More

    ಅನ್ನ-ಜ್ಞಾನ ದಾಸೋಹದ ಶ್ರದ್ಧಾ ಕೇಂದ್ರ

    ಮುಂಡರಗಿ: ಹಸಿದು ಬಂದವರಿಗೆ ಅನ್ನ, ನೈತಿಕ ಶಿಕ್ಷಣ ನೀಡುತ್ತಿರುವ ನಾಡಿನ ಮಠಗಳಲ್ಲಿ ಮುಂಡರಗಿ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠವು ಒಂದು. ಅನ್ನದಾನ ಮತ್ತು ವಿದ್ಯಾದಾನಗಳು ಶ್ರೀಮಠದ ಎರಡು ಕಣ್ಣುಗಳಿದ್ದಂತೆ. ಶ್ರೀ ಮಠದ ಜಾತ್ರಾ ಮಹೋತ್ಸವವು ಫೆ. 25ರಿಂದ 27ರ ವರೆಗೆ ಜರುಗಲಿದೆ.

    ಶ್ರೀ ಮಠದ 8ನೇ ಪೀಠಾಧ್ಯಕ್ಷರಾದ ಸೊರಟೂರು ಪೂಜ್ಯರ ಸ್ಮರಣಾರ್ಥ ಶ್ರೀಮಠದ ಜಾತ್ರಾ ಮಹೋತ್ಸವವನ್ನು ವೈವಿಧ್ಯಮಯವಾಗಿ ಸಾಮಾಜಿಕ, ಧಾರ್ವಿುಕ, ಶೈಕ್ಷಣಿಕ, ಕೃಷಿ ಮೊದಲಾದ ವಿಭಿನ್ನ ಆಯಾಮಗಳಲ್ಲಿ ನಡೆಸಲಾಗುತ್ತದೆ.

    ಮುಂಡರಗಿಯ ಶ್ರೀಮಠ ತನ್ನದೆಯಾದ ಇತಿಹಾಸ ಹೊಂದಿದೆ. ಶ್ರೀ ಜಗದ್ಗುರು ಅನ್ನದಾನೀಶ್ವರ ಮಠದ ಮೂಲಕರ್ತೃ ಸ್ವಾಮಿಗಳು 12ನೇ ಶತಮಾನದ ಸುಜ್ಞಾನಿ ಚನ್ನಬಸವಣ್ಣನವರಿಂದ ಕ್ರಿಯಾಗಟ್ಟಿಯನ್ನು ಆಶೀರ್ವಾದ ರೂಪದಲ್ಲಿ ಪಡೆದು ಮಹಾನ್ ಪವಾಡಗಳನ್ನು ಮಾಡಿ ದೈವಿಪುರುಷರಾದರು. ಈ ಭಾಗದ ಹಲವಡೆ ಅನ್ಯಾಯ, ಅನಾಚಾರ, ಹಿಂಸೆ ಮಾಡುತ್ತಿದ್ದವರನ್ನು ಕಂಡು ಸತ್ಯ ಶುದ್ಧ ಕಾಯಕ ಮಾಡಿ, ಹಸಿದವರಿಗೆ ದಾಸೋಹ ಮಾಡಬೇಕೆನ್ನುವುದನ್ನು ಅವರಿಗೆ ತಿಳಿಸಿ ಸನ್ಮಾರ್ಗ ತೋರಿದರು.

    ಆಗ ಅನಾಚಾರ ಮಾಡುತ್ತಿದ್ದವರು ಶ್ರೀಗಳಿಗೆ ಶರಣಾಗಿ ದೌರ್ಜನ್ಯ ತ್ಯಜಿಸಿದ್ದಲ್ಲದೆ, ಸ್ವಾಮಿಗಳಿಗೆ ಮಠ ಕಟ್ಟಿಕೊಟ್ಟರು. ನಂತರ ಇಲ್ಲಿಯೇ ನೆಲೆಸಿದ ಸ್ವಾಮಿಗಳು ಅನ್ನ ಮತ್ತು ಜ್ಞಾನ ದಾಸೋಹ ನಿರಂತರ ಮಾಡಿಕೊಂಡು ಬಂದರು. ಹಸಿದವರಿಗೆ ದಾಸೋಹ ಮಾಡಿದ ಹಿನ್ನೆಲೆಯಲ್ಲಿ ಶ್ರೀಮಠವು ಅನ್ನದಾನೀಶ್ವರ ಮಠವೆಂದು ಪ್ರಸಿದ್ಧಿ ಪಡೆದುಕೊಂಡಿದೆ.

    10ನೇ ಪೀಠಾಧಿಪತಿಗಳಾದ ಈಗಿನ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಅನ್ನ ಮತ್ತು ಜ್ಞಾನ ದಾಸೋಹವನ್ನು ಇನ್ನು ಹೆಚ್ಚಿನ ಮಟ್ಟದಲ್ಲಿ ನಡೆಸಿಕೊಂಡು ಬಂದಿದ್ದಾರೆ. ಶ್ರೀಮಠದ ಸರ್ವತೋಮುಖ ಪ್ರಗತಿಗೆ ಸದಾ ಶ್ರಮಿಸುತ್ತಿದ್ದಾರೆ. ಬಹುಮುಖ ವ್ಯಕ್ತಿತ್ವದ ಶ್ರೀಗಳು ಗ್ರಾಮೀಣ, ಜನಪರ ಕಾಳಜಿಗಳ ಮೂಲಕ ಈ ಭಾಗದ ನಡೆದಾಡುವ ದೇವರಾಗಿದ್ದಾರೆ. ಉಚಿತ ಆರೋಗ್ಯ ಶಿಬಿರ, ಸಾಮೂಹಿಕ ವಿವಾಹ, ಕೃಷಿ ಪ್ರಗತಿಗೆ ನಿರಂತರ ಚಿಂತನ, ದೀನ-ದುರ್ಬಲರಿಗೆ ನೆರವಾಗುವ ಯೋಜನೆಗಳು ಪೂಜ್ಯರ ವ್ಯಕ್ತಿತ್ವವನ್ನು ಸಾರುತ್ತವೆ.

    150 ಗ್ರಂಥ ರಚನೆ: ಜನ ಬದುಕಬೇಕು ಹಾಗೂ ಅವರ ಬದುಕು ಪರಿಶುದ್ಧವಾಗಬೇಕೆಂಬುದು ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಅವರ ಆಶಯವಾಗಿದೆ. ಮನ ಕೆರಳಿಸುವ ಸಾಹಿತ್ಯ ಸೃಷ್ಟಿಸಿ ವಿನೋದವಾಡುವುದಕ್ಕಿಂತ ಮನವರಳಿಸುವ ಸಾಹಿತ್ಯ ರಚಿಸಿ ವಿಷಯ ರಹಿತನಾಗುವುದೇ ಮೇಲು ಎಂಬುದು ಅವರ ಸಂದೇಶ. ಇಲ್ಲಿಯವರೆಗೆ 150 ಗ್ರಂಥಗಳನ್ನು ರಚನೆ ಮಾಡುವುದರ ಮೂಲಕ ಕನ್ನಡ ಸಾಹಿತ್ಯವನ್ನು ಉನ್ನತ ಸ್ಥಾನಕ್ಕೇರಿಸಿದ್ದಾರೆ. ಪೂಜ್ಯರ ಸಾಹಿತ್ಯದ ಮೇಲೆ ಹಲವು ಸಂಶೋಧನಾ ಪ್ರಬಂಧಗಳು ಮಂಡನೆಯಾಗಿವೆ. ಶ್ರೀಗಳ ಸಾಹಿತ್ಯದಲ್ಲಿ ಅವರ ಸಾಮಾಜಿಕ ಕಳಕಳಿ ಅಮೋಘವಾಗಿವೆ.

    ಶೈಕ್ಷಣಿಕ ಕ್ರಾಂತಿ: ಬರಗಾಲದ ನಾಡಾದ ಮುಂಡರಗಿಯಲ್ಲಿ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಹಂತದವರೆಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೇವೆ ಒದಗಿಸಿದ್ದಾರೆ. ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ 33 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಬಡ ಮಕ್ಕಳಿಗೆ ನೆರವಾಗಿದ್ದಾರೆ. ಕಿರಿಯ ಪ್ರಾಥಮಿಕ ಶಾಲೆಯಿಂದ ಹಿಡಿದು ಮಹಾವಿದ್ಯಾಲಯದವರೆಗೂ ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣ ನೀಡಲಾಗುತ್ತಿದೆ.

    ಸಾಮಾಜಿಕ ಕಳಕಳಿ

    ನಾಡಿನ ಸಮಗ್ರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ಪೂಜ್ಯರ ಪಾತ್ರ ಅಮೋಘ. ಬಡ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ನಿಲಯ ಸ್ಥಾಪಿಸಿದ್ದಾರೆ. ವಿದ್ಯಾರ್ಥಿಗಳಿಗಾಗಿ ಉಚಿತ ಪ್ರಸಾದ ನಿಲಯ ಪ್ರಾರಂಭಿಸಿದ್ದಾರೆ. ನಿರ್ಗತಿಕ ವಿದ್ಯಾರ್ಥಿಗಳನ್ನು ಮಠದಲ್ಲಿಯೇ ಇಟ್ಟುಕೊಂಡು, ಅನ್ನ, ಆಶ್ರಯದ ವ್ಯವಸ್ಥೆ ಮಾಡಿದ್ದಾರೆ. ಗ್ರಾಮೀಣ ಜನತೆಯ ಆರೋಗ್ಯ ಕಾಪಾಡಲು ಪ್ರತಿವರ್ಷ ಶ್ರೀಮಠದಲ್ಲಿ ಉಚಿತ ಆರೋಗ್ಯ, ರಕ್ತದಾನ, ನೇತ್ರದಾನ ಶಿಬಿರ ಹೀಗೆ ಹತ್ತು ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕೃಷಿ ವಿಚಾರ ಸಂಕಿರಣ ಆಯೋಜನೆ ಹಾಗೂ ಕೃಷಿ ವಸ್ತು ಪ್ರದರ್ಶನ ಏರ್ಪಡಿಸುವುದು, ಪ್ರಗತಿಪರ ರೈತರನ್ನು ಗೌರವಿಸುವುದು ಹೆಮ್ಮೆಯ ವಿಷಯ. ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಮಾಡುತ್ತಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಧಾರ್ವಿುಕ ಕಾರ್ಯಗಳನ್ನು ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

    ಮೂಲ ಜಗದ್ಗುರು ಅನ್ನದಾನೀಶ್ವರರು ಮಹಾಮಹಿ ಮರು. ಪವಾಡ ಪುರುಷರು. ಕಾಯಕ ದಾಸೋಹಕ್ಕೆ ಪ್ರೇರಕ ರಾದವರು, ಪೂಜ್ಯರ ಆಶೀರ್ವಾದ ದಿಂದ ಕಳೆದ ವರ್ಷದ ಜಾತ್ರಾ ಮಹೋತ್ಸವ ಸುಗಮವಾಗಿತು. ಮಹಾಸ್ವಾಮಿಯ ಕೃಪೆಯಿಂದ ದೇಶಕ್ಕೆ ಹಿತವಾಗಲಿ. ಮಳೆ-ಬೆಳೆ ಸುಭಿಕ್ಷವಾಗಲಿ. ಶ್ರೀಮಠವು ಭಾವೈಕ್ಯತೆಯ ಪ್ರತೀಕ. ಸಕಲರಿಗೂ ಶ್ರೀ ಜಗದ್ಗುರು ಅನ್ನದಾನೀಶ್ವರರು ಆಶೀರ್ವಾದ ಸದಾ ಸಿಗಲಿ.

    | ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ, ಮುಂಡರಗಿ

    ಸರ್ಕಾರಕ್ಕೆ 2 ಲಕ್ಷ ರೂಪಾಯಿ ದೇಣಿಗೆ

    ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ಶ್ರೀಮಠದಿಂದ ಸರ್ಕಾರಕ್ಕೆ ಸಹಾಯಾರ್ಥವಾಗಿ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಅವರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ 2 ಲಕ್ಷ ರೂ. ದೇಣಿಗೆ ನೀಡಿದ್ದರು. ಹಿರೇವಡಟ್ಟಿ ಗ್ರಾಮದಲ್ಲಿ ಹಿಂದುಳಿದ ವರ್ಗದ ಇಲಾಖೆಯ ವಸತಿ ನಿಲಯ ಕಟ್ಟಡ ನಿರ್ವಣಕ್ಕೆ ಶ್ರೀಮಠದಿಂದ 6 ಗುಂಟೆ ಬೆಲೆ ಬಾಳುವ ಭೂಮಿ ದಾನ ನೀಡಲಾಗಿದೆ. ಶ್ರಾವಣ ಮಾಸದಲ್ಲಿ ಯೂಟ್ಯೂಬ್​ನಲ್ಲಿ ಶರಣರ ವಿಚಾರ ಕುರಿತು ಪ್ರವಚನ ನಡೆಸಲಾಯಿತು. ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಶ್ರೀ ಅನ್ನದಾನೀಶ್ವರ ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನ ಪೀಠ ಹಾಗೂ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕ.ರಾ. ಬೆಲ್ಲದ ಮಹಾವಿದ್ಯಾಲಯದಲ್ಲಿ ಶರಣ ದರ್ಶನ ಪುಸ್ತಕ ಲೋಕಾರ್ಪಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts