More

    ಕೆಎಫ್‌ಡಿಗೆ ಸಿದ್ದಾಪುರದ ಮಹಿಳೆ ಬಲಿ, ಮೃತರ ಸಂಖ್ಯೆ 4ಕ್ಕೆ ಏರಿಕೆ

    ಶಿವಮೊಗ್ಗ: ಕೆಎಫ್‌ಡಿ(ಕ್ಯಾಸನೂರು ಫಾರೆಸ್ಟ್ ಡಿಸೀಸ್) ಪಾಸಿಟಿವ್ ಹೊಂದಿದ್ದ ಮಹಿಳೆ ಭಾನುವಾರ ರಾತ್ರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ಪ್ರಸಕ್ತ ವರ್ಷ ಮೃತರ ಸಂಖ್ಯೆ ನಾಲ್ಕಕ್ಕೇ ಏರಿಕೆಯಾಗಿದೆ. ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯವರೇ ಇಬ್ಬರು ಎಂಬುದು ಆ ಭಾಗದಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

    ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೋರ್ಲಕೈ ಗ್ರಾಮದ ನಾಗಮ್ಮ ಸುಬ್ಬ ಮಡಿವಾಳ(57) ಮೃತರು. ಜ.28ರಂದು ಕೋರ್ಲಕೈ ಗ್ರಾಮದ ಆಶಾ ಕಾರ್ಯಕರ್ತೆ ಮನೆ ಭೇಟಿ ನೀಡಿದ್ದಾಗ ನಾಗಮ್ಮ ಅವರಿಗೆ ಕೆಮ್ಮು ಮತ್ತು ಜ್ವರ ಇರುವುದು ಕಂಡುಬಂದಿತ್ತು. ಅವರಿಗೆ ಕಫ ಪರೀಕ್ಷೆಗೆ ನೀಡಲು ಹಾಗೂ ಆಸ್ಪತ್ರೆಗೆ ಹೋಗಲು ತಿಳಿಸಲಾಗಿತ್ತು. ಆದರೆ ನಾಗಮ್ಮ ತಾನು ಆರಾಮಾಗಿರುವುದಾಗಿ ಹೇಳಿದ್ದರು.
    ತದನಂತರ ಮರುದಿನ(ಜ.29) ಸಾಗರದ ಭಾಗವತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಮರಳಿದ್ದರು. ಜ.30ರಂದು ಸಮುದಾಯ ಆರೋಗ್ಯಾಧಿಕಾರಿಗಳು ನಾಗಮ್ಮ ಅವರ ಮನೆಗೆ ಭೇಟಿ ನೀಡಿದ್ದು ಅವರಿಗೆ ಜ್ವರ ಇದ್ದ ಕಾರಣ ರಕ್ತದ ಮಾದರಿ ತೆಗೆದುಕೊಂಡು ಹೋಗಿದ್ದರು. ಫೆ.1ರಂದು ಕೆಎಫ್‌ಡಿ ಆರ್‌ಟಿಪಿಸಿಆರ್ ಪಾಸಿಟಿವ್ ಎಂದು ಶಿವಮೊಗ್ಗದ ವಿಡಿಎಲ್ನಿಂದ ಬಂದ ವರದಿಯಲ್ಲಿ ದೃಢಪಟ್ಟಿತ್ತು.
    ಫೆ.2ರಂದು ನಾಗಮ್ಮ ಅವರನ್ನು ಸಿದ್ದಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚೇತರಿಕೆಯಾಗದ ಕಾರಣ ಅವರನ್ನು ಮರುದಿನ(ಫೆ.3) ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿಯೂ ಚೇತರಿಕೆ ಆಗದ ಅವರನ್ನು ಫೆ.4ರಂದು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
    ಐಸಿಯು(ತೀವ್ರ ನಿಗಾ ಘಟಕ)ದಲ್ಲಿ ಚಿಕಿತ್ಸೆ ಪಡೆದಿದ್ದ ಅವರಿಗೆ ಫೆ.5ರಂದು ಮತ್ತೊಮ್ಮೆ ರಕ್ತ ಪರೀಕ್ಷೆ ಮಾಡಿದ್ದು ಅದರಲ್ಲೂ ಕೆಎಫ್‌ಡಿ ಪಾಸಿಟಿವ್ ಬಂದಿತ್ತು. ಅಲ್ಲಿಂದ 20 ದಿನ ಚಿಕಿತ್ಸೆ ಪಡೆದಿದ್ದ ನಾಗಮ್ಮ ಅವರು ವೈದ್ಯರ ಸಲಹೆ ವಿರುದ್ಧವಾಗಿ ಕೆಎಂಸಿ ಆಸ್ಪತ್ರೆಯಿಂದ ಫೆ.24ರಂದು ಮಧ್ಯಾಹ್ನ 3.30ಕ್ಕೆ ಬಿಡುಗಡೆ ಹೊಂದಿದ್ದರು.
    ಇದರಿಂದ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆಯವರು ಅವರ ಮನವೊಲಿಸಿ ಅದೇ ದಿನ ಸಂಜೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಿದ್ದರು. ಆದರೆ ಭಾನುವಾರ ರಾತ್ರಿ ಚಿಕಿತ್ಸೆ ಫಲಿಸದೇ ನಾಗಮ್ಮ ಅವರು ಮರಣ ಹೊಂದಿದ್ದಾರೆ ಎಂದು ಡಿಎಚ್‌ಒ ಡಾ.ರಾಜೇಶ್ ಸುರಗಿಹಳ್ಳಿ ಖಚಿತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts