ್ತು. ವಶಪಡಿಸಿಕೊಳ್ಳಲಾಗಿರುವ ವಾಹನಗಳನ್ನು ನಿಲ್ಲಿಸಲು ಉಳ್ಳಾಲ ಠಾಣೆಗೆ ಜಮೀನಿನ ವ್ಯವಸ್ಥೆ ಇಲ್ಲದ ಕಾರಣ ರಸ್ತೆಬದಿ ನಿಲ್ಲಿಸುತ್ತಾ ಬರಲಾಗಿತ್ತು. ವಾಹನಗಳನ್ನು ಇಡಲು ಸರ್ಕಾರಿ ಜಮೀನು ಒದಗಿಸುವಂತೆ ಉಳ್ಳಾಲ ನಗರಸಭೆ ಮತ್ತು ತಹಸೀಲ್ದಾರ್‌ಗೆ ಪತ್ರ ಬರೆದಿರುವ ಬಗ್ಗೆ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷರು ಸಚಿವಾಲಯಕ್ಕೆ ಉತ್ತರ ನೀಡಿದ್ದರು. ಹೀಗೆ ವಶಕ್ಕೆ ಪಡೆಯಲಾದ ವಾಹನಗಳನ್ನು ವರ್ಷಗಟ್ಟಲೆ ಇಡುವ ಬದಲು ದಂಡ ಅಥವಾ ಷರತ್ತುಗಳ ಆಧಾರದಲ್ಲಿ ಬಿಡುಗಡೆಗೊಳಿಸಬೇಕು. ವರ್ಷಗಟ್ಟಲೆ ಇಡುವುದರಿಂದ ಮಾಲೀಕರಿಗೆ ನಷ್ಟವುಂಟಾಗಲಿದೆ ಎಂದು ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅವರ ಹೇಳಿಕೆಯನ್ನು ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿತ್ತು. ಇದೀಗ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಅಬ್ದುಲ್ ರಶೀದ್ ಹರ್ಷ ವ್ಯಕ್ತಪಡಿಸಿದ್ದಾರೆ.

    ನ್ಯಾಯಾಲಯ ಆದೇಶ ಬಳಿಕ ತನಿಖೆಗಾಗಿ ವಶಕ್ಕೆ ಪಡೆಯಲಾಗಿರುವ ವಾಹನಗಳ ಪೈಕಿ ಡ್ರಗ್ಸ್, ಕೊಲೆಯಂಥ ಪ್ರಕರಣಗಳನ್ನು ಹೊರತುಪಡಿಸಿ ಅಪಘಾತ ಹಾಗೂ ಇತರ ಪ್ರಕರಣಗಳಿಗೆ ಸಂಬಂಧಿಸಿದ್ದನ್ನು ಜಾಮೀನಿನ ಆಧಾರದಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ. ನ್ಯಾಯಾಲಯದಲ್ಲಿರುವ ಹಳೇ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿರುವುದರಿಂದ ಅದಕ್ಕೆ ಸಂಬಂಧಪಟ್ಟ ವಾಹನಗಳನ್ನು ಬಿಡುಗಡೆಗೊಳಿಸಲಾಗದು.
    – ದಿನೇಶ್ ಕುಮಾರ್ ಡಿಸಿಪಿ, ಅಪರಾಧ ಮತ್ತು ಸಂಚಾರಿ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts