More

    ಖಚಿತ ಸಾಕ್ಷಿ ದೊರೆತರೆ ಪಿಎಫ್ಐ, ಎಸ್.ಡಿಪಿಐ ನಿಷೇಧಿಸಲಿ; ಸಿದ್ದರಾಮಯ್ಯ

    ಹುಬ್ಬಳ್ಳಿ: ಪಿಎಫ್ಐ ಅಥವಾ ಎಸ್.ಡಿಪಿಐ ಅಥವಾ ಇನ್ಯಾವುದೇ ಸಂಘಟನೆಯಾಗಲಿ ಖಚಿತ ಸಾಕ್ಷಿ ದೊರೆತರೆ ನಿಷೇಧಿಸಲಿ. ಈ ಕೊಲೆಗಳ ಹಿಂದೆ ಅಥವಾ ಅದಕ್ಕೆ ಪ್ರಚೋದನೆ ನೀಡಿದ್ದಾರೆ ಎಂದರೆ ಬ್ಯಾನ್ ಮಾಡಲಿ. ನಾವೇನು ಅಡ್ಡ ಬರುತ್ತೇವೆಯೇ ಎಂದು ವಿರೋಧ ಪಕ್ಷದ‌ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

    ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೊಬ್ಬರ ಪ್ರಾಣ ತೆಗೆಯಲು ಪ್ರಚೋದನೆ ನೀಡಿದರೆ ಯಾರೂ ಸಹ ಕ್ಷಮಿಸಲ್ಲ. ಅವರಿಗೆ ಕಾಂಗ್ರೆಸ್ ಕುಮ್ಮಕ್ಕೇನೂ ಇಲ್ಲ. ಬಿಜೆಪಿಯವರೇ ಅವರನ್ನು ಮತ ವಿಭಜನೆಗೆ ಸಾಕುತ್ತಿದ್ದಾರೆ ಎಂದು ಕುಟುಕಿದರು.

    ಮಂಗಳೂರಲ್ಲಿ ಮೂವರ ಹತ್ಯೆಯಾಗಿದೆ. ಇದರಲ್ಲಿ ನೇರವಾಗಿ ಗುಪ್ತಚರ ಇಲಾಖೆ ವಿಫಲ ಕಾಣಿಸುತ್ತದೆ. ಸರ್ಕಾರ ಸರಿಯಾದ ರೀತಿಯಲ್ಲಿ ರಕ್ಷಣೆ ನೀಡಿದ್ದರೆ ಮೂವರ ಪ್ರಾಣ ಉಳಿಯುತ್ತಿತ್ತು. ಇದರ ಜವಾಬ್ದಾರಿ ಸಿಎಂ ಮತ್ತು ಗೃಹ ಸಚಿವರು ಹೊರಬೇಕು. ರಾಜೀನಾಮೆಗೆ ಒತ್ತಾಯಿಸಿದರೂ ಕೇಳಲಿಲ್ಲ ಎಂದರು. ಯಾಕಾಗಿ ಸಂಘ ಪರಿವಾರದವರು ಇವರ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ಸರ್ಕಾರ ವಿಫಲವಾಗಿರುವುದು ಸ್ಪಷ್ಟವಾಗುತ್ತಿದೆ.

    ಸಂಘ ಪರಿವಾರದವರಿಗೇ ರಕ್ಷಣೆ ನೀಡಿಲ್ಲ ಎಂದರೆ ಬೇರೆಯವರಿಗೆ ಹೇಗೆ ರಕ್ಷಣೆ ನೀಡಲು ಸಾಧ್ಯ? ರಾಜ್ಯದ ಜನರಿಗೆ ರಕ್ಷಣೆ ನೀಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಹೋಗಲಿ ಎಂದರು. ಮುಖ್ಯಮಂತ್ರಿಯಾದವರು ಪ್ರವೀಣನ ಮನೆಗೆ ಹೋಗುತ್ತಾರೆ, ಫಾಸಿಲ್ ಮನೆಗೆ ಹೋಗುತ್ತಿಲ್ಲ. ಸಿಎಂ ಒಂದು ಧರ್ಮಕ್ಕೆ ಮಾತ್ರನಾ? ಎಲ್ಲರ ಮನೆಗೂ ಹೋಗಬೇಕು, ಎಲ್ಲರಿಗೂ ಪರಿಹಾರ ನೀಡಬೇಕು. ನಾನು ಸಿಎಂ ಇದ್ದಾಗ 23 ಹತ್ಯೆ ಆಗಿತ್ತು, ಅದರಲ್ಲಿ 12 ಹತ್ಯೆ ಮುಸ್ಲಿಮರದ್ದು. 11 ಹತ್ಯೆ ಹಿಂದುಗಳದ್ದು. ಎಲ್ಲರ ಮನೆಗೂ ನಾನು ಭೇಟಿ ನೀಡಿದ್ದೆ. ಕೊಲೆಯಾದವರ ಕುಟುಂಬದವರಿಗೆ ಪರಿಹಾರ ನೀಡುವ ಪರಿಪಾಠ ಹುಟ್ಟುಹಾಕಿದ್ದೇ ಬಿಜೆಪಿ. ಆ ಪರಿಹಾರ ಜನರ ಹಣ ಅಲ್ಲವೇ? ಎಂದರು.

    ಇಂದು ರಾತ್ರಿ ನಡೆಯಲಿರುವ ‘ರಾಜಕೀಯ ವ್ಯವಹಾರಗಳ ಸಮಿತಿ’ ಸಭೆಯಲ್ಲಿ ಮುಂದಿನ ಚುನಾವಣೆ ಕುರಿತು ಚರ್ಚಿಸಲಾಗುವುದು. ನ್ಯಾಷನಲ್ ಹೆರಾಲ್ಡ್ ಹಗರಣ ಕುರಿತು ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ತೆರಳಿದ್ದಾರೆ, ಎಚ್.ಕೆ. ಮುನಿಯಪ್ಪ ಅವರಿಗೆ ಡೆಂಘಿ ಜ್ವರ ಬಂದಿದೆ. ಅವರಿಬ್ಬರು ಬರುತ್ತಿಲ್ಲ.

    ಯಾವ ಸಿದ್ದರಾಮೋತ್ಸವವೂ ಇಲ್ಲ. ಕೇವಲ ಅಮೃತೋತ್ಸವ. ನಾಳೆ ನಂಗೆ 75 ವರ್ಷ ತುಂಬುತಾ ಇದೆ. ಅದನ್ನು ಸ್ನೇಹಿತರು, ಹಿತೈಷಿಗಳು ಆಚರಿಸುತ್ತಿದ್ದಾರೆ. ಜೀವನದಲ್ಲಿ ಇದೊಂದು ಮಹತ್ತರ ಮೈಲಿಗಲ್ಲು. ಶಕ್ತಿ ಪ್ರದರ್ಶನ, ಮುಖ್ಯಮಂತ್ರಿಯಾಗಲು ಹೀಗೆ ಮಾಡುತ್ತಿದ್ದಾರೆ ಎನ್ನುವುದೆಲ್ಲ ಮಾಧ್ಯಮ ಸೃಷ್ಟಿ. ನಮ್ಮಲ್ಲಿ ಯಾವ ಬಣವೂ ಇಲ್ಲ, ಇರುವುದೊಂದೇ ಬಣ್ಣ ಅದು ಸೋನಿಯಾಗಾಂಧಿ ಬಣ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts