More

    ಮಟ್ಟುಗುಳ್ಳ ಮಾರಾಟಕ್ಕೆ ಕಿಯೋಕ್ಸ್

    ಗೋಪಾಲಕೃಷ್ಣ ಪಾದೂರು ಉಡುಪಿ
    ಭೌಗೋಳಿಕ ಮಾನ್ಯತೆ ಪಡೆದಿರುವ ಮಟ್ಟುಗುಳ್ಳ ಬೆಳೆಗಾರರಿಗೆ ನೇರ ಮಾರುಕಟ್ಟೆ ಒದಗಿಸಲು ನಬಾರ್ಡ್ ಸಹಯೋಗದೊಂದಿಗೆ ಕಟಪಾಡಿ, ಮಣಿಪಾಲ, ಉಡುಪಿ, ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಕಿಯೋಕ್ಸ್ ಸೆಂಟರ್ ಪ್ರಾರಂಭಿಸಲು ಮಟ್ಟುಗುಳ್ಳ ಬೆಳೆಗಾರರ ಸಂಘ ಚಿಂತನೆ ನಡೆಸಿದೆ.
    ಐತಿಹಾಸಿಕ ಹಿನ್ನೆಲೆ ಮತ್ತು ವಿಶಿಷ್ಟ ರುಚಿ ಹೊಂದಿರುವ ಮಟ್ಟುಗುಳ್ಳಕ್ಕೆ ದೇಶ-ವಿದೇಶದಲ್ಲಿ ವಿಪರೀತ ಬೇಡಿಕೆ ಇದೆ. ಹೀಗಾಗಿ ಮಟ್ಟುಗುಳ್ಳಕ್ಕೆ ಸೀಸನ್‌ನಲ್ಲಿ ಡಿಮಾಂಡ್ ಹೆಚ್ಚು. ಆದರೆ ಮಾರಾಟಕ್ಕೆ ಅನುಗುಣವಾಗಿ ಬೆಳೆಗಾರರಿಗೆ ಲಾಭ ದೊರೆಯುತ್ತಿಲ್ಲ. ಜತೆಗೆ ಮಟ್ಟುಗುಳ್ಳ ಹೆಸರಿನಲ್ಲಿ ಬೇರೆ ಗುಳ್ಳಗಳನ್ನು ಮಾರಾಟ ಮಾಡುವವರೂ ಇದ್ದಾರೆ. ಅದಕ್ಕಾಗಿ ೨ ವರ್ಷಗಳ ಹಿಂದೆ ಮಟ್ಟುಗುಳ್ಳ ಬೆಳೆಗಾರರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಗುಳ್ಳಕ್ಕೆ ವಿಶೇಷ ಸ್ಟಿಕರ್ ಅಂಟಿಸಲಾಗುತ್ತಿದೆ. ಇದೀಗ ಕಿಯೋಕ್ಸ್ ಆರಂಭಿಸುವುದರಿಂದ ಗ್ರಾಹಕರಿಗೆ ಬೆಳೆಗಾರರಿಂದಲೇ ನೇರ ಖರೀದಿಗೆ ಅವಕಾಶ ಲಭಿಸಲಿದೆ. ಮಾರುಕಟ್ಟೆಯಲ್ಲಿ ಬೆಲೆ ಧಾರಣೆಯೂ ಸ್ಥಿರವಾಗಲಿದೆ. ಮುಂಬೈ, ಕೇರಳ, ಬೆಂಗಳೂರು ಭಾಗದಲ್ಲಿರುವವರಿಗೆ ತಾಜಾ ಮಟ್ಟುಗುಳ್ಳ ಖರೀದಿಸಿ ತೆಗೆದುಕೊಂಡು ಹೋಗಲು ೫, ೧೦ ಕೆಜಿ ತೂಕದ ಪ್ಯಾಕೆಟ್‌ಗಳನ್ನು ಸಿದ್ಧಪಡಿಸಲಾಗುತ್ತದೆ. ಜತೆಗೆ ಹಾಪ್‌ಕಾಮ್ಸ್ ಮಾದರಿಯಲ್ಲಿ ಗುಳ್ಳ ಮಾರಾಟಕ್ಕೆ ಯೋಜನೆ ರೂಪಿಸಲಾಗಿದೆ.

    ಮಹಿಳೆಯರಿಗೆ ಟ್ರೇ ತಯಾರಿ ತರಬೇತಿ: ಕಿಯೋಕ್ಸ್‌ನಲ್ಲಿ ಮಟ್ಟುಗುಳ್ಳ ಮಾರಾಟಕ್ಕಾಗಿ ಈ ಬಾರಿಯ ಮಳೆಗಾಲದಲ್ಲಿ ಮಟ್ಟುಗುಳ್ಳದ ಪರಿಸರದ ಮಹಿಳೆಯರಿಗೆ ಹಳೆಯ ಪೇಪರ್‌ಗಳಿಂದ ಪಲ್ಪ್ ಮಾಡಿ ಟ್ರೇ ತಯಾರಿ ಮಾಹಿತಿ ನೀಡಲಾಗುವುದು. ಮಹಿಳೆಯರು ತಯಾರಿಸಿದ ಟ್ರೇಗಳನ್ನು ಮಟ್ಟುಗುಳ್ಳ ಬೆಳೆಗಾರರ ಸಂಘಕ್ಕೆ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಸೇಬು ಜೋಡಣೆ ಮಾದರಿಯಲ್ಲೇ ಈ ಟ್ರೇಗಳಲ್ಲಿ ಮಟ್ಟುಗುಳ್ಳಗಳನ್ನು ಇಟ್ಟು ದೂರದ ಊರುಗಳಿಗೆ ಸಾಗಿಸುವ ಚಿಂತನೆಯೂ ಇದೆ.

    ಪಾರಂಪರಿಕ ವಸ್ತುಗಳಿಗೆ ಆದ್ಯತೆ: ಮಟ್ಟುಗುಳ್ಳ ನವೆಂಬರ್‌ನಿಂದ ಮೇ ತಿಂಗಳವರೆಗೆ ಮಾರುಕಟ್ಟೆಯಲ್ಲಿ ಇರುತ್ತದೆ. ಉಳಿದ ಸಮಯದಲ್ಲಿ ಕಿಯೋಕ್ಸ್‌ನಲ್ಲಿ ಭೌಗೋಳಿಕ ಮಾನ್ಯತೆ ಪಡೆದ ಇನ್ನೊಂದು ಉತ್ಪನ್ನ ಶಂಕರಪುರ ಮಲ್ಲಿಗೆಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶ ಹೊಂದಲಾಗಿದೆ. ಉಡುಪಿ ಸೀರೆ ಮೊದಲಾದ ಪಾರಂಪರಿಕ ವಸ್ತುಗಳ ಮಾರಾಟಕ್ಕೂ ವೇದಿಕೆ ದೊರೆಯಲಿದೆ.

    ಮಟ್ಟುಗುಳ್ಳಕ್ಕೆ ನೇರ ಮಾರುಕಟ್ಟೆ ಒದಗಿಸಲು ಜಿಲ್ಲೆಯ ಮೂರು ಕಡೆ ನಂದಿನಿ ಪಾರ್ಲರ್ ಮಾದರಿಯಲ್ಲಿ ಕಿಯೋಕ್ಸ್ ತೆರೆಯಲು ಜಾಗ ನೀಡುವಂತೆ ಸ್ಥಳೀಯಾಡಳಿತ ಸಂಸ್ಥೆಗಳನ್ನು ಕೋರಲಾಗಿದೆ. ಇಂದ್ರಾಳಿ ರೈಲು ನಿಲ್ದಾಣದಲ್ಲಿ ಅಂಗಡಿಗಾಗಿ ಕೊಂಕಣ ರೈಲ್ವೇ ಪ್ರಾಧಿಕಾರಕ್ಕೆ ಮನವಿ ನೀಡಲಾಗಿದೆ.
    -ಡಾ. ಹರೀಶ್ ಜಿ.ಜೋಶಿ ಪ್ರಾಧ್ಯಾಪಕ, ನಬಾರ್ಡ್ ಸಂಯೋಜಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts