More

    ವೈಫಲ್ಯ ಮುಚ್ಚಿಕೊಳ್ಳಲು ಸಿದ್ದರಾಮಯ್ಯ ತಂತ್ರ

    ಬಾಳೆಹೊನ್ನೂರು: ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಂಡು ಪ್ರಚಾರ ಪಡೆಯುವ ದೃಷ್ಟಿಯಿಂದ ಕೆಲವೊಂದು ತಂತ್ರಗಳನ್ನು ಮಾಡುತ್ತಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.

    ವಿಪರೀತ ಬರ ಬಂದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ನಡವಳಿಕೆ ಸಂದೇಹಾಸ್ಪದವಾಗಿದೆ. ಬರದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ರಂಭಾಪುರಿ ಪೀಠದಲ್ಲಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
    ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕದಲ್ಲಿ ವಿಪರೀತ ಪ್ರವಾಹ ಬಂದಿತ್ತು. ಆ ಸಂದರ್ಭದಲ್ಲಿ ಬಿಎಸ್‌ವೈ ರಾಜ್ಯ ಸರ್ಕಾರದಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿ ಲಕ್ಷಾಂತರ ಮನೆಗಳಿಗೆ ಪರಿಹಾರವನ್ನು ನೀಡಿ ಜನರ ಹಿತ ಕಾಯುವ, ಜನರಿಗೆ ಜೀವನ ನೀಡುವ ಕೆಲಸ ಮಾಡಲಾಗಿತ್ತು. ಅದೇ ರೀತಿ ಇಂದು ಬರ ಬಂದಾಗ 10 ಸಾವಿರ ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿ ಎಂದು ನಾವು ರಾಜ್ಯ ಸರ್ಕಾರವನ್ನು ಆಗ್ರಹಿಸಿದರೂ ಒಂದೇ ಒಂದು ರೂಪಾಯಿಯನ್ನು ಸಹ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರದಿಂದ ಬರುವ ಹಣ ಬಂದೇ ಬರುತ್ತದೆ ಎಂದು ತಿಳಿಸಿದರೂ ರಾಜ್ಯ ಸರ್ಕಾರ ಸ್ಪಂದಿಸಿಲ್ಲ ಎಂದು ದೂರಿದರು.
    324 ಕೋಟಿ ರೂ. ಬರಕ್ಕಾಗಿ ಬಿಡುಗಡೆ ಮಾಡಿದ್ದೇವೆ ಎಂದು ಸದನದಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಅದನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ ಶೇ.75 ಕೇಂದ್ರ ಸರ್ಕಾರದ ಪಾಲಿತ್ತ್ತು. ಶೇ.25 ಹಣವನ್ನು ನಾವು ಜೋಡಿಸುತ್ತೇವೆ ಎಂದು ಬಳಿಕ ಹೇಳಿಕೆ ನೀಡಿದ್ದರು. ಒಟ್ಟಾರೆಯಾಗಿ ಕೇಂದ್ರ ಸರ್ಕಾರ ನೀಡಿದ ಹಣವನ್ನೂ ನಾವು ನೀಡಿದ್ದು ಎನ್ನುತ್ತಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಪ್ರತಿ ತಿಂಗಳು 22 ಲಕ್ಷ ಕ್ವಿಂಟಾಲ್ ಅಕ್ಕಿ ಕಳುಹಿಸಿ ಕೊಡುತ್ತಿದೆ. ಇದೂ ನಮ್ಮದೇ ಅನ್ನಭಾಗ್ಯ ಎನ್ನುತ್ತಾರೆ ಎಂದರು.
    ರಾಜ್ಯ ಸರ್ಕಾರ ಬರವನ್ನು ಎದುರಿಸಲಾಗದೆ, ತನ್ನಲ್ಲಿ ಶಕ್ತಿ ಇಲ್ಲದೆ ಸುಪ್ರೀಂಕೋರ್ಟ್‌ಗೆ ಹೋಗುವ ನಾಟಕ ಮಾಡಿದೆ. ಇದು ರಾಜ್ಯ ಸರ್ಕಾರದ ವಿಫಲತೆಯನ್ನು ಮುಚ್ಚಿಸಿಕೊಳ್ಳುವ ತಂತ್ರವೇ ಹೊರತು, ಇದರಲ್ಲಿ ಕೇಂದ್ರ ಸರ್ಕಾರದ ಗೊಂದಲಗಳು ಯಾವುದೂ ಇಲ್ಲ ಎಂದು ಹೇಳಿದರು.
    ಚಿಕ್ಕಮಗಳೂರಿನಲ್ಲಿ ಅಡಕೆ, ಕಾಫಿ ಬೆಳೆಗಾರರು ಹೆಚ್ಚು ಇದ್ದಾರೆ. ಇಲ್ಲಿ ಬಗರ್‌ಹುಕುಂ ಸಮಸ್ಯೆ, ಅಡಕೆಗೆ ಎಲೆಚುಕ್ಕೆ ರೋಗ ಸೇರಿದಂತೆ ಅನೇಕ ಸಮಸ್ಯೆಗಳಿವೆ. ಇದು ಭೌಗೋಳಿಕವಾದ ಸಮಸ್ಯೆ ಇರುವ ಪ್ರದೇಶ. ಉಡುಪಿ ಜಿಲ್ಲೆ ಕೃಷಿ ಮತ್ತು ಮೀನುಗಾರಿಕೆಗೆ ಹೆಸರಾದ ಜಿಲ್ಲೆ. ಉಡುಪಿ ಜಿಲ್ಲೆಯಲ್ಲಿ ನಾನು ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಚಿಕ್ಕಮಗಳೂರು ನನಗೆ ಆಡಳಿತಾತ್ಮಕವಾಗಿ ಹೊಸದು. ಇಲ್ಲಿ ಅಡಕೆ, ಕಾಫಿ ಬೆಳೆಗಾರರು ಸೇರಿದಂತೆ ರೈತರ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದು ನನ್ನ ಆದ್ಯತೆಯಾಗಿದೆ ಎಂದು ತಿಳಿಸಿದರು.
    ನಾನು ಸಂಸದನಾಗಿ ಆಯ್ಕೆಗೊಂಡಲ್ಲಿ ಜಿಲ್ಲೆಯಲ್ಲಿನ ರೈಲ್ವೆ ವಿಸ್ತರಣೆ, ಅಗತ್ಯವಾದ ಮೂಲ ಸೌಕರ್ಯಗಳು, ರಸ್ತೆ ನಿರ್ಮಾಣ, ಜಲಜೀವನ ಯೋಜನೆ ಅನುಷ್ಠಾನ ಸೇರಿದಂತೆ ಕೇಂದ್ರ ಸರ್ಕಾರದಿಂದ ದೊರೆಯುವ ಎಲ್ಲ ಯೋಜನೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮಾಡುತ್ತೇನೆ. ಇದಕ್ಕೆ ನನ್ನ ಆಡಳಿತಾತ್ಮಕ ಅನುಭವ ಸಹಕಾರಿಯಾಗಲಿದೆ ಎಂಬ ನಂಬಿಕೆಯಿದೆ. ಸಂಸದನಾದಲ್ಲಿ ನಿಶ್ಚಿತವಾಗಿ ನಾನು ಇಲ್ಲಿನ ಜನರ ಜತೆ ನಿಂತು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
    ಮಾಜಿ ಸಚಿವ ಡಿ.ಎನ್.ಜೀವರಾಜ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ, ಬಿಜೆಪಿ ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಮಾಲತೇಶ್ ಸಿಗಸೆ, ಕಾಫಿ ಮಂಡಳಿ ಸದಸ್ಯೆ ಭಾಸ್ಕರ್ ವೆನಿಲ್ಲಾ, ಮುಖಂಡರಾದ ಟಿ.ಎಂ.ಉಮೇಶ್ ಕಲ್ಮಕ್ಕಿ, ಪ್ರಭಾಕರ್ ಪ್ರಣಸ್ವಿ, ಬಿ.ಜಗದೀಶ್ಚಂದ್ರ, ಕೆ.ಟಿ.ವೆಂಕಟೇಶ್, ಶಶಿ ಆಲ್ದೂರು, ಪ್ರೇಮೇಶ್ ಮಾಗಲು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts