More

    ಹಳಿ ತಪ್ಪಿದ ಶ್ರಮಿಕ ಎಕ್ಸ್‌ಪ್ರೆಸ್, ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ರೈಲು

    ಮಂಗಳೂರು: ಕೇರಳದ ತಿರೂರಿನಿಂದ ಜೈಪುರಕ್ಕೆ ತೆರಳುತ್ತಿದ್ದ ಶ್ರಮಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (06188) ಮಂಗಳವಾರ ನಸುಕಿನ ಜಾವ ಪಡೀಲ್ ಬಳಿ ಹಳಿ ತಪ್ಪಿದೆ. ಅದೃಷ್ಟವಶಾತ್ ರೈಲಿನ ಇಂಜಿನ್ ಮಾತ್ರ ಹಳಿ ತಪ್ಪಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

    1458 ವಲಸೆ ಕಾರ್ಮಿಕರಿದ್ದ ಜೈಪುರ ರೈಲು ಮಂಗಳೂರು ಜಂಕ್ಷನ್ ನಿಲ್ದಾಣದಿಂದ ನಸುಕಿನ ಜಾವ 1.35ಕ್ಕೆ ಸಾಗಿತ್ತು. ಸಿಗ್ನಲ್ ದಾಟುತ್ತಿದ್ದಂತೆ ಹೋಗಬೇಕಾದ ಹಳಿ ಬಿಟ್ಟು ಚಲಿಸಿದ್ದು, ತಕ್ಷಣ ಲೋಕೋಪೈಲಟ್ ಬ್ರೇಕ್ ಹಾಕಿ ಇಂಜಿನ್ ನಿಲ್ಲಿಸಿದ್ದಾರೆ. ಉಳಿದ ಬೋಗಿಗಳು ಹಳಿಯಲ್ಲೇ ಇದ್ದುದರಿಂದ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ.
    ರೈಲಿನ ಇಂಜಿನ್ ಪ್ರತ್ಯೇಕಿಸಿ ಬೋಗಿಗಳಿಗೆ ರಿಲೀಫ್ ಇಂಜಿನ್ ಹಿಂಬದಿಯಿಂದ ಅಳವಡಿಸಿ ಮುಂಜಾನೆ 4.10ಕ್ಕೆ ಮಂಗಳೂರು ಜಂಕ್ಷನ್‌ಗೆ ತರಲಾಯಿತು. ಬಳಿಕ ಬೇರೆ ಲೋಕೊ ಅಳವಡಿಸಿ 5.55ಕ್ಕೆ ರೈಲು ಹೊರಟಿದ್ದು, ತೋಕೂರಿನಲ್ಲಿ 6.28ಕ್ಕೆ ಕೊಂಕಣ ರೈಲ್ವೆಗೆ ಹಸ್ತಾಂತರಿಸಲಾಗಿದೆ.

    ಹಳಿ ತಪ್ಪಿದ ಇಂಜಿನ್‌ನ್ನು ಮಂಗಳವಾರ ಬೆಳಗ್ಗೆ 10.30ರ ಸುಮಾರಿಗೆ ಮರಳಿ ಹಳಿಗೆ ತರಲಾಯಿತು. ಘಟನೆ ಕುರಿತು ರೈಲ್ವೆ ಇಲಾಖೆ ತನಿಖೆಗೆ ಆದೇಶಿಸಿದೆ. ಲೋಕೋಪೈಲಟ್, ಸಿಗ್ನಲ್ ವಿಭಾಗ ಹಾಗೂ ಸ್ಟೇಷನ್ ಮಾಸ್ಟರ್ ವಿರುದ್ಧ ತನಿಖೆ ನಡೆಯಲಿದೆ. ಸಿಗ್ನಲ್ ಇಲ್ಲದ ಹಳಿಯಲ್ಲಿ ರೈಲು ಚಲಾಯಿಸಿರುವುದೇ ಇಂಜಿನ್ ಹಳಿ ತಪ್ಪಲು ಕಾರಣ ಎನ್ನಲಾಗಿದೆ.

     ಮುಂದಿತ್ತೇ ಗೂಡ್ಸ್ ರೈಲು?
    ಸ್ಥಳೀಯರು ಹೇಳುವ ಪ್ರಕಾರ ಶ್ರಮಿಕ್ ಎಕ್ಸ್‌ಪ್ರೆಸ್‌ನ ಲೋಕೋ ಪೈಲಟ್‌ಗೆ ಹಸಿರು ಸಿಗ್ನಲ್ ಇರಲಿಲ್ಲ, ಕಾರಣ ಎದುರುಗಡೆಯಿಂದ ಗೂಡ್ಸ್ ಟ್ರೈನ್ ಬರುತ್ತಿತ್ತು. ಆದರೂ ಮುಂದೆ ಚಲಿಸಿದ ಪೈಲಟ್‌ಗೆ ಮುಂಭಾಗದಲ್ಲಿ ಗೂಡ್ಸ್ ರೈಲು ಕಂಡಿದ್ದರಿಂದ ತರಾತುರಿಯಲ್ಲಿ ಅಪಘಾತ ತಪ್ಪಿಸುವುದಕ್ಕಾಗಿ ಬೇರೆ ಹಳಿಯಲ್ಲಿ ಚಲಿಸಿದ್ದಾನೆ, ಅದುವೇ ಹಳಿ ತಪ್ಪುವುದಕ್ಕೆ ಕಾರಣ ಎನ್ನಲಾಗಿದೆ. ಒಂದು ವೇಳೆ ಈ ವೇಳೆ ಎಲ್ಲಾದರೂ ಗೂಡ್ಸ್ ರೈಲಿಗೆ ಮುಖಾಮುಖಿ ಡಿಕ್ಕಿಯಾಗಿದ್ದರೆ ಸಾಕಷ್ಟು ಪ್ರಾಣಹಾನಿ ಆಗುವ ಸಾಧ್ಯತೆ ಇತ್ತು ಎಂದೂ ಸ್ಥಳೀಯರು ಹೇಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts