More

    ಸಿದ್ಧರಾಮಯ್ಯ ಎಸ್ಸಿ, ಎಸ್ಟಿಗೆ ಮೀಸಲಾತಿ ನೀಡಿಲ್ಲ; ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾ ಸಮಾವೇಶದಲ್ಲಿ ಸಚಿವ ಮಾಧುಸ್ವಾಮಿ ಹೇಳಿಕೆ

    ಚಿಕ್ಕನಾಯಕನಹಳ್ಳಿ: ಅಹಿಂದ ಚಾಂಪಿಯನ್ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಎಸ್‌ಸಿ, ಎಸ್‌ಟಿಗೆ ಮೀಸಲಾತಿ ನೀಡಿಲ್ಲ. ಬಿಜೆಪಿ ಸರ್ಕಾರ ಎಸ್ಸಿಗೆ ಶೇ.15ರಿಂದ ಶೇ.17, ಎಸ್ಟಿಗೆ ಶೇ.3ರಿಂದ ಶೇ.7 ಮೀಸಲಾತಿ ಹೆಚ್ಚಿಸಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

    ಪಟ್ಟಣದ ನವೋದಯ ಕಾಲೇಜು ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಬಿಜೆಪಿ ಎಸ್‌ಟಿ ಮೋರ್ಚಾ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದರು.

    ಅಂಬೇಡ್ಕರ್ ಹೇಳಿರುವಂತೆ ಸಂವಿಧಾನ ಇರುವುದು ಜನರ ಸ್ವಾಭಿಮಾನದ ಬದುಕಿಗಾಗಿ. ಅಂತಹ ಸಂವಿಧಾನವನ್ನು ಜನರಿಗಾಗಿಯೇ ತಿದ್ದುಪಡಿ ಮಾಡುತ್ತೇವೆ. ದೇಶದಲ್ಲಿ ಡಬಲ್ ಇಂಜಿನ್ ಸರ್ಕಾರ ಅತಿವೃಷ್ಟಿ, ಕರೊನಾದಂತಹ ಸಮಯದಲ್ಲೂ ಜನರ ಜೀವರಕ್ಷಣೆಗೆ ಔಷಧ, ಚಿಕಿತ್ಸೆ ನೀಡಿ ಕಾಪಾಡಿದ್ದು, ಪ್ರಪಂಚವೇ ತಿರುಗಿ ನೋಡುವಂತೆ ಮಾಡಿದೆ. ಈ ಅವಧಿಯಲ್ಲಿ ಬೇರೆ ಯಾವ ಪಕ್ಷ ಅಧಿಕಾರದಲ್ಲಿದ್ದರೂ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂದರು.

    ಮೀಸಲಾತಿ ನೀಡುವುದು ಸ್ವಾಭಿಮಾನದ ಬದುಕಿಗಾಗಿ. ಅದನ್ನು ಶೆಡ್ಯೂಲ್ 9ರಲ್ಲೂ ತರಲು ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆಯುತ್ತೇವೆ, ಈ ಕುರಿತು ಟೀಕೆ ಬೇಡ. ಹಿಂದೆ ಇದ್ದ ಸರ್ಕಾರ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ ಅನುದಾನದ ಹಣ ಎಸ್‌ಸಿ, ಎಸ್‌ಟಿ ವೈಯಕ್ತಿಕ ಅಭಿವೃದ್ಧಿಗೆ ಖರ್ಚು ಮಾಡದೆ, ಬೇಕಾ ಬಿಟ್ಟಿಯಾಗಿ ಬೆಂಗಳೂರಿನಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕಾಗಿ ಸಾವಿರ ಕೋಟಿ ಹಣ ಖರ್ಚು ಮಾಡಿದ್ದಾರೆ ಎಂದರು.

    ಪಕ್ಷದ ಗೆಲುವಿಗೆ ಸಂಘಟನೆ ಮತ್ತು ಹೋರಾಟ ಮುಖ್ಯವಾಗಿದ್ದು, ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳನ್ನು ಮತದಾರರಿಗೆ ಹೇಳುವ ಮೂಲಕ ಜಿಲ್ಲೆಯ 7ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವ ಕೆಲಸವಾಗಬೇಕು ಎಂದರು.

    ಸಿದ್ಧರಾಮಯ್ಯ ಎಸ್ಸಿ, ಎಸ್ಟಿಗೆ ಮೀಸಲಾತಿ ನೀಡಿಲ್ಲ; ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾ ಸಮಾವೇಶದಲ್ಲಿ ಸಚಿವ ಮಾಧುಸ್ವಾಮಿ ಹೇಳಿಕೆ
    ಚಿಕ್ಕನಾಯಕನಹಳ್ಳಿಯ ನವೋದಯ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾ ಸಮಾವೇಶದ ಪ್ರಯುಕ್ತ ಬಿಜೆಪಿ ಕಚೇರಿಯಿಂದ ನವೋದಯ ಕಾಲೇಜಿನವರೆಗೆ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

    ಹೇಮಾವತಿಗೆ ಸಂಪೂರ್ಣ ನೀರು ಹರಿಸಿದೆ: ಸಣ್ಣ ನೀರಾವರಿ ಯೋಜನೆಯಡಿ ಹೇಮಾವತಿ ನೀರಾವರಿ ಯೋಜನೆಯಿಂದ ಹಂಚಿಕೆಯಾಗಿದ್ದ 24.3 ಟಿಎಂಸಿ ನೀರಲ್ಲಿ 17 ಟಿಎಂಸಿ ಸಿಗುತ್ತಿದ್ದ ನೀರನ್ನು ಸಂಪೂರ್ಣ ಹರಿಸುವಂತೆ ಮಾಡಿದ್ದೇನೆ. ಚಿಕ್ಕನಾಯಕನಹಳ್ಳಿ ತಾಲೂಕಿಗೆ ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆಯಡಿ ನೀರು ಹಂಚಿಕೆ ಮಾಡಿಸಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

    ಹೇಮಾವತಿಗೆ 102 ಕೋಟಿ ರೂ. ಬಿಡುಗಡೆ: ಹೇಮಾವತಿ ನೀರಾವರಿ ಯೋಜನೆಗೆ ಬಿಜೆಪಿ ಸರ್ಕಾರ 102 ಕೋಟಿ ರೂ., ಹಣ ಮಂಜೂರು ಮಾಡಿದೆ. ಆದರೆ ಅದನ್ನು ಈಗ ಕೆಲವರು ತಮ್ಮ ಯೋಜನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಹೇಮಾವತಿ ನಾಲಾ ಕೆಲಸ 10 ವರ್ಷಗಳಿಂದ ನಿಂತಿತ್ತು. ನಾನು ಸಚಿವನಾದ ನಂತರ ಕ್ಷೇತ್ರದ ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದು, ಹಂಚಿಕೆಯಾದ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಪೈಪ್‌ಲೈನ್ ಮೂಲಕ ಕೆರೆಗಳಿಗೆ ಹರಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಮಾಧುಸ್ವಾಮಿ ಹೇಳಿದರು.

    ಸಿದ್ಧರಾಮಯ್ಯ ಎಸ್ಸಿ, ಎಸ್ಟಿಗೆ ಮೀಸಲಾತಿ ನೀಡಿಲ್ಲ; ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾ ಸಮಾವೇಶದಲ್ಲಿ ಸಚಿವ ಮಾಧುಸ್ವಾಮಿ ಹೇಳಿಕೆ

    ಚಿಕ್ಕನಾಯಕನಹಳ್ಳಿಯ ಎಸ್ಟಿ ಜಿಲ್ಲಾ ಸಮಾವೇಶದಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು.

    ಸರ್ಕಾರ ಪ್ರತಿ ತಾಲೂಕು, ಜಿಲ್ಲೆಗಳಲ್ಲಿ ವಾಲ್ಮೀಕಿ ಭವನ, ಎಸ್‌ಸಿ, ಎಸ್‌ಸಿ ಸಮುದಾಯಕ್ಕೆ 70 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುತ್ತಿದೆ. ಈ ಭಾಗದ 7 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸಲು ಕಾರ್ಯಕರ್ತರು ಕೆಲಸ ಮಾಡಬೇಕು.
    ರವಿಶಂಕರ್ ಹೆಬ್ಬಾಕ, ಜಿಲ್ಲಾ ಬಿಜೆಪಿ ಅಧ್ಯಕ್ಷ

    ಪಟ್ಟಣದ ಬಿಜೆಪಿ ಕಚೇರಿಯಿಂದ ನೆಹರು ವೃತ್ತ, ಶೆಟ್ಟಿಕೆರೆಗೇಟ್ ಮೂಲಕ ನವೋದಯ ಕಾಲೇಜಿನವರೆಗೆ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು.
    ರಾಜ್ಯ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ನರಸಿಂಹನಾಯಕ್, ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ವಿಜಯ್‌ಕುಮಾರ್, ಉಪಾದ್ಯಕ್ಷ ಬೆಳ್ಳಿಗಂಗಾಧರ್, ಎಸ್ಟಿ ಮೋರ್ಚಾ ನಾಯಕಿ ಹೇಮಲತಾ, ಬಿಜೆಪಿ ಮಂಡಲಾಧ್ಯಕ್ಷ ಕೇಶವಮೂರ್ತಿ, ಪ್ರಧಾನ ಕಾರ್ಯದರ್ಶಿ ನಿರಂಜನಮೂರ್ತಿ, ತಾಲೂಕು ಎಸ್‌ಟಿ ಮೋರ್ಚಾ ಅಧ್ಯಕ್ಷ ಕುಮಾರಸ್ವಾಮಿ, ಮಧುಗಿರಿ ಎಸ್‌ಟಿ ಮೋರ್ಚಾ ಅಧ್ಯಕ್ಷ ಬಿ.ಎಂ.ಶಿವಕುಮಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಿಲಿಟರಿ ಶಿವಣ್ಣ, ಪುರಸಭೆ ಮಾಜಿ ಅಧ್ಯಕ್ಷ ರಂಗಸ್ವಾಮಿ, ಸದಸ್ಯ ರೇಣುಕಪ್ರಸಾದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts