More

    ಅಮಿತ್ ಷಾ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

    ಮೈಸೂರು: ಬರಪರಿಹಾರ ಬಿಡುಗಡೆಗೆ ರಾಜ್ಯ ಸರ್ಕಾರ ಮೂರು ತಿಂಗಳ ನಂತರ ತಡವಾಗಿ ಮನವಿ ಅರ್ಪಿಸಿತು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರದಲ್ಲಿ ಮಂಗಳವಾರ ತಿರುಗೇಟು ನೀಡಿದರು.

    ರಾಜ್ಯ ಸರ್ಕಾರ 2023ರ ಸೆ.23 ರಂದು ಮೊದಲ ಮನವಿಯನ್ನು ಸಲ್ಲಿಸಿತು. ಅಕ್ಟೋಬರ್‌ನಲ್ಲಿ ರಾಜ್ಯಕ್ಕೆ ಕೇಂದ್ರ ಅಧ್ಯಯನ ತಂಡ ಆಗಮಿಸಿ ಅಧ್ಯಯನ ನಡೆಸಿ ಅ.20ಕ್ಕೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅಲ್ಲಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಒಂದು ರೂ. ಬಿಡುಗಡೆ ಮಾಡಿಲ್ಲ. ಬರಗಾಲ, ಪ್ರವಾಹ ಸಂದರ್ಭದಲ್ಲಿ ಎಂದಾದರು ಪ್ರಧಾನಿ ನರೇಂದ್ರ, ಮೋದಿ ಅಮಿತ್ ಷಾ ರಾಜ್ಯಕ್ಕೆ ಬಂದಿದ್ದಾರಾ? ಚುನಾವಣೆ ಸಂದರ್ಭದಲ್ಲಿ ಮುಖ ತೋರಿಸುವುದನ್ನು ಬಿಟ್ಟರೆ ಉಳಿದ ಯಾವ ಸಂದರ್ಭದಲ್ಲಿ ಇವರು ರಾಜ್ಯಕ್ಕೆ ಬಂದಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಪ್ರವಾಹ ಎದುರಾದ ಸಂದರ್ಭದಲ್ಲೂ ಇವರು ರಾಜ್ಯಕ್ಕೆ ಬರಲಿಲ್ಲ ಆಕ್ರೋಶ ವ್ಯಕ್ತಪಡಿಸಿದರು.

    ಒಟ್ಟು 240 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಿಸಲಾಗಿದೆ. ರೈತರ ಸಂಕಷ್ಟಗಳನ್ನು ಕೇಳಲು ಇವರು ಬಂದಿದ್ದಾರಾ? 18,171 ಕೋಟಿ ರೂ. ಪರಿಹಾರ ಕೇಳಿದ್ದೇವೆ. ಇಂದಿನವರೆಗೆ ಒಂದು ರೂ. ನೀಡಿಲ್ಲ. ಇವರು ಯಾವ ಮುಖ ಹೊತ್ತುಕೊಂಡು ಮತ ಕೇಳುತ್ತಾರೆ? ಅಮಿತ್ ಷಾ ಅವರನ್ನು ಕರೆದು ಮೆರವಣಿಗೆ ಮಾಡಿಸುವ ಬಿಜೆಪಿ, ಜೆಡಿಎಸ್‌ಗೆ ನಾಚಿಗೆ ಆಗುವುದಿಲ್ಲವೇ? ರೈತರು ಕಷ್ಟ ಪಡಬಾರದು ಎಂದು 33.25 ಲಕ್ಷ ರೈತರಿಗೆ 650 ಕೋಟಿ ರೂ.ಗಳನ್ನು ತಾತ್ಕಾಲಿಕ ಪರಿಹಾರವಾಗಿ ನೀಡಿದ್ದೇವೆ. ಬರಗಾಲ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನಗಳನ್ನು 100 ರಿಂದ 150 ಕ್ಕೆ ಏರಿಸಬೇಕೆಂಬ ನಿಯಮ ಇದ್ದರೂ ಕೇಂದ್ರ ಸರ್ಕಾರ ಈ ಕುರಿತು ಮನಸ್ಸು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts