More

    ಕೆಕೆಆರ್ ಗೆಲುವಿನ ಶ್ರೇಯವನ್ನು ಯುವ ಕ್ರಿಕೆಟಿಗರಿಗೆ ನೀಡಿದ ದಿನೇಶ್ ಕಾರ್ತಿಕ್

    ದುಬೈ: ಮೊದಲ ಪಂದ್ಯದ ಹೀನಾಯ ಸೋಲಿನ ಬಳಿಕ ಸತತ 2 ಗೆಲುವಿನೊಂದಿಗೆ ಪುಟಿದೆದ್ದಿರುವ ಕೋಲ್ಕತ ನೈಟ್‌ರೈಡರ್ಸ್‌ ತಂಡದ ನಾಯಕ ದಿನೇಶ್ ಕಾರ್ತಿಕ್, ಈ ಸಾಧನೆಯ ಶ್ರೇಯವನ್ನು ತಂಡದ ಯುವ ಆಟಗಾರರಿಗೆ ನೀಡಿದ್ದಾರೆ. ಜತೆಗೆ ಇವೆರಡು ಗೆಲುವಿನ ಬಳಿಕ ತಂಡ ಸಂತೃಪ್ತವಾಗಬಾರದು ಎಂದೂ ಹೇಳಿದ್ದಾರೆ.

    ಯುವ ಆರಂಭಿಕ ಶುಭಮಾನ್ ಗಿಲ್ (47) ಉಪಯುಕ್ತ ಕೊಡುಗೆಯಿಂದ ಕೆಕೆಆರ್ 6 ವಿಕೆಟ್‌ಗೆ 174 ರನ್ ಪೇರಿಸಿತು. ಪ್ರತಿಯಾಗಿ ಯುವ ವೇಗಿಗಳಾದ ಶಿವಂ ಮಾವಿ (20ಕ್ಕೆ 2), ಕಮಲೇಶ್ ನಾಗರಕೋಟಿ (13ಕ್ಕೆ 2) ಮತ್ತು ಸ್ಪಿನ್ನರ್ ವರುಣ್ ಚಕ್ರವರ್ತಿ (25ಕ್ಕೆ 2) ದಾಳಿಗೆ ಕುಸಿದ ರಾಜಸ್ಥಾನ ತಂಡ 9 ವಿಕೆಟ್‌ಗೆ 137 ರನ್ ಪೇರಿಸಲಷ್ಟೇ ಶಕ್ತವಾಗಿ 37 ರನ್‌ಗಳಿಂದ ಸೋಲೊಪ್ಪಿಕೊಂಡಿತು. ರಾಯಲ್ಸ್ ತಂಡದ ಕಳೆದ ಪಂದ್ಯದ ಹೀರೋಗಳಾದ ಸಂಜು ಸ್ಯಾಮ್ಸನ್ (8) ಮತ್ತು ರಾಹುಲ್ ತೆವಾಟಿಯಾ (14) ಜತೆಗೆ ನಾಯಕ ಸ್ಟೀವನ್ ಸ್ಮಿತ್ (3), ಜೋಸ್ ಬಟ್ಲರ್ (21) ಮತ್ತು ಕನ್ನಡಿಗ ರಾಬಿನ್ ಉತ್ತಪ್ಪ (2) ವೈಲ್ಯ ಕಂಡರು. ಟಾಮ್ ಕರ‌್ರನ್ (54) ಏಕಾಂಗಿ ಹೋರಾಟ ತೋರಿ ಸೋಲಿನ ಅಂತರ ತಗ್ಗಿಸಿದರು.

    ‘ತಂಡದ ಯುವ ಆಟಗಾರರು ಅತ್ಯುತ್ತಮ ನಿರ್ವಹಣೆ ತೋರುತ್ತಿದ್ದಾರೆ. ಆದರೆ ನಾವು ಇದರಿಂದ ಮೈಮರೆಯಬಾರದು. ಹಾಗೆಂದು ಯುವ ಆಟಗಾರರ ಮೇಲೆಯೇ ತಂಡದ ಭಾರವನ್ನು ಹಾಕುವುದಿಲ್ಲ. ಅನುಭವಿ ಆಟಗಾರರು ಅವರ ಬಲವನ್ನು ಹೆಚ್ಚಿಸಬೇಕಾಗಿದೆ’ ಎಂದು ಕಾರ್ತಿಕ್ ಗೆಲುವಿನ ಬಳಿಕ ನುಡಿದರು.

    ಇದನ್ನೂ ಓದಿ: VIDEO | ಐಪಿಎಲ್ ಪಂದ್ಯದ ವೇಳೆ ಚೆಂಡಿಗೆ ಎಂಜಲು ಹಚ್ಚಿ ಎಡವಟ್ಟು ಮಾಡಿದ ರಾಬಿನ್​ ಉತ್ತಪ್ಪ!

    2018ರ 19 ವಯೋಮಿತಿ ವಿಶ್ವಕಪ್‌ನಲ್ಲಿ ಭಾರತ ತಂಡ ಅಜೇಯವಾಗಿ ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವಂ ಮಾವಿ ಮತ್ತು ನಾಗರಕೋಟಿ ಅದೇ ವರ್ಷದ ಹರಾಜಿನಲ್ಲಿ ಕ್ರಮವಾಗಿ 3 ಮತ್ತು 3.2 ಕೋಟಿ ರೂ.ಗೆ ಕೆಕೆಆರ್ ಪಾಲಾಗಿದ್ದರು. ಆದರೆ ಗಾಯದಿಂದಾಗಿ ಇಬ್ಬರೂ ಕಳೆದ ವರ್ಷದ ಟೂರ್ನಿಯಲ್ಲಿ ಆಡಿರಲಿಲ್ಲ. ಇದೀಗ ಫಿಟ್ ಆಗಿರುವ ಇವರಿಬ್ಬರು ಕೆಕೆಆರ್ ತಂಡದ ಭರವಸೆ ಉಳಿಸಿಕೊಂಡಿದ್ದಾರೆ.

    ರಾಜಸ್ಥಾನ ತಂಡ ಶಾರ್ಜಾದಲ್ಲಿ ಆಡಿದ ಮೊದಲೆರಡು ಪಂದ್ಯಗಳಲ್ಲಿ 200 ಪ್ಲಸ್ ಮೊತ್ತ ಪೇರಿಸಿ ಜಯಿಸಿತ್ತು. ಆದರೆ ದುಬೈನಲ್ಲಿ ಕೆಕೆಆರ್ ತಂಡ ಬಿಗಿ ದಾಳಿ ಎದುರು ರನ್‌ಗಾಗಿ ಪರದಾಡಿತು.

    ‘ಟೂರ್ನಿಯ ಮೊದಲೆರಡು ಪಂದ್ಯಗಳನ್ನು ಶಾರ್ಜಾದಲ್ಲಿ ಆಡಿದ್ದೆವು. ಇಲ್ಲೂ ಅದೇ ರೀತಿಯ ಆಟವಾಡಲು ಯತ್ನಿಸಿ ಎಡವಿದೆವು. ದುಬೈ ಪಿಚ್ ನಿಧಾನಗತಿಯದ್ದಾಗಿದ್ದು, ಇದಕ್ಕೆ ಹೊಂದಿಕೊಳ್ಳಲು ಬ್ಯಾಟ್ಸ್‌ಮನ್‌ಗಳು ಸ್ವಲ್ಪ ಸಮಯ ತೆಗೆದುಕೊಳ್ಳಬೇಕಾಗಿತ್ತು. ನಂತರವಷ್ಟೇ ಬೌಲರ್‌ಗಳ ಮೇಲೆ ಆಕ್ರಮಣ ಮಾಡಬೇಕಾಗಿತ್ತು’ ಎಂದು ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್‌ಮನ್ ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ ಹೇಳಿದರು.

    150: ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್‌ನಲ್ಲಿ 150 ಪಂದ್ಯ ಆಡಿದ 7ನೇ ತಂಡವೆನಿಸಿತು. ಮುಂಬೈ ಇಂಡಿಯನ್ಸ್ ತಂಡ ಗರಿಷ್ಠ 191 ಪಂದ್ಯ ಆಡಿದೆ. ಕೆಕೆಆರ್‌ಗೆ ರಾಜಸ್ಥಾನ ವಿರುದ್ಧ ಇದು 11ನೇ ಗೆಲುವು. ಪಂಜಾಬ್ (17), ಆರ್‌ಸಿಬಿ (14) ಮತ್ತು ಡೆಲ್ಲಿ (13) ವಿರುದ್ಧ ಕೆಕೆಆರ್ ಇದಕ್ಕಿಂತ ಹೆಚ್ಚಿನ ಗೆಲುವು ಕಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts