More

    ನಾಳೆಯಿಂದ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವ

    ಹನೂರು : ಪಟ್ಟಣದ ಅಧಿದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವವು ಏ.1 ರಿಂದ 4 ದಿನಗಳ ಕಾಲ ನಡೆಯಲಿದ್ದು, ಇದೇ ಮೊದಲ ಬಾರಿಗೆ ರಥೋತ್ಸವವು ಜರುಗಲಿದೆ. ನೂತನ ತೇರನ್ನು ನಿರ್ಮಾಣ ಮಾಡಲಾಗಿದೆ.

    ಸುಮಾರು 500 ವರ್ಷಗಳ ಇತಿಹಾಸವನ್ನು ಹೊಂದಿರುವ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರೋತ್ಸವಕ್ಕೆ ತಮಿಳುನಾಡು ಸೇರಿದಂತೆ ಬೆಂಗಳೂರು, ಮೈಸೂರು, ಮಂಡ್ಯ, ಚಾ.ನಗರ ಸೇರಿದಂತೆ ಇನ್ನಿತರೆ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಜಾತ್ರೋತ್ಸವದ ಅಂಗವಾಗಿ ಏ. 1 ರಂದು ರಾತ್ರಿ ಜಾಗರ ಸಮರ್ಪಣೆ, 2 ರಂದು ತಂಪುಜ್ಯೋತಿ, 3 ರಂದು ಬಾಯಿಬೀಗ ಹಾಗೂ 4 ರಂದು ಅಗ್ನಿಕುಂಡ ದರ್ಶನದ ಮೂಲಕ ಜಾತ್ರೆಯು ಮುಕ್ತಾಯವಾಗಲಿದೆ.

    ಜಾತ್ರೆಯ ವಿಶೇಷತೆ: ಈಗಾಗಲೇ 15 ದಿನ ಮುಂಚಿತವಾಗಿಯೇ ತಮಟೆ ಸಾರುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ. ಅರ್ಚಕರಿಗೆ ವಿಧಿ ವಿಧಾನಗಳ ಮೂಲಕ ಕಂಕಣ ಕಟ್ಟಿದ್ದು, ದೇಗುಲದ ಮುಂಭಾಗ ಅಗ್ನಿಕುಂಡ ಕಂಬವನ್ನು ಪ್ರತಿಷ್ಠಾಪಿಸಲಾಗಿದೆ. ಅದರ ಮೇಲೆ ಮಣ್ಣಿನ ಮಡಿಕೆಯ ಕರಗವನ್ನು ಇಟ್ಟು ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ಈ ಕಂಬವೇ ಬೆಟ್ಟಳ್ಳಿ ಮಾರಮ್ಮನ ಪತಿ ದೇವರು ಎಂಬ ಪ್ರತೀತಿ ಇದೆ. ಈ ಕಂಬ ಹಾಕಿದ ದಿನದಿಂದ ಪ್ರತಿ ದಿನ ರಾತ್ರಿ ರಂಗಕುಣಿತ ಪ್ರಾರಂಭವಾಗಿದ್ದು, ಪಟ್ಟಣದಲ್ಲಿ ಮಾಂಸ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಸಾಂಬಾರ ಪದಾರ್ಥಗಳ ಒಗ್ಗರಣೆ ನಿಲ್ಲಿಸಲಾಗಿದೆ. ಇದರಿಂದ ಪಟ್ಟಣದಲ್ಲಿ ಮಾಂಸದ ಅಂಗಡಿಗಳು, ಮಾಂಸಾಹಾರಿ ಹೋಟೆಲ್‌ಗಳು ಮುಚ್ಚಿದ್ದು, ಸಂಪೂರ್ಣವಾಗಿ ಮಾಂಸಾಹಾರ ರಹಿತ ಪಟ್ಟಣವಾಗಿ ಮಾರ್ಪಟ್ಟಿದೆ. ಇಲ್ಲಿನ ಮತ್ತೊಂದು ವಿಶೇಷತೆ ಎಂದರೆ ಈ ಜಾತ್ರಾ ಮಹೋತ್ಸವವು ಸಾಮರಸ್ಯತೆಯ ಸಂಕೇತವಾಗಿದೆ. ಆದ್ದರಿಂದ ಪಟ್ಟಣದ ಮುಸ್ಲಿಮರು ಸಹ ಮಾಂಸಾಹಾರವನ್ನು ತ್ಯಜಿಸಿದ್ದು, ಜಾತ್ರೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಜಾತ್ರೋತ್ಸವಕ್ಕೆ ದೇಗುಲದ ಆಡಳಿತ ಮಂಡಳಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ನೂತನ ತೇರು ನಿರ್ಮಾಣ: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರೋತ್ಸವದಲ್ಲಿ ಇದೇ ಮೊದಲ ಬಾರಿಗೆ ಏ.2 ರಂದು ಮಧ್ಯಾಹ್ನ 12 ಗಂಟೆಗೆ ರಥೋತ್ಸವವು ಜರುಗಲಿದ್ದು, ಮೈಸೂರು ಮೇಟಗಳ್ಳಿಯ ವೆಂಕಟೇಶ್‌ಮೂರ್ತಿ ನೇತೃತ್ವದ ತಂಡದಿಂದ ಈಗಾಗಲೇ ನೂತನ ತೇರನ್ನು ಸಿದ್ಧಪಡಿಸಲಾಗಿದೆ. 14.5 ಅಡಿ ಎತ್ತರವಿರುವ ಈ ನೂತನ ತೇರಿನಲ್ಲಿ ಸಿಂಹ, ಕುದುರೆ, ಆನೆ, ವಿವಿಧ ದೇವಿಯ ವಿಗ್ರಹಮೂರ್ತಿ, ಅಷ್ಟಕಂಬ ಹಾಗೂ 4 ಚಕ್ರವನ್ನು ಒಳಗೊಂಡಂತೆ ವಿವಿಧ ಕೆತ್ತನೆಯ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಭಕ್ತರನ್ನು ಆಕರ್ಷಿಸುವಂತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts