More

    ಹಣಕ್ಕಾಗಿ ಅಡ್ಡದಾರಿ; ಹಾಳಾಯ್ತು ವೈಯಕ್ತಿಕ ಮತ್ತು ವೈವಾಹಿಕ ಜೀವನ

    ಹಣಕ್ಕಾಗಿ ಅಡ್ಡದಾರಿ; ಹಾಳಾಯ್ತು ವೈಯಕ್ತಿಕ ಮತ್ತು ವೈವಾಹಿಕ ಜೀವನಇಪ್ಪತ್ತೈದು ವರ್ಷದ ಭಾವನಾ ಕರ್ನಾಟಕದಲ್ಲೇ ಹುಟ್ಟಿ ಬೆಳೆದವಳು. ಆಕೆಯ ತಂದೆ ದಶಕಗಳ ಹಿಂದೆ ರಾಜಸ್ಥಾನದಿಂದ ವಲಸೆ ಬಂದು ಮಹಾನಗರವೊಂದರಲ್ಲಿ ಉದ್ಯಮ ನಡೆಸುತ್ತಿದ್ದರು. ಭಾವನಾ ಬಿ.ಎ. ಪದವಿ ಗಳಿಸಿದ ನಂತರ ಮ್ಯಾನೇಜ್​ವೆುಂಟ್ ಡಿಪ್ಲೋಮಾ ಪಡೆದು ಕಂಪನಿಯೊಂದರಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು. ಒಂದು ದಿನ ಆಕೆ ಸಂಬಂಧಿಕರೊಬ್ಬರ ಮದುವೆಗೆ ಹೋಗಿದ್ದಾಗ ಅಲ್ಲಿ ಅವಳಿಗೆ ನೀರಜ್ ಎನ್ನುವವನ ಪರಿಚಯವಾಯಿತು. 30 ವರ್ಷದ ನೀರಜ್ ಸ್ಪುರದ್ರೂಪಿಯಾಗಿದ್ದಲ್ಲದೆ ಆಕರ್ಷಕ ಮೈಕಟ್ಟನ್ನು ಹೊಂದಿದ್ದ. ತಾನು ಹರಿಯಾಣ ರಾಜ್ಯದ ನಿವಾಸಿಯಾಗಿದ್ದು ಇಂಜಿನಿಯರಿಂಗ್ ಪದವಿ ಪಡೆದಿದ್ದು, ಕಾಲ್​ಸೆಂಟರ್​ನಲ್ಲಿ ಉದ್ಯೋಗ ಮಾಡುತ್ತಿರುವುದಾಗಿ ಆತ ತಿಳಿಸಿದ. ಕೆಲವೇ ದಿನಗಳಲ್ಲಿ ಅವರ ಪರಿಚಯ ಸ್ನೇಹಕ್ಕೆ ತಿರುಗಿ ಭಾವನಾ ನೀರಜನನ್ನು ಮನೆಗೆ ಆಹ್ವಾನಿಸಿದಳು.

    ನೀರಜ್​ನನ್ನು ಭೇಟಿಮಾಡಿದ ಭಾವನಾಳ ತಂದೆ-ತಾಯಿ ಆತ ತಮ್ಮ ಕುಲಕ್ಕೇ ಸೇರಿದವನೆಂದು ಮನಗಂಡು ಭಾವನಾಳ ವಿವಾಹವನ್ನು ಅವನ ಜೊತೆ ಮಾಡಲು ನಿರ್ಧರಿಸಿ, ಮಗಳ ಅಭಿಪ್ರಾಯ ಕೇಳಿದರು. ಆಕೆ ಒಪ್ಪಿದಾಗ ನೀರಜ್ ತಂದೆ-ತಾಯಿಯನ್ನು ಸಂರ್ಪಸಿದರು. ಅವರ ಸಹಮತಿಯೂ ದೊರೆತಾಗ ಮಗಳ ವಿವಾಹವನ್ನು ನೀರಜ್ ಜತೆ ಅದ್ಧೂರಿಯಾಗಿ ನೆರವೇರಿಸಿದರು. ವಿವಾಹದ ನಂತರ ಪತಿ-ಪತ್ನಿ ಅನ್ಯೋನ್ಯವಾಗಿ ಇದ್ದರು. ಆದರೆ ಒಂದು ವರ್ಷದ ಬಳಿಕ ನೀರಜ್ ವಿನಾಕಾರಣ ಪತ್ನಿಯೊಂದಿಗೆ ಜಗಳ ತೆಗೆದು ಅವಳಿಗೆ ದೈಹಿಕ ಹಿಂಸೆ ಕೊಡಲಾರಂಭಿಸಿದ.

    ‘ನೀನು ನೌಕರಿ ಬಿಡಲೇಬೇಕು’ ಎಂದು ಪದೇಪದೇ ಭಾವನಾಳನ್ನು ಪೀಡಿಸುತ್ತಿದ್ದ ನೀರಜ್ ಅವಳನ್ನು ಕೆಲಸದಿಂದ ಬಿಡಿಸಿದ. ಮನೆಯಲ್ಲಿ ಒಬ್ಬಂಟಿಯಾಗಿಯೇ ಇರುತ್ತಿದ್ದ ಭಾವನಾಳ ಗಮನ ಸ್ವಾಭಾವಿಕವಾಗಿಯೇ ನೀರಜ್ ಚಟುವಟಿಕೆಗಳ ಮೇಲೆ ಹರಿಯಿತು. ಆತ ಬೇರೆ ಬೇರೆ ಸಮಯದಲ್ಲಿ ಮನೆಯಿಂದ ಹೊರಗೆ ಹೋಗುತ್ತಿದ್ದ. ಕೆಲವು ದಿನಗಳು ಬೆಳಗಿನ 10 ಗಂಟೆಗೆ ಕೆಲಸವಿದೆಯಂದು ಮನೆ ಬಿಟ್ಟರೆ, ಇನ್ನು ಕೆಲವು ದಿನ ರಾತ್ರಿ 10 ಗಂಟೆಗೆ, ಹಾಗೂ ಇನ್ನೂ ತಡವಾಗಿ ಕೆಲಸವಿದೆಯೆಂದು ಹೊರಗೆ ಹೋಗುತ್ತಿದ್ದ. ಕೆಲವೊಮ್ಮೆ ಮನೆ ಬಿಟ್ಟ ಹತ್ತು-ಹನ್ನೆರಡು ಗಂಟೆಗಳ ನಂತರ ವಾಪಸಾದರೆ, ಮಗದೊಮ್ಮೆ ಮೂರ್ನಾಲ್ಕು ಗಂಟೆಗಳೊಳಗೇ ವಾಪಸಾಗುತ್ತಿದ್ದ. ಹಾಗೂ ಮನೆಗೆ ಬಂದ ನಂತರ ಸುಸ್ತಾಗಿ ಮಲಗಿ ಬಿಡುತ್ತಿದ್ದ. ಯಾವುದಾದರೊಂದು ಫೋನ್ ಬಂದ ನಂತರವೇ ಆತ ಮನೆಯಿಂದ ಹೊರಗೆ ಹೋಗುತ್ತಿದ್ದುದನ್ನು ಭಾವನಾ ಗಮನಿಸಿ ಸಂಶಯಗೊಂಡಳು. ‘ನಿನಗೆ ನಿರ್ದಿಷ್ಟ ಕೆಲಸದ ಸಮಯವಿಲ್ಲವೇ?’ ಎಂದು ಭಾವನಾ ಕೇಳಿದಾಗ, ಕೋಪಗೊಂಡ ನೀರಜ್ ‘ನಾನು ಕಾಲ್​ಸೆಂಟರ್​ನಲ್ಲಿ ಕೆಲಸ ಮಾಡುತ್ತಿರುವುದು ಎಂದು ತಿಳಿದೂ ಇಂಥ ಪ್ರಶ್ನೆಯನ್ನೇಕೆ ಕೇಳುವೆ, ನಮ್ಮ ಕಂಪನಿ ಬೇರೆ-ಬೇರೆ ದೇಶಗಳ ಗ್ರಾಹಕರನ್ನು ಹೊಂದಿರುವುದರಿಂದ ಅವರ ದೇಶಗಳ ಸಮಯಕ್ಕೆ ನಾವು ಹೊಂದಿಕೊಳ್ಳಬೇಕು’ ಎಂದು ಉತ್ತರಿಸಿದ.

    ಅಂದಿನಿಂದಲೂ ಭಾವನಾಗೆ ನೀರಜ್ ಮೇಲೆ ಸಂಶಯ. ಆಕೆ ಅವನ ಸಹೋದ್ಯೋಗಿಯೊಬ್ಬನನ್ನು ವಿಚಾರಿಸಿದಾಗ ಆತ ನೀರಜ್ ಕೆಲಸ ಮಾಡುತ್ತಿದ್ದ ಕಂಪನಿ ಕರೊನಾ ಸೋಂಕಿನ ಕಾರಣ ಮುಚ್ಚಿಹೋಯಿತೆಂದ. ಆಗ ಭಾವನಾಳ ಸಂಶಯ ಹೆಚ್ಚಾಗಿ ಆಕೆ ಮನೆಯಲ್ಲಿಯೂ ಅವನ ಚಲನವಲನಗಳನ್ನು ಗಮನಿಸತೊಡಗಿದಳು. ಆತ ಸದಾಕಾಲ ಮೊಬೈಲ್​ನಲ್ಲಿ ಮಾತನಾಡುತ್ತಿದ್ದು, ಆತನ ಮಾತುಕತೆಗಳನ್ನು ಕೇಳಿದಾಗ ಅವು ಒಬ್ಬ ಇಂಜಿನಿಯರ್ ಆಡುವ ಮಾತುಗಳಂತೆ ಕಂಡುಬರುತ್ತಿರಲಿಲ್ಲ, ಅವನ ಮೊಬೈಲ್ ನೋಡಿದರೆ ಏನಾದರೂ ಕುರುಹು ಸಿಗಬಹುದೆಂದು ಯೋಚಿಸಿದ ಭಾವನಾ ಒಂದು ದಿನ ಆತ ಸ್ನಾನ ಮಾಡಲು ಹೋಗಿದ್ದಾಗ ಅವನ ಮೊಬೈಲ್ ತೆಗೆದುಕೊಂಡಳು. ಆದರೆ ಆತ ಅದನ್ನು ಪಾಸ್​ವರ್ಡ್ ಹಾಕಿ ಲಾಕ್ ಮಾಡಿದ್ದ ಕಾರಣ ಆಕೆಗೆ ಏನೂ ತಿಳಿಯಲಿಲ್ಲ. ಅಷ್ಟರಲ್ಲಿ ಸ್ನಾನ ಮುಗಿಸಿ ಬಂದ ನೀರಜ್, ಭಾವನಾಳ ಕೈಯಲ್ಲಿ ತನ್ನ ಮೊಬೈಲ್ ಕಂಡು ಕೆಂಡಾಮಂಡಲಗೊಂಡ. ಅವಳನ್ನು ಥಳಿಸಿ, ‘ಇನ್ನು ಮುಂದೆ ನನ್ನ ಮೊಬೈಲ್ ಮುಟ್ಟಿದರೆ ಕೈ ಕತ್ತರಿಸುವೆ’ ಎಂದು ಬೆದರಿಸಿದ. ಇದಾದನಂತರ ಅವನ ಗುಟ್ಟನ್ನು ಅರಿಯಲೇಬೇಕೆಂಬ ಛಲ ಭಾವನಾಳಲ್ಲಿ ಮೂಡಿತು.

    ಮುಂದಿನ ವಾರ ನೀರಜ್ ಮನೆಯಿಂದ ಹೊರಗೆ ಹೋದ ಕೂಡಲೇ ಆತ ತನ್ನ ಬ್ಯಾಗನ್ನು ಮನೆಯಲ್ಲಿ ಬಿಟ್ಟಿರುವುದನ್ನು ಕಂಡ ಭಾವನಾ ಅದನ್ನು ತೆಗೆದಳು. ಅದರಲ್ಲಿ ಅವನ ಲ್ಯಾಪ್​ಟಾಪ್ ಇತ್ತು. ಅದನ್ನು ಆನ್ ಮಾಡಿದಾಗ ಲಾಕ್ ಆಗಿತ್ತು. ಕೂಡಲೇ ಭಾವನಾ ಎಲೆಕ್ಟ್ರಾನಿಕ್ಸ್​ನಲ್ಲಿ ಸಾಕಷ್ಟು ಪರಿಣಿತಿ ಇರುವ ತನ್ನ ಸೋದರನಿಗೆ ಫೋನ್ ಮಾಡಿ ಮನೆಗೆ ಕರೆಸಿದಳು. ಆತ ಹದಿನೈದು ನಿಮಿಷದಲ್ಲಿ ಪಾಸ್​ವರ್ಡ್ ತೆರೆಯುವುದರಲ್ಲಿ ಸಫಲನಾದ. ಲ್ಯಾಪ್​ಟಾಪ್ ತೆರೆದಾಗ ಅವರಿಬ್ಬರಿಗೂ ಆಶ್ಚರ್ಯ ಕಾದಿತ್ತು. ಲ್ಯಾಪ್​ಟಾಪ್​ನಲ್ಲಿ ನೀರಜ್​ನ ನೂರಾರು ಬೆತ್ತಲೆ ಫೋಟೋಗಳು ವಿವಿಧ ಭಂಗಿಗಳಲ್ಲಿ ಇದ್ದದ್ದಲ್ಲದೇ ಕೆಲವು ಸ್ತ್ರೀಯರ ಜೊತೆ ಆತ ಕಾಮಕೇಳಿ ನಡೆಸುತ್ತಿರುವ ದೃಶ್ಯಗಳೂ ಇದ್ದವು. ಗಾಬರಿಗೊಂಡು ಅವನ ಇ-ಮೇಲ್ ಮತ್ತು ಚಾಟ್​ಗಳನ್ನು ತೆರೆದು ನೋಡಿದಾಗ, ಆತ ಹಲವಾರು ಸ್ತ್ರೀಯರ ಜೊತೆ ಸಂಪರ್ಕವನ್ನಿಟ್ಟುಕೊಂಡು ಅವರಿಗೆ ತನ್ನ ಫೋಟೋ ಹಾಗೂ ವಿಡಿಯೋಗಳನ್ನು ಕಳುಹಿಸುತ್ತಿದ್ದಲ್ಲದೆ ತನ್ನ ಜತೆ ಕಳೆಯಲು ಇಂತಿಷ್ಟು ಹಣ ಕೊಡಬೇಕು ಎಂದು ಬರೆಯುತ್ತಿದ್ದ. ಆತ ಬೇರೆ ಬೇರೆ ಊರುಗಳಿಗೆ ವಿಮಾನದಲ್ಲಿ ಹೋದ ವಿವರಗಳೂ ಸಿಕ್ಕವು.

    ಭಾವನಾಳ ಸೋದರ, ‘ಅಕ್ಕಾ ಇದನ್ನು ನೋಡಿದರೆ ನಿನ್ನ ಗಂಡ ಪುರುಷ ವೇಶ್ಯೆಯ ಕೆಲಸ ಮಾಡುತ್ತಿದ್ದಾನೆ, ಇಲ್ಲಿ ನೋಡು ವ್ಯವಹಾರ ಕುದುರಿಸಲು ತನ್ನದೇ ವೆಬ್​ಸೈಟನ್ನು ಕೂಡ ಹೊಂದಿದ್ದಾನೆ’ ಎಂದ. ಭಾವನಾಳಿಗೆ ಗಂಡನ ಬಗ್ಗೆ ಹೇಸಿಗೆ ಮೂಡಿತು. ನೀರಜ್ ಮನೆಗೆ ವಾಪಸಾದಾಗ ಆಕೆ ಈ ಬಗ್ಗೆ ಪ್ರಶ್ನಿಸಿದಳು. ಆತ ಕಬ್ಬಿಣದ ರಾಡಿನಿಂದ ಭಾವನಾಳಿಗೆ ಹಿಗ್ಗಾಮುಗ್ಗಾ ಥಳಿಸಿದ. ಆ ಕ್ಷಣವೇ ತವರುಮನೆಗೆ ಹೊರಟುಹೋದ ಭಾವನಾ ಸೋದರನ ಜತೆಗೆ ಆಸ್ಪತ್ರೆಗೆ ಹೋದಳು. ಅವಳ ಕೈಮೂಳೆ ಮುರಿದಿದ್ದಾಗಿ ತಿಳಿಸಿದ ವೈದ್ಯರು ಪ್ಲಾಸ್ಟರ್ ಹಾಕಿದರು. ವೈದ್ಯರ ಪ್ರಮಾಣಪತ್ರದೊಂದಿಗೆ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಗಂಡನ ವಿರುದ್ಧ ದೂರು ದಾಖಲಿಸಿದಳು.

    ಆರಂಭಕ್ಕೆ ನೀರಜ್ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿ ಅವನನ್ನು ಠಾಣೆಗೆ ಕರೆಸಿದಾಗ ಅವನು ಈ ರೀತಿ ಹೇಳಿದ: ‘ಭಾವನಾಳನ್ನು ಮದುವೆಯಾದಾಗ ಕಾಲ್​ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದುದು ನಿಜ. ಕರೊನಾ ಸೋಂಕು ಹರಡಿದಾಗ ನನ್ನನ್ನು ಕೆಲಸದಿಂದ ತೆಗೆಯಲಾಯಿತು. ಬೇರೊಂದು ಕೆಲಸ ಹುಡುಕುತ್ತಿದ್ದಾಗ ಸ್ನೇಹಿತನೊಬ್ಬ ‘ತಿಂಗಳಿಗೆ ಐದಾರು ಲಕ್ಷ ರೂಪಾಯಿ ಆದಾಯ ಬರುವಂಥ ಕೆಲಸ ಕೊಡಿಸುತ್ತೇನೆ, ಆದರೆ ಆ ಕೆಲಸಕ್ಕೆ ನಿರ್ದಿಷ್ಟ ವೇಳೆಯಿಲ್ಲ. ನಿನಗೆ ಒಪ್ಪಿಗೆಯೇ?’ ಎಂದ. ಎಂತಹ ಕೆಲಸವೆಂದು ಕೇಳಿದಾಗ ‘ನೀನು ಆಕರ್ಷಕ ಮೈಕಟ್ಟು ಹೊಂದಿರುವುದರಿಂದ ನಿನ್ನಂತಹವರಿಗೆ ಬಹಳ ಬೇಡಿಕೆಯಿದೆ. ದೇಶದ ಮಹಾನಗರಗಳಲ್ಲಿ ಕೆಲವು ಶ್ರೀಮಂತ ಹೆಣ್ಣುಮಕ್ಕಳು ಲೈಂಗಿಕ ಸುಖಕ್ಕಾಗಿ ಪುರುಷ ವೇಶ್ಯೆಯರನ್ನು ಬಯಸುತ್ತಾರೆ, ಅವರು ಕರೆದಲ್ಲಿಗೆ ಹೋಗಿ ಅವರನ್ನು ತೃಪ್ತಿಪಡಿಸಿದರೆ ಗಂಟೆಯೊಂದಕ್ಕೆ ಐದು ಸಾವಿರದವರೆಗೆ ವರಮಾನವಿದೆ’ ಎಂದ. ನಾನು ಒಪ್ಪಿದಾಗ ಆತ ಏಜೆಂಟ್ ಒಬ್ಬನನ್ನು ಪರಿಚಯಿಸಿದ. ಅವನ ಮೂಲಕ ದಂಧೆ ನಡೆಸಲಾರಂಭಿಸಿದೆ. ಆನಂತರ ಅವನೇ ನನ್ನ ವರಮಾನದಲ್ಲಿ ಅರ್ಧದಷ್ಟನ್ನು ಕಬಳಿಸತೊಡಗಿದಾಗ ಸ್ವತಂತ್ರನಾಗಿ ನನ್ನದೇ ಬಿಸಿನೆಸ್ ಆರಂಭಿಸಿದೆ. ನನ್ನದೇ ವೆಬ್​ಸೈಟ್ ತಯಾರು ಮಾಡಿಸಿಕೊಂಡು ನೇರವಾಗಿ ಗ್ರಾಹಕರ ಸಂಪರ್ಕಕ್ಕೆ ಬರುತ್ತಿದ್ದೆ. ಬೇರೆ ಬೇರೆ ನಗರಗಳಿಗೆ ವಿಮಾನದಲ್ಲಿ ಹೋಗಿ ಕೆಲಸ ಮುಗಿದ ಕೂಡಲೇ ಊರಿಗೆ ವಾಪಸಾಗುತ್ತಿದ್ದೆ. ನನ್ನ ಕೆಲಸ ಅಪರಾಧವೆಂದು ಕಾನೂನಿನಲ್ಲಿ ಪರಿಗಣಿಸಲಾಗಿಲ್ಲ. ಈ ಕೆಲಸ ಮಾಡುವುದರಲ್ಲಿ ತಪ್ಪೇನಿಲ್ಲವಲ್ಲ’ ಎಂದ.

    ‘ಪುರುಷರು ವೇಶ್ಯಾವೃತ್ತಿ ಮಾಡುವುದು ಅಪರಾಧವಲ್ಲದಿದ್ದರೂ ಭಾವನಾಳಿಗೆ ಭಾರೀ ಗಾಯ ಮಾಡಿರುವ ಕಾರಣದಿಂದ ನಿನ್ನನ್ನು ಬಂಧಿಸಲಾಗುತ್ತಿದೆ. ಇದಲ್ಲದೆ ನೀನು ಎಲೆಕ್ಟ್ರಾನಿಕ್ಸ್ ಮಾಧ್ಯಮದ ಮೂಲಕ ನಗ್ನಚಿತ್ರ ಮತ್ತು ಲೈಂಗಿಕ ವಿಡಿಯೋಗಳನ್ನು ಇತರರೊಂದಿಗೆ ಹಂಚಿಕೊಂಡಿರುವುದು ಮಾಹಿತಿ-ತಂತ್ರಜ್ಞಾನ ಕಾಯಿದೆಯನ್ವಯ ಅಪರಾಧವಾಗುತ್ತದೆ’ ಎಂದು ಹೇಳಿದ ಪೊಲೀಸರು ಅವನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನೀರಜ್ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ. ಭಾವನಾ ವಿವಾಹ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಕಂಪನಿಯೊಂದರಲ್ಲಿ ನೌಕರಿಗೆ ಸೇರಿಕೊಂಡಳು.

    ತನಿಖೆ ಪೂರ್ಣಗೊಳಿಸಿದ ಪೊಲೀಸರು ನೀರಜ್ ವಿರುದ್ಧ ನ್ಯಾಯಾಲಯದಲ್ಲಿ ಆರೋಪಪಟ್ಟಿ ದಾಖಲಿಸಿದರು. ಪ್ರಕರಣ ಇನ್ನೂ ವಿಚಾರಣೆಗೆ ಬಂದಿಲ್ಲ. ವಿವಾಹ ವಿಚ್ಛೇದನಕ್ಕೆ ಪತಿ-ಪತ್ನಿ ಒಪ್ಪಿದ ಕಾರಣ ಆ ಪ್ರಕರಣ ಬೇಗ ಇತ್ಯರ್ಥವಾಗಲಿದೆ.

    ‘ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಂ, ಆಭಾಸವನು ಸತ್ಯವೆಂದು ಬೆಮಿಸುವುದುಂ, ಸೌಭಾಗ್ಯಗಳನರಸಿ ದೌರ್ಭಾಗ್ಯಕೀಡಹುದುಂ, ಅಭಿಶಾಪ ನರಕುಲಕೆ ಮಂಕುತಿಮ್ಮ’ ಎನ್ನುವ ಮಾತುಗಳನ್ನು ನೀರಜ್ ನೆನಪಿನಲ್ಲಿಟ್ಟುಕೊಂಡು ಹಣಗಳಿಸಲು ಕೆಟ್ಟದಾರಿ ಅರಸದೆ ಹೋಗಿದ್ದರೆ ಅವನ ವೈಯಕ್ತಿಕ ಮತ್ತು ವೈವಾಹಿಕ ಜೀವನ ಸುಗಮವಾಗುತ್ತಿತ್ತು.

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts