More

    ಶೌಚಗುಂಡಿ ನೀರನ್ನು ಸುರಿಯುತ್ತಿರುವ ಖಾಸಗಿ ಸಕ್ಕಿಂಗ್ ಯಂತ್ರಗಳು: ಗಿಡಗಳಿಗೆ ಮಾರಕವಾದ ತ್ಯಾಜ್ಯ

    ಮಾಗಡಿ: ಪಟ್ಟಣದಲ್ಲಿ ಖಾಸಗಿ ಜಟ್ಟಿಂಗ್ ಮತ್ತು ಸಕ್ಕಿಂಗ್ ಯಂತ್ರಗಳ ಹಾವಳಿ ಹೆಚ್ಚಾಗಿದ್ದು, ಪಟ್ಟಣದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸುರಿಯುತ್ತಿರುವುದರಿಂದ ಸಾಲುಮರದ ತಿಮ್ಮಕ್ಕ ತಾಲೂಕಿನ ರಸ್ತೆಬದಿ ನೆಟ್ಟಿರುವ ಗಿಡಗಳು ನಾಶವಾಗುತ್ತಿವೆ ಎಂದು ಸ್ಥಳೀಯರಾದ ಕಲ್ಲೆಂಟೆಪಾಳ್ಯ ಗಂಗಾಧರ್, ರಂಗಯ್ಯ, ರೈತಸಂಘದ ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಆರೋಪಿಸಿದ್ದಾರೆ.

    ಪಟ್ಟಣದ ಒಳಚರಂಡಿ ನೀರು ಮತ್ತು ಶೌಚಗೃಹ ನೀರನ್ನು ಸಕ್ಕಿಂಗ್ ಯಂತ್ರದ ಮೂಲಕ ಹೊರ ತೆಗೆದು ಮಾಗಡಿ-ಗುಡೇಮಾರನಹಳ್ಳಿ ಮಾರ್ಗದ ತಿಮ್ಮಸಂದ್ರ ಬಳಿಯ ರಸ್ತೆಬದಿಯ ಗಿಡಗಳಿಗೆ ಸುರಿಯುತ್ತಿದ್ದು, ಇದರಿಂದ ಗಿಡಗಳು ಒಣಗಿ ನಾಶವಾಗುತ್ತಿರುವುದಲ್ಲದೆ, ವಾಹನ ಸವಾರರು ದುರ್ವಾಸನೆ ಅನುಭವಿಸುವಂತಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಸಮರ್ಪಕವಾಗಿಲ್ಲದ ಕಾರಣ ಮ್ಯಾನ್‌ಹೋಲ್‌ಗಳು ತುಂಬಿ ಕೊಳಚೆ ನೀರು ರಸ್ತೆಗೆ ಹರಿಯುತ್ತಿದೆ. ಮನೆಗಳಿಗೆ ಒಳಚರಂಡಿ ಸಂಪರ್ಕವಿಲ್ಲದ ಕಾರಣ ಜನತೆ ಶೌಚಗುಂಡಿ ಸ್ವಚ್ಛತೆಗೆ ಜಟ್ಟಿಂಗ್ ಮತ್ತು ಸಕ್ಕಿಂಗ್ ಯಂತ್ರಗಳನ್ನು ಅವಲಂಬಿಸಬೇಕಾಗಿದೆ. ಪುರಸಭೆಯಲ್ಲಿ ಇರುವ ಒಂದು ಸಕ್ಕಿಂಗ್ ಯಂತ್ರ ಆಗಾಗ ಕೆಟ್ಟುಹೋಗುತ್ತಿದ್ದು, ಶೌಚಗುಂಡಿ ಸ್ವಚ್ಛತೆಗೆ ಜನರು ದುಬಾರಿ ಹಣ ತೆತ್ತು ಖಾಸಗಿಯವರನ್ನು ಅವಲಂಬಿಸಬೇಕಾಗಿದೆ. ಶೌಚಗುಂಡಿ ಸ್ವಚ್ಛಗೊಳಿಸುವ ಖಾಸಗಿಯವರು ತ್ಯಾಜ್ಯ ನೀರನ್ನು ಪುರಸಭೆ ನಿಗದಿ ಪಡಿಸಿದ ಸ್ಥಳದಲ್ಲಿ ಬಿಡದೆ, ರಸ್ತೆ ಬದಿ ಗಿಡಗಳಿಗೆ ಸುರಿಯುತ್ತಿದ್ದಾರೆ. ಇದು ಗಿಡಗಳ ನಾಶಕ್ಕೆ ಕಾರಣವಾಗಲಿದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

    ಶೌಚಗುಂಡಿ ತ್ಯಾಜ್ಯವನ್ನು ರಾತ್ರೋರಾತ್ರಿ ಗಿಡಗಳಿಗೆ ಮತ್ತು ರಸ್ತೆ ಪಕ್ಕದಲ್ಲಿನ ಗುಂಡಿಗಳಿಗೆ ಸುರಿಯುತ್ತಿರುವುದರಿಂದ ದುರ್ವಾಸನೆ ಬರುತ್ತಿದ್ದು, ರೈತರು ಜಮೀನಿನಲ್ಲಿ ಕೆಲಸ ಮಾಡದಂತಾಗಿದೆ. ರಸ್ತೆಬದಿ ಗಿಡಗಳಿಗೆ, ಗುಂಡಿಗಳಿಗೆ ಶೌಚಗುಂಡಿ ತ್ಯಾಜ್ಯ ಸುರಿಯುವವರನ್ನು ಹಿಡಿಯಲು ರೈತರು ಮುಂದಾಗಿದ್ದಾರೆ. ಪುರಸಭೆಯ ಯಂತ್ರವನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡಿದರೆ ಖಾಸಗಿಯವರ ಹಾವಳಿ ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ಪುರಸಭೆ ಮುಖ್ಯಾಧಿಕಾರಿಗಳು ಏನು ಕ್ರಮ ಕೈಗೊಳ್ಳುವರೋ ಎಂದು ಜನತೆ ಕಾದಿದ್ದಾರೆ.

    ಖಾಸಗಿ ಯಂತ್ರಗಳ ಮಾಲೀಕರು ಜನರಿಂದ ದುಬಾರಿ ಹಣ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಅಧಿಕ ಹಣ ಪಡೆಯದಂತೆ ಖಾಸಗಿ ಯಂತ್ರಗಳ ಮಾಲೀಕರಿಗೆ ನೋಟಿಸ್ ನೀಡಲಾಗುವುದು.
    ಮಹೇಶ್ ಮುಖ್ಯಾಧಿಕಾರಿ, ಮಾಗಡಿ ಪುರಸಭೆ

    ಖಾಸಗಿ ಜಟ್ಟಿಂಗ್ ಮತ್ತು ಸಕ್ಕಿಂಗ್ ಯಂತ್ರಗಳು ಶೌಚಗೃಹ ಮತ್ತು ಒಳಚರಂಡಿ ನೀರನ್ನು ರಸ್ತೆ ಬದಿ ಸಸಿಗಳಿಗೆ ಸುರಿಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.
    ಪುಷ್ಪಲತಾ ವಲಯ ಅರಣ್ಯಾಧಿಕಾರಿ, ಮಾಗಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts