More

    ಹಾಸ್ಟೆಲ್ ಅವ್ಯವಸ್ಥೆಗೆ ನ್ಯಾಯಾಧೀಶೆ ಸಿಡಿಮಿಡಿ

    ಹುಣಸೂರು: ಪಟ್ಟಣದ ಮೆಟ್ರಿಕ್ ನಂತರದ ಪರಿಶಿಷ್ಟ ವರ್ಗಗಳ ಬಾಲಕರ ಹಾಸ್ಟೆಲ್ ಅವ್ಯವಸ್ಥೆ ಬಗ್ಗೆ ಉಡಾಫೆ ಉತ್ತರ ನೀಡಿದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಾಶ್ ಅವರನ್ನು ಹುಣಸೂರು ಹಿರಿಯ ಶ್ರೇಣಿ ನ್ಯಾಯಾಧೀಶೆ ಜಿ.ದೀಪಾ ಅವರು ತರಾಟೆಗೆ ತೆಗೆದುಕೊಂಡರು.

    ಬುಧವಾರ ಹಾಸ್ಟೆಲ್‌ಗೆ ದಿಢೀರ್ ಭೇಟಿ ನೀಡಿದ ಅವರು, ‘ನೀವು ನಿಮ್ಮ ಕೆಲಸವನ್ನು ಸರಿಯಾಗಿ ಮಾಡಿದರೆ, ಕೆಲಸ ಬಿಟ್ಟು ನಾನೇಕೆ ಇಲ್ಲಿಗೆ ಬರಬೇಕು’ ಎಂದು ಪ್ರಕಾಶ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

    ನಿಮ್ಮ ಮಕ್ಕಳು ಅಥವಾ ನೀವೇ ಇಲ್ಲಿ ವಾಸವಾಗಿದ್ದರೆ ಏನು ಮಾಡುತ್ತಿದ್ದಿರಿ ಹೇಳಿ, ಹಾಸ್ಟೆಲ್‌ನಲ್ಲಿ ಸ್ವಚ್ಛತೆ ಹಾಗೂ ಮೂಲಸೌಕರ್ಯ ಕಲ್ಪಿಸದಿದ್ದರೆ ಹೇಗೆ? ಸರ್ಕಾರ ನೀಡುವ ಸಂಬಳಕ್ಕೆ ಸರಿಯಾಗಿ ಕೆಲಸ ಮಾಡಿದರೆ ನಿಮಗೂ ಒಳ್ಳೆಯದು ಎಂದು ತಾಕೀತು ಮಾಡಿದರು.

    ವಸತಿ ನಿಲಯದ ಅಡುಗೆ ಮನೆ, ದಾಸ್ತಾನು ಕೊಠಡಿ, ಮಕ್ಕಳು ಮಲಗುವ ಕೊಠಡಿಗಳು ಹಾಗೂ ಸ್ನಾನದ ಮನೆಯ ಅವ್ಯವಸ್ಥೆ ಕಂಡು ಬೇಸರ ವ್ಯಕ್ತಪಡಿಸಿದರು. ಬಳಿಕ ಮಕ್ಕಳ ಸಮಸ್ಯೆಗಳನ್ನು ಆಲಿಸಿದರು.

    ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಾಶ್ ಮಾತನಾಡಿ, ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ಸಮಸ್ಯೆ ಇದೆ. ಇಲ್ಲಿ ಬಾಡಿಗೆ ಕಟ್ಟಡಗಳು ಸಿಗುತ್ತಿಲ್ಲ ಎಂದರು. ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ನ್ಯಾಯಾಧೀಶೆ ಸೂಚಿಸಿದರು.

    ಸಿವಿಲ್ ನ್ಯಾಯಾಧೀಶ ಗಿರೀಶ್ ಚಟ್ನಿ ಮಾತನಾಡಿ, ವಿದ್ಯಾರ್ಥಿಗಳ ಬಯೋಮೆಟ್ರಿಕ್ ಹಾಜರಾತಿ ಎಲ್ಲಿ? ಮಕ್ಕಳ ಸುರಕ್ಷತೆ ಬಗ್ಗೆ ಏನೇನು ಕ್ರಮಕೈಗೊಂಡಿದ್ದೀರಿ ಎಂದಾಗ, ‘ಕಳೆದ 6 ತಿಂಗಳಿಂದ ಸರ್ವರ್ ಸಮಸ್ಯೆ’ ಎಂದು ಪ್ರಕಾಶ್ ಜಾರಿಕೊಂಡರು.
    ತಹಸೀಲ್ದಾರ್ ಐ.ಇ.ಬಸವರಾಜ್ ಮಾತನಾಡಿ, ನಿವೇಶನ ನೀಡುವ ಬಗ್ಗೆ ಇಲಾಖೆಯಿಂದ ಮನವಿ ಬಂದರೆ ಕ್ರಮವಹಿಸುವೆ. ತಾತ್ಕಾಲಿಕವಾಗಿ ವಸತಿ ನಿಲಯವನ್ನು ಬದಲಾಯಿಸಲು ಕ್ರಮವಹಿಸುವುದಾಗಿ ತಿಳಿಸಿದರು.

    ತಾಲೂಕು ಅಧಿಕಾರಿ ಚಂದ್ರಶೇಖರ್, ವಾರ್ಡನ್ ಲಕ್ಷ್ಮಣ್ ಹಾಗೂ ಸಿಬ್ಬಂದಿ ಹಾಜರಿದ್ದರು.

    ಅಧಿಕಾರಿ ವಿರುದ್ಧ ಶಿಸ್ತುಕ್ರಮ: ಹುಣಸೂರು ಪಟ್ಟಣದ ಮೆಟ್ರಿಕ್ ನಂತರದ ಪರಿಶಿಷ್ಟ ವರ್ಗಗಳ ಬಾಲಕರ ಹಾಸ್ಟೆಲ್‌ನ ಅವ್ಯವಸ್ಥೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವೆ ಹಾಗೂ ಶೀಘ್ರವೆ ಕಾಯಂ ವಾರ್ಡನ್ ನೇಮ ಮಾಡಿ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡುವೆ ಎಂದು ಜಿ.ಪಂ. ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್ ತಿಳಿಸಿದರು.

    ಹಾಸ್ಟೆಲ್‌ನ ಅವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಲ್ಲಿನ ಸಮಸ್ಯೆ ಬಗ್ಗೆ ತಾಪಂ, ಜಿಪಂ ಅಥವಾ ಶಾಸಕರ ಗಮನಕ್ಕೆ ತರಬೇಕಿತ್ತು. ಮಕ್ಕಳ ಭವಿಷ್ಯದ ಜತೆ ಚೆಲ್ಲಾಟವಾಡುವುದು ಸರಿಯಲ್ಲ ಎಂದು ಪ್ರಕಾಶ್ ಹಾಗೂ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು.

    ನಲ್ಲೂರುಪಾಲದ ಆಶ್ರಮ ಶಾಲೆಗೂ ಭೇಟಿ ನೀಡಿ ಪರಿಶೀಲನೆ ಮಾಡಿದರು. ತಾಪಂ ಇಒ ಗಿರೀಶ್, ಜಿಪಂ ಸದಸ್ಯೆ ಸಾವಿತ್ರಿ, ತಾಪಂ ಅಧ್ಯಕ್ಷೆ ಪದ್ಮಮ್ಮ ಬಸವರಾಜು, ಮುಖಂಡರಾದ ಸೋಮಶೇಖರ್, ಮಂಜು ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts