More

    ಪ್ರಪ್ರಥಮ ವಿಷ್ಣು ಸಹಸ್ರನಾಮ ಕ್ಷೇತ್ರ ಶ್ರೀಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವಾಲಯ

    (ಜಗತ್ತಿನ ಮೊದಲ ವಿಷ್ಣುಸಹಸ್ರನಾಮ ಕ್ಷೇತ್ರವಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿರುವ ಶ್ರೀಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವಾಲಯ ರೂಪುಗೊಂಡಿದೆ. ವಿಷ್ಣು ಸಹಸ್ರನಾಮದ 108 ಶ್ಲೋಕಗಳ ಪೈಕಿ ಒಂದೊಂದು ಶ್ಲೋಕವು ಕೆತ್ತಲ್ಪಟ್ಟ ಶಿಲಾ ಮೆಟ್ಟಿಲು (ಶಿಲಾ ಸೋಪಾನದ) ‘ಕೃಷ್ಣಾರ್ಪಣ’ ಕಾರ್ಯಕ್ರಮ ಮಾ. 21ರಂದು ಸಂಪನ್ನಗೊಳ್ಳಲಿದೆ.)

    • ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ

    ಮಹಾಭಾರತದ ಶಾಂತಿಪರ್ವ, ಅನುಶಾಸನ ಪರ್ವದಲ್ಲಿ ಭೀಷ್ಮರು ಧರ್ಮರಾಜನಿಗೆ ಮಾಡಿದ ಉಪದೇಶದ ಭಾಗವಾಗಿ ವಿಷ್ಣುಸಹಸ್ರನಾಮ ಬಂದಿದೆ. ಅವರು ಹೇಳಿದ ಒಂದೊಂದು ಧರ್ಮ ತತ್ತ್ವಗಳು ಅತಿಶಯವಾಗಿ ಕಂಡುಬಂದು, ಧರ್ಮರಾಜ ಇಷ್ಟು ಧರ್ಮಗಳಲ್ಲಿ ಉತ್ತಮೋತ್ತಮ ಧರ್ಮ ಯಾವುದು ಎಂದು ಕೇಳುತ್ತಾನೆ. ಹಾಗೆಯೇ ಸವೋತ್ಕೃಷ್ಟ ದೇವ ಯಾರು, ಪರಮ ಪುರುಷಾರ್ಥ ಯಾವುದು, ಯಾವ ದೈವವನ್ನು ಸ್ತುತಿಸಿದರೆ ಅತ್ಯಂತ ಹೆಚ್ಚಿನ ಶುಭವಾಗುತ್ತದೆ, ಎಲ್ಲ ಧರ್ಮಗಳಲ್ಲಿ ಅತ್ಯಂತ ಶ್ರೇಷ್ಠ ಧರ್ಮ ಯಾವುದು? ಯಾರನ್ನು ಅರ್ಚಿಸಿದರೆ ಮಹಾಫಲ ಲಭ್ಯವಾಗುತ್ತದೆ, ಯಾವ ಸ್ತೋತ್ರ ಜಪಿಸಿದರೆ ಭವ ಸಾಗರದಿಂದ ಸುಲಭವಾಗಿ ಪಾರಾಗಬಹುದು… ಇತ್ಯಾದಿ.

    ಸಾರ್ಥಕ ಸಮರ್ಥರಾದ ಭೀಷ್ಮಾಚಾರ್ಯರು ಗಂಗಾ ಪುತ್ರರು ಪವಿತ್ರಾತ್ಮನ ಸರ್ವ ಶಾಸ್ತ್ರಜ್ಞಾನ ತಿಳಿದಿದ್ದವರು ಅಲ್ಲೇ ಘೊಷಿಸಿದರು – ‘ಜಗತ್ತಿಗೆ ಒಡೆಯನಾದ, ದೇವ ದೇವನಾದ, ಅನಂತನಾದ ಮಹಾವಿಷ್ಣುವನ್ನು ಸಹಸ್ರನಾಮದಿಂದ ಸ್ತುತಿಸುವವರು ನಿರಂತರವಾಗಿ ಸಾಧನೆಯ ದಾರಿಯಲ್ಲಿ ಅಭಿವೃದ್ಧಿ, ಅಭ್ಯುದಯದ ಪಥದಲ್ಲಿರುತ್ತಾರೆ. ವಿಷ್ಣುವೇ ಪರದೈವ, ಅವನ ಪೂಜೆಯೇ ಪುರುಷಾರ್ಥ, ಅದರಿಂದಲೇ ಮಹಾ ಫಲ, ವಿಷ್ಣು ಸಹಸ್ರನಾಮ ಪಾರಾಯಣವೇ ಶ್ರೇಷ್ಠ ಧರ್ಮ’.

    ವಿಷ್ಣು ಸಹಸ್ರನಾಮದ ಬಲ: ಪವಿತ್ರಕ್ಕೆ ಪವಿತ್ರ-ಮಂಗಳಕ್ಕೆ ಮಂಗಳ ಎಂದರೆ ವಿಷ್ಣು ಸಹಸ್ರನಾಮ. ಇದನ್ನು ಪಾರಾಯಣ ಮಾಡುವವರ ಮನೆಯಲ್ಲಿ ಎಂದಿಗೂ ಅಮಂಗಳ ಎನ್ನುವುದು ಇರುವುದಿಲ್ಲ. ಅವರ ಮನೆ-ಮನ ಪಾವನವಾಗುತ್ತದೆ. ಇದರ ಪಾರಾಯಣದಿಂದ ಯಶಸ್ಸು ಶ್ರೇಯಸ್ಸು ಲಭ್ಯವಾಗುತ್ತದೆ. ಎಲ್ಲ ದುಃಖ, ಭಯ, ತಾಪತ್ರಯ, ಆಪತ್ತುಗಳು ನಿವಾರಣೆಯಾಗುತ್ತವೆ. ಆರೋಗ್ಯ, ಕಾಂತಿ, ಸೌಂದರ್ಯ, ಅಂತಃಕರಣ ಶುದ್ಧಿಯಾಗುತ್ತದೆ. ಶ್ರದ್ಧೆ-ಭಕ್ತಿಯಿಂದ ಹೇಳುವವರಿಗೆ ಸುಖ, ಶಾಂತಿ, ಸಂಪತ್ತು, ಧೈರ್ಯ, ಆತ್ಮಸ್ಥೈರ್ಯ, ಕೀರ್ತಿ, ನೆಮ್ಮದಿ, ಪ್ರೀತಿ ಗೌರವಗಳು ವೃದ್ಧಿಸುತ್ತವೆ. ಕಾರ್ಯಕ್ರಮ ಮತ್ತು ವಿಷ್ಣು ಸಹಸ್ರನಾಮ ಕ್ಷೇತ್ರದ ಕುರಿತ ಮಾಹಿತಿಗೆ 94824 77585 / 9449022228.

    ಹೀಗಿರಲಿದೆ ದರ್ಶನ…

    ಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವಸ್ಥಾನ ರಾಷ್ಟ್ರೀಯ ಹಾಗೂ ಅಂತಾರಾಷ್ಟಿ›ೕಯ ಸ್ವರೂಪದ ವಿಷ್ಣುಸಹಸ್ರನಾಮ ಅಧ್ಯಯನ ಕೇಂದ್ರವಾಗಿ ರೂಪುಗೊಳ್ಳಲಿದೆ. ಈ ಕ್ಷೇತ್ರ ಭಕ್ತಿಪಂಥದ ಹೊಸ ಆಂದೋಲನದ ಮೂಲಕ ಭಾರತೀಯರ ಏಕತೆ, ಸಹಬಾಳ್ವೆ, ಅನ್ಯೋನ್ಯತೆ, ಸಾತ್ವಿಕ ಜೀವನದ ಹೊಸದೊಂದು ಶಾಂತಿಯುಗದ ನಿರ್ವಣಕ್ಕೆ ಕಾರಣವಾಗಲಿದೆ. ಇದು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಸಂಕಲ್ಪ ಸಿದ್ಧಿ ಸಾಧನವಾಗಿ ಮೂಡಿಬಂದಿದೆ. ವಿಷ್ಣುಸಹಸ್ರನಾಮದ 108 ಶ್ಲೋಕಗಳನ್ನು ಪ್ರತಿನಿಧಿಸಿದಂತೆ, 108 ಸೋಪಾನಗಳನ್ನೇರಿ, ಅಂತಿಮ ಶ್ಲೋಕಕ್ಕೆ ಬಂದಾಗ ಗೋವರ್ಧನ ಗಿರಿಧಾರಿಯ ದರ್ಶನವಾಗಲಿದೆ. ಒಂದೊಂದು ಸೋಪಾನದಲ್ಲೂ ವಿಷ್ಣುಸಹಸ್ರನಾಮದ ಒಂದೊಂದು ಶ್ಲೋಕಗಳನ್ನು ಹೇಳುತ್ತಾ ಕೊನೆಯ ಮೆಟ್ಟಿಲನ್ನು ಏರಿದಾಗ ಭಗವದ್ದರ್ಶನದ ಭಾವ ಅನುಭಾವ ಮತ್ತು ಅನುಭವ ಆಗುತ್ತದೆ. ಇವು ಬರಿಯ ಸೋಪಾನಗಳಲ್ಲ. ಮುಕ್ತಿಲೋಕಕ್ಕೆ ಕೊಂಡೊಯ್ಯುವ ಪವಿತ್ರ ಪಾವಟಿಗೆಗಳು.

    ಕೋಟ್ಸ್​

    ”ಪ್ರಾಚೀನ ಋಷಿ ಮುನಿ ಗಳ ತಪೋವಾಕ್ಯಗಳ ಪಾರಾಯಣದ ಅನುರಣದ ರೀತಿಯಲ್ಲಿ ವಿಷ್ಣುಸಹಸ್ರನಾಮ ತರಂಗಗಳು ಒಬ್ಬ ಹಿರಿಯರಿಗೆ ಅನುಭವಕ್ಕೆ ಬಂದಿದ್ದೇ ಒಂದು ಸೋಜಿಗ. ಸುತ್ತಲೂ ಕಾಮಧೇನು, ಕಲ್ಪವೃಕ್ಷ. ಮಧ್ಯೆ ಚಿಂತಾ ಸಂತಾಪ ಗಳನ್ನು ನಿವಾರಿಸಬಲ್ಲ ಚಿಂತಾಮಣಿ ಈ ಕ್ಷೇತ್ರ. ಶ್ರೀಗಳ ಅಮೃತ ಹಸ್ತದಿಂದ 108 ಪವಿತ್ರ ಶಿಲಾಪಾವಟಿಗೆಗಳ ಲೋಕಾರ್ಪಣೆ ನೆರವೇರಲಿದೆ”

    -ಕೃಷ್ಣಪ್ರಸಾದ್ ಕಾರ್ಯನಿರ್ವಹಣಾ ಸಂಚಾಲಕರು, ವಿಷ್ಣುಸಹಸ್ರನಾಮ ಕ್ಷೇತ್ರ, ರಾಮಚಂದ್ರಾಪುರಮಠ

    ”ಒಂದೆಡೆ ಹರಿಯುವ ಶರಾವತಿ, ಇನ್ನೊಂದೆಡೆ ಗೋಪಾಲಕೃಷ್ಣ ದೇವಸ್ಥಾನ. ಸುತ್ತಲೂ ಗೋವುಗಳ ಸಾನ್ನಿಧ್ಯ. ವಿಷ್ಣುಸಹಸ್ರನಾಮದ 108 ಶ್ಲೋಕಗಳ ಸಂಕೇತವಾಗಿ ನಿರ್ವಿುಸುವ ಪವಿತ್ರ ಶಿಲಾ ಸೋಪಾನ ಮಾಲಿಕೆಯ ಲೋಕಾರ್ಪಣೆ, ವಿಷ್ಣುಸಹಸ್ರನಾಮ ಕ್ಷೇತ್ರದ ಘೊಷಣೆ ಹಾಗೂ ಸಾಮೂಹಿಕ ಪಾರಾಯಣ ಇದೇ ಮಾ. 21ರ ಭಾನುವಾರ ವ್ಯವಸ್ಥೆಯಾಗಿದೆ. ಆಸ್ತಿಕರೆಲ್ಲರೂ ಭಾಗವಹಿಸಬೇಕೆಂಬುದು ನಮ್ಮ ಅಪೇಕ್ಷೆ”

    -ಡಾ.ಸೀತಾರಾಮ ಪ್ರಸಾದ್

    ಪ್ರಧಾನ ಸಂಚಾಲಕರು, ಪವಿತ್ರ ಶಿಲಾಪಾವಟಿಗೆ ಲೋಕಾರ್ಪಣಾ ಸಮಿತಿ

    • (ಲೇಖಕರು ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ್ ಫೆಡರೇಶನ್ ಸಂಸ್ಥಾಪಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts