More

    ಸಿದ್ದಾಪುರ- ಈಳಿಗನೂರು ಮಾರ್ಗ ದುರಸ್ತಿಗೆ ಆಗ್ರಹ; ಹದಗೆಟ್ಟ ರಸ್ತೆಗೆ ಬೇಲಿ ಹಾಕಿ ಗ್ರಾಮಸ್ಥರ ಪ್ರತಿಭಟನೆ

    ಸಿದ್ದಾಪುರ: ಸಿದ್ದಾಪುರದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿ ಹಾಗೂ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಈಳಿಗನೂರು ಗ್ರಾಮಸ್ಥರು ಮಂಗಳವಾರ ರಸ್ತೆಗೆ ಬೇಲಿ ಹಾಕಿ ಪ್ರತಿಭಟನೆ ನಡೆಸಿದರು.

    ಎರಡು ದಿನಗಳ ಹಿಂದೆ ಆಟವಾಡಲು ಸಹೋದರರಿಬ್ಬರು ಸೈಕಲ್‌ನಲ್ಲಿ ತೆರಳುವಾಗ ಆಯತಪ್ಪಿ ಹಳ್ಳಕ್ಕೆ ಬಿದ್ದಿದ್ದರು. ಒಬ್ಬ ಈಜಿ ದಡ ಸೇರಿದರೆ, ನಂದಾ ಬಡಿಗೇರ್ ಮೃತಪಟ್ಟ. ರಸ್ತೆಯಲ್ಲಿ ಬಿದ್ದಿರುವ ತಗ್ಗು ದಿನ್ನೆಗಳೇ ಅವಘಢಕ್ಕೆ ಕಾರಣ. ಜನಪ್ರತಿನಿಧಿಗಳು ಚುನಾವಣೆ ಸಮೀಪಿಸಿದಾಗ ಮಾತ್ರ ಜನರ ಸಮಸ್ಯೆ ಆಲಿಸುತ್ತಾರೆ. ಬಳಿಕ ಹಳ್ಳಿಗಳ ಕಡೆ ಮುಖ ಮಾಡಲ್ಲ. ನಿತ್ಯ ನಾವು ಸಮಸ್ಯೆ ಎದುರಿಸಬೇಕಾಗಿದೆ. ಕೆಟ್ಟ ರಸ್ತೆಯಿಂದಲೇ ಅಮೂಲ್ಯ ಜೀವಗಳು ಬಲಿಯಾಗುತ್ತಿವೆ. ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆ ದುರಸ್ತಿ ಹಾಗೂ ಗ್ರಾಮಕ್ಕೆ ಹೊಸದಾಗಿ ಸೇತುವೆ ನಿರ್ಮಾಣ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದರು. ಈ ಬಗ್ಗೆ ಕೆಲ ದಿನಗಳಲ್ಲಿ ಸೂಕ್ತ ಸ್ಪಂದನೆ ದೊರೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಗ್ರಾಮಸ್ಥರಾದ ಶಿವಣ್ಣ, ಹನುಮೇಶ್ ಗುಂಜಳ್ಳಿ, ತುಪ್ಪಣ್ಣ, ಡಿ. ಹುಲ್ಲೇಶ್, ಬಸವರಾಜ ಬಡಿಗೇರ್, ದ್ಯಾಮಪ್ಪ ವಕೀಲರು, ಹನುಮೇಶ್ ಬಜಾರ್, ಹನುಮಂತ ಕಲಿಕೇರಿ, ಕೃಷ್ಣಪ್ಪ, ಶಿವರಾಜ ಗೌಡ, ದೇವೇಂದ್ರಪ್ಪ, ಶಾಂತಕುಮಾರ್, ಹಿರೇದುರುಗಮ್ಮ, ಬಸಮ್ಮ, ಫಕೀರಮ್ಮ, ಗಿರಿಜಮ್ಮ ಇದ್ದರು.

    ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್, ಇಒ ಭೇಟಿ
    ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಎಂ.ಬಸವರಾಜ ಹಾಗೂ ತಾಪಂ ಇಒ ಡಾ.ಡಿ.ಮೋಹನ್ ಭೇಟಿ ನೀಡಿ, ಸಮಸ್ಯೆ ಆಲಿಸಿದರು. ಇಒ ಮೋಹನ್ ಮಾತನಾಡಿ, ಸೈಕಲ್ ಆಯತಪ್ಪಿ ಬಿದ್ದು ಬಾಲಕ ಮೃತಪಟ್ಟಿದ್ದು, ಮರೆಯಲಾಗದ ದುರ್ಘಟನೆ. ರಸ್ತೆ ದುರಸ್ತಿ ಹಾಗೂ ಸೇತುವೆ ನಿರ್ಮಾಣ ಸಂಬಂಧ ಈಗಾಗಲೇ ಶಾಸಕ ಬಸವರಾಜ ದಢೇಸುಗೂರು ಗಮನಕ್ಕೆ ತರಲಾಗಿದೆ. ಅವರು ಸಹ ಸೂಕ್ತ ಸ್ಪಂದನೆ ನೀಡಿದ್ದಾರೆ. ತಾತ್ಕಾಲಿಕವಾಗಿ ರಸ್ತೆ ಪಕ್ಕದ ಬೇಲಿಗಳನ್ನು ಸ್ವಚ್ಛಗೊಳಿಸಲಾಗುವುದು. ಗುಂಡಿಗಳು ಬಿದ್ದ ಕಡೆ ಮುಚ್ಚುವ ಕೆಲಸ ಮಾಡುತ್ತೇವೆ. ನೂತನ ಸೇತುವೆ ನಿರ್ಮಾಣವಾಗುವವೆರೆಗೂ ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸಬೇಕು. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts